ವಸಂತ ಋತುವಿಗೆ ಮೂಕಹಕ್ಕಿಗಳ ಗಾಯನ..! ಸಂಸಾರದಲ್ಲಿ ಸಂಧಾನ ಸಫಲ

ದಾವಣಗೆರೆಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಯುವಕ ಯುವತಿಗೆ ಪೋಷಕರೇ ಶತ್ರುಗಳಾಗಿ ಕಾಡಿದ್ದಾರೆ. ಅಂತಿಮವಾಗಿ ಎರಡೂ ಊರಿನ ಹಿರಿಯರನ್ನು ಒಟ್ಟಿಗೆ ಕೂರಿಸಿ ಸಂಧಾನ ಮಾಡಿ ರಿಜಿಸ್ಟ್ರಾರ್​​ ಮದುವೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಯುವಜೋಡಿ. ವಿಶೇಷ ಅಂದ್ರೆ ಈ ಇಬ್ಬರು ಪ್ರೇಮಿಗಳು ಮಾತು ಬಾರದ ಮೂಕರು. ಆದರೂ ತಮ್ಮ ಪ್ರೀತಿಯನ್ನು ಬಿಟ್ಟುಕೊಡಲು ಒಪ್ಪದ ಮುದ್ದು ಜೋಡಿ ಹಠವಿಡಿದು ಕುಟುಂಬಸ್ಥರಿಗೆ ಸವಾಲು ಹಾಕಿ ಮದುವೆಯಾಗಿದ್ದಾರೆ ಎನ್ನುವುದೇ ವಿಶೇಷ. ನಿಮ್ಮೆಲ್ಲರ ವಿರೋಧಕ್ಕೆ ನಮ್ಮ ಸುಖ ಸಂಸಾರವೇ ಸಾಕ್ಷಿಯಾಗಲಿದೆ. ನಮ್ಮ ಬದುಕಿನಲ್ಲಿ ನಾವು ಗೆದ್ದು ತೋರಿಸುತ್ತೇವೆ. ಆಗಲಾದರೂ ನಮ್ಮನ್ನು ಒಪ್ಪಿಕೊಳ್ಳಿ ಎಂದು ಗ್ರಾಮಸ್ಥರ ಎದುರು ಅಪ್ಪ ಅಮ್ಮನಿಗೆ ಮಾತು ಕೊಟ್ಟಿದ್ದಾರೆ. ಅಷ್ಟಕ್ಕೂ ಈ ಇಬ್ಬರೂ ಮೂಕರು ಪ್ರೀತಿ ಮಾಡಿದ್ದು ಎಲ್ಲಿ..? ಮಾತನ್ನೇ ಆಡದ ಇವರು ಪ್ರೀತಿ ನಿವೇದನೆ ಮಾಡಿಕೊಂಡಿದ್ದು ಹೇಗೆ ಎನ್ನುವುದು ಅಚ್ಚರಿಯ ಸಂಗತಿ ಆಗಿದೆ.

ಸಹಪಾಠಿಗಳಾಗಿದ್ದ ದೋಸ್ತ್​.. ಪ್ರೇಮಿಗಳಾಗಿ ಬದಲಾದ್ರು..!

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಮೆಡ್ಲೇರಿ ಗ್ರಾಮದ ಸಂಜು ವಾಲ್ಮೀಕಿ ಹಾಗೂ ಹರಪನಹಳ್ಳಿ ತಾಲ್ಲೂಕಿನ ಕಡಬಗೆರೆ ಗ್ರಾಮದ ಅಕ್ಷತಾ ಬಾಲ್ಯ ಸ್ನೇಹಿತರು. ದಾವಣಗೆರೆಯ ಮೌನೇಶ್ವರ ಕಿವುಡ ಹಾಗೂ ಮೂಗರ ವಸತಿ ಶಾಲೆಯಲ್ಲಿ ಒಂದನೇ ತರಗತಿಯಿಂದ ವ್ಯಾಸಂಗ ಮಾಡುತ್ತಿದ್ದರು. 10ನೇ ತರಗತಿ ತನಕ ವಿದ್ಯಾಭ್ಯಾಸ ಮಾಡಿದ ಅಕ್ಷತಾ ಆ ಬಳಿಕ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ಆದರೆ ಸಂಜು ವಾಲ್ಮೀಕಿ ಮಾತ್ರ ಬೆಂಗಳೂರಿಗೆ ಆಗಮಿಸಿ, ಐಟಿಐ ಮಾಡಿ ವಿದ್ಯಾಭ್ಯಾಸ ಮುಂದುವರಿಸಿದ್ದ. ಆ ಬಳಿಕ ಬೆಂಗಳೂರಿನಲ್ಲೇ ಉದ್ಯೋಗಕ್ಕೂ ಸೇರಿಕೊಂಡಿದ್ದನು. ಈ ನಡುವೆ ಅಕ್ಷತಾ ಹಾಗೂ ಸಂಜು ವಾಲ್ಮೀಕಿ ನಡುವೆ ಸಂಪರ್ಕ ಬೆಳೆಸಿತ್ತು ವಾಟ್ಸ್​​ಆ್ಯಪ್. ಸ್ನೇಹಿತರು ಕರೆ ಮಾಡಿ ಮಾತನಾಡುವುದು ಸಾಧ್ಯವಾಗದಿದ್ದಾಗ ಮೆಸೇಜ್​ ಮಾಡುವ ಮೂಲಕ ಆತ್ಮೀಯರಾಗಿದ್ದರು. ಆ ಬಳಿಕ ಆತ್ಮೀಯತೆ ಗಟ್ಟಿಯಾಗುತ್ತಾ ಸಾಗಿದ ಬಳಿಕ ಒಂದು ದಿನ ಪ್ರೇಮ ನಿವೇದನೆ ಆಗಿತ್ತು. ಸಂಜು ವಾಲ್ಮೀಕಿ ಪ್ರೇಮ ನಿವೇದನೆಗೆ ಅಕ್ಷತಾ ಮನಸೋತಿದ್ದಳು. ಪ್ರೇಮಾಂಕುರ ಇಬ್ಬರನ್ನು ಸಂಸಾರದ ಬಾಂಧವ್ಯದ ಸನಿಹಕ್ಕೆ ತಂದು ನಿಲ್ಲಿಸಿತ್ತು. ಆದರೆ ಅಡ್ಡಿಯಾಗಿದ್ದು ಮಾತ್ರ ಜಾತಿ ಎಂಬ ಪಿಡುಗು.

ಮೂಕಹಕ್ಕಿಗಳ ಪ್ರೇಮಕ್ಕೆ ಅಡ್ಡಿಯಾದ ಜಾತಿ ಪಿಡುಗು..!

ಅಸಲಿಗೆ ಹಾವೇರಿಯ ಸಂಜು ವಾಲ್ಮೀಕಿ ಸಮುದಾಯಕ್ಕೆ ಸೇರಿದವನು. ಇನ್ನೂ ಅಕ್ಷತಾ ಸಾದು ಲಿಂಗಾಯತ ಸಮುದಾಯಕ್ಕೆ ಸೇರಿದ ಹೆಣ್ಣು ಮಗಳು. ಪ್ರೀತಿ ಪ್ರೇಮದ ಬಳಿಕ ಮದುವೆ ಆಗುವ ನಿರ್ಧಾರಕ್ಕೆ ಬಂದ ಸಂಜು ಹಾಗೂ ಅಕ್ಷತಾ ಮನೆಯವರ ಎದುರು ನೇರವಾಗಿ ವಿಷಯ ಪ್ರಸ್ತಾಪ ಮಾಡಿದ್ದರು. ಮೊದಲಿಗೆ ಇಬ್ಬರ ಮನೆಯಲ್ಲೂ ವಿರೋಧ ವ್ಯಕ್ತವಾಗಿತ್ತು. ಆದರೆ ಸಂಜು ವಾಲ್ಮೀಕಿ ಕುಟುಂಬಸ್ಥರು ವಿದ್ಯಾವಂತರಾಗಿದ್ದು, ತಂದೆ ಶಿಕ್ಷಕರಾಗಿದ್ದು ಮಗನ ಆಸೆಗೆ ಮನಸೋತರು. ಆದರೆ ಅಕ್ಷತಾ ಕುಟುಂಬಸ್ಥರು ಮಾತ್ರ ಕೆಳ ಜಾತಿಯ ಹುಡುಗನ್ನು ನಾವು ಒಪ್ಪಲ್ಲ ಎಂದು ಹಠ ಹಿಡಿದು ಕುಳಿತರು. ಅಂತಿಮವಾಗಿ ಪೋಷಕರ ವಿರೋಧದ ನಡುವೆಯೂ ರಿಜಿಸ್ಟ್ರಾರ್​ ವಿವಾಹ ಆಗುವ ನಿರ್ಧಾರಕ್ಕೆ ಬಂದಿದ್ದರು. ಸಹೋದರಿ ಮನೆ ಬಿಟ್ಟು ಹೋದ ಬಳಿಕ ಅಕ್ಷತಾಳ ಅಣ್ಣ ಹರಪನಹಳ್ಳಿ ತಾಲೂಕಿನ ಚಿಗಟೇರಿ ಪೋಲಿಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು. ಅಂತಿಮವಾಗಿ ಮದುವೆಯಾಗಿ ಎರಡೂ ಸಮುದಾಯದ ಜನರನ್ನು ಒಟ್ಟಿಗೆ ಕರೆದುಕೊಂಡು ಠಾಣೆಗೆ ಹೋಗಿದ್ದರಿಂದ ಸಂಧಾನ ಮಾಡಿ ಪೋಷಕರ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆಸ್ತಿಗಾಗಿ ಪಟ್ಟು ಹಿಡಿದ ಅಕ್ಷತಾ ಸಹೋದರರು..!

ಯುವಕ ಸಂಜು ವಾಲ್ಮೀಕಿ ಜೊತೆಗೆ ಮದುವೆಯಾಗಿ ಬಂದಿದ್ದ ಬಳಿಕ ಅಕ್ಷತಾ ಕುಟುಂಬಸ್ಥರು ಪರಿಸ್ಥಿತಿ ಕೈ ಮೀರಿ ಹೋಗಿದ್ದನ್ನು ಗಮನಿಸಿದರು. ಮುಂದೆ ಆಸ್ತಿಗಾಗಿ ತವರಿಗೆ ಬರುವುದಿಲ್ಲ ಎಂದು ಪತ್ರ ಬರೆದುಕೊಡುವಂತೆ ಒತ್ತಾಯ ಮಾಡಿದ್ರು. ಇತ್ತ ಸಂಜು ತಂದೆ ಶಿಕ್ಷಕರಾಗಿದ್ದು, ನನ್ನ ಮಗ ಹಾಗೂ ಸೊಸೆ ಮುಂದಿನ ಜೀವನವನ್ನು ಸುಖವಾಗಿ ನಡೆಸಿಕೊಮಡು ಹೋದರೆ ಸಾಕು. ನಾವು ನಿಮ್ಮ ಆಸ್ತಿಗಾಗಿ ನಿಮ್ಮ ಮಗಳನ್ನು ಮದುವೆ ಮಾಡಿಕೊಂಡಿದ್ದಲ್ಲ. ನಮ್ಮ ಮಗ ಇಚ್ಛಿಸಿದ ಎನ್ನುವ ಕಾರಣಕ್ಕೆ ನಾವು ಒಪ್ಪಿಕೊಂಡಿದ್ದೇವೆ. ನಿಮ್ಮ ಆಸ್ತಿ ನಮಗೆ ಬೇಡ ಎಂದು ವಾಗ್ದಾನ ಮಾಡಿದರು. ಆ ಬಳಿಕ ಪೊಲೀಸರು ಯುವ ಜೋಡಿಗೆ ಯಾವುದೇ ತೊಂದರೆ ಕೊಡಬಾರದು ಎಂದು ಎರಡೂ ಕಡೆಯ ಸಂಬಂಧಿಕರಿಗೆ ಸೂಚನೆ ಕೊಟ್ಟಿದ್ದಾರೆ. ಯುವಕ ಬೆಂಗಳೂರಿನ ಕೆಲಸ ಬಿಟ್ಟು ಊರಿನಲ್ಲೇ ಸ್ವಂತ ಉದ್ಯೋಗ ಮಾಡಿಕೊಂಡಿದ್ದಾನೆ. ಯುವತಿ ಅಕ್ಷತಾ ಕೂಡ ಟೈಲರಿಂಗ್​ ಕೆಲಸ ಮಾಡಿಕೊಂಡು ಸ್ವಂತ ಕಾಲಿನ ಮೇಲೆ ನಿಂತಿದ್ದಾಳೆ. ಅಂತರ್ಜಾತಿ ವಿವಾಹ ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗಲಿ ಎನ್ನುವುದು The Public Spot ಆಶಯ

Related Posts

Don't Miss it !