ಕಾಂಗ್ರೆಸ್ ಪಕ್ಷದಿಂದಲೇ ದೂರ ಸರಿಯುತ್ತಾ ಸೋನಿಯಾ ಗಾಂಧಿ ಕುಟುಂಬ..! ಪಕ್ಷ ಉಳಿಸಲು ಒಂದೇ ಅಸ್ತ್ರ..!

ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲುಂಡಿದೆ. ಇದರ ಬೆನ್ನಲ್ಲೇ ನರೇಂದ್ರ ಮೋದಿ ಕುಟುಂಬ ರಾಜಕಾರಣವನ್ನು ಸಂಸತ್ನಿಂದ ಹೊರಕ್ಕೆ ಹಾಕ್ತೇವೆ ಎನ್ನುವ ಶಪಥ ಮಾಡಿದ್ದಾರೆ. ಅಂದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಂಸತ್ಗೆ ಆಯ್ಕೆಯಾಗುವುದನ್ನೇ ತಡೆಯುತ್ತೇವೆ ಎನ್ನುವ ಸಂದೇಶ ನೀಡಿದ್ದಾರೆ. ಈ ನಡುವೆ ಕಾಂಗ್ರೆಸ್ನಲ್ಲಿ ಬಂಡಾಯದ ಗಾಳಿ ಬೀಸಿದ್ದು, ಶುಕ್ರವಾರ ರಾತ್ರಿ ಕಾಂಗ್ರೆಸ್ನ ಹಿರಿಯ ನಾಯಕರಾದ ಗುಲಾಂ ನಬಿ ಅಜಾದ್ ಮನೆಯಲ್ಲಿ ಸಭೆ ನಡೆಸಿದ್ದರು. ಕಪಿಲ್ ಸಿಬಲ್, ಮನೀಶ್ ತಿವಾರಿ, ಆನಂದ್ ಶರ್ಮಾ, ಅಖಿಲೇಶ್ ಸಿಂಗ್ ಪ್ರಸಾದ್ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಿ ಕಾಂಗ್ರೆಸ್ ಇಂದಿನ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದರು. ಆದರೆ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದೆ ಮೌನಕ್ಕೆ ಶರಣಾಗಿದ್ದರು. ಈಗಾಗಲೇ ಹಿಂದೆ ಹಿರಿಯ ನಾಯಕರು ಬಹಿರಂಗ ಹೇಳಿಕೆ ನೀಡಿದ್ದರಿಂದ ಪೇಚಿಗೆ ಸಿಲುಕಿದ್ದ ಕಾಂಗ್ರೆಸ್ ಹೈಕಮಾಂಡ್, ಈ ಬಾರಿ ಹಿರಿಯ ನಾಯಕರ ಸಭೆ ಬೆನ್ನಲ್ಲೇ ಹೈಕಮಾಂಡ್ ಎಚ್ಚೆತ್ತುಕೊಂಡಿದೆ. ಇಂದು ಸಂಜೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಕರೆದಿದ್ದು, ಪ್ರಮುಖ ಬೆಳವಣಿಗೆಗಳು ಆಗುವ ಸಂಭವವಿದೆ.

ಪಕ್ಷದ ಹುದ್ದೆಗಳಿಗೆ ಸೋನಿಯಾ ರಾಹುಲ್, ಪ್ರಿಯಾಂಕಾ ರಾಜೀನಾಮೆ..!

ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಮಾಹಿತಿ ಪ್ರಕಾರ, ಪಂಚರಾಜ್ಯಗಳಾದ ಉತ್ತರ ಪ್ರದೇಶ, ಗುಜರಾತ್, ಗೋವಾ, ಮಣಿಪುರ, ಉತ್ತರಾಖಂಡ್ ಸೋಲಿನ ಹೊಣೆಯನ್ನು ಇಡೀ ಕುಟುಂಬ ಹೊತ್ತುಕೊಳ್ಳಲಿದೆ ಎನ್ನಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್ನಲ್ಲೂ ವಿರೋಧ ವ್ಯಕ್ತವಾಗುತ್ತಿದೆ. ಕುಟುಂಬ ರಾಜಕಾರಣ ಎನ್ನುವ ಏಕೈಕ ಕಾರಣದಿಂದಲೇ ಹಿನ್ನಡೆ ಆಗ್ತಿದೆ ಎನ್ನುವ ಮಾತುಗಳೂ ಕೇಳಿ ಬಂದಿದ್ದು, ಇಂದಿನ ಸಭೆಯಲ್ಲಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. 2019ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದ ಬಳಿಕ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದರು. ಆದರೆ ಅನಾರೋಗ್ಯದ ನಿಮಿತ್ತ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲಿಲ್ಲ. ಪಕ್ಷ ಲೋಕಸಭಾ ಚುನಾವಣೆ ಬಳಿಕ ನಡೆದ ಪ್ರತೀ ಚುನಾವಣೆಯಲ್ಲೂ ಸೋಲುತ್ತಲೇ ಬಂದರೂ ಎಚ್ಚೆತ್ತುಕೊಂಡಿರಲಿಲ್ಲ. ಆದರೀಗ ಸೋಲಿನ ಹೊಣೆ ಹೊರಲಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ನಲ್ಲಿ ಭಾವನಾತ್ಮಕ ಅಸ್ತ್ರ ಪ್ರಯೋಗ ನಿರಂತರ..!

ಕಾಂಗ್ರೆಸ್ನಲ್ಲಿ ಗಾಂಧಿ ಕುಟುಂಬದ ಹಸ್ತ ಕ್ಷೇಪ ನಿಲ್ಲುವ ತನಕ ಪಕ್ಷ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುವ ಜನರೂ ಸಿಗುತ್ತಾರೆ. ಆದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಲ್ಲದಿದ್ದರೆ ಪಕ್ಷವೇ ಇರುವುದಿಲ್ಲ. ಅವರ ಮಾರ್ಗದರ್ಶನದಲ್ಲೇ ನಾವು ನಡೆಯುತ್ತೇವೆ. ನೆಹರು, ಇಂದಿರಾ, ರಾಜೀವ್ ಗಾಂಧಿ ಅವರ ಸೇವೆಯನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಹೇಳುವ ನಾಯಕರೂ ಸಿಗುತ್ತಾರೆ. ಇದೀಗ CWC ಸಭೆಯಲ್ಲಿ ರಾಜೀನಾಮೆ ಕೊಡುವ ನಿರ್ಧಾರ ಪ್ರಕಟ ಮಾಡಿ, ಆ ಬಳಿಕ ಪ್ರತಿಭಟನೆ, ಕಾರ್ಯಕರ್ತರ ಒತ್ತಡ ಎನ್ನುವ ಸಬೂಬು ಕೊಟ್ಟು ಮತ್ತೆ ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಆದರೂ ನಶಿಸಿ ಹೋಗುತ್ತಿರುವ ಕಾಂಗ್ರೆಸ್ ಪುಟಿದು ಮೇಲೆ ಏಳಬೇಕು ಎನ್ನುವುದಾದರೆ ಒಮ್ಮೆಯಾದರೂ ಪಕ್ಷದ ಹಿಡಿತ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಿಟ್ಟು ಇತರರ ಕೈಗೆ ಬರಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿದೆ.

ಕರ್ನಾಟಕಕ್ಕೂ ಇಂದಿನ CWC ಸಭೆಗೂ ಇದೆ ಲಿಂಕ್..!

ಈಗಾಗಲೇ ಅಧಿಕಾರದಲ್ಲಿ ಇದ್ದ ಪಂಜಾಬ್ನಲ್ಲೂ ಕಾಂಗ್ರೆಸ್ ಹೀನಾಯ ಪರಿಸ್ಥಿತಿಗೆ ತಲುಪಿದೆ. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ನಾಯಕರಾದ ಸಿಧು ಹಾಗೂ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚೆನ್ನಿ ನಡುವಿನ ಅಧಿಕಾರ ದಾಹ. ಚೆನ್ನಿಯನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದಾಗಲೇ ಸಿಧು ಕಿಡಿಕಾರಿದ್ದರು. ಆ ಬಳಿಕ ಮತ್ತೊಮ್ಮೆ ರಾಹುಲ್ ಗಾಂಧಿ ಸ್ಪಷ್ಟನೆ ನೀಡಿದ್ದರು. ಇನ್ನು ಮುಂದಿನ ವರ್ಷ ಕರ್ನಾಟಕದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಅಧಿಕಾರದ ಕಿತ್ತಾಟ ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ನಾಯಕರು, ಮುಂದಿನ ಮುಖ್ಯಮಂತ್ರಿ ನಾನು ಎಂದು ಹೇಳಿಕೊಂಡು ಅಥವಾ ಘೋಷಣೆ ಕೂಗಿಸಿಕೊಂಡು ಓಡಾಡುತ್ತಿದ್ದಾರೆ. ಇದೇ ರೀತಿ ಅಧಿಕಾರ ಹಂಚಿಕೆ ಕಿತ್ತಾಟ ನಡೆದರೆ ಕರ್ನಾಟದಲ್ಲೂ ಸೋಲುವುದು ಕಟ್ಟಿಟ್ಟ ಬುತ್ತಿ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್ ಕೊಟ್ಟಿದೆ. ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳುವ ಸಾಧ್ಯತೆ ಇದೆ.

Related Posts

Don't Miss it !