‘ವಾಕ್​ ಫಾರ್​ ವಾಟರ್’ ಇಕ್ಕಟ್ಟಿನಲ್ಲಿ ಸರ್ಕಾರ.. ಯಾವುದೇ ನಿರ್ಧಾರ ಮಾಡಿದ್ರೂ ಸಂಕಷ್ಟ ಗ್ಯಾರಂಟಿ..!!

ಕಾಂಗ್ರೆಸ್​ ಪಕ್ಷ ಜನವರಿ 9 ರಿಂದ ಜನವರಿ 17ರ ತನಕ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಲು ನಿರ್ಧಾರ ಮಾಡಿದೆ. ಆದರೆ ಕೊರೊನಾ ಸೋಂಕಿತರ ಸಂಖ್ಯೆ ಗಗನಕ್ಕೇರುತ್ತಿದ್ದು, ಸರ್ಕಾರ ವೀಕೆಂಡ್​​ ಕರ್ಫ್ಯೂ ಜೊತೆಗೆ ನೈಟ್​ ಕರ್ಫ್ಯೂ ಜಾರಿ ಮಾಡಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಪಾಸಿಟಿವಿಟಿ ದರ ಶೇಕಡ 7.5 ರಷ್ಟು ಆಗಿದೆ. ಆದರೆ ಕಾಂಗ್ರೆಸ್​ ಮಾತ್ರ ಉದ್ದೇಶ ಪೂರ್ವಕವಾಗಿಯೇ ಸರ್ಕಾರ ನಮ್ಮ ಪಾದಯಾತ್ರೆ ತಡೆಯುವ ಪ್ರಯತ್ನ ಮಾಡುತ್ತಿದೆ. ಆದರೆ ಸರ್ಕಾರ ಏನೇ ನಿಯಮಗಳನ್ನು ಜಾರಿ ಮಾಡಿದ್ರೂ ನಮ್ಮ ಪಾದಯಾತ್ರೆ ನಿಲ್ಲುವುದಿಲ್ಲ. ಕೊರೊನಾ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡುತ್ತೇವೆ ಎಂದು ಗುಡುಗಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಕಾನೂನು ಕ್ರಮದ ಎಚ್ಚರಿಕೆ ನೀಡಿರುವುದಕ್ಕೆ ಉತ್ತರ ಕೊಟ್ಟಿರುವ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​, ತಾಕತ್ತಿದ್ದರೆ ನಮ್ಮ ಹೋರಾಟ ತಡೆಯಿರಿ ನೋಡೋಣ. ನಾನು ಸತ್ತರೂ ಹೋರಾಟ ನಿಲ್ಲಿಸುವುದಿಲ್ಲ ಎಂದಿದ್ದಾರೆ. ನನ್ನೂರು, ನನ್ನ ಕ್ಷೇತ್ರ, ನನ್ನ ಜನ. ಸರ್ಕಾರ ಏನು ಮಾಡುತ್ತದೆಯೋ ನೋಡೋಣ ಎಂದು ಸವಾಲು ಹಾಕಿದ್ದಾರೆ.

Read This:

ನಮ್ಮನ್ನು ತಡೆಯಲು ಮತ್ತೊಂದು ಜನ್ಮ ಎತ್ತಬೇಕು..!

ರಾಮನಗರದ ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್​ ಮಾತ್ರ ಕಾಂಗ್ರೆಸ್​ ರಾಜಕೀಯಕ್ಕೆ ತಿರುಗೇಟು ನೀಡಿದ್ದು, ಕಳೆದ 30 ವರ್ಷದಿಂದ ಡಿ.ಕೆ ಶಿವಕುಮಾರ್​ ಏನು ಮಾಡ್ತಿದ್ರು..? ಎಂದು ಪ್ರಶ್ನಿಸಿದ್ದಾರೆ. ಆದರೆ ಡಿ.ಕೆ ಶಿವಕುಮಾರ್​ ಮಾತ್ರ ವಾಕ್​ ಫಾರ್​ ವಾಟರ್​ ಹೋರಾಟ ತಡೆಯಲು ಗೃಹ ಸಚಿವರು ಇನ್ನೊಂದು ಜನ್ಮ ಎತ್ತಿ ಬರಬೇಕು ಎಂದಿದ್ದಾರೆ. ರಾತ್ರಿ ವೇಳೆ ಹೋಟೆಲ್​​ಗಳನ್ನು ನೀಡದಂತೆ ಆದೇಶ ಮಾಡಿದ್ದಾರೆ, ನಾವು ರಸ್ತೆಯಲ್ಲೇ ಮಲಗ್ತೇವೆ ಎಂದಿದ್ದಾರೆ ಶಿವಕುಮಾರ್​. ಯಾರನ್ನಾದರೂ ಅರೆಸ್ಟ್​ ಮಾಡಿ ನಾನೂ ಸಿದ್ದರಾಮಯ್ಯ ಮಾತ್ರ ನಡೆದೇ ನಡೆಯುತ್ತೇವೆ ಎನ್ನುವ ಸುಳಿವನ್ನೂ ನೀಡಿದ್ದಾರೆ. ಇನ್ನೂ ಬಿಜೆಪಿ ಸಚಿವ ಆರ್​. ಅಶೋಕ್​ ಮಾತ್ರ ಕಾಂಗ್ರೆಸ್​ ರಾಜಕೀಯ ಮಾಡುತ್ತಿದೆ ಎಂದ್ರೆ, ಜನರು ಎಲ್ಲವನ್ನೂ ಗಮನಿಸ್ತಿದ್ದಾರೆ ಎಂದಿದ್ದಾರೆ ಆರೋಗ್ಯ ಸಚಿವ ಡಾ ಸುಧಾಕರ್​. ಸಿಎಂ ಬಸವರಾಜ ಬೊಮ್ಮಾಯಿ ಮಾತ್ರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು, ಕಾನೂನು ಉಲ್ಲಂಘನೆ ಮಾಡುವುದ ಸರಿಯಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.

ಪಾದಯಾತ್ರೆ ತಡೆದರೂ ಕಷ್ಟ..! ಹೋರಾಟಕ್ಕೆ ಬಿಟ್ಟರೂ ಕಷ್ಟ..!

ಕೊರೊನಾ ಹೆಚ್ಚಾಗುತ್ತಿದೆ ಎನ್ನುವ ಕಾರಣಕ್ಕೆ ವೀಕೆಂಡ್​ ಕರ್ಫ್ಯೂ ಜೊತೆಗೆ ನೈಟ್​ ಕರ್ಫ್ಯೂ ಜಾರಿ ಮಾಡಿರುವ ಸರ್ಕಾರ, ಕಾಂಗ್ರೆಸ್​ ಪಾದಯಾತ್ರೆಗೆ ಅವಕಾಶ ಕೊಟ್ಟರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ. ಈಗಾಗಲೇ ಸೋಂಕಿನ ಪ್ರಮಾಣ ಅಧಿಕವಾಗ್ತಿದ್ದು, ಮತ್ತಷ್ಟು ಕೊರೊನಾ ಹೆಚ್ಚಳ ಆದರೂ ಆಗಬಹುದು. ಹಳ್ಳಿಗಳ ಕಡೆಗೆ ಸೋಂಕು ವ್ಯಾಪಕವಾಗಿಯೂ ಹರಡಬಹುದು. ಇನ್ನೂ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್​​ ಪ್ರಾಬಲ್ಯ ಹೆಚ್ಚಾಗಲಿದ್ದು, ಮುಂದಿನ ದಿನಗಳಲ್ಲಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ವಿಸ್ತರಣೆ ಮಾಡುವ ಕನಸು ಕಾಣುತ್ತಿರುವ ಕೇಸರಿ ಪಡೆಗೆ ತೊಡಕಾಗಬಹುದು. ಇನ್ನೂ ಪಾದಯಾತ್ರೆ ತಡೆದರೆ ಕಾಂಗ್ರೆಸ್​ಗೆ ಹೆಚ್ಚಿನ ಲಾಭವಾಗಲಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ. ಜನರ ಜೀವ ಜಲಕ್ಕಾಗಿ ಕಾಂಗ್ರೆಸ್​ ಪಾದಯಾತ್ರೆ ನಡೆಸುತ್ತಿದೆ. ಆದರೆ ಸರ್ಕಾರ ಮಾತ್ರ ನಮ್ಮ ಹೋರಾಟವನ್ನು ತಡೆಯುವ ಕೆಲಸ ಮಾಡುತ್ತಿದೆ ಎನ್ನುವ ಮೂಲಕ ಕಾಂಗ್ರೆಸ್​ ರಾಜಕೀಯ ಲಾಭ ಮಾಡಿಕೊಳ್ಳುವ ಆತಂಕ ಕಾಡುತ್ತಿದೆ. ಇನ್ನೂ ಮಂಡ್ಯ, ಹಾಸನ, ತುಮಕೂರು, ಚಾಮರಾಜನಗರ, ರಾಮನಗರ ಜಿಲ್ಲೆಗಳಿಂದ ಕಾಂಗ್ರೆಸ್​ ಕಾರ್ಯಕರ್ತರನ್ನು ಕರೆತರುವುದಕ್ಕೆ ಕಾಂಗ್ರೆಸ್​ ಸಕಲ ಸಿದ್ಧತೆ ಮಾಡಿಕೊಂಡಿದೆ. ಒಂದು ವೇಳೆ ಜನರನ್ನು ಕರೆತರಲು ಅವಕಾಶ ಕೊಡದಿದ್ದರೆ ಡಿ.ಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಇಬ್ಬರೇ ಪಾದಯಾತ್ರೆ ಹೋಗುವುದಕ್ಕೂ ತಯಾರಿ ನಡೆದಿದೆ.

Also Read;

ಬೇಲಿ ಮೇಲೆ ಬಿದ್ದಿದೆ ಬಟ್ಟೆ, ಮುಳ್ಳಿನಿಂದ ಜೋಪಾನ ಮಾಡ್ತಾರಾ ಸಿಎಂ..?

ಕಾಂಗ್ರೆಸ್​ ಆಯೋಜಿಸಿರುವ ವಾಕ್​ ಫಾರ್​ ವಾಟರ್​ ಎನ್ನುವ ಪಾದಯಾತ್ರೆ ಹೋರಾಟವನ್ನು ತಡೆದರೂ ಸರ್ಕಾರಕ್ಕೆ ಸಂಕಷ್ಟ ಗ್ಯಾರಂಟಿ. ಇನ್ನೂ ಪಾದಯಾತ್ರೆ ತಡೆಯುವ ವೇಳೆ ಸಾಕಷ್ಟು ಹೈಡ್ರಾಮಾ ನಡೆಯಲಿದ್ದು, ಅದರಿಂದ ಕಾಂಗ್ರೆಸ್​ಗೆ ರಾಜಕೀಯ ಲಾಭ ಆಗುವ ಎಲ್ಲಾ ಸಾಧ್ಯತೆಗಳೂ ಇವೆ. ಇದನ್ನು ತಡೆಯುವುದಕ್ಕೆ ಸರ್ಕಾರಕ್ಕೆ ಇರುವ ಏಕೈಕ ಮಾರ್ಗ ಸಂಧಾನ ಮಾಡಿಕೊಳ್ಳುವುದು. ಈಗಾಗಲೇ ಕರ್ನಾಟಕ ಬಂದ್​ ನಡೆಸುವುದನ್ನು ಮಾತುಕತೆ ಮೂಲಕ ತಡೆದಿರುವ ರಾಜ್ಯ ಸರ್ಕಾರ, ಕಾಂಗ್ರೆಸ್​ನ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕರೆದು ಮಾತುಕತೆ ನಡೆಸಬೇಕಿದೆ. ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ. ನಿಮ್ಮಷ್ಟೇ ನಮಗೂ ಯೋಜನೆ ಜಾರಿಗೆ ಆಸಕ್ತಿಯಿದೆ ಎಂಬುದನ್ನು ಕಾಂಗ್ರೆಸ್​ ನಾಯಕರಿಗೆ ತಿಳಿಸಿ ಹೇಳಬೇಕಿದೆ. ಅದನ್ನು ಬಿಟ್ಟು ಕಾಂಗ್ರೆಸ್​​ ಕಾರ್ಯಕರ್ತರು ಹಾಗೂ ನಾಯಕರನ್ನು ಕಾನೂನು ಮೂಲಕ ಕಟ್ಟಿ ಹಾಕ್ತೇವೆ ಎನ್ನುವುದು ಮೈ ಪರಚಿಕೊಂಡಂತೆಯೇ ಸರಿ.

Related Posts

Don't Miss it !