‘ಮೇಕೆದಾಟು ರಾಜಕೀಯ’ ಕಟ್ಟಿಹಾಕಲು ಸರ್ಕಾರಕ್ಕೆ ಕೊರೊನಾ ಬ್ರಹ್ಮಾಸ್ತ್ರ..!

ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್​ ಬೃಹತ್​ ಪಾದಯಾತ್ರೆ ನಡೆಸಲು ಸಕಲ ತಯಾರಿ ಮಾಡಿಕೊಂಡಿದೆ. ಜನವರಿ 9 ರಿಂದ ಪಾದಯಾತ್ರೆ ಮಾಡುವ ಉದ್ದೇಶದಿಂದ ಹಲವು ಜಿಲ್ಲೆಗಳಲ್ಲಿ ಸಭೆ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಹಳೇ ಮೈಸೂರು ಭಾಗದಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿ ಜಾತ್ಯಾತೀತ ಜನತಾದಳದ ನಾಯಕ ಹೆಚ್​.ಡಿ ಕುಮಾರಸ್ವಾಮಿ ಕಾಂಗ್ರೆಸ್​ ಪಾದಯಾತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಯಾವುದೇ ಕೆಲಸ ಮಾಡದ ಕಾಂಗ್ರೆಸ್​ ಪಕ್ಷ, ಇದೀಗ ಮುಂದಿನ ವರ್ಷ ಎದುರಾಗುವ ಚುನಾವಣೆ ಗೆಲ್ಲುವ ಎಲ್ಲಾ ತಯಾರಿ ಮಾಡಿಕೊಳ್ತಿದೆ. ಜನರಿಗೆ ನೀರು ಕೊಡಿಸುವ ಉದ್ದೇಶ ತೃಣ ಮಾತ್ರವೂ ಕಾಂಗ್ರೆಸ್​​ ಪಕ್ಷಕ್ಕೆ ಇಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಕಾಂಗ್ರೆಸ್​ ಪಾದಯಾತ್ರೆ ಗುಟ್ಟೇನು..? ಕೇವಲ ರಾಜಕೀಯನಾ..?

ಕನಕಪುರ ತಾಲೂಕಿನ ಗಡಿಭಾಗದಲ್ಲಿ ಡ್ಯಾಂ ನಿರ್ಮಾಣದಿಂದ ಯಾವುದೇ ರೈತಾಪಿ ಜನರ ಜಮೀನುಗಳಿಗೆ ನೀರು ಸಿಗುವುದಿಲ್ಲ ಎನ್ನುವುದು ಮೊದಲು ತಿಳಿಯಬೇಕಿರುವ ಸಂಗತಿ. ಅಷ್ಟು ಮಾತ್ರಕ್ಕೆ ರೈತರಿಗೆ ಡ್ಯಾಂನಿಂದ ಅನುಕೂಲ ಆಗುವುದಿಲ್ಲ ಎನ್ನಲು ಸಾಧ್ಯವಿಲ್ಲ. ಯಾಕಂದ್ರೆ ನೀರು ಸಂಗ್ರಹ ಆಗುವುದರಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಿನ ಅಭಾವ ಸೃಷ್ಟಿಯಾಗುವುದಿಲ್ಲ. ಭೂಮಿಯಲ್ಲಿ ನೀರು ಇಂಗುವುದರಿಂದ ಅಂತರ್ಜಲ ಪ್ರಮಾಣ ಏರಿಕೆ ಆಗಿ ಹತ್ತಾರು ಕಿಲೋ ಮೀಟರ್​ ದೂರ ಪ್ರದೇಶದ ಜನರಿಗೂ ನೀರಿನ ಸೌಕರ್ಯಗಳು ಸಿಗಲಿದೆ. ಆದರೆ ಕಾಂಗ್ರೆಸ್​ ಪಕ್ಷ ವಿರೋಧ ಪಕ್ಷವಾಗಿ ಪಾದಯಾತ್ರೆ ಮಾಡುವುದರಲ್ಲಿ ತಪ್ಪೇನಿದೆ..? ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡ್ತಿದೆ ಎನ್ನಬಹುದು. ಆದರೆ..

Read This;

ತಮಿಳುನಾಡು ಸರ್ಕಾರದಲ್ಲಿ ಕಾಂಗ್ರೆಸ್​-ಡಿಎಂಕೆ ದೋಸ್ತಿ..!

ಪಾದಯಾತ್ರೆ ಮಾಡುವುದರಿಂದ ಸರ್ಕಾರದ ಮೇಲೆ ಒತ್ತಡ ಸೃಷ್ಟಿಯಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ತಮಿಳುನಾಡು ಸರ್ಕಾರ ಮೇಕೆದಾಟು ವಿಚಾರದಲ್ಲಿ ಸುಖಾಸುಮ್ಮನೆ ಕ್ಯಾತೆ ತೆಗೆಯುತ್ತಿದೆ. ಕೇಂದ್ರ ಜಲ ಆಯೋಗ ಕೂಡ ಕಾವೇರಿ ಕಣಿವೆಯ ಕೆಲಭಾಗದ ರಾಜ್ಯದ ಅನುಮತಿ ಅಗತ್ಯ ಎಂದಿದೆ. ಅಂದರೆ ತಮಿಳುನಾಡು ಅನುಮತಿ ಪಡೆಯದ ಹೊರತು ಮೇಕೆದಾಟು ಯೋಜನೆ ಕಾರ್ಯಗತ ಆಗುವುದಕ್ಕೆ ಸಾಧ್ಯವೇ ಇಲ್ಲ ಎಂದರ್ಥ. ಅಂದ ಮೇಲೆ ತಮಿಳುನಾಡು ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಕರ್ನಾಟಕದ ರಾಜಕೀಯ ಪಕ್ಷಗಳು ಮಾಡುವುದು ಉತ್ತಮ. ಕಾಂಗ್ರೆಸ್​​ಗೆ ನಿಜವಾಗಲೂ ರಾಜಕೀಯ ಲಾಭದ ಉದ್ದೇಶವಿಲ್ಲದೆ, ಜನರಿಗೆ ನೀರು ಕೊಡಿಸುವ ಅಜೆಂಡ ಮಾತ್ರ ಆಗಿದ್ದರೆ ತಮಿಳುನಾಡು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬಹುದು. ಅದೂ ಅಲ್ಲದೆ ಡಿಎಂಕೆ ಪಕ್ಷದ ಅಂಗ ಪಕ್ಷವಾಗಿ ಕಾಂಗ್ರೆಸ್​ ಇರುವುದರಿಂದ ಆಡಳಿತ ಪಕ್ಷದ ಜೊತೆಗೆ ಮಾತನಾಡಬಹುದು.

Also Read;

ಮೇಕೆದಾಟು ರಾಜಕೀಯಕ್ಕೆ ಕೊರೊನಾ ಅಬ್ಬರದ ಬೇಲಿ..!

ತಮಿಳುನಾಡಿನ ಡಿಎಂಕೆ ಸರ್ಕಾರದ ಜೊತೆಗೆ ಕಾಂಗ್ರೆಸ್​ ನಾಯಕರಾದ ಪಿ.ಚಿದಂಬರಂ ಹಾಗೂ ಬಿಜೆಪಿ ನಾಯಕ ಅಣ್ಣಾಮಲೈ ಕೂಡ ಮೇಕೆದಾಟು ಯೋಜನೆಗೆ ವಿರೋಧ ಮಾಡಿದ್ದಾರೆ. ಇನ್ನೂ ಕಾಂಗ್ರೆಸ್​ ಹೈಕಮಾಂಡ್​ ಡಿಎಂಕೆ ನಾಯಕರಿಗೆ ಒಂದೇ ಒಂದು ಮೌಕಿಕ ಸಂದೇಶ ಕಳುಹಿಸಿದರೂ ಮೇಕೆದಾಟು ಯೋಜನೆ ಸೂಸೂತ್ರವಾಗಿ ಕೈಗೂಡಬಹುದು. ಆದರೆ ಕೇವಲ ಪಾದಯಾತ್ರೆ ಎನ್ನುವುದು ಜನರ ಮನಸ್ಸನ್ನು ಗೆಲ್ಲುವುದಕ್ಕೆ ಸಹಕಾರಿ ಆಗಬಹುದು ಅಷ್ಟೆ. ಆದರೆ ಇದೀಗ ಕೊರೊನಾ ರೂಪಾಂತರಿ ಓಮೈಕ್ರಾನ್​​ ಅಬ್ಬರ ಸರ್ಕಾರವನ್ನು ದಿಗ್ಬ್ರಮೆಗೊಳಿಸಿದೆ. ಕೇಂದ್ರ ಸರ್ಕಾರ ಕರ್ನಾಟಕವನ್ನು ರೆಡ್​ ಝೋನ್​ ಎಂದು ಘೋಷಣೆ ಮಾಡಿದೆ. ದಿನನಿತ್ಯದ ಕೊರೊನಾ ಕೇಸ್​ಗಳ ಸಂಖ್ಯೆ ಸಾವಿರ ಗಡಿ ದಾಡಿ ಮುನ್ನುಗ್ಗುತ್ತಿದೆ. ಜಿಲ್ಲಾಕೇಂದ್ರಗಳೂ ಸೇರಿದಂತೆ ಶಾಲಾ ಮಕ್ಕಳಲ್ಲೂ ಸೋಂಕು ಕಾಣಿಸಿಕೊಂಡಿದೆ. ಸರ್ಕಾರ ಸಾಮಾಜಿಕ ಅಂತರಕ್ಕೆ ಒತ್ತು ಕೊಡ್ತಿದೆ. ಹೀಗಿರುವಾಗ ಸಾವಿರಾರು ಜನರನ್ನು ಒಂದೆಡೆ ಸೇರಿಸಿಕೊಂಡು ಕಾಂಗ್ರೆಸ್​ ನಾಯಕರು ಪಾದಯಾತ್ರೆ ಮಾಡಲು ಅವಕಾಶ ಸಿಗುತ್ತಾ ಎನ್ನುವ ಪ್ರಶ್ನೆ ಸಾಮಾನ್ಯ ಜನರನ್ನೂ ಕಾಡುತ್ತಿದೆ. ಅನುಮತಿ ಸಿಗುವುದು ಅನುಮಾನ ಎನ್ನುತ್ತಿವೆ ಸರ್ಕಾರದ ಮೂಲಗಳು.

Related Posts

Don't Miss it !