ಬಯಲಾಯ್ತು ಕಾಂಗ್ರೆಸ್​ ನಾಯಕರ ವೇದಿಕೆ ಮೇಲಿನ ನಾಟಕ..! ಸೂತ್ರಧಾರಿ ಸೂಚನೆ..

ಕಾಂಗ್ರೆಸ್​ ದಾವಣಗೆರೆಯಲ್ಲಿ ಸುಮಾರು ಏಳೆಂಟು ಲಕ್ಷ ಜನರನ್ನು ಸೇರಿ ಸಿದ್ದರಾಮಯ್ಯ ಅವರ 75ನೇ ಹುಟ್ಟಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿತ್ತು. ಈ ಮೂಲಕ 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಣಕಹಳೆಯನ್ನೂ ಊದುವ ಕೆಲಸ ಮಾಡಿತ್ತು. ಕಾಂಗ್ರೆಸ್​​ ಆರ್ಭಟ ಜೆಡಿಎಸ್​ ಹಾಗು ಬಿಜೆಪಿಯಲ್ಲಿ ದಿಗಿಲು ಹುಟ್ಟಿಸಿರುವುದೂ ಅಷ್ಟೇ ಸತ್ಯ. ಅದರ ಜೊತೆಗೆ ಹಾವು ಮುಂಗೂಸಿಯಂತೆ ಕಿತ್ತಾಡುತ್ತಿದ್ದ ಕಾಂಗ್ರೆಸ್​ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹಾಗು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವೇದಿಕೆ ಮೇಲೆ ಆಲಿಂಗನ ಮಾಡಿಕೊಂಡ ಘಟನೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಕಾಂಗ್ರೆಸ್​ ನಾಯಕರು ಇದೇ ರೀತಿ ಒಗ್ಗಟ್ಟು ಪ್ರದರ್ಶನ ಮಾಡಿಕೊಂಡು ಚುನಾವಣೆ ಎದುರಿಸಿದರೆ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ವಿಶ್ಲೇಷಣೆಗಳೂ ಕೇಳಿ ಬಂದಿದ್ದವು. ಆದರೆ ಅದು ನಾಟಕ ಎನ್ನುವ ಮಾತುಗಳು ಕೇಳಿಬಂದಿವೆ.

ಸಿದ್ದರಾಮಯ್ಯ ಅವರನ್ನು ಆಲಂಗಿಸಿದ್ದು ಬರೀ ನಾಟಕ..!!

ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಒಲ್ಲದ ಮನಸ್ಸಿನಿಂದಲೇ ಭಾಗಿಯಾಗಿದ್ದ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​, ಸಮಾರಂಭದಲ್ಲಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಅವರನ್ನು ಬರ ಸೆಳೆದುಕೊಂಡು ತಬ್ಬಿಕೊಂಡು ಆಲಿಂಗನ ಮಾಡಿದ್ದರು. ಆದರೆ ಇದೀಗ ವೀಡಿಯೋ ಒಂದು ವೈರಲ್​ ಆಗಿದ್ದು, ವೇದಿಕೆ ಮೇಲೆ ಕುಳಿತಿದ್ದ ರಾಹುಲ್​ ಗಾಂಧಿ ಸಿದ್ದರಾಮಯ್ಯ ಅವರನ್ನು ತಬ್ಬಿಕೊಳ್ಳಲು ಸೂಚನೆ ಕೊಟ್ಟಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಆಲಿಂಗನ ಮಾಡಿದ್ದನ್ನು ಟೀಕಿಸಿದ್ದ ಬಿಜೆಪಿ ನಾಯಕರು, ಈ ಹೊಂದಾಣಿಕೆ ಅದೆಷ್ಟು ದಿನ ಇರಲಿದೆ ನೋಡೋಣ ಎಂದು ಕುಹಕವಾಡಿದ್ದರು. ಆದರೆ ಒಂದೇ ರಾತ್ರಿಯಲ್ಲಿ ಡಿ.ಕೆ ಶಿವಕುಮಾರ್​ ಹಾಗು ಸಿದ್ದರಾಮಯ್ಯ ಮಾಡಿದ್ದು ನಾಟಕ ಎನ್ನುವುದನ್ನು ಬಯಲು ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ರಾಹುಲ್​ ಗಾಂಧಿ ನಿರ್ದೇಶನದಂತೆ ಡಿ.ಕೆ ಶಿವಕುಮಾರ್​​ ಪಾತ್ರ ಮಾಡಿದ್ದಾರೆ ಎನ್ನುವುದು ಬಟಾಬಯಲಾಗಿದೆ.

ಈ ಹಿಂದೆ ಸಂಸತ್​ನಲ್ಲಿ ಸಿಕ್ಕಿ ಬಿದ್ದಿದ್ದರು ರಾಹುಲ್​..!

ರಾಹುಲ್​ ಗಾಂಧಿ ಉತ್ತಮ ವಾಗ್ಮಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂಗ್ಲಿಷ್​ ಹಾಗು ಹಿಂದಿ ಭಾಷೆ ಮೇಲೆ ಹಿಡಿತ ಹೊಂದಿರುವ ರಾಹುಲ್​ ಗಾಂಧಿ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಸಂಸತ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದರು. ಆ ಬಳಿಕ ಪ್ರಧಾನಿ ನರೇಂದ್ರ ಮೋದಿಯನ್ನು ಆಲಂಗಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಆದರೆ ಅರೆಕ್ಷಣದಲ್ಲಿ ಪಕ್ಕದಲ್ಲಿ ಕುಳಿತಿದ್ದ ತಮ್ಮ ಪಕ್ಷದ ಸಂಸತ್​ ಸದಸ್ಯನ ಕಡೆಗೆ ತಿರುಗಿ ಕಣ್ಣು ಮಿಟುಕಿಸಿ ಎಲ್ಲವನ್ನೂ ಸರ್ವನಾಶ ಮಾಡಿಬಿಟ್ಟಿದ್ದರು. ಇಲ್ಲಿಯೂ ಕೂಡ ಕಾಂಗ್ರೆಸ್​ ನಾಯಕರಾದ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್​ ಆಲಿಂಗನ ಮಾಡಿದ್ದು ಇಡೀ ಕರ್ನಾಟಕಕ್ಕೆ ಗೆಲುವಿನ ಸಂದೇಶ ತಲುಪಿಸುವ ಕೆಲಸ ಮಾಡಿತ್ತು. ಆದರೆ ಇದು ರಾಹುಲ್​ ಗಾಂಧಿ ನಿರ್ದೇಶನದಲ್ಲಿ ನಡೆದಿರುವ ನಾಟಕ ಎನ್ನುವುದು ಬಹಿರಂಗ ಆದ ಬಳಿಕ ತೆರೆಮರೆಯಲ್ಲಿ ನಡೆಯಬೇಕಿದ್ದ ವಿಚಾರ ಬಯಲಾಟ ಆಗಿದ್ದನ್ನು ಕಂಡು ಕಾಂಗ್ರೆಸ್​ ಕಾರ್ಯಕರ್ತರೇ ಬೇಸರ ವ್ಯಕ್ತಪಡಿಸುವಂತಾಗಿದೆ.

ಇದನ್ನು ಓದಿ: ತಮಿಳುನಾಡಲ್ಲಿ ಹೆದರುವ ಕೇಂದ್ರ.. ಕನ್ನಡಿಗರ ವಿರುದ್ಧ ಧಿಮಾಕು.. ಯಾಕೆ..?

ಕಾಂಗ್ರೆಸ್​ ಹೇಗೆ ಸಮರ್ಥಿಸುತ್ತದೆ ಎನ್ನುವುದೇ ಕುತೂಹಲ..!

ದಾವಣಗೆರೆಯಲ್ಲಿ ಬೃಹತ್​ ಸಮಾವೇಶ ಮಾಡಿ ಸುಸ್ತಾಗಿರುವ ಕಾಂಗ್ರೆಸ್​ ನಾಯಕರು ಗುರುವಾರ ವಿಶ್ರಾಂತಿ ಮೂಡ್​ನಲ್ಲಿದ್ದರು. ಬಿಜೆಪಿ ಯಾವುದೆ ಆರೋಪಕ್ಕೂ ಉತ್ತರ ಕೊಡುವ ಗೋಜಿಗೆ ಹೋಗಿರಲಿಲ್ಲ. ಇದೀಗ ತೆರೆ ಹಿಂದೆ ಹೇಳಿಕೊಟ್ಟು ಪಾತ್ರ ಮಾಡಿಸಬೇಕಿದ್ದ ರಾಹುಲ್​ ಗಾಂಧಿ ಸ್ಕ್ರೀನ್​ ಎದುರೇ ಹೇಳಿಕೊಟ್ಟು ಕಾಂಗ್ರೆಸ್​​ ನಾಟಕ ಮಕ್ಕರ್​ ಆಗುವಂತೆ ಮಾಡಿದ್ದಾರೆ. ಕಾಂಗ್ರೆಸ್​ ನಾಯಕರು ಹೇಗೆ ಸಮರ್ಥಿಸಿ ಕೊಳ್ಳುತ್ತಾರೆ ಎನ್ನುವುದರ ಮೇಲೆ ಬಿಜೆಪಿ ಆರೋಪದ ಶಕ್ತಿ ನಿಂತಿದೆ. ಇನ್ನು ಡಿಕೆ ಶಿವಕುಮಾರ್​ ರಾಹುಲ್​ ಅವರ ಸೂಚನೆ ಮೇಲೆ ಅಪ್ಪಿಕೊಂಡು ನಾಟಕ ಮಾಡಿದ್ದಾರೆ ಎನ್ನುವುದಕ್ಕೆ ಸಿದ್ದರಾಮಯ್ಯ ಆಪ್ತ ಬಳಗ ತಿರುಗಿ ಬಿದ್ದರೆ ಕಾಂಗ್ರೆಸ್​ ಕಟ್ಟಲು ಹೊರಟಿರುವ ಸೌಧ ಕಾಮಗಾರಿ ಹಂತದಲ್ಲೇ ಕುಸಿದು ಪಾತಾಳ ಸೇರುವುದು ಶತಸಿದ್ಧ. ಇಂದು ವರಮಹಾಲಕ್ಷ್ಮೀ ಹಬ್ಬ ಆಚರಣೆ ಬಳಿಕ ಕಾಂಗ್ರೆಸ್​ ಉತ್ತರ ಹೊರಬೀಳುವ ಸಾಧ್ಯತೆ ಇದೆ.

Related Posts

Don't Miss it !