ಪೂರ್ವ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ..! ಎಲ್ಲೆಲ್ಲಿ ಹೆಚ್ಚು ಮಳೆ ಎಚ್ಚರಿಕೆ..

ಆಶಾಡದಲ್ಲಿ ಕರಾವಳಿ, ಪಶ್ಚಿಮ ಘಟ್ಟಗಳನ್ನು ಹೊರತು ಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಎನ್ನುವುದು ನಡೆದುಕೊಂಡು ಬಂದಿರುವ ವಾಡಿಕೆ. ಆದರೆ ಇದೀಗ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆ ಸುರಿಯುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೆ ಮಳೆ ಬೀಳುವ ಆಧಾರದ ಮೇಲೆ ಮೂರು ವಿಭಾಗಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ರೆಡ್​ ಜೋನ್​, ಯೆಲ್ಲೋ ಝೋನ್​, ಆರೇಂಜ್​ ಜೋನ್​ಗಳನ್ನಾಗಿ ವಿಂಗಡಣೆ ಮಾಡಲಾಗಿದೆ.

ಬೆಂಗಳೂರು ಸೇರಿ ರಾಜ್ಯದ ಬಹುತೇಕ ಭಾಗದಲ್ಲಿ ಮಳೆ..!

ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ಇಂದಿನಿಂದ ಜುಲೈ 18ರ ತನಕ ಪೂರ್ವ ಅರಬ್ಬಿ ಸಮುದ್ರ ಹಾಗೂ ಕಚ್​ನಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಎಫೆಕ್ಟ್​ ರಾಜ್ಯದಲ್ಲಿ ಕಾಣಿಸಿಕೊಳ್ಳಲಿದೆ. ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಲ್ಲಿ ಅಧಿಕ ಮಳೆ ಸಂಭವ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಡಾ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ.

ಹೆಚ್ಚು ಮಳೆ ಸಂಭವ ಜಿಲ್ಲೆಗಳು..!

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಅರೆ ಮಲೆನಾಡು ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಈ ಜಿಲ್ಲೆಗಳಲ್ಲಿ ಜುಲೈ 16ರಂದುರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಳಿದ 14,15 ಹಾಗೂ17ರಂದು ಆರೇಂಜ್​ ಅಲರ್ಟ್​ ಘೋಷಣೆ ಆಗಿದೆ.

ಒಳನಾಡು ಪ್ರದೇಶಗಳಾದ ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲೂ ವ್ಯಾಪಕ ಮಳೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಜುಲೈ 14 ಹಾಗೂ 18ರಂದು ಯೆಲ್ಲೋ ಅಲರ್ಟ್​, ಇನ್ನುಳಿದ ದಿನಗಳಲ್ಲಿ ಆರೇಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ.

ಬೆಂಗಳೂರಲ್ಲಿ ಭರ್ಜರಿ ಮಳೆ ಸಂಕಷ್ಟ..!

ಗ್ರಾಮೀಣ ಭಾಗದಲ್ಲಿ ಮಳೆ ಹೆಚ್ಚು ಬಿದ್ದಷ್ಟೂ ಅಂತರ್ಜಲ ಪ್ರಮಾಣ ಹೆಚ್ಚಾಗಲಿದೆ ಎನ್ನಬಹುದು. ಆದರೆ ಬೆಂಗಳೂರಿನಲ್ಲಿ ಹೆಚ್ಚು ಮಳೆಯಾದರೆ ವಾಹನ ಸವಾರರು ಕಿರಕಿರಿ ಅನುಭವಿಸಬೇಕಾಗುತ್ತದೆ. ಇಂದು ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರ, ರಾಜಾಜಿನಗರ, ಕೆ ಆರ್ ಮಾರುಕಟ್ಟೆ, ಜಯನಗರ ಸೇರಿದಂತೆ ಸಾಕಷ್ಟು ಭಾಗದಲ್ಲಿ ಭಾರೀ ಮಳೆ ಸುರಿದಿದೆ. ಕೆಲವು ಕಡೆಗಳಲ್ಲಿ ತಗ್ಗುಪ್ರದೇಶಗಳಲ್ಲಿ ನೀರು‌ ನುಗ್ಗಿರುವ ಬಗ್ಗೆ ವರದಿಯಾಗಿದೆ. ಮಟಮಟ ಮಧ್ಯಾಹ್ನವೇ ಮಳೆಯಾಗಿದ್ರಿಂದ ವಾಹನ ಸಂಚಾರ ಅಸ್ತವ್ಯಸ್ತ ಆಗಿತ್ತು.

Related Posts

Don't Miss it !