ಶಿಕ್ಷಣಕ್ಕಾಗಿ ಮಾಡಿದ್ದ ಸಾಲ ತೀರಿಸಲು ಮಗು ಕಳ್ಳತನ..! ಎಲ್ಲಿಗೆ ಬಂತು ಶಿಕ್ಷಣ..?

ಶಿಕ್ಷಣ ಎನ್ನುವುದು ಜ್ಞಾನಾರ್ಜನೆಗೆ ಸೀಮಿತವಾದ ವಿಚಾರವಾಗಿ ಉಳಿದಿಲ್ಲ. ಶಿಕ್ಷಣ ಎನ್ನುವುದು ಒಂದು ಹಣ ಸಂಪಾದನೆ ಮಾಡುವ ಉದ್ಯಮವಾಗಿ ಬದಲಾಗಿದೆ. ತೊದಲು ನುಡಿಯುವ ಮಕ್ಕಳಿಗೆ ಲಕ್ಷ ಲಕ್ಷ ಡೊನೇಷನ್ ಕೊಟ್ಟು ಸೀಟ್ ಪಡೆಯುವ ಕಾಲ ಬಂದಾಗಿದೆ. ಕೋಟಿ ಕೋಟಿ ವೆಚ್ಚ ಮಾಡಿ ಕಲಿಯುತ್ತಿರುವುದು ಏನು..? ಎಂದು ತಮ್ಮಷ್ಟಕ್ಕೆ ತಾವೇ ಪ್ರಶ್ನೆ ಮಾಡುವಂತಾಗಿದೆ. ಜನಸೇವೆ ಮಾಡುವ ಉದ್ದೇಶದಿಂದ ವೈದ್ಯವೃತ್ತಿ ಆಯ್ಕೆ ಮಾಡಿಕೊಂಡರು ಕಳ್ಳತನಕ್ಕೆ ಇಳಿಯುವಂತಾಯ್ತು ಎಂದರೆ ಶಿಕ್ಷಣ ವ್ಯವಸ್ಥೆಯೇ ಕಾರಣ. ಈ ಘಟನೆ ಶಿಕ್ಷಣ ವ್ಯವಸ್ಥೆಯನ್ನು ಬಟಾಬಯಲು ಮಾಡಿ ಬೆತ್ತಲಾಗಿಸಿದೆ.

ನೆನಪಿದೆಯಾ ವರ್ಷದ ಹಿಂದಿನ ಮಗು ಕಳ್ಳತನ..?

ಬೆಂಗಳೂರಿನ ಚಾಮರಾಜಪೇಟೆಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಕಳೆದ ವರ್ಷ (ಮೇ 29, 2020 ) ಆಗತಾನೇ ಹುಟ್ಟಿದ ಮಗು ಕಳ್ಳತನ ಅಗಿತ್ತು. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಂದು ವರ್ಷದ ಬಳಿಕ ಕೊನೆಗೂ ಮಗುವನ್ನು ಕಳ್ಳತನ ಮಾಡಿದ್ದ ಕಳ್ಳಿಯನ್ನು ಬಂಧಿಸುವಲ್ಲಿ ಖಾಕಿ ಯಶಸ್ವಿಯಾಗಿದೆ. ಬಸವನಗುಡಿ ಮಹಿಳಾ ಠಾಣೆ ಪೊಲೀಸರು ವೈದ್ಯೆಯನ್ನು ಬಂಧನ ಮಾಡಿದ್ದಾರೆ. ಆರೋಪಿ ರೇಖಾ ಚಿತ್ರ ರಚಿಸಿ ಬೇಟೆಯಾಡಲು ಅಖಾಡಕ್ಕೆ ಇಳಿದಿದ್ದ ಪೊಲೀಸರು ಆಟೋದಲ್ಲಿ ಬಂದು ಮಗು ಕಳವು ಮಾಡಿ ಹೋಗಿದ್ದ ಡಾ ರಶ್ಮೀ ಎಂಬುವರನ್ನು ಆರೆಸ್ಟ್ ಮಾಡಿದ್ದಾರೆ. ಚಾಮರಾಜಪೇಟೆ ಹೆರಿಗೆ ಆಸ್ಪತ್ರೆಯಲ್ಲೇ ಕೆಲಸ ಮಾಡ್ತಿದ್ರು ಅನ್ನೋದು ವಿಶೇಷ.

ಮಗು ಮಾರಾಟವಲ್ಲ..! ಸ್ವಂತ ಕಂದಮ್ಮ..!

ಡಾಕ್ಟರ್ ರಶ್ಮಿಯನ್ನು ಬಂಧನ ಮಾಡಿದ ಬಸವನಗುಡಿ ಮಹಿಳಾ ಪೊಲೀಸರಿಗೆ ಅಚ್ಚರಿ ಕಾದಿತ್ತು. ಯಾಕಂದ್ರೆ ಬರೋಬ್ಬರಿ 1 ವರ್ಷದ ಬಳಿಕ ಪತ್ತೆಯಾದ ಆರೋಪಿಯನ್ನು ಇಂಚಿAಚು ವಿಚಾರಣೆ ಮಾಡಿದ್ರು. ಈ ವೇಳೆ ಮಗುವಿನ ಕಳ್ಳತನ ಮಾಡಿದ್ದ ರಹಸ್ಯ ಬಯಲಾಯ್ತು. ₹15 ಲಕ್ಷ ರೂಪಾಯಿಗೆ ಮಗುವನ್ನು ಮಾರಾಟ ಮಾಡಿದ್ದೇನೆ ಎನ್ನುವ ಮಾಹಿತಿಯೂ ಸಿಕ್ತು. ಕೂಡಲೇ ಸಂಪೂರ್ಣ ವಿಚಾರ ಕಲೆ ಹಾಕಿ ಕೊಪ್ಪಳ ಮೂಲದ ದಂಪತಿಯಿAದ ಮಗುವನ್ನು ರಕ್ಷಣೆ ಮಾಡಲಾಗಿದೆ. ವಿಷಯ ಏನಪ್ಪ ಅಂದರೆ ಮನೋವೈದ್ಯೆ ಆಗಿರುವ ಡಾ ರಶ್ಮಿ, 2014ರಲ್ಲಿ ಹುಬ್ಬಳಿಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡ್ತಿದ್ದ ವೇಳೆ ಕೊಪ್ಪಳ ಮೂಲದ ದಂಪತಿ ಪರಿಚಯವಾಗಿತ್ತು. ಬುದ್ಧಿಮಾಂದ್ಯ ಮಗುವಿನ ಆರೈಕೆ ಮಾಡುತ್ತಿದ್ದ ದಂಪತಿಗೆಡಾ. ರಶ್ಮಿ ಪರಿಚಯ ಆಗಿತ್ತು. ಈ ವೇಳೆ ಬಾಡಿಗೆ ತಾಯಿ ಮೂಲಕ ಮಗು ಪಡೆಯಬಹುದು ಎಂದಿದ್ದ ಡಾ ರಶ್ಮಿ, ಅಂಡಾಣು ಮತ್ತು ವಿರ್ಯಾಣು ಪಡೆದಿದ್ದರು. ಆದರೆ ಯಾವುದೇ ಬಾಡಿಗೆ ತಾಯಿಗೆ ಇಂಜೆಕ್ಟ್ ಮಾಡಿರ್ಲಿಲ್ಲ. ನಿಮ್ಮ ಮಗು ಬೇರೆಯವರ ಹೊಟ್ಟೆಯಲ್ಲಿ ಬೆಳೀತಿದೆ ಅಂತ ಸಬೂಬು ಹೇಳಿ, ಅಂತಿಮವಾಗಿ ಮಗು ಕಳವು ಮಾಡಿ ಮಡಿಲು ಸೇರಿಸಿದ್ರು.

ತನಿಖೆ ಹೇಗೆಲ್ಲಾ ನಡೀತು ಗೊತ್ತಾ..?

2020 ರ ಮೇ 29 ರಂದು ಮಗು ಕಳವು ಆದ್ಮೇಲೆ ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡಿದ್ರು. ಅಸ್ಪಷ್ಟವಾಗಿ ಕಾಣಿಸ್ಯಿದ್ದ ವಿಡಿಯೋ ಆಧಾರದಲ್ಲಿ ರೇಖಾಚಿತ್ರ ಬಿಡಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ರು. ಒಟ್ಟು ಏಳು ಸಾವಿರ ಮೊಬೈಲ್ ನಂಬರ್ ಪರಿಶೀಲನೆ ಮಾಡಿದ್ದ ಪೊಲೀಸರು, ಅನುಮಾನ ಬಂದ 600 ಜನರನ್ನು ವಿಚಾರಣೆ ಮಾಡಿದ್ದರು. ಈ ವೇಳೆ ಆರೋಪಿಯ ಸುಳಿವು ಪತ್ತೆಯಾಗಿತ್ತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಕೃತ್ಯ ಬಯಲಾಗಿತ್ತು. ಕೊಪ್ಪಳದಲ್ಲಿ ತಮ್ಮದೇ ಮಗು ಎಂದು ಮುದ್ದಾಡುತ್ತಿದ್ದವರಿಗೆ ಶಾಕ್ ಕಾದಿತ್ತು. ಪೊಲೀಸರು ಒಂದು ವರ್ಷದ ಕಂದಮ್ಮನನ್ನು ವಶಕ್ಕೆ ಪಡೆದು ಅಸಲಿ ತಂದೆ ತಾಯಿಗೆ ಒಪ್ಪಿಸಿದ್ರು.

ಕಳ್ಳತನಕ್ಕೆ ಕಾರಣವಾದ ಶಿಕ್ಷಣ ವ್ಯವಸ್ಥೆ..!?

ಬಾಡಿಗೆ ತಾಯಿ ಮೂಲಕ 15 ಲಕ್ಷ ಹಣ ಕೊಟ್ಟು ಮಗು ಪಡೆದಿದ್ದೇವೆ ಎಂದು ಕೊಪ್ಪಳದ ದಂಪತಿ ಹೇಳಿಕೊಂಡರು. ಆಗ ಆ ಹಣ ಎಲ್ಲಿದೆ ಎಂದು ಪೊಲೀಸರು ಕೇಳಿದಾದ ಡಾ ರಶ್ಮಿ ಕೊಟ್ಟ ಉತ್ತರ ಬೆಚ್ಚಿ ಬೀಳಿಸುವಂತಿತ್ತು. ವೈದ್ಯಕೀಯ ಶಿಕ್ಷಣ ಪಡೆಯಲು ಮಾಡಿದ್ದ ಸಾಲವನ್ನು ಮರುಪಾವತಿಸಲು ನಾನು ಮಗು ಕಳ್ಳತನ ಮಾಡಿದ್ದು. ನಾನು ಆ ಹಣದಿಂದ ಶಿಕ್ಷಣಕ್ಕಾಗಿ ಮಾಡಿದ್ದ ಸಾಲವನ್ನು ತೀರಿಸಿ ಸಾಲಮುಕ್ತಳಾಗಿದ್ದೇನೆ ಎಂದಿದ್ದಾರೆ. ಆರೋಪಿ ಡಾಕ್ಟರ್ ರಶ್ಮಿ ಓದಿದ ಬಳಿಕ ಉದ್ಯೋಗ ಮಾಡಿ ಸಾಲವನ್ನು ತೀರಿಸಬಹುದಿತ್ತು. ಆದರೆ ಸಾಲ ತೀರಿಸಲು ಅಡ್ಡದಾರಿ ಹಿಡಿದ ರಶ್ಮಿ ಕಂಬಿ ಹಿಂದೆ ಹೋಗಿದ್ದಾರೆ. ಶಿಕ್ಷಣ ವ್ಯವಸ್ಥೆಯಿಂದಲೇ ಡಾ ರಶ್ಮಿ ಕಳ್ಳಿ ಆದಳು ಎಂದು ಹೇಳಲು ಸಾಧ್ಯವಿಲ್ಲದಿದ್ದರೂ ಶಿಕ್ಷಣ ವ್ಯವಸ್ಥೆಯೂ ಕಾರಣ ಎಂದು ಖಂಡಿತವಾಗಿಯೂ ಹೇಳಬಹುದು.

Related Posts

Don't Miss it !