ಕೊರೊನಾ ಕಂಟ್ರೋಲ್​ಗೆ ಕಠಿಣ ರೂಲ್ಸ್.. ಶಾಲೆ ಬಂದ್​, ವೀಕೆಂಡ್​ ಕರ್ಫ್ಯೂ..!!

ಕರ್ನಾಟಕದಲ್ಲಿ ಕೊರೊನಾ ರಣೆ ಕೇಕೆ ಹಾಕುವುದಕ್ಕೆ ಶುರುವಾಗಿದೆ. ಮಂಗಳವಾರ ಒಂದೇ ದಿನ ಸೋಂಕಿತರ ಸಂಖ್ಯೆ ಮೂರು ಸಾವಿರ ಗಡಿ ದಾಟಿದ್ದು, ಬೆಂಗಳೂರಿನಲ್ಲಿ ಊಹೆಗೂ ನಿಲುಕದಂತೆ ಸೋಂಕು ಹೆಚ್ಚಳವಾಗುತ್ತಿದೆ. ಮಂಗಳವಾರ ಒಂದೇ ದಿನ 149 ಜನರಲ್ಲಿ ಓಮೈಕ್ರಾನ್​ ಸೋಂಕು ಪತ್ತೆ ಆಗಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ಈ ಪ್ರಮಾಣದಲ್ಲಿ ಸೋಂಕು ಹೆಚ್ಚಳಕ್ಕೆ ಹೊಸ ವರ್ಷಾಚರಣೆಯೇ ಕಾರಣ​ ಎನ್ನುವ ಸಬೂಬು ಕೊಟ್ಟರೂ ಸೋಂಕಿತರಿಂದ ಮತ್ತಷ್ಟು ಜನರಿಗೆ ಕೊರೊನಾ ಹರಡಿರುವುದು ಖಾತರಿ ಎನ್ನಬಹುದು. ಇದು ಮೂರನೇ ಅಲೆಯ ಆರಂಭ ಎಂದು ತಜ್ಞರು ಎಚ್ಚರಿಸಿದ್ದು, ಈಗಲೇ ಸೂಕ್ತ ಕ್ರಮಕೈಗೊಂಡರೆ ನಿಯಂತ್ರಣ ಸಾಧ್ಯ ಎನ್ನುವ ಎಚ್ಚೆರಿಕೆಯನ್ನು ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ತಾಂತ್ರಿಕ ಸಮಿತಿ ಸಭೆ ಬಳಿಕ ಮಹತ್ವದ ನಿರ್ಧಾರಗಳನ್ನು ಪ್ರಟ ಮಾಡಿದ್ದು, ಬೆಂಗಳೂರು ಹಾಗೂ ಉಳಿದ ಕರ್ನಾಟಕದ ಜಿಲ್ಲೆಗಳಿಗೆ ಪ್ರತ್ಯೇಕ ನಿಯಮಗಳನ್ನು ಜಾರಿಗೆ ತರಲಾಗಿದೆ.

ನೈಟ್​ ಕರ್ಫ್ಯೂ ವಿಸ್ತರಣೆ​ ಹಾಗೂ ವೀಕೆಂಡ್​ ಕರ್ಫ್ಯೂ ಜಾರಿ..!

ಕರ್ನಾಟಕದಲ್ಲಿ ಈಗಾಗಲೇ ನೈಟ್​ ಕರ್ಫ್ಯೂ ಜಾರಿಯಲ್ಲಿದ್ದು, ಜನವರಿ 17ರ ತನಕ 10 ದಿನಗಳ ಕಾಲ ನೈಟ್​​ ಕರ್ಫ್ಯೂ ವಿಸ್ತರಣೆ ಮಾಡಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ನೈಟ್​ ಕರ್ಫ್ಯೂ ಜಾರಿಯಲ್ಲಿರಲಿದ್ದು, ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆ ತನಕ ವೀಕೆಂಡ್​ ಕರ್ಫ್ಯೂ ಜಾರಿಗೆ ಬರಲಿದೆ. ಶನಿವಾರ ಮತ್ತು ಭಾನುವಾರ ಅಗತ್ಯ ವಸ್ತುಗಳನ್ನು ಕೊಳ್ಳಲು ಅವಶ್ಯಕತೆ ಇದ್ದರಷ್ಟೇ ಹೊರಗೆ ಬರಬೇಕು. ಅಡ್ಡಾದಿಡ್ಡ ಓಡಾಟ ನಡೆಸಿದ್ರೆ ಖಾಕಿಪಡೆ ಬೆತ್ತದ ರುಚಿ ತೋರಿಸಲು ಸನ್ನದ್ಧವಾಗಿದೆ. ಈ ವೀಕೆಂಡ್​ ಕರ್ಫ್ಯೂ ಜನವರಿ 17 ರವರೆಗೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಲಾಗಿದೆ. ಇನ್ನೂ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ವಾರದ 5 ದಿನಗಳ ಕಾಲ ಶೇಕಡ 50ರ ಮಿತಿಯಲ್ಲಿ ಕಾರ್ಯ ನಿರ್ವಹಣೆ ಮಾಡಲಿದ್ದು, ಶನಿವಾರ ಮತ್ತು ಭಾನುವಾರ ಎಲ್ಲಾ ಕಚೇರಿಗಳಿಗೂ ರಜೆ ಘೋಷಣೆ ಮಾಡಲಾಗಿದೆ.

ಹೊರಕ್ಕೆ ಬರಲು ಡಬಲ್​ ಡೋಸ್​ ಕಡ್ಡಾಯ..!

ಬೆಂಗಳೂರಿನಲ್ಲಿ ಸಾರಿಗೆ ವ್ಯವಸ್ಥೆ ಯಥಾಸ್ಥಿತಿ ಇರಲಿದೆ. ಆದರೆ ಪ್ರಯಾಣಿಕರಿಗೆ ಅನುಗುಣವಾಗಿ ಬಸ್​ ಹಾಗೂ ಮೆಟ್ರೋ ರೈಲುಗಳ ವ್ಯವಸ್ಥೆಯಲ್ಲಿ ಅದಲು ಬದಲು ಆಗುವ ಸಾಧ್ಯತೆಗಳಿವೆ. ಆದರೆ ಸೀಟು ಮಿತಿಯನ್ನು ಮೀರುವಂತಿಲ್ಲ. ಬಸ್​ಗಳಲ್ಲಿ ಮನಸೋ ಇಚ್ಛೆ ಭರ್ತಿ ಮಾಡಿಸಿಕೊಂಡು ಓಡಿಸುವಂತಿಲ್ಲ. ಆಟೋ, ಓಲಾ, ಊಬರ್​ ಸಂಚಾರವೂ​ ಇರಲಿದ್ದು, ಚಾಲಕರು 2 ಡೋಸ್​ ಕೋವಿಡ್​ 19​ ಲಸಿಕೆ ಪಡೆದಿರಬೇಕು. ಪ್ರಯಾಣಿಕರು ಕೋವಿಡ್​ ನಿಯಮ ಪಾಲಿಸಬೇಕು. ಬಾರ್​, ಪಬ್‌, ಕ್ಲಬ್‌, ರೆಸ್ಟೋರೆಂಟ್‌, ಹೋಟೆಲ್​ಗಳಲ್ಲಿ ಶೇಕಡ​​ 50ರಷ್ಟು ಮಿತಿ ಹೇರಿಕೆ ಮಾಡಲಾಗಿದೆ. ಮಾಲ್, ಸಿನಿಮಾ​​ ಥಿಯೇಟರ್​, ಮಲ್ಟಿಪ್ಲೆಕ್ಸ್​ಗಳಲ್ಲೂ ಶೇಕಡ 50ರ ಮಿತಿ ಕಡ್ಡಾಯ. ಆಡಿಟೋರಿಯಂ, ರಂಗಮಂದಿರ, ಈಜುಕೊಳ, ಜಿಮ್‌, ಸ್ಟೇಡಿಯಂ ಕಾರ್ಯಕ್ರಮಗಳಿಗೂ ಇದೇ ಕಾನೂನು ಅನ್ವಯ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ, ಬೆಂಗಳೂರಿಗೆ ಸೀಮಿತ..!

ಬೆಂಗಳೂರಿನಲ್ಲಿ ಜನವರಿ 6ರಿಂದ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 1 ರಿಂದ 9ನೇ ತರಗತಿ ಹಾಗೂ ಪದವಿ ಕಾಲೇಜುಗಳು 2 ವಾರ ಬಂದ್​ ಮಾಡಲಾಗಿದೆ, ಕೇವಲ 10ನೇ ತರಗತಿ​ ಹಾಗೂ ಪ್ರಥಮ, ದ್ವಿತೀಯ ಪಿಯುಸಿ ತರಗತಿಗಳು ಮತ್ತು ಮೆಡಿಕಲ್ ಕೋರ್ಸ್​ಗಳ​ ಕಾಲೇಜು ಮಾತ್ರ ತೆರೆದಿರುತ್ತವೆ. ಇನ್ನೂ ಬೆಂಗಳೂರಿನಲ್ಲಿ ಟ್ಯೂಷನ್​​, ಕೋಚಿಂಗ್​ ಸೆಂಟರ್​ಗಳು ಕೂಡ ಬಂದ್​ ಆಗಲಿವೆ. ಆನ್​ಲೈನ್​ ತರಗತಿಗಳು ಇರುತ್ತೆ, ಪರೀಕ್ಷೆಗಳು ಇದ್ದರೆ ನಡೆಸಲು ಅಡ್ಡಿಯಿಲ್ಲ. ಆದರೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ಯಥಾಸ್ಥಿತಿ ಕಾರ್ಯನಿರ್ವಹಿಸುತ್ತವೆ. ಅಗತ್ಯ ಎನಿಸಿದರೆ ಮಾತ್ರ ಶಾಲಾ-ಕಾಲೇಜು ಬಂದ್​ ಮಾಡುವ ಬಗ್ಗೆ ಸ್ಥಳೀಯ ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಬೇಕಿದೆ.

ಮುಷ್ಕರ, ಪ್ರತಿಭಟನೆ, ಜಾಥಾಗೂ ಅನುಮತಿ ಇಲ್ಲ..!

ಮೇಕೆದಾಟು ಪಾದಯಾತ್ರೆಗೆ ತಯಾರಿ ನಡೆಸುತ್ತಿದ್ದ ಕಾಂಗ್ರೆಸ್​​ಗೆ ಸರ್ಕಾರ ಕೌಂಟರ್​ ಕೊಟ್ಟಿದೆ. ಕೊರೊನಾ ಹೆಚ್ಚಳವಾಗಿರುವ ಕಾರಣ, ರಾಜಕೀಯ ಪಕ್ಷಗಳ ಯಾತ್ರೆ, ಕಾರ್ಯಕ್ರಮಕ್ಕೆ ಅನುಮತಿ ಇಲ್ಲ. ಮುಷ್ಕರ, ಪ್ರತಿಭಟನೆ, ಮೆರವಣಿಗೆಯನ್ನೂ ನಡೆಸುವಂತಿಲ್ಲ. ಯಾವುದೇ ಸಂಘ ಸಂಸ್ಥೆಗಳಾಗಲಿ ಧರಣಿ ನಡೆಸುವಂತಿಲ್ಲ. ನೂತನ ನಿಯಮ ಮೀರಿ ನಡೆದವರ ಮೇಲೆ ಕಠಿಣ ಕಾನೂನು ಕ್ರಮ ಖಚಿತ. ಇನ್ನೂ ಮದುವೆ ಸಮಾರಂಭಕ್ಕೂ ಬ್ರೇಕ್​ ಬಿದ್ದಿದ್ದು, ಹೊರಾಂಗಣದಲ್ಲಿ ಮದುವೆಗಳು ನಡೆದಾಗ ಗರಿಷ್ಠ 200 ಜನ ಹಾಗೂ ಒಳಾಂಗಣದ ಮದುವೆ ಕಾರ್ಯಕ್ರಮದಲ್ಲಿ ಗರಿಷ್ಠ 100 ಜನ ಮೀರುವಂತಿಲ್ಲ. ಇನ್ನೂ ನಾಮಕರಣ ಗೃಹಪ್ರವೇಶ, ಸಮಾರಂಭಗಳಿಗೂ 100 ಜನರ ಮಿತಿ ಹೇರಲಾಗಿದೆ. ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲೂ 50 ಜನರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಪ್ರಸಾದ ವಿತರಣೆಗೂ ನಿರ್ಬಂಧ ಹಾಕಲಾಗಿದೆ.

Read This;

ರಾಜ್ಯದ ಗಡಿಗಳಲ್ಲಿ ಕಟ್ಟೆಚ್ಚರ, ನೆಗೆಟಿವ್ ಕಡ್ಡಾಯ..!

ಕರ್ನಾಟಕದ ಜೊತೆಗೆ ಗಡಿ ಹಂಚಿಕೊಂಡಿರುವ ರಾಜ್ಯಗಳಿಂದ ಕರ್ನಾಟಕ ಪ್ರವೇಶ ಮಾಡುವ ಪ್ರಯಾಣಿಕರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ. ಮಹಾರಾಷ್ಟ್ರ, ಕೇರಳ, ಗೋವಾದಿಂದ ಬಂದವರಿಗೆ ಈ ನಿಯಮ ​ ಅನ್ವಯ. ನೆಗೆಟಿವ್​ ವರದಿ ಜೊತೆಗೆ 2 ಡೋಸ್​ ಲಸಿಕೆ ಹಾಕಿಸಿಕೊಂಡಿರಬೇಕು. ಇನ್ನೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್​ ಮಾಡಲಿದ್ದು, ಜೀನೋಮ್ ಸೀಕ್ವೆನ್ಸಿಂಗ್ ವರದಿ ಬರುವವರೆಗೆ ಕ್ವಾರಂಟೈನ್​ ಕಡ್ಡಾಯ. ಖಾಸಗಿ ಕ್ವಾರಂಟೈನ್​ ಬಯಸಿದ್ರೆ ಸೋಂಕಿತರೇ ವೆಚ್ಚ ಭರಿಸಬೇಕು. ಬೆಂಗಳೂರಿನ 8 ವಲಯಗಳಲ್ಲೂ ಐಎಎಸ್​ ಅಧಿಕಾರಿಗಳ ಟೀಂ ರಚನೆ ಮಾಡಲಾಗಿದ್ದು, 198 ವಾರ್ಡ್​​​ಗಳಿಗೂ ಕ್ಷೇತ್ರವಾರು ಆಂಬ್ಯುಲೆನ್ಸ್​ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. ಸರ್ಕಾರದ ನೂತನ ನಿಯಮಗಳನ್ನು ಮೀರಿದ್ರೆ NDMA ಕಾಯ್ದೆಯಡಿ ಪ್ರಕರಣ ದಾಖಲಾಗಲಿದೆ.

Public Spot Report:

Related Posts

Don't Miss it !