‘ಕಮಲ ಕೋಟೆಯ ಕದನ ಮುಕ್ತಾಯ’ ಫಲಿತಾಂಶ ಕುತೂಹಲ..!?

“ಬಿಜೆಪಿಯಲ್ಲಿ ಶುರುವಾಗಿದ್ದ ನಾಯಕತ್ವ ಬದಲಾವಣೆ ವಿಚಾರ ಮುಕ್ತಾಯವಾಗಿದೆ” ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ರಾಜ್ಯಕ್ಕೆ ಬಂದು ಹೋದ ಬಳಿಕ ಈ ರೀತಿಯ ಹೇಳಿಕೆಗಳು ಚಾಲ್ತಿಗೆ ಬಂದಿದ್ದವು. ಆದರೆ ಇನ್ನೂ ಕೂಡ ಆಟ ಜಾರಿಯಲ್ಲಿದೆ ಎನ್ನುವುದನ್ನು ಸಚಿವ ಸಿ.ಪಿ ಯೋಗೇಶ್ವರ್​ ಪದೇಪದೇ ಉಚ್ಛಾರ ಮಾಡುತ್ತಲೇ ಇದ್ದಾರೆ. ದೆಹಲಿಗೆ ತೆರಳುವ ಮುನ್ನ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದಿದ್ದ ಯೋಗೇಶ್ವರ್​ ಇದೀಗ ಕಲಬುರಗಿಯಲ್ಲೂ ‘ನಮ್ಮಲ್ಲಿ ವಾದ ಪ್ರತಿವಾದ ಮುಗಿದಿದೆ ಜಡ್ಜ್​ಮೆಂಟ್ ನಿರೀಕ್ಷೆಯಲ್ಲಿದ್ದೇವೆ’ ಎನ್ನುವ ಮೂಲಕ ಎಲ್ಲವೂ ಮುಕ್ತಾಯವಾಗಿಲ್ಲ ಎನ್ನುವ ಮಾತನ್ನು ಪುನರುಚ್ಛಾರ ಮಾಡಿದ್ದಾರೆ. ವಿಜಯಪುರ ಪ್ರವಾಸ ಕೈಗೊಂಡಿದ್ದ ಯೋಗೇಶ್ವರ್​ ರಾಜಕೀಯ ಸಂಚಲನ ಮೂಡಿಸಿದ್ದಾರೆ.

ಹಿಂದುತ್ವ ಫೈರ್​ ಬ್ರಾಂಡ್​ ಜೊತೆ ರಹಸ್ಯ ಸಭೆ..!

ವಿಜಯಪುರಕ್ಕೆ ಇಲಾಖಾ ಕೆಲಸದ ಮೇಲೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್​, ಬಿಜೆಪಿ ಶಾಸಕ, ಹಿಂದುತ್ವ ಫೈರ್​ ಬ್ರಾಂಡ್​ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಬಂಡಾಯ ಸಾರಿರುವ ಶಾಸಕ ಯತ್ನಾಳ್​ರನ್ನು ಯೋಗೇಶ್ವರ್​ ಭೇಟಿ ಮಾಡಿದ್ದು ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಖಾಸ. ದೆಹಲಿಯಿಂದ ಗಿ ಹೋಟೆಲ್​ನಲ್ಲಿ ಭೇಟಿಯಾದ ಯತ್ನಾಳ್​ ಹಾಗೂ ಯೊಗೇಶ್ವರ್​, ಕೆಲವು ಕಾಲ ರಹಸ್ಯವಾಗಿ ಚರ್ಚೆ ನಡೆಸಿದ್ದಾರೆ. ದೆಹಲಿಯಿಂದ ವಾಪಸ್ ಆದ ಬಳಿಕ ಯತ್ನಾಳ್​ರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ದೆಹಲಿ ಸಮಾಚಾರದ ಬಗ್ಗೆ ಚರ್ಚೆ ನಡೆಸಿರುವ ಸಾಧ್ಯತೆ ಇದೆ.

ವಿಜಯಪುರಕ್ಕೆ ಯಾವುದೇ ಸಚಿವರು ಆಗಮಿಸಿದರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಭೇಟಿಯಾಗುತ್ತಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಭೆ ನಡೆಸಿದರೂ ಯತ್ನಾಳ್ ಅಂತರ ಕಾಯ್ದುಕೊಳ್ಳುತ್ತಿದ್ದರು. ಸ್ವತಃ ಬಿಜೆಪಿ ರಾಜಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ವಿಜಯಪುರಕ್ಕೆ ಬಂದಾಗಲೂ ಭೇಟಿಯಾಗದೆ ಅಂತರ ಕಾಯ್ದುಕೊಂಡಿದ್ದ ಯತ್ನಾಳ್, ಇಂದು ಸಚಿವ ಯೋಗೇಶ್ವರ್​ ಭೇಟಿ ಮಾಡಿರುವುದು ರಾಜಕೀಯ ಲೆಕ್ಕಾಚಾರದ ಸುಳಿವು ನೀಡಿದೆ. ಮಾತನಾಡಿದ ಸಚಿವ ಸಿ.ಪಿ ಯೋಗೇಶ್ವರ್​, ಯತ್ನಾಳ್​ ಅವರ ಜೊತೆಗೆ ನಾನು‌ ಸದಾ ಕಾಲ‌ ಇರುತ್ತೇನೆ. ಅವರ ಧ್ವನಿಗೆ ಧ್ವನಿಯಾಗಿ ನಾನು ಸದಾ ಕಾಲ ನಿಲ್ಲುತ್ತೇನೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಒಳ್ಳೆಯ ಅವಕಾಶ ಬರಲಿದೆ. ಅವರ ಜೊತೆಗೆ ಸ್ನೇಹಿತನಾಗಿ ಮಾನಸಿಕ ಸ್ಥೈರ್ಯ ತುಂಬುವ ಕೆಲಸದಲ್ಲಿ ನಾನು ಇರುವೆ. ಮುಂದಿನ ದಿನಗಳಲ್ಲಿ ಪಕ್ಷ ಅವರಿಗೆ ಉತ್ತಮ ಅವಕಾಶ ನೀಡುವ ಆಶಾಭಾವನೆ ಇದೆ ಎಂದಿದ್ದಾರೆ. ಈ ಮಾತುಗಳು ನಾಯಕತ್ವ ಬದಲಾವಣೆ ಮಾತಿಗೆ ಉತ್ತೇಜನ ನೀಡಿದೆ.

ಮತ್ತೆ ಪಂಚಮಸಾಲಿ ಶ್ರೀ ಅಸ್ತ್ರ ಬಳಕೆ..!?

ಬಸನಗೌಡ ಪಾಟೀಲ್​ ಯತ್ನಾಳ್​ ಈ ಹಿಂದೆ ಸರ್ಕಾರದ ವಿರುದ್ಧ ಪಂಚಮಸಾಲಿ ಅಸ್ತ್ರ ಬಳಕೆ ಮಾಡಿದ್ದರು. ಪಂಚಮಸಾಲಿ ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿಗೆ ಪಾದಯಾತ್ರೆ ಮಾಡಿದ್ದರು. 2ಎ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ಮಾಡಲಾಗಿತ್ತು. ಇದೀಗ ಮತ್ತೆ ನಾಯಕತ್ವ ಬದಲಾವಣೆ ವಿಚಾರದಲ್ಲೂ ಸ್ವಾಮೀಜಿ ಅಖಾಡಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗಿದೆ. ಪಂಚಮಸಾಲಿ ಶ್ರೀಗಳನ್ನು ಸಚಿವ ಯೋಗೇಶ್ವರ್ ಕೂಡಲ ಸಂಗಮದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಮೈಸೂರಿನಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಜೊತೆಗೆ ಚರ್ಚೆ ನಡೆಸಿದ್ದರು. ಇದೀಗ ಪಂಚಮಸಾಲಿ ಶ್ರೀಗಳ ಭೇಟಿ ಕುತೂಹಲ ಮೂಡಿಸಿದೆ.

ಕಲಬುರಗಿಗೆ ಆಗಮಿಸಿದಾಗ ಯೋಗೇಶ್ವರ್ ಸ್ವಾಗತಕ್ಕೆ ಬಿಜೆಪಿ ಕಾರ್ಯಕರ್ತರು ಆಗಮಿಸಿರಲಿಲ್ಲ. ವಿಜಯಪುರದಲ್ಲೂ ಕಾರ್ಯಕರ್ತರು ಸಚಿವರಿಂದ ಅಂತರ ಕಾಯ್ದುಕೊಂಡರು ಎನ್ನುವುದು ವಿಶೇಷ. ಆದರೆ ರಾಜಕೀಯ ಬೆಳವಣಿಗೆ ಮಾತ್ರ ಭರ್ಜರಿಯಾಗಿಯೇ ಆಗುತ್ತಿದೆ ಎನ್ನುವುದು ಮಾತ್ರ ಸತ್ಯ. ಇನ್ನೊಂದು ಕಡೆ ರಮೇಶ್​ ಜಾರಕಿಹೊಳಿ ಉರುಳಿಸುತ್ತಿರುವ ದಾಳ ಯಾರ ಊಹೆಗೂ ನಿಲುಕುವಂತಿಲ್ಲ. ಸರ್ಕಾರವನ್ನೇ ಬದಲು ಮಾಡುವ ತಾಕತ್​ ಇದೆ, ಸಚಿವ ಸ್ಥಾನಕ್ಕೆ ಆಸೆ ಪಡಲ್ಲ ಎಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.

Related Posts

Don't Miss it !