ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದ ಮಹಿಳಾ ಕಾಂಗ್ರೆಸ್..! ಕಾರಣ ಬಹಿರಂಗ

ಬೆಂಗಳೂರು: ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಳೆದ ಒಂದು ವಾರದಿಂದ ವಾಗ್ದಾಳಿ ಪ್ರತಿದಾಳಿ ನಡೆಯುತ್ತಿತ್ತು. ಆ ಬಳಿಕ ಸ್ವತಃ ಕುಮಾರಸ್ವಾಮಿ ನನಗೆ ಸಮಯ ವ್ಯರ್ಥ ಮಾಡಲು ಇಷ್ಟವಿಲ್ಲ, ಚರ್ಚೆ ಮಾಡಬೇಕಿರುವ ವಿಚಾರಗಳು ಸಾಕಷ್ಟು ಇವೆ. ಯಾರೇ ಆರೋಪ ಮಾಡಿದರೂ ಅದನ್ನು ಜನರ ವಿವೇಚನೆಗೆ ಬಿಡ್ತೇನೆ ಎನ್ನುವ ಮೂಲಕ ವಾದ-ಪ್ರತಿವಾದಕ್ಕೆ ತೆರೆ ಎಳೆದಿದ್ದರು. ಆದರೆ ಕುಮಾರಸ್ವಾಮಿ ವಿರುದ್ಧ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಸುಮಲತಾ ವಾಗ್ದಾಳಿ ಮುಂದುವರಿಸಿದ್ದರು. ಇದೀಗ ವಾರದ ಬಳಿಕ ಕಾಂಗ್ರೆಸ್ ಮಹಿಳಾ ಪಡೆ ಸುಮಲತಾ ಪರವಾಗಿ ದನಿ ಎತ್ತಿದೆ. ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದೆ.

ಕಾಂಗ್ರೆಸ್ ಮಹಿಳಾ ನಾಯಕಿಯರ ಸುದ್ದಿಗೋಷ್ಠಿ..!

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಮಹಿಳಾ ಕಾಂಗ್ರೆಸ್ ನಾಯಕಿಯರು ಸುಮಲತಾ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಕಲಾವಿದರು ಅಥವಾ ಮಹಿಳೆಯ ಎಂಬ ವಿಚಾರವಲ್ಲ, ಸಂಸದೆ ಸುಮಲತಾ ಜನಪ್ರತಿನಿಧಿ ಎನ್ನುವುದನ್ನು ಗಮನಿಸಬೇಕು ಎಂದು ಮಾಜಿ ಸಚಿವೆ, ಹಿರಿಯ ನಟಿ ಉಮಾಶ್ರೀ ಹೇಳಿದ್ದಾರೆ. ಸುಮಲತಾ ಎತ್ತಿರುವ ಅಕ್ರಮ ಗಣಿಗಾರಿಕೆ‌ ಕುರಿತು ತನಿಖೆ ಮಾಡಬೇಕು. ಕನ್ನಂಬಾಡಿ ಅಣೆಕಟ್ಟೆಯ ನೈಜ ಪರಿಸ್ಥಿತಿ ಅರಿಯಬೇಕು. ಅದನ್ನು ಬಿಟ್ಟು ತೀರಾ ವೈಯಕ್ತಿಕ ವಿಚಾರವಾಗಿ ಮಾತನಾಡಬಾರದು. ಕುಮಾರಸ್ವಾಮಿ ಕೂಡ ಜನ ಪ್ರತಿನಿಧಿಯಾಗಿದ್ದು, ಸುಮಲತಾ ಎತ್ತಿರುವ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅಂಬರೀಶ್ ಸ್ಮಾರಕ ವಿಚಾರ ಎಳೆದು ತಂದಿದ್ದು ಸರಿಯಲ್ಲ ಎಂದು ಉಮಾಶ್ರೀ ವಾಗ್ದಾಳಿ ಮಾಡಿದ್ದಾರೆ.

ಅವಹೇಳನಕಾರಿ ಮಾತು ತರವಲ್ಲ..!

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಸಂಸದೆ ಸುಮಲತಾ ಎತ್ತಿರುವ ಯಾವುದೇ ವಿಚಾರ ಇರಲಿ, ಕುಮಾರಸ್ವಾಮಿ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಸರಿಯಲ್ಲ. ತಮ್ಮ ಹೇಳಿಕೆಯನ್ನು ವಾಪಸ್ ಪಡೆದರೆ‌‌ ಒಳ್ಳೆಯದು. ಹೆಣ್ಣು ಮಕ್ಕಳ ಬಗ್ಗೆ ಯಾರೂ ಈ ರೀತಿ ಮಾತನಾಡಬಾರದು. ಸುಮಲತಾ ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. ಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಹೆಚ್ಚಿನ ನೀರಿನ‌ ಹರಿವಿನಿಂದ ಆಣೆಕಟ್ಟು ಬಗ್ಗೆ ಅವರು ಆತಂಕ ವ್ಯಕ್ತಪಡಿಸಿರಬಹುದು. ಆದರೆ ಕುಮಾರಸ್ವಾಮಿ ಈ ರೀತಿ ಹೇಳಿಕೆ‌ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರುಷ ನಾಯಕರ ಮೌನಕ್ಕೆ ಕಾರಣವೇನು..?

ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ವಾಕ್ಸಮರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆಗೆ ನಿರಾಕರಿಸಿದ್ದರು. ನನಗೂ ಅದಕ್ಕೂ ಸಂಬಂಧ ಏನಪ್ಪ ಎಂದು ಪ್ರಶ್ನಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಮಂಡ್ಯ ರಾಜಕಾರಣದ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಅಕ್ರಮ ಗಣಿಗಾರಿಕೆ ಬಗ್ಗೆ ಯಾರೂ ಹೇಳಲಿಲ್ಲ. ಕೆಆರ್​ಎಸ್​ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಚೀಪ್​ ಪಬ್ಲಿಸಿಟಿಗಾಗಿ ನಾನು ಏನನ್ನೂ ಮಾತನಾಡುವುದಿಲ್ಲ ಎಂದಿದ್ದರು. ಆದರೆ ಅದೇ ಕಾಂಗ್ರೆಸ್​ ಪಕ್ಷದ ನಾಯಕಿರುವ ಇವತ್ತು ಸುಮಲತಾ ಪರವಾಗಿ ಬ್ಯಾಟ್​ ಬೀಸಿದ್ದಾರೆ.

ಸಿದ್ದರಾಮಯ್ಯ ಭೇಟಿ ವರ್ಕೌಟ್​ ಆಯ್ತಾ..?


ರಾಜಭವನದಲ್ಲಿ ನಡೆದ ರಾಜ್ಯಪಾಲರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರನ್ನು ಸುಮಲತಾ ಭೇಟಿ ಮಾಡಿದ್ದರು. ಈ ವೇಳೆ ಮಂಡ್ಯಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ನಾನು ಮಾತನಾಡಿರುವ ವಿಚಾರವನ್ನು ಮಾಧ್ಯಮಗಳಿಗೆ ಹೇಳಿ ವಿವಾದ ಮಾಡಲು ಇಷ್ಟವಿಲ್ಲ ಎಂದು ಸುಮಲತಾ ಹೇಳಿಕೊಂಡಿದ್ದರು. ಆದರೆ ಸಿದ್ದರಾಮಯ್ಯ ಭೇಟಿ ಮಾಡಿದ ಒಂದೇ ದಿನದಲ್ಲಿ ಕಾಂಗ್ರೆಸ್​ ಮಹಿಳಾ ಲೀಡರ್​​ಗಳು ಸುಮಲತಾ ಪರವಾಗಿ ಬ್ಯಾಟಿಂಗ್​ ಮಾಡಿದ್ದಾರೆ. ಅಂದರೆ ಸುಮಲತಾ ಭೇಟಿ ಮಾಡಿದ ಬಳಿಕ ಸಿದ್ದರಾಮಯ್ಯ ನೀಡಿದ ಸೂಚನೆ ಅನ್ವಯ, ಉಮಾಶ್ರೀ ಹಾಗೂ ಮೋಟಮ್ಮ ಮಾತನಾಡಿದ್ದಾರೆ ಎನ್ನುವುದು ಖಚಿತ.

Related Posts

Don't Miss it !