ಗ್ರಾಮ ಭಾರತಕ್ಕೆ ಲಗ್ಗೆ ಹಾಕುತಿದ್ಯಾ ಕೊರೊನಾ 3ನೇ ಅಲೆ..?

ಕೊರೊನಾ 2ನೇ ಅಲೆಯಲ್ಲಿ ಸೋಂಕುಗಳು ಕಡಿಮೆ ಆಗಿರುವ ಕಾರಣಕ್ಕೆ ಕಳೆದ 15 ದಿನಗಳ ಹಿಂದೆ ಸರ್ಕಾರ ಹಂತಹಂತವಾಗಿ ಅನ್​ಲಾಕ್​ ಮಾಡಿತ್ತು. ಆ ಬಳಿಕ ಆರೋಗ್ಯ ಇಲಾಖೆ ನೀಡಿರುವ ವರದಿ ಜನರನ್ನು ಮತ್ತೆ ಆತಂಕಕ್ಕೆ ದೂಡುವಂತೆ ಮಾಡಿದೆ. ಕಳೆದ 14 ದಿನಗಳಿಂದ 21 ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸೋಂಕು ದಿಢೀರನೇ ಏರಿಕೆ ಆಗಿರುವುದು ಅಂಕಿ ಅಂಶಗಳಿಂದ ಕಂಡು ಬಂದಿದೆ. ನಗರ ಪ್ರದೇಶದಲ್ಲಿ ಸೋಂಕು ಕಡಿಮೆ ಆಗಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಮೂರ್ನಾಲ್ಕು ಪಟ್ಟು ಸೋಂಕು ಹೆಚ್ಚಾಗಿರುವುದು ಕಂಡುಬಂದಿದೆ.

ಯಾವ ಜಿಲ್ಲೆಯಲ್ಲಿ ಸೋಂಕು ಹೇಗಿದೆ..?

ದಕ್ಷಿಣ ಕನ್ನಡ ಜಿಲ್ಲೆಯ ನಗರ ಪ್ರದೇಶದಲ್ಲಿ 1,226 ಸೋಂಕು ಕಾಣಿಸಿಕೊಂಡರೆ, ಗ್ರಾಮಾಂತರ ಪ್ರದೇಶದಲ್ಲಿ 2,081 ಸೋಂಕು ಪತ್ತೆಯಾಗಿದೆ. ಚಿಕ್ಕಮಗಳೂರಿನ ನಗರ ಪ್ರದೇಶದಲ್ಲಿ 439 ಸೋಂಕು ಕಾಣಿಸಿಕೊಂಡರೆ ಗ್ರಾಮಾಂತರ ಪ್ರದೇಶದಲ್ಲಿ 917 ಸೋಂಕಿತರು ಪತ್ತೆಯಾಗಿದ್ದಾರೆ. ಉಡುಪಿಯ ನಗರ ಪ್ರದೇಶದಲ್ಲಿ 247 ಸೋಂಕಿತರು ಕಂಡು ಬಂದರೆ ಗ್ರಾಮಾಂತರ ಪ್ರದೇಶದಲ್ಲಿ 1,194 ಸೋಂಕಿತರು ಪತ್ತೆಯಾಗಿದ್ದಾರೆ. ಕೊಡಗು ನಗರ ಪ್ರದೇಶದಲ್ಲಿ 189, ಗ್ರಾಮಾಂತರದಲ್ಲಿ 1,475 ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನೂ ಚಾಮರಾಜನಗರದ ನಗರದಲ್ಲಿ 148, ಗ್ರಾಮಾಂತರದಲ್ಲಿ 489, ಹಾಸನದ ನಗರದಲ್ಲಿ 805, ಗ್ರಾಮಾಂತರದಲ್ಲಿ 2,145 ಸೋಂಕಿತರು, ಕೋಲಾರ ನಗರದಲ್ಲಿ 199, ಗ್ರಾಮಾಂತರ ಪ್ರದೇಶದಲ್ಲಿ 635 ಸೋಂಕಿತರು ಪತ್ತೆಯಾಗಿದ್ದಾರೆ. ಮಂಡ್ಯ ನಗರದಲ್ಲಿ 185 ಸೋಂಕಿತರು, ಗ್ರಾಮಾಂತರದಲ್ಲಿ 876, ರಾಮನಗರ ಪಟ್ಟಣದಲ್ಲಿ 40 ಸೋಂಕಿತರು ಇದ್ದರೆ ಗ್ರಾಮಾಂತರ 139 ಸೋಂಕಿತರು ಪತ್ತೆಯಾಗಿದ್ದಾರೆ. ತುಮಕೂರು ನಗರದಲ್ಲಿ 474 ಸೋಂಕಿತರು ಇದ್ದರೆ ಗ್ರಾಮಾಂತರ 1,123 ಸೋಂಕಿತರು ಪತ್ತೆಯಾಗಿದ್ದಾರೆ.

ಲಸಿಕೆ ಪರಿಣಾಮದ ಎಫೆಕ್ಟ್​ ಆಗಿದ್ಯಾ..?

ನಗರ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಲಸಿಕೆ ನಿರೀಕ್ಷಿತ ಪ್ರಮಾಣದಲ್ಲಿ ನಡೆಯದ ಕಾರಣ ಸೋಂಕು ಹೆಚ್ಚಳವಾಗಿದೆ ಎನ್ನುವ ಮಾತುಗಳ ಜೊತೆಗೆ ಲಾಕ್​ಡೌನ್​ ಆಗ್ತಿದ್ದ ಹಾಗೆ ನಗರ ಪಟ್ಟಣಗಳಿಂದ ಹಳ್ಳಿಗಳಿಗೆ ಜನರು ಹೋಗಿದ್ದರ ಪರಿಣಾಮ ಇದು ಎಂದು ತಜ್ಞರು ಹೇಳಿದ್ದಾರೆ. ಸೋಂಕು ಇಳಿಕೆಯಾಗುತ್ತಿದೆ ಎನ್ನುವ ಸಮಯದಲ್ಲೇ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಳವಾಗಿದೆ ಎನ್ನುವ ಅಂಕಿಆಂಶ ಬಿಡುಗಡೆಯಾಗಿದ್ದು, ಮೂರನೇ ಸೋಂಕು ಕಾಣಿಸಿಕೊಳ್ಳುತ್ತಿದೆಯಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.

ಮಹಾರಾಷ್ಟ್ರ, ಕೇರಳದಲ್ಲಿ ಸೋಂಕು ಹೆಚ್ಚಳ..!

2ನೇ ಅಲೆ ಮುಕ್ತಾಯ ಆಗುತ್ತಿದ್ದ ಹಾಗೆ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯದಲ್ಲಿ ಸೋಂಕು ಹೆಚ್ಚಳ ಆಗುತ್ತಿದೆ. ಇದೀಗ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಳವಾಗಿ 3ನೇ ಅಲೆಗೆ ಮುನ್ನುಡಿ ಬರೆಯುತ್ತಾ ಎನ್ನುವ ಆತಂಕದ ನಡುವೆ ಸಮಾಧಾನಕ ವಿಚಾರವೂ ಬಂದಿದೆ. 3ನೇ ಅಲೆ ಬಂದರೂ ಹೆಚ್ಚು ಸಾವು ನೋವು ಸಂಭವಿಸುವುದಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಗಸ್ಟ್​ ಮಧ್ಯ ಭಾಗದಲ್ಲಿ 3ನೇ ಅಲೆ ತೀವ್ರತೆ ಸೃಷ್ಟಿಸಲಿದೆ ಎನ್ನುವ ಅಭಿಪ್ರಾಯ ತಜ್ಞರಿಂದ ಬಂದಿದೆ. ಆದರೆ ಲಸಿಕೆ ತೆಗೆದುಕೊಂಡಿರುವ ಕಾರಣಕ್ಕೆ ಸಾವು ನೋವು ಕಡಿಮೆ ಸಂಭವಿಸಲಿದೆ ಎಂದು ತಜ್ಞರು ಹೇಳಿರುವುದು ಸಮಾಧಾನಕರ ವಿಚಾರ.

Related Posts

Don't Miss it !