ಕೊರೊನಾ ಕಾರಣಕ್ಕೆ ಆತ್ಮಹತ್ಯೆ.. ಅಲ್ಲ ಖಿನ್ನತೆಗೆ ಕಾರಣ ಬೇರೊಂದಿದೆ..

ಮಂಗಳೂರು: ಚಿತ್ರಾಪುರದಲ್ಲಿ ರೆಹೆಜಾ ಅಪಾರ್ಟ್​ಮೆಂಟ್​ನಲ್ಲಿ ಕೊರೊನಾ ಸೋಂಕಿತ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿತ್ತು. ಸಾವಿಗೂ ಮುನ್ನ ಮಂಗಳೂರು ಪೊಲೀಸ್​ ಕಮಿಷನರ್​ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ನಮಗೆ ಕೊರೊನಾ ಸೋಂಕು ಇರುವ ಕಾರಣ ನಾವು ಆತ್ಮಹತ್ಯೆ ಮಾಡಿಕೊಳ್ತಿದ್ದೇವೆ. ನನ್ನ ಪತ್ನಿ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾನು ಈಗ ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ತಿಳಿಸಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರಕ್ಷಣೆ ಮಾಡುವ ಪ್ರಯತ್ನ ಮಾಡಿದ್ರು. ಆದರೆ ಅಷ್ಟರಲ್ಲಿ ದಂಪತಿಗಳಿಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮನೆಯಲ್ಲಿ ವಿವರವಾದ ಡೆತ್​ನೋಟ್​ ಪತ್ತೆ..!


ಆತ್ಮಹತ್ಯೆ ಮಾಡಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿದ್ದ ಈ ದಂಪತಿ ಸಂಪೂರ್ಣ ವಿವರ ಇರುವ ಡೆತ್​ನೋಟ್​ ಬರೆದು ಇಟ್ಟಿದ್ದರು. ಜೊತೆಯಲ್ಲೇ ಅಂತ್ಯಕ್ರಿಯೆ ನೆರವೇರಿಸಲು ಒಂದು ಲಕ್ಷ ರೂಪಾಯಿ ಇಟ್ಟಿದ್ದರು. ಅದನ್ನೂ ಪತ್ರದಲ್ಲಿಯೂ ತಿಳಿಸಿದ್ದರು. ಜೊತೆಗೆ ಹಿಂದೂ ನಾಯಕರಾದ ಶರಣ್​ ಪಂಪ್​ವೆಲ್​ ಹಾಗೂ ಸತ್ಯಜಿತ್​ ಸುರತ್ಕಲ್​ ಅವರು ಮಂಗಳೂರು ಕಮಿಷನರ್​ ಸಹಾಯ ಪಡೆದು ಅಂತ್ಯಕ್ರಿಯೆ ನೆರವೇರಿಸಬೇಕು ಎನ್ನುವ ಆಸೆಯನ್ನೂ ವ್ಯಕ್ತಪಡಿಸಿದ್ದರು. ಜೊತೆಗೆ ಮನೆಯಲ್ಲಿರುವ ವಸ್ತುಗಳನ್ನು ಅವಶ್ಯಕತೆ ಇರುವ ಬಡವರಿಗೆ ಕೊಟ್ಟುಬಿಡಿ. ನಮ್ಮ ಗಂಡನ ಮನೆ ಹಾಗೂ ನನ್ನ ತವರು ಮನೆಯವರಿಗೆ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದರು. ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಮನೆ ಮಾಲೀಕರ ಕ್ಷಮೆ ಕೂಡ ಕೇಳಿದ್ದರು.

ಇಬ್ಬರಿಗೂ ಕೊರೊನಾ ನೆಗೆಟಿವ್ ರಿಪೋರ್ಟ್​..!

ಕೊರೊನಾ ಸೋಂಕು ಬಂದಿರುವ ಸಾಧ್ಯತೆ ಇದೆ ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾದ ರಮೇಶ್​ ಹಾಗೂ ಗುಣಾ ಆರ್​ ಸುವರ್ಣ ದಂಪತಿಗೆ ಸೋಂಕು ಇಲ್ಲ ಎಣದು ಅಧಿಕಾರಿಗಳು ದೃಢಪಡಿಸಿದ್ದಾರೆ. ಕೇವಲ ನೆಗಡಿ, ಶೀತ ಆಗಿದ್ದನ್ನೇ ಕೊರೊನಾ ಸೋಂಕು ಎಂದು ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದರೆ ಇದಕ್ಕೂ ಮಿಗಿಲಾದ ಸಮಸ್ಯೆ ಒಂದನ್ನು ದಂಪತಿ ಎದುರಿಸುತ್ತಿದ್ದರು. ಆ ಸಮಸ್ಯೆಯಿಂದ ಹೊರಕ್ಕೆ ಬರಲಾಗದೆ ಪರಿತಪಿಸುತ್ತಿದ್ದ ರಮೇಶ್​ ಹಾಗೂ ಗುಣಾ ಆರ್​ ಸುವರ್ಣ, ಖಿನ್ನತೆಗೂ ಒಳಗಾಗಿದ್ದರು ಎನ್ನಬಹುದು. ಅವರ ಡೆತ್​ ನೋಟ್​ನಲ್ಲೇ ಈ ಬಗ್ಗೆ ಸ್ಪಷ್ಟವಾಗಿ ನಮೂದು ಮಾಡಿದ್ದಾರೆ.

20 ವರ್ಷದ ಹಿಂದೆ ಮದ್ವೆ, ಇನ್ನೂ ಮಕ್ಕಳಿಲ್ಲ..!

2000ನೇ ಇಸವಿಯಲ್ಲಿ ಮದುವೆ ಆಗಿದ್ದ ರಮೇಶ್​ ಹಾಗೂ ಗುಣಾ ಅಂದಿನಿಂದಲೂ ಸಂಕಷ್ಟಗಳ ಸರಮಾಲೆಯಲ್ಲೇ ಬದುಕನ್ನು ಎದುರಿಸಿದ್ದರು. ಆರ್ಥಿಕವಾಗಿ ಸದೃಢವಾಗಿದ್ದ ಈ ದಂಪತಿ, ಮಕ್ಕಳಿಲ್ಲದೆ ಸಾಕಷ್ಟು ಹಿಂಸೆಗೆ ಗುರಿಯಾಗಿದ್ದರು. ಎರಡ್ಮೂರು ಬಾರಿ ಗರ್ಭಿಣಿ ಆದರೂ ಫಲಿತಾಂಶ ಮಾತ್ರ ಶೂನ್ಯವಾಗಿತ್ತು. ಸಂಸಾರ ಹಾಗೂ ಕುಟುಂಬದ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಮಗುವಿನ ಬಗ್ಗೆಯೇ ಕೇಳುತ್ತಿದ್ದ ಕಾರಣ ಹಿಂಸೆಯಾಗಿತ್ತು ಎಂದಿದ್ದಾರೆ. ಅದರಲ್ಲೂ ಎಷ್ಟರ ಮಟ್ಟಿಗೆ ಹಿಂಸೆಗೆ ಒಳಗಾಗಿದ್ದರು ಎನ್ನುವುದಕ್ಕೆ ಅವರು ಪತ್ರದಲ್ಲೇ ತಿಳಿಸಿದ್ದಾರೆ. ಕೊರೊನಾ ಇರುವ ಕಾರಣ ನಾವು ಎಲ್ಲಿಗೂ ಹೋಗದಿದ್ದರೂ ಅಕ್ಕಪಕ್ಕದ ಮನೆಯವರು ಮನೆಗೆ ಬರುತ್ತಿದ್ದರು. ಇದೀಗ ನಮಗೂ ಕೊರೊನಾ ಬಂದಿದೆ. ನಾವು ಬದುಕುವುದು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದರು.

Related Posts

Don't Miss it !