ನಟ ದರ್ಶನ್​ ಜೋಗಿ ಪ್ರೇಮ್​ ಕೆಣಕಿದ್ದು ಸರೀನಾ..?

ನಟ ದರ್ಶನ್​ಗೆ 25 ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣ ಮರೆತುಹೋಗುವ ಪರಿಸ್ಥಿತಿ ಬಂದಿದೆ. ಆದರೂ ಸತ್ಯ ಮಾತ್ರ ಹೊರಗೆ ಬರುವ ಲಕ್ಷಣ ಕಾಣಿಸುತ್ತಿಲ್ಲ. ಪ್ರಿನ್ಸ್​ ಸಂದೇಶ್​ ಹೋಟೆಲ್​ ಸಪ್ಲೈಯರ್​ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಪ್ರಕರಣದ ಬಳಿಕ ದೊಡ್ಮನೆಗೆ ಸೇರಿದ ಪ್ರಾಪರ್ಟಿ ಖರೀದಿಗೆ ದರ್ಶನ್​ ಮುಂದಾಗಿದ್ದರು. ಆದರೆ ನಾನು ಕೊಡಲ್ಲ ಎಂದಿದ್ದೆ ಎಂದು ನಿರ್ಮಾಪಕ ಉಮಾಪತಿ ಹೇಳಿದ್ದರು. ಇದರಿಂದ ಕುಪಿತಗೊಂಡು ಮಾತನಾಡಿದ ದರ್ಶನ್​ ಜೋಗಿ ಪ್ರೇಮ್​ ವಿರುದ್ಧ ಒರಟಾಗಿ ಮಾತನಾಡಿದ್ದರು. ಇದರಿಂದ ರಕ್ಷಿತಾ ಪ್ರೇಮ್​ ದರ್ಶನ್​ ವಿರುದ್ಧ ಕಿಡಿಕಾರಿದ್ದಾರೆ.

ನಟ ದರ್ಶನ್​ ಪ್ರೇಮ್​ ಬಗ್ಗೆ ಹೇಳಿದ್ದೇನು..?

ನಿರ್ಮಾಪಕ ಉಮಾಪತಿ ಸ್ನೇಹ ಹೇಗಾಯ್ತು ಎನ್ನುವುದನ್ನ ಹೇಳುತ್ತಾ, 2016ರಲ್ಲಿ ಜೋಗಿ ಪ್ರೇಮ್​ ಉಮಾಪತಿ ಕರೆದುಕೊಂಡು ಸಿನಿಮಾ ಮಾಡಲು ಬಂದಿದ್ರು. ಆ ಬಳಿಕ 100 ದಿನ ಡೇಟ್ಸ್​ ಕೊಟ್ಟಿದ್ದಾರೆ ಎಂದು ಹೊರಗಡೆ ಸುದ್ದಿಯಾಯ್ತು ಹಾಗಾಗಿ ನಾನು ಸಿನಿಮಾ ಮಾಡಲಿಲ್ಲ. ಅಲ್ಲಿಂದ 2018ರ ತನಕ ಆಗಾಗ ಬರ್ತಿದ್ರು ಹಾಯ್​ ಬಾಯ್​ ಅಷ್ಟೆ ಹೋಗ್ತಿದ್ರು ಅಂತಾ ದರ್ಶನ್​ ಹೇಳಿದ್ದಾರೆ. ಈ ವೇಳೆ 100 ದಿನ ಡೇಟ್ಸ್​ ಕೊಡೋದಕ್ಕೆ ಪ್ರೇಮ್​​ ಏನು ದೊಡ್ಡ ಪುಡಂಗ್​ ಅಲ್ಲ ಎನ್ನುವ ಪದ ಬಳಕೆ ಮಾಡಿದ್ದಾರೆ. ಈ ಪದ ಜೋಗಿ ಪ್ರೇಮ್​ ಹಾಗೂ ನಟಿ ರಕ್ಷಿತಾ ಅವರ ಕಣ್ಣು ಕೆಂಪಾಗುವಂತೆ ಮಾಡಿದೆ.

ಕರಿಯಾ ಮಾಡುವಾಗ ಪುಡಂಗ್​ ಆಗಿರಲಿಲ್ಲ..!

ನಿರ್ದೇಶಕ ಪ್ರೇಮ್ ದೊಡ್ಡ ಪುಡಂಗಿ ಅಲ್ಲ ಎಂಬ ಹೇಳಿಕೆಗೆ ನಿರ್ದೇಶಕ ಪ್ರೇಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹಿರಂಗ ಪತ್ರ ಬರೆದಿರುವ ನಿರ್ದೇಶಕ ಪ್ರೇಮ್​ ದರ್ಶನ್ ಅವ್ರೆ, ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗನೂ ಅಲ್ಲಾ. ನಂಗೆ ಕೊಂಬು ಇರ್ಲಿಲ್ಲ. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್, ಅಂಬರೀಷ್, ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಒಳ್ಳೆ ನಿರ್ದೇಶಕ ಎಂದು ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗ್ಲು ನನಗೆ ಕೊಂಬು ಬರ್ಲಿಲ್ಲ. ನೀವು ಹಾಗೂ ದರ್ಶನ್ ಸೇರಿ ನನಗೆ ಸಿನಿಮಾ ಮಾಡ್ಕೊಡಿ ಅಂತ ಕೇಳಿದ್ರು. ಹಾಗಾಗಿ ನಾನು ಉಮಾಪತಿ ಅವರನ್ನ ನಿಮಗೆ ಪರಿಚಯ ಮಾಡಿದೆ. ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ. ಆದ್ರೆ ನನ್ನ ದಿ ವಿಲ್ಲನ್ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶಮನ್​ ಡೇಟ್​ ಇದೆ. ನೀವು ಬೇರೆ ಡೈರೆಕ್ಟರ್​ ಜೊತೆ ಸಿನಿಮಾ ಮಾಡಿಕೊಳ್ಳಿ ಎಂದು ಅಡ್ವಾನ್ಸ್​ ವಾಪಸ್​ ಕೊಟ್ಟು ರಾಬರ್ಟ್​ಗೆ ಶುಭ ಕೋರಿದೆ ಎಂದಿದ್ದಾರೆ. ಜೊತೆಗೆ ತೆರೆಮೇಲೆ ಒಬ್ಬ ನಟನನ್ನ ಹುಟ್ಟು ಹಾಕಿ ಅವನಿಗೆ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆ ಅಂತಾ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು ಎಂದು ಛಾಟಿ ಬೀಸಿದ್ದಾರೆ.

ಗಂಡನ ಹೀಗಳೆದಿದ್ದಕ್ಕೆ ರೊಚ್ಚಿಗೆದ್ದ ರಕ್ಷಿತಾ..!

ರಕ್ಷಿತಾ ಇನ್​ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಸಿನಿಮಾ ಕ್ಷೇತ್ರ ಒಂದು ಕುಟುಂಬ ಇದ್ದಂತೆ. ಇಲ್ಯಾರು ದೊಡ್ಡವರಿಲ್ಲ, ಚಿಕ್ಕವರಿಲ್ಲ. ಎಲ್ಲರನ್ನೂ ಗೌರವಿಸ್ತೀವಿ. ನಾವು ಮಾಡುವ ಕೆಲಸ ನಾವು ಏನು ಎಂಬುದನ್ನು ತೋರಿಸುತ್ತದೆ. ಅನಾವಶ್ಯಕವಾಗಿ ಕೆಲವೊಂದು ಘಟನೆಗಳು ನಡೆಯುತ್ತವೆ. ಕೆಲವೊಂದು ದುರಾದೃಷ್ಟಕರ ಬೆಳವಣಿಗೆಗಳು ಮನಸ್ಸಿಗೆ ಬೇಸರ ಹುಟ್ಟಿಸುತ್ತವೆ ಎಂದಿದ್ದಾರೆ. ಒಟ್ಟಾರೆ ವಂಚನೆ ಪ್ರಕರಣದಿಂದ ಶುರುವಾದ ಪ್ರಕರಣ ನಾಲ್ಕು ಹಂತಗಳನ್ನು ದಾಟಿಕೊಂಡು ಮುಂದೆ ಬಂದಿದೆ. ಈಗಲಾದರೂ ಸತ್ಯ ಹೊರಬಂದರೆ ಎಲ್ಲವೂ ಸಮಾಪ್ತಿ ಆಗಲಿದೆ. ಸತ್ಯವನ್ನು ಮುಚ್ಚಿಡುವ ಪ್ರಯತ್ನ ಸಾಕಷ್ಟು ಜನರ ಕಡೆಯಿಂದ ನಡೆಯುತ್ತಿದೆ. ಎಷ್ಟು ದಿನ ಎನ್ನುವುದು ಗೊತ್ತಿಲ್ಲ.

ನಟ ದರ್ಶನ್​ಗೆ ಉಮಾಪತಿ ಪರಿಚಯ ಮಾಡಿಕೊಟ್ಟಿದ್ದು ಪ್ರೇಮ್​ ಆಗಿರಬಹುದು. ಅದೊಂದೇ ಕಾರಣಕ್ಕೆ ಪ್ರೇಮ್​ ಅವರನ್ನು ಟೀಕೆ ಮಾಡುವುದು, ಅವನೇನು ದೊಡ್ಡ ಪುಡಂಗ್​ ಅಲ್ಲ ಎನ್ನುವುದು ದರ್ಶನ್​ಗೆ ಸೂಕ್ತವಲ್ಲ. ಅದೂ ಅಲ್ಲದೆ ಮಾಧ್ಯಮಗಳು ನೇರಪ್ರಸಾರ ಎಂದು ಹೇಳಿದ ಮೇಲೂ ಸಾಕಷ್ಟು ಅವಹೇಳನಕಾರಿ ಪದ ಬಳಕೆ ಮಾಡಿದ್ದು ಸಾಕಷ್ಟು ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿರುತ್ತದೆ. ನಟ ದರ್ಶನ್​ ವ್ಯಕ್ತಿತ್ವ ನೋಡಿಕೊಂಡು ಯಾರೊಬ್ಬರೂ ಅಭಿಮಾನಿಗಳಾಗಿ ಇರುವುದಿಲ್ಲ. ಸಿನಿಮಾದಲ್ಲಿ ತೆರೆ ಮೇಲೆ ಮಾಡುವ ಉತ್ತಮ ಕಾರ್ಯಗಳು ಜನರ ಮನಸ್ಸಿನಲ್ಲಿ ಹೀರೋಯಿಸಂ ತುಂಬಿರುತ್ತವೆ. ಆದರೆ ನಿಜ ಜೀವನದಲ್ಲಿ ನಾನು ಬೇರೆ ರೀತಿ ಇದ್ದೇನೆ ಎಂದು ತೋರಿಸಿಕೊಟ್ಟರೆ ಅಭಿಮಾನ ಕ್ರಮೇಣವಾಗಿ ಕಡಿಮೆಯಾಗಲಿದೆ ಎನ್ನುವುದು ದರ್ಶನ್​ ಮನಸ್ಸಿನಲ್ಲಿ ಇರಬೇಕಾದ ಸಂಗತಿ. ಇದೆಲ್ಲವೂ ಸುಖಾಂತ್ಯಗೊಂಡಾಗ ಮಾತನಾಡಿರುವ ಮಾತುಗಳನ್ನೇ ಮತ್ತೊಮ್ಮೆ ಕೇಳಿಸಿಕೊಂಡರೆ ಮಾಡಿರುವ ತಪ್ಪು ಅರ್ಥವಾಗುತ್ತದೆ.

Related Posts

Don't Miss it !