ಸಾಹಿತಿ ಸಿದ್ದಲಿಂಗಯ್ಯ ನಿಧನ, ಕೋವಿಡ್ ಕಾರಣವಲ್ಲ..!

ಕೊರೊನಾ ಸೋಂಕು ನಾಡಿನ ಹೆಸರಾಂತ ಗಣ್ಯರನ್ನು ಬಲಿ ಪಡೆಯುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲು ಆಗಿದ್ದ ಖ್ಯಾತ ಸಾಹಿತಿ, ಬಂಡಾಯ ಕವಿ ಸಿದ್ದಲಿಂಗಯ್ಯ ಇಹಲೋಕ ತ್ಯಜಿಸಿದ್ದಾರೆ. ಶ್ವಾಸಕೋಶಕ್ಕೆ ಸೋಂಕು‌ ವ್ಯಾಪಿಸಿದ ಕಾರಣ ಐಸಿಯುವಿನಲ್ಲಿ ಚಿಕಿತ್ಸೆ ಕೊಡಲಾಗ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಉಸಿರು ಚೆಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್ ಯಡಿಯೂರಪ್ಪ, ಸಿದ್ದರಾಮಯ್ಯ, ಹೆಚ್​.ಡಿ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ಸೇರಿದಂತೆ ನಾಡಿನ ಹಲವಾರು ಖ್ಯಾತನಾಮರು ಕಂಬನಿ ಮಿಡಿದದ್ದಾರೆ. ಸರಸ್ವತಿ ಪುತ್ರನನ್ನು ಕಳೆದುಕೊಂಡ ಸಾರಸ್ವತ ಲೋಕ ಬಡವಾಗಿದೆ ಎಂದು ಸಾಹಿತಿಗಳು ದುಃಖಿತರಾಗಿದ್ದಾರೆ.

67 ವರ್ಷದ ಕವಿ ಡಾ.ಸಿದ್ದಲಿಂಗಯ್ಯ ಅವರಿಗೆ ಮೇ 3ರಂದು ಕೊರೊನಾ ಕಾಣಿಸಿಕೊಂಡಿತ್ತು. ಮೊದಲಿಗೆ ರಂಗದೊರೈ ಆಸ್ಪತ್ರೆಗೆ ದಾಖಲಾಗಿದ್ರು. ಆದರೆ ಮೇ 4 ಕ್ಕೆ ಉಸಿರಾಟದ ಸಮಸ್ಯೆ ತೀವ್ರವಾದ ಹಿನ್ನೆಲೆಯಲ್ಲಿ ಮಣಿಪಾಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೊದಲಿಗೆ ಯಾವುದೇ ಆಸ್ಪತ್ರೆಯಲ್ಲೂ ಬೆಡ್​​ ಸಿಗದೆ ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಸರ್ಕಾರವೇ ಮುಂದೆ ನಿಂತು ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ಕೊಡಿಸುವ ಕೆಲಸ ಮಾಡಿತ್ತು. ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಚಿಕಿತ್ಸೆ ನಡುವೆ ಹೃದಯಾಘಾತ ಸಂಭವಿಸಿ ಇಂದು ಅಸುನೀಗಿದ್ದಾರೆ.

ಸಿದ್ದಲಿಂಗಯ್ಯ ಕವಿ ಆಗಿದ್ದು ಹೇಗೆ..?

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ ಜನಿಸಿದ್ದ ಸಿದ್ದಲಿಂಗಯ್ಯ, ಸಾಕಷ್ಟು ಬಡತನವನ್ನು ಕಂಡವರಾಗಿದ್ದರು. ಒಮ್ಮೆ ಇಬ್ಬರು ವ್ಯಕ್ತಿಗಳನ್ನು ಎತ್ತುಗಳ ಹಾಗೆ ದುಡಿಸುತ್ತಿದ್ದ ದೃಶ್ಯ ಕಾಣಿಸಿತ್ತು. ಸ್ನೇಹಿತರ ಜೊತೆಗೂಡಿ ಹಾಸ್ಯ ಮಾಡುತ್ತಿದ್ದೆವು. ಆದರೆ ಆ ಎತ್ತುಗಳಾಗಿ ದುಡಿಯುತ್ತಿದ್ದ ಒಬ್ಬರು ತನ್ನ ತಂದೆಯೇ ಆಗಿದ್ದರು. ಎತ್ತುಗಳ ಹಾಗೆ ತಂದೆ ದುಡಿಯುತ್ತಿದ್ದ ದೃಶ್ಯ ಸಿದ್ದಲಿಂಗಯ್ಯ ಅವರ ಮೇಲೆ ಅಗಾಧವಾದ ಪರಿಣಾಮ ಬೀರಿತ್ತು. ಇನ್ನೊಮ್ಮೆ ಬೆಂಗಳೂರಿನ ಹಾಸ್ಟೆಲ್​​ನಲ್ಲಿ ವಾಸ ಮಾಡುವಾಗ “ತನ್ನ ತಾಯಿಯೂ ಅದೇ ಹಾಸ್ಟೆಲ್​​ನಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದರು. ನನ್ನ ತಂದೆ ನಮ್ಮನ್ನು ನೋಡಲು ಬಂದಿದ್ದಾಗ ಊಟಕ್ಕೆ ಕುಳಿತಿದ್ದರು. ಆದರೆ ಅವರನ್ನು ಊಟದ ಹಾಲ್​ನಿಂದ ಹೊರಕ್ಕೆ ದೂಡಲ್ಪಟ್ಟರು. ನನ್ನ ಜೀವನದ ನೋವುಗಳು, ಅವಮಾನಗಳೇ ಕವನಗಳನ್ನು ಬರೆಯಲು ಪ್ರೇರಣೆ ನೀಡಿದವು” ಎಂದು ಸ್ವತಃ ಸಿದ್ದಲಿಂಗಯ್ಯ ಅವರೇ ಹೇಳಿಕೊಂಡಿದ್ದರು.

ಹಲವು ಹುದ್ದೆ ಅಲಂಕರಿಸಿದ್ದ ದಲಿತ ಕವಿ!

ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದ ದಲಿತ ಕವಿ ಡಾ ಸಿದ್ದಲಿಂಗಯ್ಯ, ಎರಡು ಬಾರಿ ವಿಧಾನ ಪರಿಷತ್​ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶ್ರವಣಬೆಳಗೊಳದಲ್ಲಿ ನಡೆದ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಾ.ಅಂಬೇಡ್ಕರ್ ಪ್ರಶಸ್ತಿ ಸಿದ್ದಲಿಂಗಯ್ಯ ಅವರ ಮುಕುಟಕ್ಕೆ ಸಂದಿತ್ತು. ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು ಸೇರಿದಂತೆ ಸಾಕಷ್ಟು ಕವನ ಸಂಕಲನಗಳನ್ನು ಬರೆದಿದ್ದಾರೆ. ಊರುಕೇರಿ – ಭಾಗ-1, ಭಾಗ-2 ಸಾಕಷ್ಟು ಖ್ಯಾತಿ ಗಳಿಸಿಕೊಟ್ಟಿವೆ.

ಸಿದ್ದಲಿಂಗಯ್ಯ ಅವರಿಗೆ ಕೊರೊನಾ ನೆಗೆಟೀವ್..!

ಮೊದಲಿಗೆ ಕೊರೊನಾ ಸೋಂಕಿತರಾಗಿ ಆಸ್ಪತ್ರೆ ಸೇರಿದ್ದ ಕಾರಣ ಕೊರೊನಾ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರೇ ನಿರ್ಧಾರ ಮಾಡಿದ್ದರು. ಆದರೆ ಕೊರೊನಾ ತಪಾಸಣೆ ಬಳಿಕ ನೆಗೆಟೀವ್ ಬಂದಿರುವ ಕಾರಣ ಸರ್ಕಾರ ಕುಟುಂಬಸ್ಥರಿಗೆ ಮೃತದೇಹ ನೀಡಲು ನಿರ್ಧಾರ ಮಾಡಿತು. ಹಾಗಾಗಿ ಶುಕ್ರವಾರ ಬೆಳಗ್ಗೆ 8 ರಿಂದ 10 ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಾಗರಬಾವಿಯ ಅಂಬೇಡ್ಕರ್​ ಕಾಲೇಜಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಜ್ಞಾನಭಾರತಿ ಆವರಣದ ಕಲಾಗ್ರಾಮದಲ್ಲಿ ಸಿದ್ದಲಿಂಗಯ್ಯ ಅಂತ್ಯಕ್ರಿಯೆ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಸಮಾಧಿ ಸಮೀಪದಲ್ಲೇ ನಡೆಯಲಿದೆ. ಜಿ.ಎಸ್​ ಶಿವರುದ್ರಪ್ಪನವರು ಕವಿ ಸಿದ್ದಲಿಂಗಯ್ಯ ಅವರಿಗೆ ಗುರುಗಳಾಗಿದ್ದರು. ಇದೀಗ ಗುರುವಿನ ಪಕ್ಕವೇ ಶಿಷ್ಯನ ಅಂತ್ಯಕ್ರಿಯೆ ಆಗುತ್ತಿರುವುದು ವಿಶೇಷ.

ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲು ಸರ್ಕಾರ ಆದೇಶ ಮಾಡಿದೆ. ಸಿದ್ದಲಿಂಗಯ್ಯ ಅವರ ಗೌರವಾರ್ಥವಾಗಿ ಜ್ಞಾನಭಾರತಿಯ ಬಳಿ ಸ್ಮಾರಕ ಸ್ಥಾಪಿಸಬೇಕು, ರಾಷ್ಟ್ರಕವಿ ಎಂದು ಘೋಷಿಸಿಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ. ಅಪಾರ ಶಿಷ್ಯವೃಂದವನ್ನು ಹೊಂದಿದ್ದ ಕವಿ ಸಿದ್ದಲಿಂಗಯ್ಯ ಸಾಕಷ್ಟು ಹೋರಾಟ ಗೀತೆಗಳಿಂದಲೇ ಖ್ಯಾತಿ ಪಡೆದಿದ್ದರು. ಇದೀಗ ಹೋರಾಟದ ಕೊಂಡಿ ಕಳಚಿರುವುದು ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದರೆ ಅತಿಶಯೋಕ್ತಿ ಎನಿಸುವುದಿಲ್ಲ.

Related Posts

Don't Miss it !