ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ಬರಬೇಡಿ.. ಸರ್ಕಾರದಿಂದ ಹೊಸ ಆದೇಶ..!

ಕರ್ನಾಟಕದಲ್ಲಿ ಕೊರೊನಾ ಸೋಂಕು ಅಬ್ಬರ ಶುರು ಮಾಡಿದೆ. ದಿನದಿಂದ ದಿನಕ್ಕೆ ಏಣಿ ಏರಿದ ಮಂಗನಂತೆ ಏರುಗತಿಯಲ್ಲಿ ಸಾಗುತ್ತಿದೆ. ರಾಜ್ಯದಲ್ಲಿ ಶನಿವಾರ ಒಂದೇ ದಿನ 32,793 ಹೊಸ ಪ್ರಕರಣಗಳು ದಾಖಲಾಗಿವೆ. ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಊಹೆಗೂ ನಿಲುಕದೆ ಅಟ್ಟಹಾಸ ನಡೆಸುತ್ತಿರುವ ಕೊರೊನಾ ಸೋಂಕು ಶನಿವಾರ ಒಂದೇ ದಿನ 22 ಸಾವಿರದ 284 ಜನರಲ್ಲಿ ಪತ್ತೆಯಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ವೇಗ ಶೇಕಡ 15ರಷ್ಟಾಗಿದೆ. ಶನಿವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಸೋಂಕಿತರ ಸಂಖ್ಯೆ 4,273 ಮಾತ್ರ. ಇನ್ನೂ ಬೆಂಗಳೂರಿನಲ್ಲಿ 5 ಜನ ಸೇರಿದಂತೆ ರಾಜ್ಯಾದ್ಯಂತ 7 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇನ್ನೂ ಕೂಡ ಕೊರೊನಾ ಸೋಂಕು ಹೆಚ್ಚಳ ಆಗುವ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ಸಾರ್ವಜನಿಕರಿಗೆ ಎಚ್ಚರಿಕೆ ರವಾನೆ ಮಾಡಿದೆ. ಕೇಂದ್ರ ಸರ್ಕಾರ ಕೂಡ ಮಕ್ಕಳ ಚಿಕಿತ್ಸೆಗೆ ಸಿದ್ಧತೆ ನಡೆಸಿದ್ದೇವೆ ಎನ್ನುವ ಮಾತನ್ನ ಹೇಳಿದೆ. ಇದರ ಜೊತೆಗೆ ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ಬರಬೇಡಿ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಆಸ್ಪತ್ರೆಯಲ್ಲೇ ಕೋವಿಡ್​ ಸೋಂಕು ಹರಡುವ ಸಾಧ್ಯತೆ..!

ಕೋವಿಡ್​ ಸೋಂಕು ಎಲ್ಲಿ ಯಾರಿಗೆ..? ಹರಡುತ್ತಿದೆ ಎಂದು ಹೇಳುವುದು ಕಷ್ಟಕರವಾಗಿದೆ. ಬೆಂಗಳೂರು ಸೇರಿದಂತೆ ಹಳ್ಳಿಗಾಡಿನ ಪ್ರದೇಶದಲ್ಲಿ ಸೋಂಕು ತನ್ನ ತೀವ್ರತೆಯನ್ನು ಹೆಚ್ಚಿಸಿದೆ. ತಜ್ಞರ ಪ್ರಕಾರ ಸೋಂಕಿನ ಇಳಿಮುಖ ಆರಂಭ ಆಗುವುದು ಫೆಬ್ರವರಿ ಮಧ್ಯಭಾಗದಿಂದ ಎನ್ನಲಾಗ್ತಿದೆ. ಒಮ್ಮೆ ಇಳಿಮುಖ ಆರಂಭವಾದರೆ ಸೋಂಕು ತನ್ನ ಶಕ್ತಿಯನ್ನು ಕಳೆದುಕೊಳ್ಳಲಿದೆ. ಅಲ್ಲೀವರೆಗೂ ಕನಿಷ್ಠ ಎರಡು ವಾರಗಳ ಕಾಲ ಸುಖಾಸುಮ್ಮನೆ ಅಂದರೆ ಚಿಕ್ಕಪುಟ್ಟ ರೋಗಗಳು ಇದ್ದವರು, ಹಲ್ಲು ನೋವು, ತಲೆ ನೋವು ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ಬರುವುದು ಬೇಡ. ಆಸ್ಪತ್ರೆಗೆ ಬಂದಾಗಲೂ ಕೊರೊನಾ ವೈರಸ್​ ನಿಮ್ಮನ್ನು ಆವರಿಸಿಕೊಳ್ಳುವ ಸಾಧ್ಯತೆ ಇದೆ. ಸದ್ಯಕ್ಕೆ ಆಸ್ಪತ್ರೆಗಳೇ ಕೊರೊನಾ ಸೋಂಕಿನ ಹಾಟ್​ಸ್ಪಾಟ್​ ಆಗಿರುವ ಸಾಧ್ಯತೆಗಳಿವೆ ಎನ್ನುವುದನ್ನು ಸರ್ಕಾರ ಪರೋಕ್ಷವಾಗಿ ಸಾರ್ವಜನಿಕರಿಗೆ ತಿಳಿಸಿದೆ.

Read This;

ಕೊರೊನಾ ಟೆಸ್ಟ್​ ಮಾಡಿಸಿದ ಬಳಿಕ ಅಡ್ಡಾಡುವಂತಿಲ್ಲ..!

ಸರ್ಕಾರ ಆಸ್ಪತ್ರೆಗೆ ಬರಬೇಡಿ ಎಂದಿರುವ ಕಾರಣಕ್ಕೆ ಅನಾರೋಗ್ಯ ಇದ್ದರೂ ಕೊರೊನಾ ಭಯದಲ್ಲಿ ಮನೆಯಲ್ಲಿ ಉಳಿಯದೆ, ತುರ್ತು ಪರಿಸ್ಥಿತಿ ವೇಳೆ ಆಸ್ಪತ್ರೆಗೆ ಹೋಗಲೇ ಬೇಕಿದೆ. ಆದರೆ ಸಣ್ಣಪುಟ್ಟ ಸಮಸ್ಯೆಗಳನ್ನು ಕೆಲವು ದಿನಗಳ ಕಾಲ ಮುಂದೂಡಿಕೆ ಮಾಡಿ ಎಂದಷ್ಟೇ ಸರ್ಕಾರ ಹೇಳಿದೆ. ಇದರ ಜೊತೆಗೆ ಸರ್ಕಾರ ಮತ್ತೊಂದು ಸೂಚನೆಯನ್ನು ಕೊಟ್ಟಿದ್ದು, ಕೊರೊನಾ ತಪಾಸಣೆಗೆ ಒಳಪಟ್ಟ ಬಳಿಕ ಸಾರ್ವಜನಿಕ ಸ್ಥಳಗಳಿಗೆ ಹೋಗುವಂತಿಲ್ಲ. ಕಟ್ಟುನಿಟ್ಟಾಗಿ ಹೋಂ ಐಸೋಲೇಷನ್​ ಪಾಲಿಸಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಕೊರೊನಾ ಪರೀಕ್ಷೆ ಫಲಿತಾಂಶ ಬರುವ ತನಕ ಬೇಕಾಬಿಟ್ಟಿ ಓಡಾಡುವುದಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಕೊರೊನಾ ಟೆಸ್ಟ್ ಮಾಡಿಸಿದ ಬಹುತೇಕರಲ್ಲಿ ಕೊರೊನಾ ಪಾಸಿಟಿವ್ ಬರುತ್ತಿದೆ. ಟೆಸ್ಟ್​ಗೆ ಸ್ಯಾಂಪಲ್​ ಕೊಟ್ಟ ಬಳಿಕ ಅಡ್ಡಾದಿಡ್ಡಿ ಸಂಚಾರ ಮಾಡಿದಾಗ ಇನ್ನಷ್ಟು ಜನರ ಸೋಂಕಿಗೆ ಕಾರಣವಾಗುವ ಸಂಭವ ಹೆಚ್ಚು ಎನ್ನುವುದು ಸರ್ಕಾರದ ಆತಂಕ.

Also Read:

ಈ ಬಾರಿ ಜನರಲ್ಲಿ ಕಡಿಮೆ ಆಗಿದೆ ಕೊರೊನಾ ಭಯ..!

ಕೊರೊನಾ ಮೊದಲ ಹಾಗೂ ಎರಡನೇ ಅಲೆ ವೇಳೆ ಕೊರೊನಾ ವೈರಸ್​ಗಿಂತಲೂ ಕೊರೊನಾ ಭಯವೇ ಹೆಚ್ಚು ಬಲಿ ಪಡೆಯಿತು ಎಂದರೆ ಸುಳ್ಳಲ್ಲ. ಆದರೆ ಈ ಬಾರಿ ಜನರು ಕೊರೊನಾವನ್ನು ಧೈರ್ಯವಾಗಿ ಹೆದರಿಸುತ್ತಿದ್ದಾರೆ. ಮನೋಶಾಸ್ತ್ರದ ಪ್ರಕಾರ ಮಾನಸಿಕ ಧೈರ್ಯ ಎನ್ನುವುದು ಅರ್ಧ ಗೆಲುವು ತಂದುಕೊಡುವ ಅಸ್ತ್ರ ಎನ್ನುತ್ತಾರೆ ತಜ್ಞರು. ಅರ್ಧ ಗೆಲುವು ಸಿಕ್ಕ ಮೇಲೆ ಇನ್ನರ್ಧ ಗೆಲುವು ಸುಲಭ ಆಗುತ್ತದೆ. ಇದೇ ರೀತಿ ಕಳೆದ ಬಾರಿ ನೆಗಡಿ, ಶೀತ, ಕೆಮ್ಮು ಆದ ಕೂಡಲೇ ಆಸ್ಪತ್ರೆಗೆ ಓಡಿ ಹೋಗಿ ದಾಖಲಾಗುವ ಜನರ ಸಂಖ್ಯೆ ಹೆಚ್ಚಿತ್ತು. ಇದರಿಂದಲೇ ಆಸ್ಪತ್ರೆಗಳಲ್ಲಿ ಬೆಡ್​ ಸಮಸ್ಯೆ ಆಗಿ, ಅದರಲ್ಲೂ ಕಮಾಯಿ ಮಾಡಿಕೊಳ್ಳುವ ನೀಚರು ಸೃಷ್ಟಿಯಾದರು. ಆದರೆ ಈ ಬಾರಿ ನೆಗಡಿ, ಶೀತ, ಕೆಮ್ಮು, ಜ್ವರ ಬಂದರೆ ತಾವೇ ಒಂದೆರಡು ಮಾತ್ರೆ ಸೇವಿಸಿ, ಬಿಸಿ ನೀರು ಕುಡಿಯುವ ಜನರ ಧೈರ್ಯ, ಕೊರೊನಾ ಸೋಂಕನ್ನು ಬಡಿದೋಡಿಸಿದೆ. ಹೀಗಂದ ಮಾತ್ರಕ್ಕೆ ಆರೋಗ್ಯದಲ್ಲಿ ಸಮಸ್ಯೆ ತೀವ್ರವಾಗುವ ತನಕ ಕಾಯದೆ, ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುವುದನ್ನು ಮನಗಂಡರೆ ಆಸ್ಪತ್ರೆಗೆ ದಾಖಲಾಗುವುದು ಸೂಕ್ತ. ಆದರೆ ಭಯಬೇಡ, ಕೊರೊನಾ ಸೋತು ಹೋಗುತ್ತದೆ.

Related Posts

Don't Miss it !