ಡೋಮಿನಸ್ ಪಿಜ್ಜಾದಲ್ಲಿ ಪ್ರೇಮ ಗಲಾಟೆ, ಕೆನ್ನೆಗೆ ಬಿತ್ತು ಬಾಸುಂಡೆ..!

ಪ್ರೀತಿ ಪ್ರೇಮ ಎನ್ನುವುದು ಎರಡು ಮನಸುಗಳ ನಡುವೆ ಹುಟ್ಟುವ ಕೂಸು. ಒಬ್ಬರಿಗೆ ಇಷ್ಟ ಆದ ಬಳಿಕ ಮತ್ತೊಬ್ಬರನ್ನು ಕೇಳುವುದು ಸಾಮಾನ್ಯ. ಇಷ್ಟವಿಲ್ಲದಿದ್ದರೆ ಪ್ರೇಮದ ಹಾರ ಕತ್ತರಿಸಿದಂತೆಯೇ ಸರಿ. ಆದರೆ ಇಲ್ಲೊಂದು ಕೇಸ್​ನಲ್ಲಿ ನಾನು ಲವ್​ ಮಾಡಲ್ಲ ಎಂದ ಯುವತಿಯ ಕೆನ್ನೆಗೆ ಬಾರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಳೆದ ತಿಂಗಳು ಘಟನೆ ನಡೆದಿದ್ದು, ಇದೀಗ ವಿಡಿಯೋ ವೈರಲ್​ ಆಗುವ ಮೂಲಕ ಆರೋಪಿಗೆ ಸಂಕಷ್ಟ ಎದುರಾಗಿದೆ. ಬೆಂಗಳೂರಿನ ರಾಮಕೃಷ್ಣ ಆಶ್ರಮ ರಸ್ತೆಯಲ್ಲಿರುವ ಡೋಮಿನಸ್​ ಪಿಜ್ಜಾದಲ್ಲಿ ಘಟನೆ ನಡೆದಿದೆ. ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮಂಗಳಾಗೌರಿ ಬಗ್ಗೆ ಇದೇ ಸಂಸ್ಥೆಯಲ್ಲಿ ಮ್ಯಾನೇಜರ್​ ಆಗಿದ್ದ ಪುರುಷೋತ್ತಮ್​ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಡೋಮಿನಸ್​ ಪಿಜ್ಜಾದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಯುವತಿ ಮಂಗಳಾಗೌರಿಯನ್ನು ಇಷ್ಟಪಟ್ಟಿದ್ದ. ಈ ಬಗ್ಗೆ ಮಂಗಳಾಗೌರಿ ಬಳಿಯೂ ಕೇಳಿಕೊಂಡಿದ್ದ. ಆದರೆ ಮಂಗಳಾಗೌರಿ ಈತನ ಮೇಲೆ ಮನಸಾಗದೆ ನಾನು ಒಲ್ಲೆ ಎಂದಿದ್ದಳು. ಆದರೆ ಇತ್ತೀಚಿಗೆ ಮಂಗಳಾಗೌರಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿಯುತ್ತಿದ್ದ ಹಾಗೆ ಕುಪಿತನಾದ ಮ್ಯಾನೇಜರ್​ ಪುರುಷೋತ್ತಮ್, ಕೆನ್ನೆಗೆ ಬಾರಿಸಿದ್ದು ಮಾತ್ರವಲ್ಲದೆ ಮನಸೋ ಇಚ್ಛೆ ಥಳಿಸಿದ್ದಾರೆ ಎನ್ನಲಾಗಿದೆ. ಆದರೆ ದೂರು ದಾಖಲು ಮಾಡಿದರೆ ಡೋಮಿನಸ್​ ಕಂಪನಿಯಿಂದ ಹೊರಗಟ್ಟುತ್ತಾರೆ ಎನ್ನುವ ಭಯದಲ್ಲಿ ಯುವತಿ ಸುಮ್ಮನಾಗಿದ್ದಳು. ಪ್ರಕರಣ ಬೆಳಕಿಗೆ ಬಾರದೆ ಮುಚ್ಚಿ ಹೋಗುವ ಹಂತ ತಲುಪಿತ್ತು. .

ಯುವತಿಯ ಕಪಾಳಕ್ಕೆ ಮ್ಯಾನೇಜರ್ ಪುರುಷೋತ್ತಮ್​ ಥಳಿಸುತ್ತಿದ್ದ ಹಾಗೆ ಹುಡುಗಿ ನೆಲದ ಮೇಲೆ ಬಿದ್ದಿದ್ದಳು, ಬೇರೊಬ್ಬ ಸಿಬ್ಬಂದಿ ಆಕೆಯನ್ನು ಎತ್ತಿ ಉಪಚರಿಸಿದ್ದಾನೆ. ಇಷ್ಟು ಮಾತ್ರ ಸಿಸಿಟಿವಿಯಲ್ಲಿ ರೆಕಾರ್ಡ್​ ಆಗಿರುವ ದೃಶ್ಯ. ಬಡತನ ಬೇಗೆಯಲ್ಲಿ ಬಳಲಿದ್ದ ಯುವತಿ ಕೇಸ್​ ರಂಪಾಟಕ್ಕೆ ಹೋಗದೆ ಎಂದಿನಿಂತೆ ಕೆಲಸ ಮಾಡುತ್ತಿದ್ದಳು. ಇದೀಗ ವಿಡಿಯೋ ವೈರಲ್​ ಆದ ಬಳಿಕ ಬಸವನಗುಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸೆಕ್ಷನ್​ 354ರ ಅಡಿಯಲ್ಲಿ ಸುಮೋಟೋ ಕೇಸ್​ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.

ಆರೋಪಿ ಪುರುಷೋತ್ತಮ್ ಕಳೆದ ಎರಡು ದಿನಗಳಿಂದಲೂ ಕೆಲಸಕ್ಕೆ ಬಂದಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಹಲ್ಲೆ ಘಟನೆ ನಡೆದು ಕೆಲವು ತಿಂಗಳುಗಳೇ ಕಳೆದು ಹೊಗಿವೆ. ಆದರೂ ಕೇಸ್​ ದಾಖಲಿಸಿ ಆರೋಪಿ ವಿರುದ್ಧ ಕಾನೂನು ರೀತಿಯ ಜರುಗಿಸುತ್ತೇವೆ ಎನ್ನುವುದು ಪೊಲೀಸ್​ ಮೂಲಗಳ ಮಾಹಿತಿ. ಯುವಕನ ಊರು ಹಾಗೂ ಯುವತಿಯ ಊರಿನ ವಿವರ ಕಲೆ ಹಾಕುತ್ತಿದ್ದು ಯುವಕನನ್ನು ಬಂಧಿಸಿದ ಬಳಿಕ ಏನೆಲ್ಲಾ ಮಾಹಿತಿಗಳು ಹೊರ ಬರಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.

https://thepublicspot.com/2021/05/27/%e0%b2%a7%e0%b2%b0%e0%b3%8d%e0%b2%ae%e0%b2%b8%e0%b3%8d%e0%b2%a5%e0%b2%b3%e0%b2%95%e0%b3%8d%e0%b2%95%e0%b3%86-%e0%b2%b9%e0%b3%8b%e0%b2%a6%e0%b2%be%e0%b2%97-%e0%b2%97%e0%b2%a1%e0%b2%be%e0%b2%af%e0%b2%bf/

Related Posts

Don't Miss it !