ಕರ್ನಾಟಕದಲ್ಲಿ ಲಾಕ್​ಡೌನ್​ ಜಾರಿ ಬಗ್ಗೆ ಇಂದೇ ನಿರ್ಧಾರ..! ಸರ್ಕಾರದ ಆಯ್ಕೆಗಳು..

ಕರ್ನಾಟಕದಲ್ಲಿ ಕೊರೊನಾ ಸೋಂಕು ಅಬ್ಬರ ಶುರು ಮಾಡಿದೆ. ದಿನನಿತ್ಯ 1 ಸಾವಿರ ಮೇಲ್ಪಟ್ಟು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಅದರಲ್ಲೂ ಓಮೈಕ್ರಾನ್​ ಸೋಂಕಿತರ ಸಂಖ್ಯೆಯೂ ನಿಧಾನವಾಗಿ ಏರುಮುಖದತ್ತ ಹೊರಟಿದೆ. ಇದರ ನಡುವೆ ರಾಜಕಾರಣಿಗಳಸಭೆ ಸಮಾರಂಭಗಳು ಎಗ್ಗಿಲ್ಲದೆ ನಡೆಯುತ್ತಲೇ ಇವೆ. ಇನ್ಮುಂದೆ ಸೋಂಕಿತರ ಸಂಖ್ಯೆ ದ್ವಿಗುಣ ಆಗಲು ಕೇವಲ ಮೂರು ದಿನಗಳು ಸಾಕು ಎಂದು ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಗಳನ್ನು ಎಚ್ಚರಿಸಿದೆ. ಇದರ ಜೊತೆಗೆ ಕರ್ನಾಟಕದಲ್ಲಿ ಓಮೈಕ್ರಾನ್​ ಸೋಂಕು ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯವನ್ನು ರೆಡ್​ ಝೋನ್​ ಎಂದು ಗುರುತು ಮಾಡಲಾಗಿದೆ. ಅಕ್ಕಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಸೋಂಕು ಲಗಾಮು ಇಲ್ಲದ ಕುದುರೆಯಂತೆ ನಾಗಲೋಟ ಮುಂದುವರಿಸಿರುವುದು ಕರ್ನಾಟಕಕ್ಕೆ ಆತಂಕ ತಂದೊಡ್ಡಿದೆ.

ಸಿಎಂ ನೇತೃತ್ವದಲ್ಲಿ ,ಮಹತ್ವದ ತಜ್ಞರ ಸಭೆ..!

ಕೊರೊನಾ ನಿಯಂತ್ರಣ ಮೀರಿ ಏರಿಕೆ ಆಗುತ್ತಿರುವ ಕಾರಣ, ರಾಜ್ಯದಲ್ಲಿ ಕೋವಿಡ್ ಹಾಗೂ ಓಮೈಕ್ರಾನ್ ನಿಯಂತ್ರಣ ಮಾಡುವ ಬಗ್ಗೆ ಸರ್ಕಾರ ಇಂದು ನಿರ್ಧಾರ ಕೈಗೊಳ್ಳಲಿದೆ. ಸಂಜೆ 6:30ಕ್ಕೆ ಸಿಎಂ ನೇತೃತ್ವದಲ್ಲಿ ತಜ್ಞರ ಮಹತ್ವದ ಸಭೆ ನಡೆಯಲಿದ್ದು, ರಾಜ್ಯದಲ್ಲಿ ಕೋವಿಡ್​ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ ಶಿಫಾರಸ್ಸುಗಳ ಆಧಾರದಲ್ಲಿ ‌ಜಾರಿಗೆ ತರಬೇಕಿರುವ ನಿಯಮಗಳ ಸಿಎಂ ಸಭೆಗೆ ತಿಳಿಸಲಿದ್ದಾರೆ. ಆ ನಂತರ ಗುರುವಾರ ನಿಗದಿಯಾಗಿರುವ ಸಚಿವ ಸಂಪುಟ ಸಭೆಯ ಮುಂದೆ ಪ್ರಸ್ತಾವನೆ ಇಡಲಿರುವ ಆರೋಗ್ಯ ಸಚಿವರು, ಅಧಿಕೃತ ಮಾರ್ಗಸೂಚಿಗೆ ಒಪ್ಪಿಗೆ ಪಡೆಯಲಿದ್ದಾರೆ.

ಇದನ್ನೂ ಓದಿ;

ಲಾಕ್​ಡೌನ್​​ ಮಾಡುವ ನಿರ್ಧಾರ ಇಂದೇ ಹೊರಬೀಳುತ್ತಾ..?

ಕೊರೊನಾ ನಿಯಂತ್ರಣಕ್ಕೆ ಲಾಕ್​ಡೌನ್​​ ಒಂದೇ ಮಾರ್ಗವಲ್ಲ ಎನ್ನುವುದು ಈಗಾಗಲೇ ಹಲವು ಬಾರಿ ತಜ್ಙರು ಅಭಿಪ್ರಾಯ ಪಟ್ಟಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಲಾಕ್​ಡೌನ್ ಮಾಡಿದ್ರೆ ಸಾಮಾನ್ಯ ಜನರ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎನ್ನುವ ಅಂಶಗಳೂ ಇಂದಿನ ಸಭೆಯಲ್ಲಿ ಚರ್ಚೆಗೆ ಬರಲಿವೆ ಎನ್ನಲಾಗಿದೆ. ಆದರೆ ಮಹಾರಾಷ್ಟ್ರ ಸರ್ಕಾರ ಈಗಾಗಲೇ 1 ರಿಂದ 9ನೇ ತರಗತಿ ಶಾಲೆಗಳನ್ನು ಬಂದ್​ ಮಾಡುವ ನಿರ್ಧಾರ ಕೈಗೊಂಡಿದೆ. ಜಾರ್ಖಂಡ್​ ಸರ್ಕಾರ ಕೂಡ ಶಾಲಾ ಕಾಲೇಜು ಬಂದ್​ ಮಾಡಿದೆ. ಸ್ವಿಮ್ಮಿಂಗ್​ ಪೂಲ್​, ಪ್ಲೇಗ್ರೌಂಡ್​ಗೆ ನಿರ್ಬಂದ ಹೇರಿಕೆ ಮಾಡಿದೆ. ಇನ್ನೂ ಮಾಲ್​, ಶಾಪಿಂಗ್​ ಕಾಂಪ್ಲೆಕ್ಸ್​, ಸಿನಿಮಾ ಥಿಯೇಟರ್ಸ್​ನಲ್ಲಿ ಮಿತಿ ಹೇರಿಕೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ವಿಮಾನ ಸಂಚಾರ ಬಂದ್​ ಮಾಡಿ ವಾರದ ಹಿಂದೆಯೇ ನಿರ್ಧಾರ ಕೈಗೊಳ್ಳಲಾಗಿದೆ. ದೆಹಲಿ ಸಿಎಂ ಹಾಗೂ ಮಹಾರಾಷ್ಟ್ರದ 20ಕ್ಕೂ ಹೆಚ್ಚು ಶಾಸಕರು, ಸಚಿವರಿಗೆ ಕೊರೊನಾ ಸೋಂಕು ಬಾಧಿಸುತ್ತಿದೆ. ಹೀಗಾಗಿ ಕಠಿಣ ನಿಲುವು ಅನಿವಾರ್ಯ ಎನ್ನಲಾಗ್ತಿದೆ.

ಇದನ್ನೂ ಓದಿ;

ಸರ್ಕಾರದ ಮುಂದಿರುವ ಪ್ರಮುಖ ಆಯ್ಕೆಗಳು..!

ಕೊರೊನಾ ಏರಿಕೆಯಿಂದ ಆಗುವ ಅನಾಹುತಗಳ ಬಗ್ಗೆಯೂ ಸರ್ಕಾರದ ಗಮನದಲ್ಲಿದೆ. ಆದರೆ ಲಾಕ್​ಡೌನ್​ ಮಾಡಿದ್ರೆ ದಿನಗೂಲಿ ನೌಕರರು ಸೇರಿದಂತೆ ವ್ಯಾಪಾರಸ್ಥರು, ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎನ್ನುವ ಬಗ್ಗೆಯೂ ಚರ್ಚೆ ಶುರುವಾಗಿದೆ, ಈ ಎಲ್ಲಾ ಕಾರಣದಿಂದ ಸದ್ಯಕ್ಕೆ ಸೆಮಿ ಲಾಕ್​ಡೌನ್​ ಜಾರಿ ಮಾಡಲಾಗುತ್ತದೆ ಎನ್ನಲಾಗ್ತಿದೆ. ಬಸ್, ಮೆಟ್ರೋದಲ್ಲಿ ಶೇಕಡ 50 ಸೀಟು ಮೀತಿ, ಕಂಪನಿ, ಕಾರ್ಖಾನೆಗಳು, ಐಟಿ-ಬಿಟಿ ಕಂಪನಿಗಳಿಗೂ ಶೇಕಡ 50ರಷ್ಟು ಕಾರ್ಯಾಚರಣೆ ಅವಕಾಶ. ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳಲ್ಲೂ ಶೇಕಡ 50ರಷ್ಟು ಉದ್ಯೋಗಿಗಳಿಗೆ ವರ್ಕ್​ ಫ್ರಂ ಹೋಮ್​ ಮಾಡುವಂತೆ ಸೂಚನೆ. ನೈಟ್ ಕರ್ಫ್ಯೂ ವಿಸ್ತರಣೆ ಜೊತೆಗೆ ಮತ್ತಷ್ಟು ಕಠಿಣ ನಿಯಮ ಜಾರಿಯಾಗಲಿದೆ. ಮಾಲ್, ಸಿನಿಮಾ ಥಿಯೇಟರ್​ನಲ್ಲೂ ಶೇಕಡ 50ರಷ್ಟು ಮಿತಿ ಹೇರಿಕೆ. ದೇವಸ್ಥಾನ, ಮಸೀದಿ, ಚರ್ಚ್ ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ನಿರ್ಬಂಧ, ಬಾರ್, ಪಬ್, ಹೊಟೇಲ್​ಗಳಿಗೂ ಮಿತಿ ಜೊತೆಗೆ ಹೊರಗೆ ಬರಲು ಎರಡು ಡೋಸ್ ಕಡ್ಡಾಯ ಮಾಡಬಹುದು. ಆದರೆ ಇದೇ ರೀತಿ ಸೋಂಕಿನ ಅಬ್ಬರ ಮುಂದುವರಿದರೆ ಈ ತಿಂಗಳಾಂತ್ಯಕ್ಕೆ ಸಂಪೂರ್ಣ ಲಾಕ್​ಡೌನ್​ ಕಟ್ಟಿಟ್ಟ ಬುತ್ತಿ ಎನ್ನುವ ಬಗ್ಗೆ ಅಧಿಕಾರಿ ವಲಯದಲ್ಲಿ ಕೇಳಿಬರುತ್ತಿರುವ ಪ್ರಮುಖ ವಿಚಾರ.

Related Posts

Don't Miss it !