ಅಧಿಕಾರದ ಲಾಲಸೆ ಬಿಡದ ಬಿ.ಎಸ್​ ಯಡಿಯೂರಪ್ಪ ಸಖತ್​ ಲಾಬಿ..!

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಕಳೆದ 2 ತಿಂಗಳ ಹಿಂದೆಯೇ ಹೈಕಮಾಂಡ್​ ಹೇಳಿದರೆ ರಾಜೀನಾಮೆ ನೀಡಲು ನಾನು ಸಿದ್ಧ ಎನ್ನುವ ಹೇಳಿಕೆ ನೀಡಿದ್ದರು. ಆ ಬಳಿಕ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ರೆಕ್ಕೆಪುಕ್ಕಗಳು ಬಂದಿದ್ದವು. ದೆಹಲಿಯಿಂದ ಬುಲಾವ್​ ಬಂದರೂ ಅಭಿವೃದ್ಧಿ ಹೆಸರಲ್ಲಿ ಪ್ರವಾಸ ಮಾಡಿದ ಸಿಎಂ ಯಡಿಯೂರಪ್ಪ, ರಾಜೀನಾಮೆ ವಿಚಾರವೇ ಚರ್ಚೆಯಾಗಿಲ್ಲ ಎಂದು ಗೌಪ್ಯತೆ ಕಾಪಾಡಿಕೊಳ್ಳುವ ಕೆಲಸ ಮಾಡಿದ್ದರು. ದೆಹಲಿಯಿಂದ ವಾಪಸ್​ ಬೆಂಗಳೂರಿಗೆ ವಾಪಸ್​ ಆದ ಬಳಿಕ ಹೈಕಮಾಂಡ್​ ಆದೇಶವನ್ನು ಪಾಲಿಸಲು ನಾನು ಸಿದ್ಧನಿದ್ದೇನೆ ಎನ್ನುವ ಮೂಲಕ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಚರ್ಚೆ ನಡೆದಿದೆ ಎನ್ನುವುದನ್ನು ಸ್ವತಃ ತಾವೇ ಒಪ್ಪಿಕೊಂಡಿದ್ದರು

ಅಧಿಕಾರ ಉಳಿಸಿಕೊಳ್ಳಲು ನಾನಾ ಕಸರತ್ತು..!

ದೆಹಲಿಯಿಂದ ವಾಪಸ್​ ಆದ ಬಳಿಕ ಪರಮಾಪ್ತ ಶಾಸಕ ರೇಣುಕಾಚಾರ್ಯ ಅವರನ್ನು ದೆಹಲಿಗೆ ಕಳುಹಿಸಿದ್ರು ಯಾರನ್ನು ಭೇಟಿಯಾದ್ರು, ಏನೆಲ್ಲಾ ಮಾಡಿದ್ದಾರೆ ಎನ್ನುವ ವಿಚಾರ ಅಸ್ಪಷ್ಟವಾದರೂ ಬಿಎಸ್​ ಯಡಿಯೂರಪ್ಪ ಸೂಚನೆ ಮೇರೆಗೆ ದೆಹಲಿಗೆ ಹೋಗಿದ್ದರು ಎನ್ನುವುದಂತು ಸ್ಪಷ್ಟ. ಇನ್ನೂ ಮುಖ್ಯಮಂತ್ರಿ ಸ್ಥಾನಕ್ಕೆ ಕಂಟಕ ಬಂದಿದೆ ಎನ್ನುವುದು ಗೊತ್ತಾದ ದಿನದಿಂದಲೇ ಬಿ.ವೈ ವಿಜಯೇಂದ್ರ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿರುವ ವಿಜಯೇಂದ್ರ, ವರಿಷ್ಠರ ಭೇಟಿಗೆ ಪ್ರಯತ್ನ ಮಾಡ್ತಿದ್ದಾರೆ ಎನ್ನಲಾಗಿದೆ. ಬಹಿರಂಗವಾಗಿ ಏನನ್ನೂ ಮಾಡದ ಬಿ.ಎಸ್​ ಯಡಿಯೂರಪ್ಪ ರಹಸ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸ್ವಾಮೀಜಿಗಳ ಸಮಾವೇಶದ ಮೂಲಕವೂ ಲಾಬಿ..!

ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಸ್ವಾಮೀಜಿಗಳು ಹೈಕಮಾಂಡ್​ ನಾಯಕರನ್ನು ಬೆದರಿಸುವ ಕೆಲಸ ಮಾಡಿದರು. ಲಿಂಗಾಯತ ಸಮುದಾಯ ಬಿಜೆಪಿ ಪಕ್ಷದಿಂದ ದೂರ ಆಗಲಿದೆ ಎನ್ನುವ ಭೀತಿಯನ್ನು ದೆಹಲಿ ನಾಯಕರಿಗೆ ಮನಮುಟ್ಟಿಸುವ ಪ್ರಯತ್ನ ಮಾಡಿದ್ರು. ಇದರ ಪರಿಣಾಮ ಎನ್ನುವಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ಫೇಸ್​ಬುಕ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ರಾಜಕೀಯದಲ್ಲಿ ಧರ್ಮವಿರಬೇಕು, ಆದರೆ ಧರ್ಮದಲ್ಲಿ ರಾಜಕೀಯ ಇರಬಾರದು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಸ್ವಾಮೀಜಿಗಳು ನಡೆದುಕೊಳ್ತಿದ್ದಾರೆ. ಬಿಜೆಪಿ ಸರ್ಕಾರದ ಹಿಂದುತ್ವದ ಆಧಾರದಲ್ಲಿ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದ ಹಿತದೃಷ್ಟಿಯಿಂದ ಪ್ರಧಾನಿ ಉತ್ತಮ ನಿರ್ಧಾರ ತೆಗೆದುಕೊಳ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಬೆಳಗಾವಿ ಪ್ರವಾಸದ ಬಳಿಕ ಸಿಎಂ ಆಕ್ಟೀವ್​..!

ಪ್ರವಾಹ ಎದುರಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಪ್ರವಾಸ ಮಾಡಿದ್ದ ಸಿಎಂ ಬಿ.ಎಸ್​ ಯಡಿಯೂರಪ್ಪ, ಸಂಜೆ ವೇಳೆಗೆ ಹೈಕಮಾಂಡ್​ನಿಂದ ಸಂದೇಶ ಬರಲಿದೆ ಎಂದಿದ್ದರು. ಬೆಂಗಳೂರಿಗೆ ವಾಪಸ್​ ಆದ ಬಳಿಕ ನಾನು ಕೊನೆಯ ನಿಮಿಷದವರೆಗೂ ಕೆಲಸ ಮಾಡ್ಬೇಕು ಅನ್ಕೊಂಡಿದ್ದೇನೆ. ಆದರೆ ಹೈಕಮಾಂಡ್ ಯಾವಾಗ ರಾಜೀನಾಮೆ ಕೊಡು ಅನ್ನುತ್ತೋ ಆಗ ರಾಜೀನಾಮೆ ಕೊಡ್ತೀನಿ ಎನ್ನುವ ಮೂಲಕ ಪರೋಕ್ಷವಾಗಿ ನಾನಿನ್ನೂ ಸಿಎಂ ಸ್ಥಾನದಲ್ಲಿ ಮುಂದುವರಿಯುವೆ ಎನ್ನುವ ಮಾತನ್ನಾಡಿದ್ದರು. ಇಷ್ಟೆಲ್ಲದರ ನಡುವೆ ಗೋವಾದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕರ್ನಾಟಕ ಸಿಎಂ ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ. ಬದಲಾವಣೆ ಮಾಡುವ ಚಿಂತನೆ ಇಲ್ಲ ಎಂದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಯಾವ ಮಾರ್ಗದ ಲಾಬಿ ವರ್ಕೌಟ್​ ಆಗ್ತಿದೆ ಎನ್ನುವ ಬಗ್ಗೆ ವಿರೋಧಿ ಬಣ ತಲೆಯಲ್ಲಿ ಹುಳು ಬಿಟ್ಟುಕೊಂಡಿದೆ.

Related Posts

Don't Miss it !