ಮೇಕೆದಾಟು ಪಾದಯಾತ್ರೆ ಎಡವಟ್ಟು, ಕೋರ್ಟ್​ನಲ್ಲಿ ಇಂದು ಏನಾಗುತ್ತೆ..?

ಕಾಂಗ್ರೆಸ್​ ನಡೆಸುತ್ತಿದ್ದ ಪಾದಯಾತ್ರೆ ಬುಧವಾರಕ್ಕೆ ಅಂತ್ಯವಾಗಿದೆ. ಆದರೆ ಗುರುವಾರ ಸುದ್ದಿಗೋಷ್ಠಿ ನಡೆಸಿದ್ದ ಕಾಂಗ್ರೆಸ್​ ನಾಯಕರು ತಾತ್ಕಾಲಿಕವಾಗಿ ಮಾತ್ರ ಪಾದಯಾತ್ರೆ ನಿಲ್ಲಿಸಿದ್ದೇವೆ ಎಂದಿದ್ದಾರೆ. ಹೈಕೋರ್ಟ್​ ಎದುರು ಮಾನ ಉಳಿಸಿಕೊಳ್ಳುವ ಸಲುವಾಗಿ ಸರ್ಕಾರ ಹಾಗೂ ಕಾಂಗ್ರೆಸ್​ ನಾಯಕರು ವಾಕ್​ ಫಾರ್​ ವಾಟರ್​ ರದ್ದು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲೂ ಮೇಕೆದಾಟು ಪಾದಯಾತ್ರೆ ಆರಂಭದಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದರು. ಯಾವುದೇ ಕಾರಣಕ್ಕೂ ಪಾದಯಾತ್ರೆ ಮಾಡಲು ಬಿಡುವುದಿಲ್ಲ ಎಂದು ಗುಟುರು ಹಾಕಿದ್ದರು. ಆ ಬಳಿಕ ಕೇವಲ ಎಫ್​ಐಆರ್​ ದಾಖಲು ಮಾಡಿ ತೆಪ್ಪಗೆ ಆಗಿದ್ದರು. ಎರಡೂ ಪಕ್ಷಗಳ ನಾಯಕರು ಅಬ್ಬರಿಸಿ ಬೊಬ್ಬಿರಿದ ಬಳಿಕ ಇದೀಗ ಎರಡೂ ಕಡೆಯ ಘಟನಾನುಘಟಿ ನಾಯಕರು ಸಮಾಧಾನಕರ ಮಾತುಗಳನ್ನು ಆಡಿದ್ದಾರೆ. ಇವರಿಬ್ಬರ ಹಣಾಹಣಿಯಲ್ಲಿ ಗೆದ್ದಿದ್ದು ಯಾರು ಎನ್ನುವ ಪಶ್ನೆಗೆ ಉತ್ತರ ಇಂದು ಸಿಗಬೇಕಿದೆ.

ಕಾನೂನು ಕ್ರಮ ಕೈಗೊಳ್ಳಲಿದೆ ಎಂದಿದ್ದೇ ಸರ್ಕಾರದ ಸಾಧನೆ..!

ಕೊರೊನಾ ನಿಯಂತ್ರಣಕ್ಕಾಗಿ ವೀಕೆಂಡ್​ ಕರ್ಫ್ಯೂ ಜಾರಿ ಮಾಡಲಾಗಿತ್ತು. ಆದರೂ ಕಾಂಗ್ರೆಸ್​ ನಾಯಕರು ಬೃಹತ್​ ಸಮಾವೇಶ ನಡೆಸಿ ವೀಕೆಂಡ್​ ಕರ್ಫ್ಯೂ ಉಲ್ಲಂಘನೆ ಮಾಡಿದ್ದರು. ಜನಸಾಮಾನ್ಯರು ಮಾಸ್ಕ್​ ಹಾಕಿಲ್ಲ ಎನ್ನುವ ಕಾರಣಕ್ಕೆ ದಿನನಿತ್ಯ ಲಕ್ಷ ಲಕ್ಷ ದಂಡ ವಸೂಲಿ ಮಾಡುವ ರಾಜ್ಯ ಸರ್ಕಾರ, ಸಾವಿರಾರು ಜನರು ಒಂದೇ ಕಡೆ ಪಾದಯಾತ್ರೆ ಮಾಡುತ್ತಾ ಸಾಗಿದರೂ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ಸರ್ಕಾರ ಮಾಡಿದ್ದು ಕೇವಲ ಎಫ್​ಐಆರ್​ ದಾಖಲು ಮಾಡುವ ನಾಟಕ ಮಾತ್ರ. ಕೊರೊನಾ ಸೋಂಕು ಉಲ್ಬಣ ಆಗುತ್ತೆ ಎನ್ನುವ ಕಾರಣಕ್ಕೆ ನೈಟ್​ ಕರ್ಫ್ಯೂ ಕೂಡ ಜಾರಿ ಮಾಡಲಾಗಿತ್ತು. ಆದರೆ ಕಾಂಗ್ರೆಸ್​ ಪಾದಯಾತ್ರೆಯಲ್ಲಿ ವೀಕೆಂಡ್​ ಕರ್ಫ್ಯೂ ಮಾತ್ರವಲ್ಲ ನೈಟ್​ ಕರ್ಫ್ಯೂ ಸೇರಿದಂತೆ ಸರ್ಕಾರದ ಎಲ್ಲಾ ನಿಯಮಗಳು ಉಲ್ಲಂಘನೆ ಆಗಿದ್ದವು. ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದ ಕಾಂಗ್ರೆಸ್​ ಅಲ್ಪ ಮಟ್ಟದ ಯಶಸ್ಸು ಪಡೆದಿದೆ ಎನ್ನುವುದು ಸುಳ್ಳಲ್ಲ. ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಅಬ್ಬರ ನಡೆಸಿದ ಕಾಂಗ್ರೆಸ್​ ಪಕ್ಷಕ್ಕೆ ಜನಬೆಂಬಲ ಕೂಡ ಅಭೂತಪೂರ್ವ ಆಗಿಯೇ ಸಿಕ್ಕಿದ್ದು ವಿಶೇಷ.

Read This;

ಮುಖಭಂಗ ಅನುಭವಿಸಿದ್ದ ಸರ್ಕಾರಕ್ಕೆ ಇಂದು ಮುಜುಗರ..!

ಕಾಂಗ್ರೆಸ್​ ನಾಯಕರು ನಾವು ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸೋದಿಲ್ಲ. ಸರ್ಕಾರ ನಮ್ಮನ್ನು ಅರೆಸ್ಟ್​ ಮಾಡಿದರೂ ಸರಿಯೇ ಎಂದು ಹೇಳುತ್ತಿದ್ದರು. ಆದರೆ ಸರ್ಕಾರ ಪಾದಯಾತ್ರೆ ನಿಲ್ಲಿಸಿ ಎಂದು ಆದೇಶ ಹೊರಡಿಸುತ್ತಲೇ ಕಾಂಗ್ರೆಸ್​ ನಾಯಕರು ಗಪ್​ಚುಪ್​ ಆದರು. ಈ ಕೆಲಸವನ್ನು ಸರ್ಕಾರ ಮೊದಲೇ ಮಾಡಿದ್ದರೆ ನೂರಾರು ಜನರಿಗೆ ಕೊರೊನಾ ಸೋಂಕು ಉಲ್ಬಣ ಆಗುವುದು ತಡೆಯಬಹುದಿತ್ತು. ಆದರೆ ಸರ್ಕಾರದ ಉದ್ದೇಶ ಏನಾಗಿತ್ತು ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ. ಆದರೆ ಕೆಲವು ಕಾರಣಗಳನ್ನು ಹೇಳಬಹುದು. ಕೊರೊನಾ ಸೋಂಕು ಉಲ್ಬಣ ಆದರೆ ಕಾಂಗ್ರೆಸ್​ ಪಕ್ಷ ಕೊರೊನಾ ಹೆಚ್ಚಾಗಲು ಕಾರಣವಾಯ್ತು ಎಂದು ಕೊರೊನಾ ಅನಾಹುತಕ್ಕೆ ಕಾಂಗ್ರೆಸ್​​ ಪಕ್ಷವನ್ನು ಕಾರಣ ಮಾಡುವುದು. ಕಾಂಗ್ರೆಸ್​​ಗೆ ಕಾನೂನಿನ ಮೇಲೆ ಗೌರವವಿಲ್ಲ, ನೆಲದ ಕಾನೂನು ಗೌರವಿಸದೆ ಗೂಂಡಾಗಿರಿ ಮಾಡ್ತಾರೆ ಎಂದು ಜನಾಭಿಪ್ರಾಯ ಮೂಡಿಸುವುದು. ಆದರೆ ಇದೀಗ ಸರ್ಕಾರ ಹಾಗೂ ಕಾಂಗ್ರೆಸ್​ ಪಕ್ಷದ ಯೋಜನೆ ಹಳ್ಳ ಹಿಡಿದಿದೆ. ಕಾನೂನು ತನ್ನದೇ ಕ್ರಮ ಕೈಗೊಳ್ಳಲಿದೆ.

Also Read;

ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಆಗಿದೆ..! ಕೋರ್ಟ್​ ಏನು ಮಾಡಬಹುದು..?

ಕೊರೊನಾ ಸಂಕಷ್ಟದ ನಡುವೆಯೂ ಕಾಂಗ್ರೆಸ್​ ಪಕ್ಷ ಪಾದಯಾತ್ರೆ ನಡೆಸಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದರಿಂದ ಸಾಕಷ್ಟು ಜನರಿಗೆ ಕೊರೊನಾ ಸೋಂಕು ಬಂದಿದೆ ಎನ್ನುವುದು ಕಾಂಗ್ರೆಸ್​ ನಾಯಕರ ಪಟ್ಟಿಯಿಂದಲೇ ತಿಳಿಯುತ್ತಿದೆ. ಉದ್ದೇಶ ಪೂರ್ವಕವಾಗಿ ಕೊರೊನಾ ಹರಡಿರುವ ಆರೋಪವನ್ನು ಪಿಐಎಲ್​ ಅರ್ಜಿದಾರರ ಪರ ವಕೀಲರು ಕೋರ್ಟ್​ ಗಮನ ಸೆಳೆಯಬಹುದು. ಇನ್ನೂ ಸರ್ಕಾರ ಪಾದಯಾತ್ರೆಯನ್ನು ತಡೆಯುವ ಕೆಲಸ ಮಾಡಬಹುದಿತ್ತು. ಕೇವಲ ಬಾಯಿ ಮಾತಿನಲ್ಲಿ ಬಡಾಯಿ ಕೊಚ್ಚಿಕೊಂಡು ಯಾವುದೇ ಕ್ರಮ ಕೈಗೊಳ್ಳದೆ, ಸರ್ಕಾರವೇ ಕೊರೊನಾ ಹರಡುವುದಕ್ಕೆ ಸಾಥ್​ ನೀಡಿದೆ. ಕಾಂಗ್ರೆಸ್​ ಪಕ್ಷ ಪಾದಯಾತ್ರೆ ನಡೆಸಲು ಮುಂದಾಗಿದ್ದರೂ ಸರ್ಕಾರ ತಡೆಯುವ ಪ್ರಯತ್ನವನ್ನೇ ಮಾಡಲಿಲ್ಲ. ಪರೋಕ್ಷವಾಗಿ ಕಾಂಗ್ರೆಸ್​​ ಪಕ್ಷಕ್ಕೆ ಸಾಥ್​ ಕೊಟ್ಟಿದೆ ಎಂದು ವಾದಿಸಬಹುದು. ಈಗಾಗಲೇ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಆಗಿದೆ ಎಂಬುದನ್ನು ಕೋರ್ಟ್​ ಗಮನಿಸಿದ್ದು, ಕಾನೂನು ಪ್ರಕಾರ ಕಾಂಗ್ರೆಸ್​ ಪಕ್ಷಕ್ಕೆ ಛೀಮಾರಿ ಜೊತೆಗೆ ದಂಡ ವಿಧಿಸಬಹುದು. ಇನ್ನೂ ರಾಜ್ಯ ಸರ್ಕಾರ ಅದರಲ್ಲೂ ಜಿಲ್ಲಾಡಳಿತಕ್ಕೆ ಕೆಲವೊಂದು ಕಟು ಮಾತುಗಳಲ್ಲಿ ಹೇಳಬಹುದು. ಕಾನೂನು ಪಾಲಿಸಲು ಸಾಧ್ಯವಾಗದಿದ್ದರೆ ಮನೆ ಹೋಗಿ ಎಂದೂ ತಿಳಿಸಬಹುದು. ಅಂತಿಮವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಮೇಲುಗೈ ಸಾಧಿಸಬಹುದು.

Related Posts

Don't Miss it !