ನಾವಿಕನಿಲ್ಲದ ದೋಣಿಯಲ್ಲಿ ಈಜಿ ದಡ ಸೇರುವ ಸಾಹಸ ಮಾಡಿದ ಕಾಂಗ್ರೆಸ್​​..!

ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯನ್ನು ಬಿಜೆಪಿ ಗೆಲುವು ಸಾಧಿಸುವ ಮೂಲಕ ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತಿದೆ. ಒಟ್ಟು 82 ವಾರ್ಡ್​ಗಳ​ ಚುನಾವಣೆಯಲ್ಲಿ BJP 39 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಪಕ್ಷವಾಗಿ ಹೊರಹೊಮ್ಮಿದೆ. ಇನ್ನೂ ಕಾಂಗ್ರೆಸ್​ 33 ಸ್ಥಾನಗಳಲ್ಲಿ ಗೆಲುವು ಸಾಧಿಸಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. JDS ಒಂದು ವಾರ್ಡ್​ನಲ್ಲಿ ಗೆಲುವ ಮೂಲಕ ಶೂನ್ಯ ಸಾಧನೆಯನ್ನು ತಪ್ಪಿಸಿಕೊಂಡಿದೆ. ಇನ್ನೂ ಬೆಳಗಾವಿಯಲ್ಲಿ 2 ವಾರ್ಡ್​ನಲ್ಲಿ ಗೆಲುವು ಸಾಧಿಸಿದ್ದ ಅಸಾದುದ್ದೀನ್​ ಓವೈಸಿ ನೇತೃತ್ವದ AIMIM ಪಕ್ಷ ಹುಬ್ಬಳ್ಳಿ ಧಾರವಾಡದಲ್ಲಿ 3 ವಾರ್ಡ್​ಗಳನ್ನು ಗೆದ್ದುಕೊಂಡು ಅಸ್ತಿತ್ವ ತೋರಿಸುತ್ತಿದೆ. ಇನ್ನುಳಿದಂತೆ ಪಕ್ಷೇತರರು 6 ಸ್ಥಾನಗಳಲ್ಲಿ ಗೆದ್ದಿದ್ದಾರೆ.

ಮಾನ ಉಳಿಸಿಕೊಂಡ ಬಸವರಾಜ ಬೊಮ್ಮಾಯಿ..!

ಹುಬ್ಬಳ್ಳಿ-ಧಾರವಾಡ ಮೂಲಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಚುನಾವಣೆ ನಿಬಾಯಿಸಿದ್ದಾರೆ. ಮೊದಲ ಯತ್ನದಲ್ಲೇ ಬಸವರಾಜ ಬೊಮ್ಮಾಯಿ ಸೋಲನ್ನಪ್ಪಿದರೆ ಮುಖಭಂಗ ಆಗಲಿದೆ ಎನ್ನುವ ಚರ್ಚೆಗಳು ನಡೆದಿದ್ದವು. ಅದರಲ್ಲೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದರಿಂದ ಅಸಮಾಧಾನ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಹಾಗೂ ಅರವಿಂದ ಬೆಲ್ಲದ್​ ತಟಸ್ಥರಾಗಿ ಉಳಿಯಲಿದ್ದಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆಯಿಂದ ಕೊನೆ ಕ್ಷಣದಲ್ಲಿ ಅಸಮಾಧಾನ ಬಿಟ್ಟು ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ಮನಸ್ಸು ಮಾಡಿದ್ದು, ಬಿಜೆಪಿಗೆ ವರವಾಯ್ತು. ಅದರಲ್ಲಿ ಬಸವರಾಜ ಬೊಮ್ಮಾಯಿ ನಮ್ಮವರು, ಗೆಲ್ಲಿಸುವ ಮೂಲಕ ಶಕ್ತಿ ತುಂಬಬೇಕು ಎನ್ನುವ ಜನರ ಅಭಿಪ್ರಾಯ ಕೂಡ ಸಹಾಯವಾಯ್ತು ಎನ್ನುತ್ತಾರೆ ಸ್ಥಳೀಯರು.

Read this also;

ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್​ ಸಾಧನೆ ಅತ್ಯುತ್ತಮ..!

ಹುಬ್ಬಳ್ಳಿ-ಧಾರವಾಡ ಬಿಜೆಪಿ ಪಕ್ಷಕ್ಕೆ ಗಟ್ಟಿ ನೆಲೆ ಇರುವ ಜಿಲ್ಲೆ ಎಂದರೂ ತಪ್ಪಾಗಲಾರದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ, ಮಾಜಿ ಸಿಎಂ ಜಗದೀಶ್​ ಶೆಟ್ಟರ್​, ರಾಜ್ಯ ಸಚಿವ ಶಂಕರ್​ ಪಾಟೀಲ್​ ಮುನೇನಕೊಪ್ಪ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದ ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ಅರವಿಂದ ಬೆಲ್ಲದ್​ ಸೇರಿದಂತೆ ನಾಯಕರ ದಂಡೇ ಈ ಜಿಲ್ಲೆಯಲ್ಲಿದೆ. ಆದರೆ ಕಾಂಗ್ರೆಸ್​ಗೆ ಹೇಳಿಕೊಳ್ಳುವಂತಹ ಪ್ರಮುಖ ನಾಯಕ ಇಲ್ಲದ ಕಾರಣ ಕಾಂಗ್ರೆಸ್​ ಸೋಲುಣ್ಣಬೇಕಾಯ್ತು ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಇತ್ತೀಚಿಗಷ್ಟೇ ಜೈಲಿನಿಂದ ಹೊರ ಬಂದಿರುವ ವಿನಯ್​​ ಕುಲಕರ್ಣಿ, ಜಾಮೀನು ಪಡೆದು ಹೊರಗೆ ಬಂದಿದ್ದರೂ ಜಿಲ್ಲೆಗೆ ಪ್ರವೇಶವಿಲ್ಲ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್​ ಸಾಧನೆ ಕಡಿಮೆಯಲ್ಲ ಎನ್ನಲಾಗ್ತಿದೆ.

Read this also;

ಬಿಜೆಪಿಗಿಂತಾ ಕಾಂಗ್ರೆಸ್​ಗೇ ಹೆಚ್ಚು ಸ್ಥಾನ..!!

ಕಳೆದ ಬಾರಿ 33 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಪಕ್ಷ ಈ ಬಾರಿ 6 ಸ್ಥಾನಗಳನ್ನು ಹೆಚ್ಚಿಸಿಕೊಂಡು 39 ಸ್ಥಾನಕ್ಕೇರಿದೆ. ಕಾಂಗ್ರೆಸ್ ಕಳೆದ ಬಾರಿಗಿಂತ 11 ಸ್ಥಾನಗಳನ್ನು ಹೆಚ್ಚಿಸಿಕೊಂಡು 33 ವಾರ್ಡ್​ಗಳಲ್ಲಿ ಜಯ ಸಾಧಿಸಿದೆ. ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿರುವ ಕಾಂಗ್ರೆಸ್​ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್​ ಹುಬ್ಬಳ್ಳಿ ಧಾರವಾಡದಲ್ಲಿ ನಮ್ಮ ಶಕ್ತಿ ಹೆಚ್ಚಾಗಿದೆ ಎಂದಿದ್ದಾರೆ. ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿದ್ದು, ಜನರ ತೀರ್ಪನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ. ಕಾಂಗ್ರೆಸ್​ ಮುಖ್ಯ ಸಚೇತಕ ಅಜಯ್​ ಸಿಂಗ್ ಮಾತನಾಡಿ ಹುಬ್ಬಳ್ಳಿ ಧಾರವಾಡದಲ್ಲಿ ಕಾಂಗ್ರೆಸ್​ ಪಕ್ಷ ಉತ್ತಮ ಸಾಧನೆ ಮಾಡಿದೆ ಎಂದಿದ್ದಾರೆ. ಅಂಕಿ ಅಂಶಗಳ ಪ್ರಕಾರ ಬಿಜೆಪಿಗಿಂತಲೂ ಕಾಂಗ್ರೆಸ್​ ಸಾಧನೆಯೇ ಹೆಚ್ಚಾಗಿದೆ. ಘಟಾನುಘಟಿ ನಾಯಕರಿಲ್ಲದಿದ್ದರೂ ಗೆದ್ದು ಬೀಗಿದೆ ಕಾಂಗ್ರೆಸ್​. ಬಿಜೆಪಿ ಪರವಾಗಿ ಸಚಿವ ಬೈರತಿ ಬಸವರಾಜು ಶಿರಸಿಯಲ್ಲಿ ಮಾತನಾಡಿ, ಹುಬ್ಬಳ್ಳಿ ಧಾರವಾಡ ಪಾಲಿಕೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದೇವೆ. ಉತ್ತಮ ಆಡಳಿತ ಕೊಟ್ರೆ ಜನ ನಮ್ಮನ್ನು ಬೆಂಬಲಿಸ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.

Related Posts

Don't Miss it !