ಮಾಲ್​, ಟೆಂಪಲ್​ ಓಪನ್​, ವೀಕೆಂಡ್​​ ಕರ್ಫ್ಯೂ ಕ್ಯಾನ್ಸಲ್​.. ಏನಿದೆ..? ಏನಿಲ್ಲ..?

ಕೊರೊನಾ ಲಾಕ್​ಡೌನ್​ ಹಂತಹಂತವಾಗಿ ಓಪನ್​ ಮಾಡ್ತಿರೋ ರಾಜ್ಯ ಸರ್ಕಾರ ಇವತ್ತು ಮತ್ತಷ್ಟು ಸೇವೆಗಳನ್ನು ಮುಕ್ತ ಮಾಡಿ ಆದೇಶ ಹೊರಡಿಸಿದೆ. ಜುಲೈ 5 ರಿಂದ ಅಂದರೆ ಬರುವ ಸೋಮವಾರದಿಂದ ಜುಲೈ 19 ರವರೆಗೆ ಈ ನಿಯಮ ಜಾರಿಯಲ್ಲಿ ಇರಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಸರ್ಕಾರಿ, ಖಾಸಗಿ ಹಾಗೂ ವಾಣಿಜ್ಯ ಕಚೇರಿಗಳಲ್ಲಿ ಶೇಕಡ ನೂರರಷ್ಟು ಉದ್ಯೋಗಿಗಳು ಕೆಲಸ ಮಾಡಲು ಅವಕಾಶ ಕೊಡಲಾಗಿದೆ. ಬೆಂಗಳೂರಿನ ಐಶಾರಾಮಿ ಜೀವನ ನಡೆಸುವ ಜನರ ಜೀವನಾಡಿಯಾಗಿರುವ ಮಾಲ್​ಗಳನ್ನು ತೆರಯಲು ಅವಕಾಶ ಮಾಡಿಕೊಡಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ದೇವರ ದರ್ಶನ ಪ್ರಾರ್ಥನೆಗೆ ಸರ್ಕಾರ ಅವಕಾಶ ಕಲ್ಪಿಸಿದೆ.

ಮದುವೆ ಸಮಾರಂಭದಲ್ಲಿ 100 ಜನರು ಭಾಗವಹಿಸಲು ಅವಕಾಶ ಕಲ್ಪಿಸಿದ್ದು, ಅಂತ್ಯಸಂಸ್ಕಾರದಲ್ಲಿ 20 ಜನರ ಭಾಗಿಯಾಗಲು ಅವಕಾಶ ಕೊಡಲಾಗಿದೆ. ಇದೀಗ ಇರುವಂತೆ ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಗ್ಗೆ 5 ಗಂಟೆ ತನಕ ಇದ್ದಂತಹ ವಾರಂತದ ಕರ್ಪ್ಯೂ ರದ್ದು ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ.ಆದರೆ ಪ್ರತಿದಿನ ನೈಟ್​ ಕರ್ಫ್ಯೂ ಮುಂದುವರಿದಿದ್ದು ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆ ತನಕ ಜಾರಿಯಲ್ಲಿ ಇರಲಿದೆ. ಸಿನಿಮಾ ಮಂದಿರಗಳು ಕಾರ್ಯ ನಿರ್ವಹಣೆಗೆ ಅವಕಾಶ ಸದ್ಯಕ್ಕೆ ಇಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆಗಳಲ್ಲಿ ಶೇಕಡ 100 ರಷ್ಟು ಪ್ರಮಾಣಿಕರ ಜೊತೆಗೆ ಸಂಚರಿಸಲು ಅವಕಾಶ ನೀಡಲಾಗಿದೆ. ಅಂದರೆ ಸೀಟ್​ಗೆ ಒಬ್ಬರು ಮಧ್ಯೆ ಸ್ಥಳ ಖಾಲಿ ಬಿಡುವ ಪದ್ಧತಿ ಕೈಬಿಡಲಾಗಿದೆ. ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ. ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ಕೊಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಅನ್​ಲಾಕ್ ಆದೇಶ ಜಾರಿಯಲ್ಲಿದ್ದು, ಕೊಡಗಿಗೆ ಮಾತ್ರ ಈ ಆದೇಶ ಅನ್ವಯ ಆಗಲ್ಲ. ಕೊಡಗಿನ ಪರಿಸ್ಥಿತಿ ಸುಧಾರಣೆ ಆದ ನಂತರ ಡಿಸಿ ಅನ್​ಲಾಕ್​ ಬಗ್ಗೆ ತೀರ್ಮಾನ ಮಾಡಲಿದ್ದಾರೆ.

ಯಾವ ಯಾವ ಜಿಲ್ಲೆಗಳಲ್ಲಿ ಕೊರೊನಾ ಸಮಸ್ಯೆ ಇದೆಯೋ ಅಲ್ಲಿ ಕೊರೊನಾ ನಿಯಂತ್ರಣವಾಗಿ ಅನ್​ಲಾಕ್ ಮಾಡುವ ತೀರ್ಮಾನವನ್ನು ಡಿಸಿಗಳ ವಿವೇಚನೆಗೆ ಬಿಡಲಾಗಿದೆ. ಈಗ ಜಾರಿ ಮಾಡಿರೋ ಮಾರ್ಗಸೂಚಿಯನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪಾಲನೆ ಮಾಡದೆ ಮತ್ತೆ ಸೋಂಕು ಹೆಚ್ಚಾದ್ರೆ, ಈ ನಿಯಮಗಳನ್ನು ಅನಿವಾರ್ಯವಾಗಿ ನಿಲ್ಲಿಸಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡಿ, ಕೊವೀಡ್ ಕಡಿಮೆ ಮಾಡಲು ಅವಕಾಶ ಮಾಡಿಕೊಟ್ಟರೆ, ಈ ನಿಯಮಗಳನ್ನೇ ಮತ್ತೆ ಮುಂದುವರಿಸಲು ನಿರ್ಧಾರ ಮಾಡಲಾಗಿದೆ.

ಶಾಲೆ – ಕಾಲೇಜು ತೆರೆಯುವ ವಿಚಾರದ ಬಗ್ಗೆ ಇಂದಿನ ಸಭೆಯಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜು ಆರಂಭದ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ ಮುಖ್ಯಮಂತ್ರಿ. ಸಿನಿಮಾ ಥಿಯೇಟರ್​ಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳನ್ನು ರಾಜ್ಯ ಸರ್ಕಾರ ಮುಕ್ತ ಮಾಡಿದಂತಾಗಿದೆ. ಜನರು ಎಚ್ಚೆರಿಕೆಯಿಂದ ವ್ಯವಹಾರ ಮಾಡಿದರೆ ಸಮಸ್ಯೆ ಕಡಿಮೆಯಾಗಬಹುದು. ಒಂದು ವೇಳೆ ಜನರು ಮೈಮರೆತರೆ ಸಂಕಷ್ಟ ಬೆನ್ನ ಹಿಂದೆಯೇ ಇದೆ ಎನ್ನುವುದು ನೆನಪಿನಲ್ಲಿರಬೇಕು.

Related Posts

Don't Miss it !