ಕಾಂಗ್ರೆಸ್​ – ಬಿಜೆಪಿ ದೋಸ್ತಿ ಗುದ್ದಾಟಕ್ಕೆ ಹೈಕೋರ್ಟ್​ ಗರಂ, ಇಂದು ಪಾದಯಾತ್ರೆ ಹೈಡ್ರಾಮಾ..!!

ಮೇಕೆದಾಟು ಬಗ್ಗೆ ಹೈಕೋರ್ಟ್​ ಚಾಟಿ ಬೀಸಿದ್ಹೇಗೆ..? ಕಾಂಗ್ರೆಸ್​ ಪಾದಯಾತ್ರೆಗೆ ಸರ್ಕಾರ ಅನುಮತಿ ಕೊಟ್ಟಿದ್ಯಾ..? ಕಾಂಗ್ರೆಸ್​ – ಬಿಜೆಪಿ ಒಂದಾಗಿಯೇ ಪಾದಯಾತ್ರೆ ನಾಟಕವೇ..? ಇಂದು ಹೈಡ್ರಾಮಾ..!! ಇಬ್ಬರಿಗೂ ಲಾಭ ಆಗುವಂತೆ ನಾಟಕ..!

​ನಮ್ಮ ನೀರು.. ನಮ್ಮ ಹಕ್ಕು.. ವಾಕ್​ ಫಾರ್​ ವಾಟರ್​ ಎನ್ನುವ ಘೋಷವಾಕ್ಯಗಳ ಮೂಲಕ ಆರಂಭವಾದ ಮೇಕೆದಾಟು ಪಾದಯಾತ್ರೆ ಹೋರಾಟಕ್ಕೆ ಅಂತ್ಯಕಾಲ ಬಂದಿದೆ. ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಸರ್ಕಾರ ಎರಡಕ್ಕೂ ಮೇಕೆದಾಟು ಸಂಕಷ್ಟ ತಂದೊಡ್ಡಿದ್ದು. ಶುಕ್ರವಾರ ಪಾದಯಾತ್ರೆ ಬಗ್ಗೆ ಇಬ್ಬರೂ ಉತ್ತರ ನೀಡಬೇಕಿದೆ. ಹೈಕೋರ್ಟ್​ ಚಾಟಿ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಾರ್ಗಸೂಚಿ ಅನ್ವಯ ಪಾದಯಾತ್ರೆ ನಿರ್ಬಂಧಿಸಲು ಆದೇಶ ಹೊರಡಿಸಿದ್ದಾರೆ. ಸರ್ಕಾರದ ಸೂಚನೆ ಬೆನ್ನಲ್ಲೇ ರಾಮನಗರ ಎಸ್​ಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದು, ಶುಕ್ರವಾರ ಬೆಳಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಜನೆ ರೂಪಿಸಿದ್ದಾರೆ. ಆದರೂ ಹೈಕೋರ್ಟ್​ ಸರ್ಕಾರಕ್ಕೆ ಚಾಟಿ ಬೀಸಿದ ಬಳಿಕ ಕಾಂಗ್ರೆಸ್​ – ಬಿಜೆಪಿ ಮೇಕೆದಾಟು ದೋಸ್ತಿ ಹೋರಾಟ ಬಯಲಾಗಿದೆ ಎನ್ನಲಾಗ್ತಿದೆ.

ಮೇಕೆದಾಟು ಬಗ್ಗೆ ಹೈಕೋರ್ಟ್​ ಚಾಟಿ ಬೀಸಿದ್ಹೇಗೆ..?

ಮೇಕೆದಾಟು ಪಾದಯಾತ್ರೆ ನಡೆಯುತ್ತಿರುವುದರಿಂದ ಕೊರೊನಾ ಸೋಂಕು ಹೆಚ್ಚಳ ಆಗುತ್ತಿದೆ. ಪಾದಯಾತ್ರೆಯನ್ನು ತಡೆಯಬೇಕು ಎಂದು ಹೈಕೋರ್ಟ್​ಗೆ ಪಿಐಎಲ್​ ಸಲ್ಲಿಕೆಯಾಗಿತ್ತು. ಬುಧವಾರ ವಿಚಾರಣೆಗೆ ಅರ್ಜಿ ಕೈಗೆತ್ತಿಕೊಂಡ ಹೈಕೋರ್ಟ್​, ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ. ಪಾದಯಾತ್ರೆ ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆಯಾ..? ಒಂದು ಪಕ್ಷದ ಜಾಥಾವನ್ನು ತಡೆಯಲು ಆಗದಷ್ಟು ಸರ್ಕಾರ ಅಸಮರ್ಥ ಆಗಿದ್ಯಾ..? ಎಂದು ಕಟುವಾಗಿ ಟೀಕಿಸಿದೆ. ಒಂದು ವೇಳೆ ಕಾಂಗ್ರೆಸ್​ ಪಾದಯಾತ್ರೆಗೆ ಸರ್ಕಾರ ಅನುಮತಿ ನೀಡಿಲ್ಲ ಎನ್ನುವುದಾದರೆ ಯಾರ ಅನುಮತಿಗಾಗಿ ಕಾಯುತ್ತಿದ್ದೀರಿ..? ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ಹೇಗೆ ಸುಮ್ಮನಿದ್ದೀರಿ..? ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದೆ. ಇನ್ನೂ ಹೈಕೋರ್ಟ್​ ಆದೇಶ ನೀಡುವ ತನಕ ನೀವು ಕ್ರಮ ಕೈಗೊಳ್ಳುವುದಿಲ್ಲವೇ..? ಎಂದು ಸರ್ಕಾರದ ಪರ ವಕೀಲರನ್ನು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಇನ್ನೂ ಕಾಂಗ್ರೆಸ್​ ಪರ ವಕೀಲರ ಗೈರು ಹಾಜರಿಯಲ್ಲಿ ಒಂದೆರಡು ಮಾತುಗಳನ್ನು ಹೇಳಿರುವ ಕೋರ್ಟ್​, ಕೊರೊನಾ ಆರ್ಭಟ ಹೆಚ್ಚಾಗಿದೆ, ಈ ಸಮಯದಲ್ಲಿ ಪಾದಯಾತ್ರೆ ಮಾಡುತ್ತಿರುವುದು ಹೇಗೆ..? ಅನುಮತಿ ಪಡೆದಿದ್ದಾರಾ..? ನಾಳೆ ಸಂಪೂರ್ಣ ವರದಿ ಕೊಡಿ ಎಂದು ಚಾಟಿ ಬೀಸಿದೆ.

Read this:

ಕಾಂಗ್ರೆಸ್​ ಪಾದಯಾತ್ರೆಗೆ ಸರ್ಕಾರ ಅನುಮತಿ ಕೊಟ್ಟಿದ್ಯಾ..?

ವೀಕೆಂಡ್​​ ಕರ್ಫ್ಯೂ ನಡುವೆ ಮೇಕೆದಾಟುವಿನ ಸಂಗಮದ ಬಳಿ ಬೃಹತ್​ ಸಮಾವೇಶ ನಡೆಸಿದ್ದಾರೆ. ಸಾಮಾಜಿಕ ಅಂತರವಿಲ್ಲದೆ ಕೊರೊನಾ ಹರಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ, ಇನ್ನೂ ರಸ್ತೆಯುದ್ದಕ್ಕೂ ಮಾಸ್ಕ್​, ಸಾಮಾಜಿಕ ಅಂತರ ಸೇರಿದಂತೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎನ್ನುವುದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪ್ರಮುಖ ಆರೋಪ. ಈ ಬಗ್ಗೆ ಅರ್ಜಿದಾರರ ಪರವಾಗಿ ವಕೀಲ ಶ್ರೀಧರ್​ ಪ್ರಭು ಹೈಕೋರ್ಟ್​ ಗಮನ ಸೆಳೆದಿದೆ. ಇದೇ ವೇಳೆ ಸರ್ಕಾರ ಅನುಮತಿ ಕೊಟ್ಟಿದ್ಯಾ..? ಎನ್ನುವ ಬಗ್ಗೆ ಹೈಕೋರ್ಟ್​ ಪ್ರಶ್ನೆ ಮಾಡುತ್ತಿದ್ದ ಹಾಗೆ​ ಬಿಬಿಎಂಪಿಯಿಂದ ಅನುಮತಿ ಪಡೆದಿರುವ ಪತ್ರವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಡಿ.ಕೆ ಶಿವಕುಮಾರ್​ ಮನವಿ ಮೇರೆಗೆ ಜನವರಿ 18 ಹಾಗೂ 19 ರಂದು 2 ದಿನಗಳ ಕಾಲ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ಬಳಕೆಗೆ ಅನುಮತಿ ಪಡೆಯಲಾಗಿದೆ. ಇದಕ್ಕಾಗಿ 59 ಸಾವಿರ ಶುಲ್ಕವನ್ನೂ ಪಾವತಿಸಿದ್ದು, ಭದ್ರತಾ ಠೇವಣಿ ಆಗಿ 30 ಸಾವಿರ ರೂಪಾಯಿ DD ಸಲ್ಲಿಸಲಾಗಿದೆ ಎನ್ನುವುದು ವಿಶೇಷ. ಇನ್ನೂ ಕೊರೊನಾ ಮಾರ್ಗಸೂಚಿ ಪಾಲಿಸಿಕೊಂಡು ಕಾರ್ಯಕ್ರಮ ಮಾಡಬೇಕು. ಕೊರೊನಾ ಪರಿಸ್ಥಿತಿ ನೋಡಿಕೊಂಡು ಕಾರ್ಯಕ್ರಮವನ್ನು ರದ್ದು ಮಾಡಿದರೂ ಮಾಡಬಹುದು ಎಂದು ತಿಳಿಸಿದ್ದಾರೆ.

ಹೈಕೋರ್ಟ್ ಚಾಟಿ ಬಗ್ಗೆ ಕಾನೂನು ಘಟಕದ ಮಾಹಿತಿ

ಕಾಂಗ್ರೆಸ್​ – ಬಿಜೆಪಿ ಒಂದಾಗಿಯೇ ಪಾದಯಾತ್ರೆ ನಾಟಕವೇ..?

ಪಾದಯಾತ್ರೆ ಆರಂಭಕ್ಕೂ ಮುನ್ನ ಸರ್ಕಾರಕ್ಕೆ ಎಲ್ಲವೂ ಮಾಹಿತಿ ಇತ್ತು. ಅನುಮತಿ ಇಲ್ಲದಿದ್ದರೂ ಮೇಕೆದಾಟುವಿನ ಸಂಗಮದಲ್ಲಿ ಬೃಹತ್​ ವೇದಿಕೆ ನಿರ್ಮಾಣ ಮಾಡುತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿತ್ತು. ಯಾವುದೇ ಕಾರಣಕ್ಕೂ ಬಿಡೋದಿಲ್ಲ ಎಂದು ಅಬ್ಬರಿಸಿ ಕೊನೆಗೆ ಎಫ್​ಐಆರ್​ ದಾಖಲು ಮಾಡ್ತೇವೆ ಎನ್ನುವ ಮೂಲಕ ಶಕ್ತಿ ಹೀನ ಸರ್ಕಾರ ಎಂಬುದನ್ನು ಸಾಬೀತು ಮಾಡಿಕೊಂಡಿತ್ತು. ಹೈಕೋರ್ಟ್​ ಹೇಳಿದ ಮೇಲೆ ಪಾದಯಾತ್ರೆ ತಡೆಯುತ್ತೀರಾ..? ಎಂದು ಸರ್ಕಾರಕ್ಕೆ ಚಾಟಿ ಬೀಸಿದ ಬಳಿಕ ಕೊರೊನಾ ಮಾರ್ಗಸೂಚಿ ಅನ್ವಯ ಕಾಂಗ್ರೆಸ್​ ಪಾದಯಾತ್ರೆಯನ್ನು ತಡೆಯುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಆದರೆ ಇದಕ್ಕೂ ಮುನ್ನ ಕಾಂಗ್ರೆಸ್​ ಪಾದಯಾತ್ರೆಗೆ ಮಾರ್ಗ ಬದಲಾವಣೆ ಮಾಡುವುದು, ರಸ್ತೆಯುದ್ದಕ್ಕೂ ಪೊಲೀಸರನ್ನು ನಿಯೋಜನೆ ಮಾಡುವ ಮೂಲಕ ಸರ್ಕಾರವೇ ಪಾದಯಾತ್ರೆ ಯಶಸ್ವಿಗೆ ಟೊಂಕ ಕಟ್ಟಿ ನಿಂತಂತೆ ಮಾಡಿತ್ತು. ಸ್ವತಃ ಪೊಲೀಸರೂ ಕೂಡ ಡಿಕೆ ಶಿವಕುಮಾರ್​ ಆಯೋಜಿಸಿದ್ದ ಸ್ಥಳದಲ್ಲೇ ಊಟ ಸವಿದು ಭದ್ರತೆ ನೀಡಿದ್ದರು. ಸ್ವತಃ ರಾಮನಗರ ಎಸ್​ಪಿ ಮೇಕೆದಾಟುಗೆ ಭೇಟಿ ನೀಡಿ ಎಲ್ಲವನ್ನೂ ನೋಡಿಕೊಂಡು ವಾಪಸ್​ ಆಗಿದ್ದರು. ಈಗ ತಡೆಯುವಂತೆ ಕೊಟ್ಟಿರುವ ಸೂಚನೆಯನ್ನು ಮೊದಲೇ ಕೊಟ್ಟಿದ್ದರೆ, ಸರ್ಕಾರಕ್ಕೆ ಶಕ್ತಿ ಇದೆ ಎನ್ನುವುದು ಸಾಬೀತಾಗುತ್ತಿತ್ತು.

Also Read:

BBMP ಅನುಮತಿ ಪತ್ರ

ಇಂದು ಹೈಡ್ರಾಮಾ..!! ಇಬ್ಬರಿಗೂ ಲಾಭ ಆಗುವಂತೆ ನಾಟಕ..!

ಕಾಂಗ್ರೆಸ್​ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವುದು ಹಳೇ ಮೈಸೂರು ಭಾಗದಲ್ಲಿ ಶಕ್ತಿಯುತ ಆಗುವುದಕ್ಕೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜೆಡಿಎಸ್​ ನಿರ್ನಾಮ ಮಾಡುವ ಎಲ್ಲಾ ಸಿದ್ಧತೆಗಳು ನಡೆದಿವೆ ಎನ್ನಲಾಗ್ತಿದೆ. ಮುಂದಿನ ಬಾರಿ ಕಾಂಗ್ರೆಸ್​ ಅಥವಾ ಬಿಜೆಪಿ ಮಾತ್ರವೇ ಅಧಿಕಾರಕ್ಕೆ ಬರಬೇಕು. ಮಧ್ಯದಲ್ಲೆ ಜೆಡಿಎಸ್​ ತಲೆ ನೋವು ಬೇಡ ಎನ್ನುವ ಕಾರಣಕ್ಕೆ ಹಳೇ ಮೈಸೂರು ಭಾಗದ ಕಾಂಗ್ರೆಸ್​ ರಣತಂತ್ರಕ್ಕೆ ಸರ್ಕಾರವೇ ಪಾಲುದಾರ ಆಗಿದೆ ಎನ್ನುವುದು ಜೆಡಿಎಸ್​ ನಾಯಕರ ಗುಸುಗುಸು. ಒಂದು ವೇಳೆ ಪಾದಯಾತ್ರೆ ತಡೆಯದಿದ್ದರೆ ಸರ್ಕಾರಕ್ಕೆ ಹೈಕೋರ್ಟ್​ನಲ್ಲಿ ಮುಜುಗರ ಆಗುವ ಜೊತೆಗೆ ಕಾಂಗ್ರೆಸ್​ ಭಂಡತನಕ್ಕೂ ಹೈಕೋರ್ಟ್​ ಚಾಟಿ ಬೀಸಲಿದೆ. ಅದೇ ಕಾರಣದಿಂದ ಹೈಕೋರ್ಟ್​ಗೆ ವರದಿ ಸಲ್ಲಿಸುವ ಮುನ್ನವೇ ಕಾಂಗ್ರೆಸ್​ ಪಾದಯಾತ್ರೆಯನ್ನು ತಡೆಯುವ ಮೂಲಕ ಇಬ್ಬರೂ ಕಾನೂನು ಸಮರದಿಂದ ಹೊರಗೆ ಉಳಿಯಲಿದ್ದಾರೆ. ಆದರೆ ಬೆಳಗ್ಗೆ ಬಂಧಿಸುವ ಸಮಯದಲ್ಲಿ ಸಾಕಷ್ಟು ಹೈಡ್ರಾಮ ನಡೆಯುವ ಎಲ್ಲಾ ಸಾಧ್ಯತೆಗಳು ಇವೆ ಎನ್ನಲಾಗಿದೆ.

Related Posts

Don't Miss it !