ಹಿಜಬ್​ ವಿವಾದ, ಕೇಸರಿ ಬಲೆಗೆ ಸಿಲುಕಿದ ಕಾಂಗ್ರೆಸ್​, ಕ್ಷಮೆ ಕೇಳಿದ ಜಮೀರ್..!

ರಾಜ್ಯದಲ್ಲಿ ಹಿಜಬ್​ ವಿವಾದ ಬಗೆಹರಿಯುವ ಯಾವುದೇ ಲಕ್ಷ ಕಾಣಿಸುತ್ತಿಲ್ಲ. ಹೈಕೋರ್ಟ್​ನ ತ್ರಿಸದಸ್ಯ ಪೀಠದಲ್ಲಿ ವಿವರವಾದ ವಿಚಾರಣೆ ನಡೆಯುತ್ತಿದೆ. ಶಾಲಾ ಕಾಲೇಜುಗಳ ಆರಂಭಕ್ಕೆ ಮಧ್ಯಂತರ ಆದೇಶದಲ್ಲಿ ಸೂಚನೆ ನೀಡಿರುವ ಹೈಕೋರ್ಟ್​ ಸಾಂವಿಧಾನಿಕ ಬಿಕ್ಕಟ್ಟು ನಿವಾರಣೆಗೆ ಸಮಗ್ರ ವಿಚಾರಣೆ ನಡೆಸುತ್ತಿದೆ. ಈ ಹಿಜಬ್​ ವಿಚಾರ ಕೇವಲ ಶಾಲಾ ಕಾಲೇಜು ಮಕ್ಕಳ ನಡುವೆ ನಡೆದಿಲ್ಲ. ಬದಲಿಗೆ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರನವಾಗಿದೆ. ಬಿಜೆಪಿ ಬೇಕೆಂದೇ ಈ ವಿಚಾರವನ್ನು ದೊಡ್ಡದು ಮಾಡಿ ರಾಜಕೀಯ ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆ ಎನ್ನುವುದು ಕಾಂಗ್ರೆಸ್​ ನಾಯಕರ ಆರೋಪ. ಈ ನಡುವೆ ಕಾಂಗ್ರೆಸ್​ ಮತಬ್ಯಾಂಕ್​ಗಾಗಿ ಮುಸ್ಲಿಂ ವಿದ್ಯಾರ್ಥಿನಿಯರ ಬೆನ್ನಿಗೆ ನಿಂತಿದೆ ಎನ್ನುವುದು ಬಿಜೆಪಿ ಆರೋಪ. ಈ ನಡುವೆ ಎರಡೂ ಪಕ್ಷಗಳು ಎಚ್ಚರಿಕೆ ಹೆಜ್ಜೆ ಇಡುತ್ತಿರುವಾಗಲೇ ಕಾಂಗ್ರೆಸ್​ ಕೇಸರಿ ಬಲೆಯಲ್ಲಿ ಸಿಲುಕಿತ್ತು.

ಮಹಿಳೆಯತ ಕ್ಷಮೆ ಕೇಳುವಂತೆ ಕೇಸರಿ ಪಡೆ ಆಗ್ರಹ..!

ಧಾರವಾಡದಲ್ಲಿ ಭಾನುವಾರ ಮಾತನಾಡಿದ್ದ ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್​​, ಹಿಜಬ್​, ಬುರ್ಕಾ ಧರಿಸಿ ಓಡಾಡಿದ್ರೆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುವುದಿಲ್ಲ ಎನ್ನುವ ಹೇಳಿಕೆ ನೀಡಿದ್ದರು. ಈ ವಿಚಾರ ಬಹುತೇಕ ಮಹಿಳಾ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು. ಹಿಜಬ್​​ ಜೊತೆಗೆ ಮತ್ತೊಂದು ಅಸ್ತ್ರ ಸಿಕ್ಕಿತು ಎಂದು ಕೇಸರಿ ಪಾಳಯ ಮುಗಿ ಬಿದ್ದಿತ್ತು. ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ. ಹೆಣ್ಣು ಮಕ್ಕಳು ಅತ್ಯಾಚಾರಕ್ಕೂ ಹಿಜಬ್​ಗೂ ಎಲ್ಲಿಯ ಸಂಬಂಧ ಎಂದು ಬಿಜೆಪಿ ಮಹಿಳಾ ನಾಯಕಿಯರು ವಾಗ್ದಾಳಿ ನಡೆಸಿದ್ದರು. ಇದನ್ನು ಕಾಂಗ್ರೆಸ್​ ನಾಯಕರೂ ಕೂಡ ಊಹೆ ಮಾಡಿರಲಿಲ್ಲ. ಕೂಡಲೇ ಕ್ಷಮೆಯಾಚನೆ ಮಾಡುವಂತೆ ಕಾಂಗ್ರೆಸ್​ ಅಧ್ಯಕ್ಷ ಡಿಕೆ ಶಿವಕುಮಾರ್​​ ಸೂಚನೆ ನೀಡಿದ್ದರು. ಆದರೂ ಪಟ್ಟು ಬಿಡದ ಶಾಸಕ ಜಮೀರ್​ ಅಹ್ಮದ್​ ಖಾನ್​ ನಾನೇನು ತಪ್ಪು ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ ಎಂದು ಉಲ್ಟಾ ಹೊಡೆದಿದ್ದರು.

ಇದನ್ನೂ ಓದಿ: ಹಾಸನದಲ್ಲಿ ತಾಯಿ ಕೊಂದ ಮಗ, ಮೈಸೂರಲ್ಲಿ ತಂದೆ ಮೇಲೆ ಫೈರಿಂಗ್..!

ಡಿ.ಕೆ ಶಿವಕುಮಾರ್​ಗೆ ಕೌಂಟರ್​ ಕೊಟ್ಟಿದ್ದ ಜಮೀರ್..!

ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಶಾಸಕ ಜಮೀರ್​ ಅಹ್ಮದ್​ ಖಾನ್​, ಕ್ಷಮೆ ಕೇಳುವಂತಹ ಹೇಳಿಕೆಯನ್ನು ನಾನು ನೀಡಿಲ್ಲ, ಹಿಜಬ್ ಧರಿಸೋ ಅವಶ್ಯಕತೆ ಬಗ್ಗೆ ಹೇಳಿದ್ದೇನೆ. ಹಿಜಬ್ ಹೇಳಿಕೆಯನ್ನು ನಾನು ಈಗಲೂ ಸಮರ್ಥಿಸಿಕೊಳ್ತೇನೆ ಎನ್ನುವ ಮೂಲಕ ಡಿ.ಕೆ ಶಿವಕುಮಾರ್ ಮಾತಿ​​ಗೆ ಟಾಂಗ್ ಕೊಟ್ಟಿದ್ದರು. ಇಷ್ಟೆಲ್ಲಾ ಆಗ್ತಿದ್ದ ಹಾಗೆ ಅಖಾಡಕ್ಕೆ ಇಳಿದಿದ್ದ ಕಾಂಗ್ರೆಸ್​ ನಾಯಕರು, ಜಮೀರ್​ ಅಹ್ಮದ್​ ಖಾನ್​ ಹೇಳಿಕೆ ವೈಯಕ್ತಿಕವಾದದ್ದು. ಕಾಂಗ್ರೆಸ್​ ಪಕ್ಷಕ್ಕೂ ಜಮೀರ್​ ಹೇಳಿಕೆಗೂ ಸಂಬಂಧವಿಲ್ಲ ಎನ್ನುವ ಮೂಲಕ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದರು. ಡಿ.ಕೆ ಶಿವಕುಮಾರ್​​ ಮಾತಿಗೆ ಮನ್ನಣೆ ಕೊಡದೆ ಇದ್ದಾಗ ಶಿಸ್ತು ಸಮಿತಿಯಿಂದ ಜಮೀರ್​ ಅಹ್ಮದ್​ಗೆ ಕಾರಣ ಕೇಳಿ ನೋಟಿಸ್​ ಕಳುಹಿಸಲಾಗಿತ್ತು. ಹಿಜಬ್​ ಬಗ್ಗೆ ಯಾರೊಬ್ಬರೂ ಬಹಿರಂಗ ಹೇಳಿಕೆ ನೀಡದಂತೆ ಕಾಂಗ್ರೆಸ್​ ಪಕ್ಷ ಸೂಚನೆ ನೀಡಿದ್ದರೂ ಮಾತನಾಡಿದ್ದು ಯಾಕೆ ಎಂದು ಪ್ರಶ್ನೆ ಮಾಡಲಾಗಿತ್ತು. ಶಿಶ್ತು ಸಮಿತಿ ನೋಟಿಸ್​ ತಲುಪುತ್ತಿದ್ದ ಹಾಗೆ ಜಮೀರ್​ ಹೌದೌದು ತಪ್ಪಾಗಿದೆ. ದಯಮಾಡಿ ಕ್ಷಮಿಸಿ ಎಂದು ಕ್ಷಮಾಪಣೆ ಕೇಳಿದ್ದಾರೆ.

ಇದನ್ನೂ ಓದಿ: ದುಡ್ಡಿದ್ದವರ ಮನೆಗೆ ಕನ್ನ, ಬಡವರಿಗೆ ದಾನ..! ಬೆಂಗಳೂರಲ್ಲೊಬ್ಬ ಅಚ್ಚರಿಯ ಕಳ್ಳ..

ಬೀಸೋ ದೊಣ್ಣೆಯಿಂದ ಪಾರಾದ ಕಾಂಗ್ರೆಸ್​ ಪಕ್ಷ..!

ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಿರಲಿ ಎಂದಿರುವ ಜಮೀರ್​ ಅಹ್ಮದ್​ ಖಾನ್​, ಅತ್ಯಾಚಾರ ಆಗಲು ಮೈ ಮೇಲಿನ ಬಟ್ಟೆ ಕಾರಣವಲ್ಲ, ಕೆಲವು ಪುರುಷರ ರೇಪಿಸ್ಟ್ ಮನಸ್ಥಿತಿ ಕಾರಣ ಎಂದು ಸ್ಪಷ್ಟನೆ ನೀಡಿದ್ದಾರೆ. ನನ್ನ ಹೇಳಿಕೆ ಹಿಂದೆ ಹೆಣ್ಣು ಮಕ್ಕಳ‌ ಮೇಲಿನ‌ ಕಾಳಜಿ ಇದೆ. ಹಿಜಬ್ ಕಡ್ಡಾಯಗೊಳಿಸಿದರೆ ರಕ್ಷಣೆ ಆಗುತ್ತೆ ಎಂದಿದ್ದೆ. ಶಿಕ್ಷಣಕ್ಕಿಂತ ಶಕ್ತಿಯುತವಾದ ಅಸ್ತ್ರ ಮತ್ತೊಂದಿಲ್ಲ ಎಂದು ತೇಪೆ ಹಾಕುವ ಕೆಲಸ ಮಾಡಿದ್ದಾರೆ. ಹಿಜಬ್​ ವಿಚಾರದಲ್ಲಿ ಬಿಜೆಪಿ ಲಾಭದ ಲೆಕ್ಕಾಚಾರ ಹಾಕುತ್ತಿದ್ದರು, ಕಾಂಗ್ರೆಸ್​ ಮತ್ತು ಜೆಡಿಎಸ್​​ ಯಾವುದೇ ಹೇಳೀಕೆ ನೀಡುವುದಕ್ಕೂ ಭಯ ಬೀಳುತ್ತಿವೆ. ಮುಸ್ಲಿಮರ ಮತಗಳು ಬೇಡ ಎಂದು ನಿರ್ಧಾರ ಮಾಡಿರುವ ಬಿಜೆಪಿ ನೇರವಾಗಿ ಹಿಜಬ್​ ಪರವಾಗಿ ಬ್ಯಾಟ್​ ಬೀಸುತ್ತಿದೆ. ಆದರೆ ಮುಸ್ಲಿಮರ ವೋಟ್​ಗಳ ಮೇಲೂ ಕಣ್ಣಿಟ್ಟಿರುವ ಕಾಂಗ್ರೆಸ್​, ಜೆಡಿಎಸ್​​ಗೆ ಮತಬ್ಯಾಂಕ್​ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹಿಜಬ್​ ಎನ್ನುವುದು ಹಿಂದೂ ಮುಸಲ್ಮಾನರನ್ನು ಇಬ್ಬಾಗ ಮಾಡುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿದ್ದು, ಯಾರ ಪರವಾಗಿ ಮಾತನಾಡಿದರೆ ಯಾವುದಾದರೂ ಒಂದು ಪಂಗಡದ ಮತಗಳು ಕೋತ ಆಗುವ ಭೀತಿ ಕಾಡುತ್ತಿದೆ. ಸದ್ಯಕ್ಕೆ ಕಾಂಗ್ರೆಸ್​ ಜಮೀರ್​​ ಕೈಯ್ಯಲ್ಲಿ ಕ್ಷಮೆ ಕೇಳಿಸಿ ಬೀಸುವ ದೊಣ್ಣೆಯಿಂದ ಪರಾಗಿದೆ.

Related Posts

Don't Miss it !