JDS​, BJPಗೆ ನಡುಕ ಶುರು.. ರಾಜ್ಯಕ್ಕೆ ಬಂದಿಳಿದ ಸ್ಟ್ರಾಟಜಿ ಮಾಸ್ಟರ್​ ಅಮಿತ್​ ಷಾ..!

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹುಟ್ಟುಹಬ್ಬದ ನೆಪದಲ್ಲಿ ನಡೆದ ಕಾಂಗ್ರೆಸ್​ ಪಕ್ಷದ ಅಥವಾ ಸಿದ್ದರಾಮಯ್ಯ ಅಭಿಮಾನಿಗಳ ಶಕ್ತಿ ಪ್ರದರ್ಶನದಲ್ಲಿ ನಿರೀಕ್ಷೆಗೂ ಮೀರಿದ ಜನರು ಸೇರಿದ್ದು ಕಾಂಗ್ರೆಸ್​ನಲ್ಲಿ ಚೇತರಿಕೆ ನೀಡಿದ್ದರೆ, ಜೆಡಿಎಸ್​ ಹಾಗು ಬಿಜೆಪಿ ಪಾಳಯದಲ್ಲಿ ಆತಂಕದ ಛಾಯೆ ಮೂಡುವಂತೆ ಮಾಡಿದೆ. ಸುಮಾರು 8 ಲಕ್ಷಕ್ಕೂ ಹೆಚ್ಚಿನ ಜನರು ಸೇರ್ಪಡೆ ಆಗಿದ್ದು, ಹತ್ತಾರು ಕಿಲೋಮೀಟರ್​ ದೂರ ಟ್ರಾಫಿಕ್​ ಸಮಸ್ಯೆ ಸೃಷ್ಟಿಯಾಗಿತ್ತು. ಮಧ್ಯರಾತ್ರಿ ಆದರೂ ಜನರು ತಮ್ಮ ವಾಹನಗಳನ್ನು ಹೊರಕ್ಕೆ ತೆಗೆದುಕೊಂಡು ಹೋಗಲು ಪರದಾಡುವಂತಾಗಿತ್ತು. ಕಾಂಗ್ರೆಸ್​​ ಪಕ್ಷವೇ ಮುಂದಿನ ಬಾರಿ ಸರ್ಕಾರ ರಚನೆ ಮಾಡುವ ಬಗ್ಗೆ ಕಾರ್ಯಕರ್ತರು ಮಾತನಾಡಿಕೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್​ ಪರ ಒಲವಿರುವುದು ಕಂಡುಬಂತು.

ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಾಯ್ತು.. ಅಧಿಕಾರ ಒಂದೇ ಬಾಕಿ..!!

ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್​ ನಡುವೆ ನಡೆಯುತ್ತಿದ್ದ ಮುಖ್ಯಮಂತ್ರಿ ಗದ್ದುಗೆ ಗುದ್ದಾಟ ತಾರ್ಕಿಕ ಅಂತ್ಯ ಕಂಡಿದ್ಯಾ ಅನ್ನೋ ಬಗ್ಗೆ ಗುಮಾನಿ ಮೂಡಿಸುವಂತಿತ್ತು ನಾಯಕರ ನಡೆ. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದ ಆಪ್ತರ ಮಾತಿಗೆ ಕೆರಳಿ ಕೆಂಡವಾಗ್ತಿದ್ದ ಡಿ.ಕೆ ಶಿವಕುಮಾರ್​, ವೇದಿಕೆ ಮೇಲೆ ಸಿದ್ದರಾಮಯ್ಯ ಅವರನ್ನು ಬಿಗಿದಪ್ಪಿಕೊಂಡರು. ನಂತರ ಸಿದ್ದರಾಮಯ್ಯ ಪರವಾಗಿ ಉಘೇ ಎಂದ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​, ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಚುನಾವಣೆ ಮಾಡೋಣ ಎನ್ನುವ ಮೂಲಕ ಹೊಂದಾಣಿಕೆ ಸುಳಿವು ನೀಡಿದ್ರು. ಇನ್ನು ಕೊನೆಯದಾಗಿ ಮಾತನಾಡಿದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ ಹಾಗು ನನ್ನ ನಡುವೆ ಭಿನ್ನಾಭಿಪ್ರಾಯ ಎನ್ನುವುದು ಸುಳ್ಳಿನ ಕಂತೆ. ವಿರೋಧ ಪಕ್ಷಗಳು ಹಾಗು ಕೆಲವು ಮಾಧ್ಯಮಗಳ ಹುನ್ನಾರ, ನಾವು ಒಗ್ಗಟ್ಟಾಗಿದ್ದೇವೆ ಎನ್ನುವ ಮೂಲಕ ಎಲ್ಲದ್ದಕ್ಕೂ ತೇಪೆ ಹಾಕಿದ್ದೇವೆ ಎನ್ನುವುದನ್ನು ಹೇಳುವ ಪ್ರಯತ್ನ ಮಾಡಿದ್ರು.

ಕಾಂಗ್ರೆಸ್​ ಶಕ್ತಿ ಪ್ರದರ್ಶನ ಬೆನ್ನಲ್ಲೇ ರಾಜ್ಯದಲ್ಲಿ ಕಮಲ ತಂತ್ರ..!

ಕಾಂಗ್ರೆಸ್​ ಪಕ್ಷದ ಅಬ್ಬರದ ಬೆನ್ನಲ್ಲೇ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ಆಗಮಿಸಿದ್ದಾರೆ. ಕಾಂಗ್ರೆಸ್​ ಆರ್ಭಟದಿಂದ ಥಂಡಾ ಹೊಡೆದಿರುವ ಕೇಸರಿ ಪಾಳಯಕ್ಕೆ ಹೊಸ ಚೈತನ್ಯ ನೀಡಲು ಅಮಿತ್​ ಷಾ ರಣತಂತ್ರ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಬಾರಿಯ ರಾಜ್ಯ ಪ್ರವಾಸದಲ್ಲಿ ಅಮಿತ್​​ ಷಾ ಅವರು ಎರಡು ಪ್ರಮುಖ ಯೋಜನೆಯಗಳನ್ನು ಜಾರಿ ಮಾಡಲು ಮುಂದಾಗಿದ್ದು, ರಾಜ್ಯಾಧ್ಯಕ್ಷರು ಅಥವಾ ಮುಖ್ಯಮಂತ್ರಿ ಹುದ್ದೆಯನ್ನೇ ಬದಲಾವಣೆ ಮಾಡುವ ಚಿಂತನೆಯಲ್ಲಿದ್ದಾರೆ ಎನ್ನಲಾಗ್ತಿದೆ. ಕೇಸರಿ ಸೇನೆಯನ್ನು ಹುರಿದುಂಬಿಸುವ ಜೊತೆಗೆ ಏನೆಲ್ಲಾ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ ಎನ್ನುವ ಕುತೂಹಲ ಸೃಷ್ಟಿಯಾಗಿದೆ. ದೆಹಲಿಯಲ್ಲಿ ಈಗಾಗಲೇ ನಳೀನ್​ ಕುಮಾರ್​ ಕಟೀಲ್​ ಅಮಿತ್​ ಷಾ ಜೊತೆಗೆ ಚರ್ಚೆ ನಡೆಸಿದ್ದಾರೆ. ಆ ಬಳಿಕ ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಕೂಡ ಅಮಿತ್​ ಷಾ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನುವುದು ಕೇಸರಿ ಪಾಳಯದೊಳಗೆ ಸದ್ದುಗದ್ದಲ ಸೃಷ್ಟಿಸಿವೆ.

ಡಿಕೆಶಿ ಹೊಂದಾಣಿಕೆ ನಡುವೆ ಭಿನ್ನಮತವೂ ಸ್ಫೋಟ..!

ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್​ ವೇದಿಕೆ ಮೇಲೆ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಆದರೆ ಈ ಒಗ್ಗಟ್ಟು ಅದೆಷ್ಟು ದಿನ ಇರುತ್ತದೆ ನೋಡೋಣ ಎಂದು ಕೇಸರಿ ಪಾಳಯ ಕುಹಕವಾಡಿದ್ದಾರೆ. ಇದರ ನಡುವೆ ಹತ್ತಾರು ಕಾಂಗ್ರೆಸ್​ ನಾಯಕರು ಸಮಾರಂಭದಿಂದ ದೂರ ಉಳಿದಿದ್ದರು ಎನ್ನುವುದು ಗಮನಿಸಬೇಕಾದ ಅಂಶ. ಈ ನಡುವೆ ಸಿದ್ದರಾಮಯ್ಯ, ಆಪ್ತ ಬಳಗ ನಾಳೆಯಿಂದ ನೀಡುವ ಹೇಳಿಕೆಗಳು ಏನು..? ಎಂಬುದರ ಮೇಲೆ ಕಾಂಗ್ರೆಸ್​ನ ಒಗ್ಗಟ್ಟು ನಿಂತಿದೆ. ಈಗಾಗಲೇ ಮಠ ಮಾನ್ಯಗಳಿಗೆ ಭೇಟಿ ನೀಡುತ್ತಿರುವ ಸಿದ್ದರಾಮಯ್ಯ ಬಿಜೆಪಿಯನ್ನು ಮಣಿಸುವ ಯೋಜನೆ ರೂಪಿಸಿದ್ದಾರೆ. ಇದರ ನಡುವೆ ಮುಖ್ಯಮಂತ್ರಿ ಕುರ್ಚಿ ಮೇಲೆ ಕನಸು ಕಟ್ಟಿಕೊಂಡಿರುವ ಡಿಕೆ ಶಿವಕುಮಾರ್ ಉರುಳಿಸುವ ದಾಳಗಳ ಮೇಲೆ ಕಾಂಗ್ರೆಸ್​ ಪಕ್ಷದ ಮುಂದಿನ ಭವಿಷ್ಯ ನಿಂತಿದೆ ಎನ್ನಲಾಗ್ತಿದೆ. ಒಂದು ವೇಳೆ ಸಿದ್ದರಾಮಯ್ಯನ ಶಕ್ತಿಪ್ರದರ್ಶನದಿಂದ ಕಂಗಾಲಾಗಿರುವ ಡಿಕೆಶಿ ಸಿದ್ದು ಅಂಡ್​ ಟೀಂ ಮಟ್ಟ ಹಾಕುತ್ತಾರೆ ಎಂದು ವ್ಯಾಖ್ಯಾನಗಳು ಸೃಷ್ಟಿಯಾಗಿವೆ.

Related Posts

Don't Miss it !