Santhosh Death secret; ಈಶ್ವರಪ್ಪನ ಕಿರುಕುಳಕ್ಕೆ ಬೇಸತ್ತು ಗುತ್ತಿಗೆದಾರ ಆತ್ಮಹತ್ಯೆ..! ಆರೋಪ ಎಷ್ಟು ಸತ್ಯ..?

ಸಚಿವ ಈಶ್ವರಪ್ಪ ಗುತ್ತಿಗೆದಾರರಿಂದ ಶೇಕಡ 40ರಷ್ಟು ಕಮಿಷನ್​​ ಪಡೆಯುತ್ತಾರೆ ಎಂದು ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್​ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿಯ ಲಾಡ್ಜ್​​ನಲ್ಲಿ ಸ್ನೇಹಿತರ ಜೊತೆಗೆ ಉಳಿದುಕೊಂಡಿದ್ದ ಸಂತೋಷ್​ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಡಿವೈಎಸ್‌ಪಿ ಸುಧಾಕರ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಂತೋಷ್ ಜೊತೆಯಲ್ಲಿ ಉಳಿದುಕೊಂಡಿದ್ದ ಇಬ್ಬರು ಸ್ನೇಹಿತರು, ಪಕ್ಕದ ಕೊಠಡಿಯಲ್ಲೇ ಇದ್ದರು ಎನ್ನಲಾಗಿದೆ. ಪ್ರವಾಸಕ್ಕೆ ಎಂದು ಉಡುಪಿ ಕಡೆಗೆ ಬಂದಿದ್ದ ಸಂತೋಷ್​ ಪಾಟೀಲ್​ ಕುಟುಂಬಸ್ಥರಿಗೆ ಸಾವಿನ ಬಗ್ಗೆ ಸಂದೇಶ ಕಳುಹಿಸಿದ್ದು, ಅದರಲ್ಲಿ ನನ್ನ ಸಾವಿಗೆ ಕೆ.ಎಸ್​ ಈಶ್ವರಪ್ಪ ನೇರ ಕಾರಣ ಎಂದು ಆರೋಪಿಸಿದ್ದಾರೆ. ಉಡುಪಿಯ ಶಾಂಭವಿ ಲಾಡ್ಜ್‌ನ 207ನೇ ರೂಮ್​ನಲ್ಲಿ ನೇಣಿಗೆ ಶರಣಾದ ಸ್ಥಿತಿಯಲ್ಲಿ ಸಂತೋಷ್​ ಪಾಟೀಲ್​ ಶವ ಪತ್ತೆಯಾಗಿದೆ.

ಈಶ್ವರಪ್ಪ ಜೊತೆಗೆ ಸಂತೋಷ್

ಸಂತೋಷ್ ಸಾವಿನ ಸಂದೇಶದಲ್ಲಿ ಇರೋದು ಏನು..?

ಗುತ್ತಿಗೆದಾರ ಸಂತೋಷ್ ಪಾಟೀಲ್​ ಸಾಯುವ ಮುನ್ನ ಕುಟುಂಬಸ್ಥರಿಗೆ ಸಂದೇಶ ಕಳುಹಿಸಿದ್ದು, ಅದರಲ್ಲಿ ನನ್ನ ಸಾವಿಗೆ ಸಚಿವ ಕೆ.ಎಸ್ ಈಶ್ವರಪ್ಪ ನೇರ ಕಾರಣ. ಈಶ್ವರಪ್ಪನಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನ ಎಲ್ಲಾ ಆಸೆಗಳನ್ನು ಬದಿಗೊತ್ತಿ ಸಾಯುವ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ, ಮಗುವಿಗೆ ಸರ್ಕಾರ ನೆರವಾಗಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಮ್ಮ ಸಮುದಾಯದ ನಾಯಕರಾದ ಬಿ.ಎಸ್​ ಯಡಿಯೂರಪ್ಪ ನೆರವಾಗಬೇಕು. ನನ್ನ ಸಾವಿಗೂ ನನ್ನ ಜೊತೆಗೆ ಬಂದಿರುವ ಇಬ್ಬರು ಸ್ನೇಹಿತರಿಗೂ ಯಾವುದೇ ಸಂಬಂಧವಿಲ್ಲ ಎಂದು ಬರೆಯಲಾಗಿದೆ. ಆದರೆ ನನ್ನ ತಮ್ಮ ಸಂತೋಷ್​ ಪಾಟೀಲ್​ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪನವರೇ ಕಾರಣ ಎಂದು ಸಂತೋಷ್​ ಪಾಟೀಲ್​ ಸಹೋದರ ಪ್ರಶಾಂತ ಪಾಟೀಲ್​ ನೇರವಾಗಿ ಆರೋಪ ಮಾಡಿದ್ದಾರೆ.

4 ಕೋಟಿ ಕಾಮಗಾರಿಗೆ 40 ಪರ್ಸೆಂಟ್​ ಕಮಿಷನ್..!

ಬೆಳಹಗಾವಿ ಜಿಲ್ಲೆಯ ಗುತ್ತಿಗೆದಾರನಾದ ಸಂತೋಷ್​ ಪಾಟೀಲ್​ ಇತ್ತೀಚಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಹಲವಾರು ಕಾಮಗಾರಿಗಳನ್ನು ಮಾಡಿದ್ದರು. ಆ ಕಾಮಗಾರಿಗಳ ಟೆಂಡರ್​ ಮೊತ್ತ 4 ಕೋಟಿಗೆ ಅನುಗುಣವಾಗಿ ಶೇಕಡ 40ರಷ್ಟು ಕಮಿಷನ್​ ಲೆಕ್ಕಚಾರದಲ್ಲಿ ಕಿಕ್​ಬ್ಯಾಕ್​ ಕೂಡ ಸಲ್ಲಿಸಿದ್ದರು. ಆದರೆ, ಮಾಡಿದ ಕಾಮಗಾರಿಗಳಿಗೆ ವರ್ಕ್​ ಆರ್ಡರ್​ ರಿಲೀಸ್​ ಆಗಲೇ ಇಲ್ಲ. ಬಿಟ್ಟಿಯಾಗಿ ಕಾಮಗಾರಿ ಮಾಡಿಸಿಕೊಂಡು, ಸಚಿವರು ಕಿಕ್​ಬ್ಯಾಕ್​ ಪಡೆದುಕೊಂಡು ಬಿಲ್​ ಮಾಡದೆ ಸುಮ್ಮನಾಗಿತ್ತು ಎನ್ನಲಾಗಿದೆ. ಇದ್ದ ಹಣವನ್ನು ಕಾಮಗಾರಿ ಹಾಗೂ ಕಿಕ್​ಬ್ಯಾಕ್​ಗೆ ವಿನಿಯೋಗಿಸಿದ್ದ ಸಂತೋಷ್​ ಪಾಟೀಲ್​ ಏನಾದರೂ ಮಾಡಿ ವರ್ಕ್​ ಆರ್ಡರ್​ ಪಡೆಯುವ ಕಸರತ್ತು ಮಾಡಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಪ್ರಮುಖರಿಗೆ ಪತ್ರ ಬರೆದಿದ್ದರು. ಆ ಬಳಿಕ ಜೀವಬೆದರಿಕೆ ಜೊತೆಗೆ ಕೋರ್ಟ್​ನಲ್ಲೂ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ಕಾಮಗಾರಿ ಮಾಡಿದ್ದಕ್ಕೆ ಯಾವುದೇ ಸಾಕ್ಷ್ಯವಿಲ್ಲ, ವರ್ಕ್​ ಆರ್ಡರ್​ ರಿಲೀಸ್​ ಆಗುವ ಯಾವುದೇ ಲಕ್ಷಣ ಇಲ್ಲ, 4 ಕೋಟಿ ವ್ಯವಹಾರ ಸುಟ್ಟು ಭಸ್ಮ ಆಗಿದ್ದರಿಂದ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ.

ಈಶ್ವರಪ್ಪ ಹೇಳೋದೇನು..? ವಿಪಕ್ಷಗಳ ಆರೋಪವೇನು..?

ಸಂತೋಷ್​ ಪಾಟೀಲ್​ಗೆ ಯಾವುದೇ ಗುತ್ತಿಗೆ ಕಾಮಗಾರಿ ನೀಡಿಲ್ಲ. ಈ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ರಾಜೀನಾಮೆ ನೀಡುವ ಪ್ರಮಯವೇ ಇಲ್ಲ ಎಂದು ಸಚಿವ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ. ಆದರೆ ವಿರೋಧ ಪಕ್ಷ ಕಾಂಗ್ರೆಸ್​ ಮಾತ್ರ ಸಚಿವ ಈಶ್ವರಪ್ಪ ಸೇರಿದಂತೆ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಈಶ್ವರಪ್ಪ ರಾಜೀನಾಮೆ ಪಡೆಯಬೇಕು. ಕೊಲೆ ಪ್ರಕರಣ ದಾಖಲು ಮಾಡಿಕೊಂಡು ಈಶ್ವರಪ್ಪ ಅವರನ್ನು ಬಂಧಿಸಿ ವಿಚಾರಣೆ ಮಾಡಬೇಕು ಎಂದು ಆಗ್ರಹ ಮಾಡಲಾಗಿದೆ. ರಾಜ್ಯದ ಬಹುತೇಕ ಕಡೆ ಪ್ರತಿಭಟನೆ ಮಾಡಿದ್ದು, ಕೆ.ಎಸ್​ ಈಶ್ವರಪ್ಪ ಮನೆಗೆ ಮುತ್ತಿಗೆ ಯತ್ನ ಮಾಡಲಾಗಿದೆ. ದೆಹಲಿ ಮಟ್ಟದಲ್ಲೂ ಈಶ್ವರಪ್ಪ ಕಿರುಕುಳದಿಂದ ಸಾವು ಸಂಭವಿಸಿದೆ ಎಂದು ಕಾಂಗ್ರೆಸ್​ ಸುದ್ದಿಗೋಷ್ಟಿ ನಡೆಸಿ ಆರೋಪ ಮಾಡಿದೆ. ಕುಮಾರಸ್ವಾಮಿ ಮಾತ್ರ ನಿಮ್ಮದೇ ಪಕ್ಷದ ನಾಯಕರು ನಿಮ್ಮ ವಿರುದ್ಧ ಚಿತಾವಣೆ ಮಾಡಿರುವ ಸಾಧ್ಯತೆಯಿದೆ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ, ಕಾಂಗ್ರೆಸ್​ಗೆ ಆಹಾರವಾಗಬೇಡಿ ಎಂದು ಸಲಹೆ ನೀಡಿದ್ದಾರೆ. AAP ಈಶ್ವರಪ್ಪ ವಿರುದ್ಧ ದೂರು ಸಲ್ಲಿಕೆ ಮಾಡಿದೆ. ನಾಳೆ ರಾಜ್ಯಪಾಲರ ಭೇಟಿಗೆ ಕಾಂಗ್ರೆಸ್ ನಿರ್ಧಾರ ಮಾಡಿದೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಸೇರಿದಂತೆ ಎಲ್ಲಾ ನಾಯಕರು ಈಶ್ವರಪ್ಪ ಬೆನ್ನಿಗೆ ನಿಂತಿರುವುದು ಅಚ್ಚರಿ ಮೂಡಿಸಿದೆ.

Related Posts

Don't Miss it !