ಐಶಾರಾಮಿ ಈಗಲ್​ಟನ್​ ರೆಸಾರ್ಟ್​ ಒಳಗೆ ನಡೆದ ಜೋಡಿ ಕೊಲೆ..!

ದಾವಣಗೆರೆಯಲ್ಲಿ ಇತ್ತೀಚಿಗೆ ಜೋಡಿ ಕೊಲೆ ಒಂದು ನಡೆದಿತ್ತು. ವೃದ್ಧ ದಂಪತಿ ವಾಸವಿದ್ದ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು, ವಯೋವೃದ್ಧರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಆ ಬಳಿಕ ಮೂವರ ಬಂಧನ ಮಾಡಲಾಗಿತ್ತು. ಕೊಟ್ಟ ಸಾಲ ವಾಪಸ್​ ಕೇಳಿದ್ದಕ್ಕೆ ಕೊಲೆ ಮಾಡಿದ್ದರು ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಇದೀಗ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಸಿಗುವ ಈಗಲ್​ಟನ್​ ರೆಸಾರ್ಟ್​ನಲ್ಲಿ ವೃದ್ಧರಿಬ್ಬರ ಕೊಲೆ ನಡೆದಿದೆ. ಏರ್​​ಫೋರ್ಸ್​ನ ನಿವೃತ್ತ ಪೈಲಟ್​ ಕೊಲೆ ಆಗಿದೆ. ಬಿಡದಿ ಬಳಿಯ ಈಗಲ್​ಟನ್​ ರೆಸಾರ್ಟ್​ನ ವಿಲ್ಲಾದಲ್ಲಿ ನಿವೃತ್ತಿ ಬಳಿಕ ಜೀವನ ನಡೆಸುತ್ತಿದ್ದ ದಂಪತಿ ಕಳೆದ ಮೂರು ವರ್ಷಗಳ ಹಿಂದಷ್ಟೇ ಸ್ವಂತಕ್ಕೆ ವಿಲ್ಲಾ ಖರೀದಿ ಮಾಡಿದ್ದರು. ಸುಖವಾಗಿ ನಿವೃತ್ತಿ ಜೀವನ ಕಳೆಯುತ್ತಿದ್ದ ದಂಪತಿ ಈಗ ಶವವಾಗಿದ್ದಾರೆ. ಪೊಲೀಸರು ಮಾತ್ರ ಶೀಘ್ರದಲ್ಲೇ ಬಂಧನ ಮಾಡುವ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಹಿಜಬ್​ ಕಿಚ್ಚು, ಶಾಲಾ ಕಾಲೇಜಿಗೆ ರಜೆ, ಸರ್ಕಾರದಲ್ಲೇ ಗೊಂದಲ..!

ಮೃತ ದಂಪತಿ

ಸುತ್ತಿಗೆ ಇಂದ ತಲೆಗೆ ಹೊಡೆದು ಭೀಕರ ಹತ್ಯೆ..!

ಬಿಡದಿ ಬಳಿಯ ಈಗಲ್​ಟನ್ ರೆಸಾರ್ಟ್​ನ C ಬ್ಲಾಕ್​ನಲ್ಲಿ ಈ ಜೋಡಿ ಕೊಲೆ ನಡೆದಿದೆ. ಸುಮಾರು 70 ವರ್ಷ ವಯಸ್ಸಿನ ರಘುರಾಜನ್ ಹಾಗೂ ಅವರ ಪತ್ನಿ 63 ವಯಸ್ಸಿನ ಆಶಾ ಕೊಲೆಯಾಗಿರುವ ದಂಪತಿ. ಮೂಲತಃ ತಮಿಳುನಾಡು ಮೂಲದವರಾದ ಇವರಿಗೆ ಇಬ್ಬರು ಮಕ್ಕಳಿದ್ದು, ದೆಹಲಿಯಲ್ಲಿ ವಾಸವಾಗಿದ್ದಾರೆ. ನಿವೃತ್ತಿಯಾದ ಬಳಿಕ ರೆಸಾರ್ಟ್​ನಲ್ಲಿ ವಿಲ್ಲಾ ಖರೀದಿ ಮಾಡಿದ್ದ ರಘುರಾಜನ್​, ಇಲ್ಲೇ ನಿವೃತ್ತಿ ಜೀವನ ಕಳೆಯುವ ನಿರ್ಧಾರ ಮಾಡಿದ್ದರು. ಆದರೆ, ಇದೀಗ ಬಿಗಿ ಭದ್ರತೆಯ ವಿಲ್ಲಾದಲ್ಲೇ ಕೊಲೆ ಆಗಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ ರಾಮನಗರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಂತೋಷ್​ ಬಾಬು ಹಾಗೂ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮನೆಯ ಸೆಕ್ಯೂರಿಟಿ ಹೊರಗಡೆ ಹೋದಾಗ ಈ ಕೊಲೆ ನಡೆದಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ವೇಶ್ಯಾವಾಟಿಕೆಗೆ ಕಾಲೇಜು ಯುವತಿಯರು ಬಲಿ..? ಪೋಷಕರೇ ಇರಲಿ ಎಚ್ಚರ..

ಮನೆ ಕೆಲಸದ ಕಾರ್ಮಿಕನ ಮೇಲೆಯೇ ಶಂಕೆ..!

ಮನೆಯಲ್ಲಿ ವಯೋವೃದ್ಧರಾದ ಗಂಡ ಹೆಂಡತಿ ಮಾತ್ರ ವಾಸವಿದ್ದರು. ಸಹಾಯಕ್ಕಾಗಿ ಮನೆ ಕೆಲಸಕ್ಕೆ ಆಳುಗಳು ಬರುತ್ತಿದ್ದರು ಎನ್ನಲಾಗಿದೆ. ಇನ್ನೂ ಭದ್ರತೆಗೆ ನೇಮಿಸಲಾಗಿದ್ದ ಸೆಕ್ಯೂರಿಟಿ ಗಾರ್ಡ್​ ಹೊರಕ್ಕೆ ಹೋಗಿದ್ದರು ಎನ್ನಲಾಗಿದ್ದು, ಅದೇ ಸಮಯದಲ್ಲಿ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದು, ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೇ ಹಣ, ಒಡವೆಗಾಗಿ ಕೊಲೆ ಮಾಡಿ ಪರಾರಿಯಾದನೇ ಎನ್ನುವ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಅಥವಾ ಸೆಕ್ಯೂಟಿರಿ ಗಾರ್ಡ್​ ಕೊಲೆ ಮಾಡಿ ಬೇರೊಂದು ಕಥೆ ಕಟ್ಟುತ್ತಿರಬಹುದು ಎನ್ನುವ ಅನುಮಾನವೂ ರಾಮನಗರ ಪೊಲೀಸರನ್ನು ಕಾಡುತ್ತಿದೆ. ಆದರೆ ನಿವೃತ್ತಿ ಜೀವನವನ್ನು ಪ್ರಶಾಂತ ವಾತಾವರಣದಲ್ಲಿ ಕಳೆಯುವ ಉದ್ದೇಶದಿಂದ ನಗರದ ಹೊರಗೆ ಮನೆ ಮಾಡಿದ್ದು ಜೀವಕ್ಕೆ ಮುಳುವಾಗಿದೆ ಎನ್ನುವುದು ವಿಪರ್ಯಾಸ.

ಶ್ವಾನದಳ, ಬೆರಳಚ್ಚು ತಜ್ಞರು ಸೇರಿದಂತೆ ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ಶುರು ಮಾಡಿದ್ದು, ಈಗಾಗಲೇ ಆರೋಪಿಗಳ ಬಗ್ಗೆ ನಮಗೆ ಸುಳಿವು ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಬಂಧನ ಮಾಡುವ ಭರವಸೆಯನ್ನೂ ನೀಡಿದ್ದಾರೆ. ಆದರೆ ನಿವೃತ್ತ ಜೀವನಕ್ಕೆ ಆಯ್ಕೆ ಮಾಡಿಕೊಂಡಿದ್ದ ಜಾಗ ಯಮಲೋಕಕ್ಕೆ ದಾರಿಯಾಯಿತು ಎನ್ನುವುದಷ್ಟೇ ಉಳಿದ ವಿಲ್ಲಾಗಳಲ್ಲಿ ವಾಸವಾಗಿರುವ ಜನರ ಮಾತನಾಗಿದೆ. ಜೋಡಿ ಕೊಲೆ ನಡೆದ ಬಳಿಕ ವಿಲ್ಲಾ ಖರೀದಿ ಮಾಡಿ ಜೀವನ ನಡೆಸುತ್ತಿರುವ ಜನರಿಗೆ ಮತ್ತಷ್ಟು ಆತಂಕ ಎದುರಾಗಿದೆ. ಭದ್ರತೆ ಬಗ್ಗೆ ಜನರು ಭಯಭೀತರಾಗಿದ್ದಾರೆ. ಕಳೆದ ಒಂದೆರಡು ವರ್ಷಗಳ ಹಿಂದೆ ಕಾಂಗ್ರೆಸ್​ ಶಾಸಕರಾಗಿದ್ದ ಆನಂದ್​ ಸಿಂಗ್​ ಹಾಗೂ ಕಂಪ್ಲಿ ಗಣೇಶ್​ ಗಲಾಟೆಯಿಂದ ಖ್ಯಾತಿ ಪಡೆದಿದ್ದ ಈಗಲ್​ಟನ್​ ರೆಸಾರ್ಟ್​ ಮತ್ತೆ ಚರ್ಚೆಗೆ ಬಂದಿದೆ.

Related Posts

Don't Miss it !