ಕಾಂಗ್ರೆಸ್​ ನಾಯಕ ಜೈಲಿಂದ ಬಂದ ಕೂಡಲೇ ಹೀಗೆ ಮಾಡಿದ್ದು ತಪ್ಪಲ್ಲವೇ..?

ಹುಬ್ಬಳ್ಳಿ – ಧಾರವಾಡ ಕಾಂಗ್ರೆಸ್​ ನಾಯಕ ವಿನಯ್​ ಕುಲಕರ್ಣಿ, ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆ ಆದ ಬಳಿಕ ಸಾವಿರಾರು ಜನರನ್ನು ಸೇರಿಸಿ ಸಂಭ್ರಮಾಚರಣೆ ಮಾಡಿದ್ದರು. ಜೈಲಿನಿಂದ ಬಿಡುಗಡೆ ಆದ ಬಳಿಕ ಸಾವಿರಾರು ಕಾರ್ಯಕರ್ತರು ವಿನಯ್​ ಕುಲಕರ್ಣಿಗೆ ಭವ್ಯ ಸ್ವಾಗತ ಕೋರಿದ್ರು. ಹಿಂಡಲಗಾ ಜೈಲಿನಿಂದ ತೆರದ ವಾಹನದಲ್ಲಿ ಅಭಿಮಾನಿಗಳಳು ಮೆರವಣಿಗೆ ಮಾಡಿದರು. ಈ ವೇಳೆ ವಿನಯ ಕುಲಕರ್ಣಿ ವಾಹನದಲ್ಲಿ ಕಾಂಗ್ರೆಸ್​ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಹಾಗೂ ಸಹೋದರಿ ಸಾಥ್ ನೀಡಿದ್ರು. ಅಭಿಮಾನಿಗಳ ಕಡೆಗೆ ಭಾವುಕರಾಗಿ ಕೈ ಬಿಸಿದ ವಿನಯ ಕುಲಕರ್ಣಿ, ಮಿಸೆ ತಿರುವಿ ಅಭಿಮಾನಿಗಳನ್ನು ಚಿಯರ್ ಮಾಡಿದ್ರು. ಜೈಲಿನಿಂದ ನೇರವಾಗಿ ನಾಗನೂರು ಮಠಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ ಪಡೆದ್ರು.

ನಾಗನೂರು ಮಠಕ್ಕೆ ವಿನಯ್​ ಕುಲಕರ್ಣಿ ಭೇಟಿ..!

ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆ ಆದ ಮಾಜಿ ಸಚಿವ ವಿನಯ್ ಕುಲಕರ್ಣಿ ನಾಗನೂರು ರುದ್ರಾಕ್ಷಿ ಮಠಕ್ಕೆ ಭೇಟಿ ನೀಡಿದ್ದರು. ಶಿವಬಸವ ಸ್ವಾಮೀಜಿ ಗದ್ದುಗೆ ದರ್ಶನ ಪಡೆದುಕೊಂಡರು. ನಾಗನೂರು ಮಠದಲ್ಲಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ವಿನಯ್​ ಕುಲಕರ್ಣಿ ಅವರನ್ನು ಸ್ವಾಗತಿಸಿದ್ರು. ಪ್ರಕಾಶ್​ ಹುಕ್ಕೇರಿಯನ್ನ ಬಿಗಿಯಾಗಿ ಅಪ್ಪಿಕೊಂಡ ವಿನಯ್​ ಕುಲಕರ್ಣಿ ಭಾವುಕರಾದ್ರು. ಜೈಲಿನಿಂದ ಬಿಡುಗಡೆಯಾದ ಬಳಿಕ ಅಭಿಮಾನಿಗಳ ಜೊತೆ ಹಾಗೂ ನಾಗನೂರು ಮಠಕ್ಕೆ ಭೇಟಿ ನೀಡಿದಾಗಲು ವಿನಯ ಕುಲಕರ್ಣಿ ಕೊರೊನಾ ರೂಲ್ಸ್‌ ಉಲ್ಲಂಘನೆ ಮಾಡಿದ್ರು. ಸಾವಿರಾರು ಅಭಿಮಾನಿಗಳು ಒಂದೆಡೆ ಸೇರಿ ಶಾರೀರಿಕ ಅಂತರ ಹಾಗೂ ಮಾಸ್ಕ್​ ಕೂಡ ಮರೆತು ಸಂಭ್ರಮ ಮಾಡಿದ್ರು. ವೀಕೆಂಡ್ ಲಾಕ್​ಡೌನ್ ಜಾರಿಯಲ್ಲಿ ಇದ್ದರೂ ತಲೆಕೆಡಿಸಿಕೊಳ್ಳದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಇದನ್ನೂ ಓದಿ;

ಕಾನೂನು ಉಲ್ಲಂಘಿಸಿದಕ್ಕೆ ಪೊಲೀಸರಿಂದ ದೂರು..!

ಮಠಕ್ಕೆ ಭೇಟಿ ಕೊಟ್ಟ ಬಳಿಕ ಸುವರ್ಣ ಸೌಧದ ಪಕ್ಕದ ಜೈನ ಆಶ್ರಮಕ್ಕೆ ಭೇಟಿ ನೀಡಿದ್ದ ವಿನಯ ಕುಲಕರ್ಣಿ, ಜೈನ್ ಮುನಿಗಳಿಗೆ ಆಶೀರ್ವಾದ ಪಡೆದರು. ಮಾಜಿ ಸಚಿವ ವಿನಯ ಕುಲಕರ್ಣಿ ಜೊತೆಯಲ್ಲಿ ಸಾವಿರಾರು ಕಾರ್ಯಕರ್ತರು ಆಗಮಿಸಿದ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ವಿನಯ್​ ಕುಲಕರ್ಣಿ ಬೆಂಬಲಿಗರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ರಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ನೂರಾರು ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಜಾಮ್​ ಆಗಿತ್ತು. ಬೆಳಗಾವಿ ಪೊಲೀಸರ ಮುಂದೆಯೇ ಕೊರೊನಾ ರೂಲ್ಸ್‌ ಬ್ರೇಕ್ ಆಗಿದ್ರಿಂದ ವಿನಯ್​ ಕುಲಕರ್ಣಿ ವಿರುದ್ಧ ವೀಕೆಂಡ್‌ ನಿಯಮ ಉಲ್ಲಂಘನೆ ಹಾಗೂ ಕೊರೊನಾ ರೂಲ್ಸ್​ ಬ್ರೇಕ್​ ಮಾಡಿದ ಆರೋಪದ ಮೇಲೆ ಬೆಳಗಾವಿ ಪೊಲೀಸರು 12 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ;

ಕಾಂಗ್ರೆಸ್​ ಮಾಡಿದ್ರೆ ಮಾತ್ರ ಕಾನೂನು ಪಾಲನೆಯೇ..?

ವಿನಯ್​ ಕುಲಕರ್ಣಿ ಮಾಡಿದ್ದು ತಪ್ಪಲ್ಲ ಎನ್ನುವುದಕ್ಕೆ ಸಾಧ್ಯವೇ ಇಲ್ಲ. ಅವರ ವಿರುದ್ಧ ದೂರು ದಾಖಲು ಮಾಡಿರುವು ಕಾನೂನು ಪ್ರಕಾರ ಸರಿಯಾಗಿಯೇ ಇದೆ. ಆದರೆ ಕಾಂಗ್ರೆಸ್​, ಜೆಡಿಎಸ್​ ನಾಯಕರು ಮಾಡಿದಾಗ ಮಾತ್ರ ಕಾನೂನು ಪಾಲನೆ ಆಗುತ್ತಾ ಎನ್ನುವುದು ರಾಜ್ಯದ ಜನರ ಪ್ರಶ್ನೆಯಾಗಿದೆ. ಯಾಕಂದ್ರೆ ಆಗಸ್ಟ್​ 16 ರಿಂದ ಆರಂಭವಾಗಿದ್ದ ನೂತನ ಕೇಂದ್ರ ಸಚಿವರುಗಳ ಜನಾಶೀರ್ವಾದ ಯಾತ್ರೆ ಆಗಸ್ಟ್​ 19ರ ತನಕ ನಡೆದಿತ್ತು. ನಾಲ್ವರು ನೂತನ ಸಚಿವರು ಹೋದಲ್ಲೆಲ್ಲಾ ಸಾವಿರಾರು ಜನ ಕಾರ್ಯಕರ್ತರು ಜಮಾಯಿಸಿದ್ದರು. ಬಂದೂಕಿನಿಂದ ಗುಮಡು ಹಾರಿಸಿದ್ದರು. ರಾತ್ರಿ 10 ಗಂಟೆಯಾದರೂ ಸಭೆ ಸಮಾರಂಭಗಳನ್ನು ನಡೆಸುತ್ತಲೇ ಇದ್ದರು. ಸ್ವತಃ ಚಿತ್ರದುರ್ಗದಲ್ಲಿ ಎ ನಾರಾಯಣಸ್ವಾಮಿ ನೈಟ್​ ಕರ್ಫ್ಯೂ ಉಲ್ಲಂಘನೆಯನ್ನು ಒಪ್ಪಿಕೊಂಡಿದ್ದರು. ಯಾದಗಿರಿಯಲ್ಲಿ ಬೈಕ್ಱಱಲಿ ನಡೆಸಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ವಿನಯ್​ ಕುಲಕರ್ಣಿ ವಿಚಾರದಲ್ಲಿ ಮಾತ್ರ ಕಾನೂನು ಪಾಲನೆ ಮಾಡಿದ್ದಾರೆ.

ದೇಶದಲ್ಲಿ ಸಂವಿಧಾನ ಒಂದೇ ಇರುವ ಕಾರಣಕ್ಕೆ ಕಾನೂನು ಎಲ್ಲರಿಗೂ ಒಂದೇ ಇರುತ್ತದೆ. ಆದರೆ ಅಧಿಕಾರದಲ್ಲಿ ಇರುವ ಪಕ್ಷದ ಪರವಾಗಿ ಪೊಲೀಸ್​ ಅಧಿಕಾರಿಗಳು ನಡೆದುಕೊಳ್ಳುವುದು ಕಾನೂನಿಗೆ ಮಾಡಿರುವ ಅಪಮಾನವಾದಂತಿದೆ. ರಾಜ್ಯದಲ್ಲಿ ಪೊಲೀಸ್​ ಇಲಾಖೆ ಉಳ್ಳವರಿಗೆ ಒಂದು ರೀತಿ ಕಾನೂನು ಹಾಗೂ ಬಡವರಿಗೆ ಮತ್ತೊಂದು ರೀತಿಯ ಕಾನೂನು ಪ್ರದರ್ಶನ ಮಾಡುವುದು ಸರ್ವೇ ಸಾಮಾನ್ಯ. ಆದರೆ ಉಳ್ಳವರ ನಡುವೆಯೂ ಕಾನೂನು ಪಾಲನೆಯಲ್ಲಿ ತಾರತಮ್ಯ ಮಾಡುತ್ತಿರುವುದು ಇತ್ತೀಚಿಗೆ ಕಂಡುಬರುತ್ತಿರುವ ಬೆಳವಣಿಗೆ ಆಗಿದೆ. ಮುಂದಿನ ದಿನಗಳಲ್ಲಿ ಇದೊಂದು ರೀತಿಯ ಸಂಪ್ರದಾಯ ಪಾಲನೆ ಆಗುವುದರಲ್ಲಿ ಅನುಮಾನವಿಲ್ಲ.

Related Posts

Don't Miss it !