Dr. ರಾಜಕುಮಾರ್​ ಅವರ ಯೋಗಗುರು ಕೊರೊನಾದಿಂದ ಸಾವು!!

ನಟ ಸಾರ್ವಭೌಮ ಡಾ. ರಾಜಕುಮಾರ್ ಅವರ ಯೋಗ ಗುರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಯೋಗ ಗುರು ಆಗಿದ್ದ ಹೊನ್ನಪ್ಪ ನಾಯ್ಕರ್​ಗೆ ಕೊರೊನಾ ಸೋಂಕು ತಗುಲಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. 90 ವರ್ಷ ವಯಸ್ಸಿನ ಹೊನ್ನಪ್ಪ ನಾಯ್ಕರ್ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸ್​ ಇಲಾಖೆಯಲ್ಲಿ ಕೆಲಸ ಮಾಡುತ್ತಲೇ ಯೋಗಾಭ್ಯಸದಲ್ಲಿ ತೊಡಗಿದ್ದ ಹೊನ್ನಪ್ಪ ನಾಯ್ಕರ್ ನಂತರ ಸಂಪೂರ್ಣವಾಗಿ ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊoಡಿದ್ದರು. ಡಾ. ರಾಜಕುಮಾರ್ ಸೇರಿದಂತೆ ಹಲವಾರು ಗಣ್ಯರಿಗೆ ಯೋಗ ಹೇಳಿಕೊಡುತ್ತಿದ್ದರು.

ಡಾ.ಹೆಚ್.ಎಫ್.ನಾಯ್ಕರ್ ಅವರು ಕೆಎಸ್‌ಆರ್‌ಪಿಯಲ್ಲಿಡಿಐಜಿ ಆಗಿ ನಿವೃತ್ತರಾಗಿದ್ದರು. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದವರಾದ ಡಾ. ಹೊನ್ನಪ್ಪ ಎಫ್. ನಾಯ್ಕರ್​ಸುಮಾರು ಐದು ದಶಕಗಳಿಂದ ಬೆಂಗಳೂರಿನ ಜೆಪಿ ನಗರದಲ್ಲಿ ವಾಸಿಯಾಗಿದ್ದರು.

ಕನಕಪುರ ರಸ್ತೆಯ ಬಿ.ಎಂ.ಕಾವಲ್‌ನಲ್ಲಿ ಮಹಾಯೋಗಕ್ಷೇತ್ರ ಸ್ಥಾಪಿಸಿ ವರನಟ ಡಾ.ರಾಜ್‌ಕುಮಾರ್​ ಸೇರಿದಂತೆ ಅನೇಕ ರಾಜಕಾರಣಿಗಳು, ನಟರು, ನ್ಯಾಯಾಧೀಶರು, ಹಿರಿಯ ಅಧಿಕಾರಿಗಳು ಹಾಗೂ ಸಹಸ್ರಾರು ಜನರಿಗೆ ” ಮುತ್ತಿನ ನಡುಮನೆ” ಮಾರ್ಗದ ಮೂಲಕ ಹಠಯೋಗದ ಸಾಧನೆ ಮಾಡಿಸಿದ್ದರು. ಪ್ರತಿ ಭಾನುವಾರ ವಾರಾಂತ್ಯದ ಯೋಗ ತರಬೇತಿ ನೀಡುತ್ತಿದ್ದರು. ಅರ್ಥಪೂರ್ಣವಾದ ಯೋಗ, ತತ್ವಪದಗಳನ್ನು ರಚಿಸಿ ಸ್ವತಃ ತಾವೇ ಹಾಡುತ್ತಿದ್ದರು. ಕರ್ನಾಟಕ ಸರ್ಕಾರವು 1996ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು 2002 ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದವು. ಉಳಿದಂತೆ ನಾಡಿನ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದವು.

ಡಾ. ಹೊನ್ನಪ್ಪ ಎಫ್. ನಾಯ್ಕರ್​ ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಪುತ್ರರು ಸೇರಿ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.ಕನಕಪುರದ ಬಳಿಯ ನಾಗದೇವನಹಳ್ಳಿಯಲ್ಲಿ ಹೊನ್ನಪ್ಪ ನಾಯ್ಕರ್ ಅವರ ಅಂತಿಮ ಸಂಸ್ಕಾರ ನೆರವೇರಿಸಲು ಕುಟುಂಬದವರು ತೀರ್ಮಾನಿಸಿದ್ದಾರೆ.

Related Posts

Don't Miss it !