ಮೊದಲ ಪತ್ನಿಗೆ ಡೈವರ್ಸ್​, ಮೊಬೈಲ್​ ಅಂಗಡಿಯಲ್ಲೇ ಕ್ಯಾಚಪ್​..! ನಡುವೆ ಇನ್ನೊಂದು

ಸಮಾಜ ಎಷ್ಟೊಂದು ಅದೋಗತಿಗೆ ತಲುಪಿದೆ ಅಂದ್ರೆ ಮದುವೆಯಾಗದೆ ಇರುವ ಅದೆಷ್ಟೋ ರೈತರ ಮಕ್ಕಳು ವಯಸ್ಸು ಮೀರುತ್ತಿದೆ ಅಂತಾ ಕಂಗಾಲಾಗಿದ್ದಾರೆ. ಆದ್ರೆ ಒಳ್ಳೆ ಬಟ್ಟೆ ಹಾಕೊಂಡು ನಾಜೂಕಾಗಿ ಮಾತನಾಡೋ ಜನರಿಗೆ ಅದೆಷ್ಟು ಹೆಣ್ಣು ಮಕ್ಕಳು ಮರುಳಾಗ್ತಾರೆ ಎನ್ನುವ ವಿಚಾರ ಈ ಸ್ಟೋರಿಯಿಂದಲು ಗೊತ್ತಾಗುತ್ತದೆ. ಕಾರಣ ಏನು ಅಂದ್ರೆ ಒಂದು ಮದುವೆ ಆಗಿ ವಿಚ್ಛೇದನಾ ಪಡೆದಿದ್ದ ವ್ಯಕ್ತಿಯೊಬ್ಬ, ಮೊತ್ತೋರ್ವ ಮಹಿಳೆ ಜೊತೆಗೆ ಸಂಬಂಧ ಕುದುರಿಸಿದ್ದ. ಬರೋಬ್ಬರಿ 2 ವರ್ಷಗಳ ಕಾಲ ಚಂದಮಾಮನ ಆಟವಾಡಿ, ಆ ಬಳಿಕ ಆಕೆಗೂ ಕೈಕೊಟ್ಟು ಮತ್ತೊಂದು ಮದುವೆ ಆಗಿ ಯಾಮಾರಿಸಲು ಹೊರಟಿದ್ದವನು, ಹಳೆ ಗೆಳತಿಯನ್ನು ಹುಡುಕಿಕೊಂಡು ಹೋಗಿ ಸಿಕ್ಕಿಬಿದ್ದಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ..?

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಬಳಿಯ ದಾಬಸ್​ಪೇಟೆಯಲ್ಲಿ ಸಿದ್ದೇಶ್ ಎಂಬಾತ ಮೊಬೈಲ್​ ಅಂಗಡಿ ಇಟ್ಟುಕೊಂಡಿದ್ದ. ಮೊಬೈಲ್​ ರೀಚಾರ್ಜ್​ ಮಾಡಿಸಲು ಬರುತ್ತಿದ್ದ ಮಹಿಳೆ ಜೊತೆಗೆ ನಸುನಕ್ಕು ಮಾತನಾಡಿ ಮೋಡಿ ಮಾಡಿದ್ದ. ಆಕೆಗೂ ಗಂಡ ವಿವಾಹ ವಿಚ್ಛೇದನಾ ನೀಡಿದ್ದಾನೆ ಎನ್ನುವ ವಿಚಾರ, ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವಂತಾಗಿತ್ತು. ಬರೋಬ್ಬರಿ 2 ವರ್ಷಗಳ ಕಾಲ ಕುಚುಕು ಗೆಳಯರಾಗಿ ಒಂದಾಗಿದ್ದವರು, ಕೆಲವು ದಿನಗಳ ನಂತರ ಇಬ್ಬರ ನಡುವೆ ವಿರಸ ಶುರುವಾಗಿತ್ತು. ಸಿದ್ದೇಶ್​ ಫೋನ್​ ಕರೆ ಕೂಡ ಮಾಡುತ್ತಿರಲಿಲ್ಲ, ಮೆಸೇಜ್​ಗೆ ರಿಪ್ಲೈ ಮಾಡುತ್ತಿರಲಿಲ್ಲ. ಸಾಕಷ್ಟು ಸತಾಯಿಸಿದಾಗ ಕೊನೆಗೆ ಗೊತ್ತಾದ ವಿಚಾರ ಅಂದ್ರೆ ಸಿದ್ದೇಶ್​ ಮತ್ತೊಂದು ಮದುವೆ ಆಗುತ್ತಿದ್ದಾನೆ ಎನ್ನುವುದು. ನಮ್ಮ ಮನೆಯಲ್ಲಿ ಎರಡನೇ ಮದುವೆ ಮಾಡಲು ಹೆಣ್ಣು ನೋಡಿದ್ದಾರೆ. ನನ್ನನ್ನು ಮರೆತು ಬಿಡು ಸೌಮ್ಯಾ ಎಂದಿದ್ದು, ಈಕೆಯನ್ನು ಘಾಸಿಯುಂಟು ಮಾಡಿತ್ತು.

2005ರಲ್ಲಿ ಮದುವೆ, ಮಗಳನ್ನು ಬಿಟ್ಟು ಬಂದಿದ್ದ ಮಹಿಳೆ..!

ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ಮೂಲದ ಸೌಮ್ಯಾ, 2005ರಲ್ಲಿ ಮದುವೆಯಾಗಿ, ಒಂದು ಹೆಣ್ಣು ಮಗು ಕೂಡ ಜನಿಸಿತ್ತು. ಕಾರಣಾಂತರಗಳಿಂದ 2020ರಲ್ಲಿ ವಿವಾಹ ವಿಚ್ಛೇದನಾ ಪಡೆದುಕೊಂಡಿದ್ದರು. ಆ ಬಳಿಕ ಹೆಣ್ಣು ಮಗಳ ಹೊಣೆಗಾರಿಕೆಯನ್ನು ಗಂಡನೇ ವಹಿಸಿಕೊಂಡಿದ್ದರಿಂದ ಸೌಮ್ಯಾ, ದಾಬಸ್​ಪೇಟೆಗೆ ಬಂದು ವಾಸವಾಗಿದ್ದರು. ಬದುಕು ಹೀಗೇ ಸಾಗುತ್ತಿರುವಾಗ ಮೊದಲ ಪತ್ನಿಗೆ ವಿವಾಹ ವಿಚ್ಛೇದನಾ ಕೊಟ್ಟಿದ್ದೇನೆ. ಕೋರ್ಟ್​ನಲ್ಲಿ ಅರ್ಜಿ ಇತ್ಯರ್ಥವಾದ ಕೂಡಲೇ ಮದುವೆ ಆಗೋಣ ಎಂದು ನಂಬಿಸಿದ್ದ ಸಿದ್ದೇಶ್​, ಗಂಡ ಹೆಂಡತಿ ರೀತಿಯಲ್ಲೇ ಸಂಸಾರ ನಡೆಸುತ್ತಿದ್ದನು ಎಂದು ಆರೋಪಿಸಲಾಗಿದೆ. ವಾರಕ್ಕೊಮ್ಮೆ ಸೌಮ್ಯಾ ಮನೆಗೆ ಹೋಗಿ ವಾರಾಂತ್ಯ ಕಳೆಯುತ್ತಿದ್ದ ಸಿದ್ದೇಶ್​, ದೇವಸ್ಥಾನ, ಸ್ನೇಹಿತರ ಮನೆಗಳಿಗೂ ಸೌಮ್ಯಾ ಜೊತೆಗೆ ಹೋಗುತ್ತಿದ್ದನು ಎನ್ನಲಾಗಿದೆ. ಇದೀಗ ಮೂರನೇ ಹೆಣ್ಣಿನ ನೆರಳು ಸಿಗುವ ಲಕ್ಷಣ ಕಂಡ ಕೂಡಲೇ 2ನೇ ಗೆಳತಿಗೆ ಕೈಕೊಟ್ಟು ಹೋಗುವ ನಿರ್ಧಾರ ಮಾಡಿದ್ದ.

ಮದುವೆ ಆಗ್ತೇನೆ ಎಂದು ನಂಬಿಸಿ ಈಗ ಬೇರೊಬ್ಬಳು ಯುವತಿ ಜೊತೆಗೆ ಮದ್ವೆ ಆಗ್ತಿದ್ದಾನೆ ಎಂದು ಸೌಮ್ಯಾ ನೀಡಿರುವ ದೂರಿನ ಮೇಲೆ ಬಂಧನ ಮಾಡಲಾಗಿದ್ದು, ಚಪಲ ಚೆನ್ನಿಗರಾಯನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಒಂದಲ್ಲ ಎರಡಲ್ಲ ಮೂರು ಮದುವೆ ಕನಸು ಕಾಣ್ತಿದ್ದ ಸಿದ್ದೇಶ್​, ಸೌಮ್ಯಾ ಕಿರಿಕ್​ ಮಾಡ್ತಾರೆ ಎನ್ನುವುದು ಗೊತ್ತಾಗ್ತಿದ್ದ ಹಾಗೆ ಮನೆಗೆ ಹೋಗಿ ಬೆದರಿಕೆ ಹಾಕಿ, ಹಲ್ಲೆ ಕೂಡ ಮಾಡಿ ಬಂದಿದ್ದಾನೆ. ಇದೀಗ ದೂರು ದಾಖಲಿಸಿಕೊಂಡ ಪೊಲೀಸರು ಸಿದ್ದೇಶ್​ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಆದರೂ ಹಳೇ ಹುಡುಗಿ ನಂಬರ್​ ಇಟ್ಕೊಂಡಿರಿ ಎನ್ನುವ ಹಾಡಿನಂತೆ ನೋಡೋಕೆ ಪೆದ್ದು ಪೆದ್ದು ಮುದ್ದು ಮುದ್ದು ಎನ್ನುವಂತಿದ್ದರು ಮಹಾ ರಸಿಕ ಮಹಾಶಯ ಎನ್ನುವುದನ್ನು ಸಾಬೀತು ಮಾಡಿದ್ದಾನೆ ಸಿದ್ದೇಶ್​.

Related Posts

Don't Miss it !