ಮೇಕೆದಾಟು ಹೋರಾಟದ ಯಶಸ್ಸಿನ ಹೊಣೆಗಾರಿಕೆ ಮಂಡ್ಯ ಜನರ ಮೇಲಿದೆ..! ಹೇಗಿದೆ ಸಿದ್ಧತೆ..?

ಮೇಕೆದಾಟು ಹೋರಾಟ ಕೊರೊನಾ ಕಾರಣದಿಂದ ರಾಮನಗರಕ್ಕೆ ಅಂತ್ಯವಾಗಿತ್ತು. ಆ ಬಳಿಕ ಕೊರೊನಾ ಕಡಿಮೆ ಆದರೂ ಅಧಿವೇಶನ, ಹಿಜಬ್​ ಹೋರಾಟ ಸೇರಿದಂತೆ ಸಾಕಷ್ಟು ರಾಜಕೀಯ ಬೆಳವಣಿಗೆ ನಡುವೆ ಮೇಕೆದಾಟು ಹೋರಾಟ ಪೂರ್ಣ ಆಗಿರಲಿಲ್ಲ. ಇದೀಗ ಕಾಂಗ್ರೆಸ್​​ ರಾಮನಗರದಿಂದ ಬೆಂಗಳೂರಿನ ತನಕ ಪಾದಯಾತ್ರೆ ಮಾಡುವ ಮೂಲಕ ಮೇಕೆದಾಟು ಹೋರಾಟಕ್ಕೆ ಇತಿಶ್ರೀ ಹೇಳುವುದಕ್ಕೆ ಮುಂದಾಗಿದೆ. ಇಂದಿನ ಮೇಕೆದಾಟು ಪಾದಯಾತ್ರೆಯಲ್ಲಿ ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಭಾಗಿಯಾಗುವಂತೆ ಈಗಾಗಲೇ ಸಂದೇಶ ರವಾನೆ ಮಾಡಲಾಗಿದೆ. ಮೇಕೆದಾಟು ಪಾದಯಾತ್ರೆ ಆರಂಭವಾದ ಮೊದಲ ದಿನ ಸೇರಿದಂತೆ ಇಂದು ಕೂಡ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರನ್ನು ಸೇರಿವ ಮೂಲಕ ಸ್ಥಗಿತವಾಗಿದ್ದ ಮೇಕೆದಾಟು ಹೋರಾಟಕ್ಕೆ ಕಿಚ್ಚು ತುಂಬಲು ಕಾಂಗ್ರೆಸ್​ ಸಕಲ ತಯಾರಿ ಮಾಡಿಕೊಂಡಿದೆ.

ಇದನ್ನೂ ಓದಿ: ಗಂಡನ ಎಡವಟ್ಟಿಗೆ ಹೆಂಡತಿ ಹೊಣೆ ಮಾಡಿದ ಪೊಲೀಸರು..!? ಈ ಸಾವಿಗೆ ಯಾರು ಹೊಣೆ..?

ಮಾಜಿ ಸಚಿವ ಚಲುವರಾಯಸ್ವಾಮಿಗೆ ಉಸ್ತುವಾರಿ..!

ಮಂಡ್ಯ ಜಿಲ್ಲೆಯಲ್ಲಿ ಪ್ರಬಲ ಕಾಂಗ್ರೆಸ್​ ನಾಯಕ ಚಲುವರಾಯಸ್ವಾಮಿಗೆ ಉಸ್ತುವಾರಿ ನೀಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಕರೆದುಕೊಂಡು ಹೋಗುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರಬಲವಾಗಿರುವ ಜೆಡಿಎಸ್​​ ಬಗ್ಗುಬಡಿಯಲು ಹಣಿಯಾಗಿರುವ ಕಾಂಗ್ರೆಸ್​​ಗೆ ಮೇಕೆದಾಟು ಹೋರಾಟ ಸಂಘಟನಾ ಶಕ್ತಿಯಾಗಿ ಬದಲಾಗಿದೆ. ಇದೇ ಕಾರಣದಿಂದ ಚಲುವರಾಯಸ್ವಾಮಿಗೆ ನಾಯಕತ್ವ ಕೊಟ್ಟಿದ್ದು, ಅತಿ ಹೆಚ್ಚು ಜನರನ್ನು ಒಗ್ಗೂಡಿಸುವಂತೆ ಡಿ.ಕೆ ಶಿವಕುಮಾರ್​ ಕರೆ ನೀಡಿದ್ದಾರೆ. ಇದೇ ಕಾರಣದಿಂದ ನಾಗಮಂಗಲಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​, ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದ್ದರು. ಈ ಬಗ್ಗೆ ಇಡೀ ಜಿಲ್ಲೆಯ ಕಾರ್ಯಕರ್ತರಿಗೆ ಕರೆ ನೀಡಿರುವ ಚಲುವರಾಯಸ್ವಾಮಿ ಇಂದಿನ ಮೇಕೆದಾಟು ಯೋಜನೆ ಹೋರಾಟದ ಯಶಸ್ಸಿನ ರೂವಾರಿ ಆಗಲಿದ್ದಾರೆ.

ಕಾಂಗ್ರೆಸ್​ ಜಾತ್ರೆ ಎಂದಿದ್ದ ಕುಮಾರಸ್ವಾಮಿಗೆ ಟಾಂಗ್..!

ರಾಮನಗರದಲ್ಲಿ ಮಾತನಾಡಿರುವ ಡಿ.ಕೆ ಶಿವಕುಮಾರ್​, ಇದು ನೀರಿಗಾಗಿ ನಡೆಯುತ್ತಿರುವ ಹೋರಾಟ, ನಮ್ಮ ನೀರು, ನಮ್ಮ ಹಕ್ಕು. ನೀರಿಗಾಗಿ ನಮ್ಮ ನಡಿಗೆ. ಕಾಂಗ್ರೆಸ್​ನ ಎಲ್ಲಾ ಹಿರಿಯ ನಾಯಕರು ಭಾಗಿಯಾಗಲಿದ್ದಾರೆ. ಪಾದಯಾತ್ರೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ನಾವು ಎಷ್ಟು ದಿನ ಬದುಕಿರುತ್ತೇವೋ ಮುಖ್ಯವಲ್ಲ, ಬದುಕಿದ್ದಾಗ ಏನು ಮಾಡ್ತಿವೋ ಅದು ಮುಖ್ಯ ಎಂದಿದ್ದಾರೆ. ಇನ್ನೂ ಪಾದಯಾತ್ರೆಗೆ ಬರುವ ಎಲ್ಲರೂ ಒಳ್ಳೆಯ ಶೂ, ಚಪ್ಪಲಿ ಹಾಕಿಕೊಂಡು ಬನ್ನಿ ಎಂದು ಸಲಹೆ ನೀಡಿದ್ದಾರೆ. ಇನ್ನೂ ಮೇಕೆದಾಟು ಪಾದಯಾತ್ರೆಗೆ ಕುಮಾರಸ್ವಾಮಿ ವ್ಯಂಗ್ಯ ಮಾಡಿರುವ ಪ್ರತಿಕ್ರಿಯೆ ನೀಡಿದ್ದು, ಇದು ಪಾದಯಾತ್ರೆ ಅಲ್ಲ, ಜಾತ್ರೆ ಎಂದಿದ್ದಾರೆ ಕುಮಾರಸ್ವಾಮಿ, ಕುಮಾರಣ್ಣ ನಮ್ಮ ಬಗ್ಗೆ ಮಾತನಾಡ್ತಾ ಇರಬೇಕು, ಅವರು ಮಾತನಾಡಲಿ, ಬೇಡ ಎನ್ನುವುದಕ್ಕೆ ಆಗಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಕುಟುಕಿದ್ದಾರೆ.

ಇದನ್ನೂ ಓದಿ: 3ನೇ ವಿಶ್ವಯುದ್ಧ ಘೋಷಣೆಗೆ ಕ್ಷಣಗಣನೆ ಆರಂಭ..! ಇಕ್ಕಟ್ಟಿಗೆ ಸಿಲುಕಿದ ಭಾರತ..!

ಕಾಂಗ್ರೆಸ್​ ನಾಟಕದ ಎರಡನೇ ಭಾಗ ಆರಂಭ..!

ಕಾಂಗ್ರೆಸ್​ನಲ್ಲಿ ಎರಡನೇ ಹಂತದ ಪಾದಯಾತ್ರೆ ಬಗ್ಗೆ ಸಚಿವ ಬಿ.ಸಿ ಪಾಟೀಲ್​ ಮಾತನಾಡಿದ್ದು, ಇದು ಕಾಂಗ್ರೆಸ್​ ನಾಟಕದ ಎರಡನೇ ಭಾಗ ಎಂದಿದ್ದಾರೆ. ಮೇಕೆದಾಟು ಯೋಜನೆಗೆ ನಮ್ಮ ಸರ್ಕಾರ ವಿರೋಧ ಮಾಡಿಲ್ಲ. ಮೇಕೆದಾಟು ಯೋಜನೆ ಜಾರಿಗೆ ನಮ್ಮ ಸರ್ಕಾರ ಸಿದ್ಧವಿದೆ. ಯೋಜನೆ ಜಾರಿಗೆ ತಾಂತ್ರಿಕ ಸಮಸ್ಯೆ ಇದೆ, ಹಾಗಾಗಿ ಸ್ವಲ್ಪ ಅಡಚಣೆ ಆಗಿದೆ ಎಂದಿದ್ದಾರೆ. ಇನ್ನೂ ಕಾಂಗ್ರೆಸ್​​ನವರಿಗೆ ಮಾಡಲು ಕೆಲಸ ಇಲ್ಲ, ದುರುದ್ದೇಶದಿಂದ ಪಾದಯಾತ್ರೆ ಹೊರಟಿದ್ದಾರೆ ಎಂದು ಕಾಂಗ್ರೆಸ್​ ನಾಯಕರನ್ನು ಕಿಚಾಯಿಸಿದ್ದಾರೆ. ಆದರೆ ಡಿಕೆ ಶಿವಕುಮಾರ್​ ಸೇರಿದಂತೆ ಕಾಂಗ್ರೆಸ್​ ನಾಯಕರು ಮೇಕೆದಾಟು ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾರ್ಚ್​ 3ರಂದು ಬೃಹತ್​ ಸಮಾವೇಶ ನಡೆಸುವ ಮೂಲಕ ಮೇಕೆದಾಟು ಯೋಜನೆ ಪಾದಯಾತ್ರೆ ಸಮಾಪ್ತಿ ಆಗಲಿದೆ.

Related Posts

Don't Miss it !