ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಅಹೋರಾತ್ರಿ ಹೋರಾಟ.. ಬಿಜೆಪಿಗೆ ವರವೋ..? ಶಾಪವೋ..?

ಕಾಂಗ್ರೆಸ್​ ಪಕ್ಷ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರಿದೆ. ವಿಧಾನಮಂಡಲದ ಅಧಿವೇಶದಲ್ಲಿ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್​ ಪ್ರತಿಭಟನೆ ನಡೆಸುತ್ತಿದೆ. ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿ ಕಾಂಗ್ರೆಸ್​ ಶಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ವಿಧಾನಮಂಡಲ ಸಚಿವಾಲಯದ ವತಿಯಿಂದಲೇ ಹಾಸಿಗೆ ದಿಂಬು, ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್​ ಯಡಿಯೂರಪ್ಪ, ಆರ್​ ಅಶೋಕ್​ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಭೇಟಿ ನೀಡಿ ಮನವೊಲಿಕೆ ಕಸರತ್ತು ನಡೆಸಿದ್ರು. ಆದರೆ ಕಾಂಗ್ರೆಸ್​ ಮಾತ್ರ ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ಈಶ್ವರಪ್ಪ ಅವರು ನೀಡಿದ್ದ ಹೇಳಿಕೆ ದೇಶದ್ರೋಹದಿಂದ ಕೂಡಿದೆ. ಸದಾ ಕಾಲ ದೇಶಭಕ್ತರು ಎಂದುಕೊಳ್ಳುವ ಬಿಜೆಪಿ ನಾಯಕರು ರಾಜೀನಾಮೆ ಪಡೆಯಲೇಬೇಕು ಎಂದು ಆಗ್ರಹ ಮಾಡಿದ್ದಾರೆ.

ಅಹೋರಾತ್ರಿ ಧರಣಿ ನಿರತ ಕಾಂಗ್ರೆಸ್ ನಾಯಕರಿಗೆ ಭರ್ಜರಿ ಭೋಜನ ವ್ಯವಸ್ಥೆ ಮಾಡಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ಮೇರೆಗೆ ವಿಧಾನಸಭೆ ಸಚಿವಾಲಯ ಊಟದ ವ್ಯವಸ್ಥೆ ಮಾಡಿತ್ತು. ರೇಸ್ ಕೋರ್ಸ್ ರಸ್ತೆಯ ಸೌತ್ ರುಚಿ ಹೊಟೇಲ್​ನಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಚಪಾತಿ, ಮುದ್ದೆ, ಫ್ರೂಟ್ ಸಲಾಡ್, ಅನ್ನ ರಸಂ, ಸಂಬಾರ್, ತರಕಾರಿ ಸಲಾಡ್, ಪಲ್ಯಾ, ರೈಸ್ ಬಾತ್, ಮೊಸರು, ಡ್ರೈ ಜಾಮೂನ್ ಸೇರಿದಂತೆ ಒಟ್ಟು 15 ಬಗೆಯ ಪದಾರ್ಥಗಳನ್ನು ಕಳುಹಿಸಲಾಯ್ತು. ಒಟ್ಟು 120 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ವಿಧಾನಸಭೆಯಲ್ಲಿ ಆರಾಮ ನಿದ್ರೆಗೆ ಜಾರಿದ್ದಾರೆ. ಆದರೆ ಈ ನಿದ್ರೆ ಹಿಂದೆ ಕಾಂಗ್ರೆಸ್​​ ಬಿಕ್ಕಟ್ಟು ತಪ್ಪಿಸಿಕೊಳ್ಳುವ ಯತ್ನವೋ..? ಅಥವಾ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವುದನ್ನು ತಪ್ಪಿಸುವ ಪ್ರಯತ್ನವೋ ಎನ್ನುವ ಅನುಮಾನ ಬರುವಂತಾಗಿದೆ.

ಇದನ್ನೂ ಓದಿ: ಕಾಫಿ ವಾಲಾನನ್ನು ಕಳ್ಳನನ್ನಾಗಿ ಮಾಡಿದ್ದೇ ಖಾಕಿಪಡೆ..!! ಬ್ಯಾಟರಿ ಕಳವು ಸೀಕ್ರೆಟ್​​…

ಕಾಂಗ್ರೆಸ್​ ಮಾಡಬೇಕಿದ್ದಿದ್ದು ಏನು..? ಮಾಡಿದ್ದೇನು..?

ಹಿಜಬ್​ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಕಾಲೇಜುಗಳಲ್ಲಿ ವಸ್ತ್ರ ಸಹಿಂತೆ ಜಾರಿಯಲ್ಲಿ ಇರಲಿಲ್ಲ. ಆದರೂ ಮುಸ್ಲಿಂ ಯುವತಿಯರು ಹಿಜಬ್​ ಧರಿಸುವುದನ್ನು ಕಡ್ಡಾಯ ಮಾಡಿತ್ತು. ಆದರೆ ರಾಜ್ಯ ಸರ್ಕಾರ ಹಿಜಬ್​ ವಿಚಾರ ಕೆದಕುವ ಉದ್ದೇಶದಿಂದಲೇ ವಸ್ತ್ರ ಸಂಹಿತೆ ಜಾರಿ ಮಾಡಿ ಆದೇಶ ಹೊರಡಿಸಿತ್ತು. ಅದೂ ಅಲ್ಲದೆ ಕಾಲೇಜು ಅಭಿವೃದ್ಧಿ ಸಮಿತಿ ವಸ್ತ್ರ ಸಮಿತಿ ರೂಪಿಸಿದ್ದರೆ ಅದನ್ನು ಪಾಲಿಸಬೇಕು. ವಸ್ತ್ರ ಸಂಹಿತೆ ರೂಪಿಸದಿದ್ದರೆ ತನಗಿಷ್ಟ ಬಂದ ವಸ್ತ್ರಗಳನ್ನು ಧರಿಸಲು ಅವಕಾಶವಿದೆ ಎನ್ನುವುದನ್ನು ಸರ್ಕಾರ ಅಧಿಕೃತ ಮಾಡಿತ್ತು. ಆ ಬಳಿಕ ಇಡೀ ರಾಜ್ಯಕ್ಕೆ ಹಿಜಬ್​ ಕಿಚ್ಚು ಹಚ್ಚಿತ್ತು. ಮಕ್ಕಳ ನಡುವೆ ದ್ವೇಷ ದುಪ್ಪಟ್ಟಾಗಿತ್ತು. ಈ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಹೆದುಕೊಳ್ಳುವುದನ್ನು ಬಿಟ್ಟು ಅಹೋರಾತ್ರಿ ಹೋರಾಟ ನಿಶ್ಪ್ರಯೋಜನ.

ಸಚಿವ ಈಶ್ವರಪ್ಪ ಮೇಲೆ ಕ್ರಮ ಅನಿವಾರ್ಯವೇ..?

ಸಚಿವ ಈಶ್ವರಪ್ಪ ಹೇಳಿರುವುದು ಸರಿಯಲ್ಲ ಎನ್ನುವುದು ಸ್ವತಃ ಬಿಜೆಪಿ ಪಕ್ಷದ ನಾಯಕರಿಗೂ ಗೊತ್ತಿರುವ ಸಂಗತಿ. ಈ ವಿಚಾರವನ್ನು ಕೋರ್ಟ್​ನಲ್ಲಿ ಪ್ರಶ್ನೆ ಮಾಡುವ ಅವಕಾಶ ಕಾಂಗ್ರೆಸ್​ಗೆ ಇದ್ದೇ ಇತ್ತು. ಇನ್ನೂ ಶಿವಮೊಗ್ಗದ ಘಟನೆ ಬಗ್ಗೆ ಸದನದಲ್ಲಿ ಇಷ್ಟು ತಡವಾಗಿ ಪ್ರಶ್ನೆ ಮಾಡಿದ್ದು ಕಾಂಗ್ರೆಸ್​​ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಈಶ್ವರಪ್ಪ ಕೆಂಪುಕೋಟೆ ಮೇಲೆ ಭಗವಧ್ವಜ ಹೇಳಿಕೆ ಕೊಟ್ಟ ಮರು ದಿನವೇ ಕೋರ್ಟ್​ನಲ್ಲಿ ಖಾಸಗಿ ದಾವೆ ಸಲ್ಲಿಸಿ, ರಾಜ್ಯಾದ್ಯಂತ ​ ರಾಜ್ಯಾದ್ಯಂತ ಪ್ರತಿಭಟನೆ ಮಾಡಬಹುದಿತ್ತು. ಈ ಮೂಲಕ ಈಶ್ವರಪ್ಪ ಮೇಲೆ ಕ್ರಮ ಆಗುವಂತೆ ಮಾಡಬಹುದಿತ್ತು. ಆದರೆ ಡಿ.ಕೆ ಶಿವಕುಮಾರ್​ ಅವರನ್ನು ವೈಯಕ್ತಿಕವಾಗಿ ನಿಂದಿಸಿದ ಬಳಿಕ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಈಶ್ವರಪ್ಪ ಎರಡೂ ಕಡೆಯಲ್ಲೂ ತಪ್ಪು ಮಾಡಿದ್ದಾರೆ. ಆದರೆ ಸದನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದು ಸೂಕ್ತವಾಗಿತ್ತು ಎನ್ನುವುದರ ಜೊತೆಗೆ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಕಾಂಗ್ರೆಸ್​ ಬಿಟ್ಟುಕೊಟ್ಟಂತಾಯ್ತು.

ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ..!

ರಾಜ್ಯದಲ್ಲಿ ಹಿಜಬ್​ ಕಿಚ್ಚಿನ ನಡುವೆ ಶುರುವಾದ ಅಧಿವೇಶನ ಸರ್ಕಾರಕ್ಕೂ ಬೇಕಿರಲಿಲ್ಲ. ಕಾಂಗ್ರೆಸ್​ ಅಹೋರಾತ್ರಿ ಧರಣಿ ಶುರು ಮಾಡುತ್ತಿದ್ದ ಹಾಗೆ ಬಿಜೆಪಿ ಸರ್ಕಾರ, ಜಂಟಿ ಅಧಿವೇಶನ ಮುಕ್ತಾಯ ಮಾಡುವ ನಿರ್ಧಾರ ಮಾಡಿದೆ ಎನ್ನಲಾಗ್ತಿದೆ. ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್​ ದಿಕ್ಕು ತಪ್ಪಿಸಲು ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದ್ದು, ಹತ್ತು ದಿನಗಳ ಕಾಲ ನಡೆಯಬೇಕಿದ್ದ ಸದನ ಕೇವಲ 5 ದಿನಕ್ಕೆ ಕೊನೆಯಾಗುವ ಬಹುತೇಕ ಎಲ್ಲಾ ಸಾಧ್ಯತೆಗಳೂ ಇವೆ ಎನ್ನುತ್ತಿವೆ ಬಿಜೆಪಿ ಮೂಲಗಳು. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಸ್ಪೀಕರ್​ ಜೊತೆಗೂ ಸಭೆ ನಡೆಸಿದ್ದಾರೆ. ಇಂದು ಮಧ್ಯಾಹ್ನ ಸಚಿವ ಸಂಪುಟ ಸಭೆ ಕರೆದು ಅಂತಿಮ ನಿರ್ಧಾರ ಮಾಡಲಾಗುತ್ತದೆ ಎನ್ನಲಾಗಿದೆ. ಒಟ್ಟಾರೆ, ಸರ್ಕಾರಕ್ಕೂ ಬೇಕಿರಲಿಲ್ಲ. ಕಾಂಗ್ರೆಸ್​ ಸರ್ಕಾರಕ್ಕೆ ಸಪೋರ್ಟ್​ ಮಾಡಿದಂತಾಗಿದ್ದು ಸತ್ಯ.

Related Posts

Don't Miss it !