James: ಡಾ ಪುನೀತ್ ರಾಜ್‍ಕುಮಾರ್ ‘ಅಭಿ’ಮಾನಿಗಳಿಗೆ ಗುಡ್ ನ್ಯೂಸ್.. ಜೇಮ್ಸ್‌ ಚಿತ್ರದಲ್ಲಿ ಒರಿಜಿನಲ್ ವಾಯ್ಸ್..!!

ಕರ್ನಾಟಕ ರತ್ನ ಡಾ ಪುನೀತ್ ರಾಜ್‌ಕುಮಾರ್ ಅಭಿನಯದ ಕಟ್ಟ ಕಡೆಯ ಚಿತ್ರ ಜೇಮ್ಸ್. ಈ ಚಿತ್ರ ಇತ್ತೀಚಿಗೆ ರಿಲೀಸ್ ಆಗಿತ್ತು. ಅಪ್ಪು ಅಭಿಮಾನಿಗಳು ಚಿತ್ರವನ್ನು ಕಣ್ತುಂಬಿಕೊಂಡಿದ್ದರು. ಆದರೆ ಪುನೀತ್ ರಾಜ್‍ಕುಮಾರ್ ಧ್ವನಿ ಕೇಳಿಸದ ಬೇಸರ ಎಲ್ಲರನ್ನೂ ಕಾಡಿತ್ತು. ಅದರಲ್ಲೂ ಅಪ್ಪು ಅಭಿಮಾನಿಗಳು ಪುನೀತ್ ಶೈಲಿಯಲ್ಲಿ ಮಿಮಿಕ್ರಿ ಮಾಡಿಸಿದ್ದರೂ ಒಳ್ಳೆಯದಿತ್ತು. ಡಾ ಶಿವರಾಜ್‌ಕುಮಾರ್ ವಾಯ್ಸ್ ಅಪ್ಪುಗೆ ಸರಿ ಹೊಂದುತ್ತಿಲ್ಲ ಎನ್ನುತ್ತ ಮನಸಲ್ಲೇ ಮಂಡಿಗೆ ತಿಂದಿದ್ದರು. ಅಭಿಮಾನಿಗಳ ಆಸೆ ಈಡೇರುವ ಸಂತಸದ ಸುದ್ದಿ ಹೊರಬಿದ್ದಿದೆ. ಅದು ಅಪ್ಪು ವಾಯ್ಸ್‌ನಲ್ಲೇ ಜೇಮ್ಸ್ ಮತ್ತೊಮ್ಮೆ ತೆರೆ ಮೇಲೆ ಅಪ್ಪಳಿಸಲು‌ ದಿನಾಂಕ ನಿಗದಿಯಾಗಿದೆ.

ಅಪ್ಪು ವಾಯ್ಸ್ ಸಿಕ್ಕಿದ್ದು ಎಲ್ಲಿ..? ಟಿವಿಗಳಿಗೆ ಯಾಕೆ ಥ್ಯಾಂಕ್ಸ್..!?

ಕರುನಾಡಿನಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಖ್ಯಾತಿ ಪಡೆದ ಸ್ಯಾಂಡಲ್‌ವುಡ್‌ನ ಅರಸ ಅಪ್ಪು ಕೊನೆಯ ಚಿತ್ರ ಜೇಮ್ಸ್‌ನಲ್ಲಿ ಪುನೀತ್ ವಾಯ್ಸ್ ಮಿಕ್ಸಿಂಗ್ ಆಗಿದೆ. ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿ ಇದ್ದಾಗ ಹೃದಯಸ್ತಂಭನಕ್ಕೆ ಒಳಗಾದ ಪುನೀತ್ ರಾಜ್‍ಕುಮಾರ್ ಡಬ್ಬಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಅಮೆರಿಕ ಸೇರಿದಂತೆ ಸಾಕಷ್ಟು ಕಂಪನಿಗಳನ್ನು ಸಂಪರ್ಕಿಸಿದ್ದ ಜೇಮ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ಅಂತಿಮವಾಗಿ ಶಿವರಾಜ್‌ಕುಮಾರ್ ಅವರಿಂದ ಡಬ್ಬಿಂಗ್ ಮಾಡಿಸಿ ಸಿನಿಮಾ ಬಿಡುಗಡೆ ಮಾಡಿಸಲಾಗಿತ್ತು. ಅಪ್ಪು ಅಭಿಮಾನಿಗಳು ಜೇಮ್ಸ್ ಹಬ್ಬವನ್ನೇ ಮಾಡುವ ಮೂಲಕ ನೆಚ್ಚಿನ ನಾಯಕನಿಗೆ ವಿಶೇಷ ಗೌರವ ಸಲ್ಲಿಸಿದ್ದರು. ಇದೀಗ ಮತ್ತೊಮ್ಮೆ ಅಪ್ಪು ವಾಯ್ಸ್‌ನಲ್ಲೇ ಜೇಮ್ಸ್ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳ ಪಾಲಿಗೆ ಒದಗಿ ಬಂದಿದೆ. ಏಪ್ರಿಲ್ 22 ರಂದು ಪುನೀತ್ ವಾಯ್ಸ್‌ ಇರುವ ಸಿನಿಮಾ ಬಿಡುಗಡೆ ಆಗಲಿದೆ.

ನಟ ಪ್ರಭಾಸ್‌ ಪಾನ್ ಇಂಡಿಯಾ ಚಿತ್ರಕ್ಕೆ ನಡೀತಿತ್ತು ಪ್ಲ್ಯಾನ್..!

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರವನ್ನು ಪ್ರಭಾಸ್ ವಾಯ್ಸ್‌ನಲ್ಲೇ ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಜನೆ ನಡೀತಿತ್ತು. ಈ ನಡುವೆ ಅಪ್ಪು ನಿಧನರಾದರು. ಆ ವೇಳೆ ಜೇಮ್ಸ್ ಚಿತ್ರ ತಂಡ ಶೂಟಿಂಗ್ ವೇಳೆ ರೆಕಾರ್ಡ್ ಆಗಿದ್ದ ಆಡಿಯೋ ಕೊಟ್ಟು ಡೆವಲಪ್ ಮಾಡಲು ಸಾಧ್ಯವೇ ಎಂದು ಹೈದ್ರಾಬಾದ್ ಮೂಲದ ಕಂಪನಿಯನ್ನು ಕೇಳಿಕೊಂಡಿತ್ತು. ಆದರೆ ಈ ಕಂಪನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಪ್ಪು ಈ ಹಿಂದೆ ಮಾತನಾಡಿದ್ದ ಆಡಿಯೋಗಳನ್ನು ಬಳಸಿಕೊಂಡು ಜೇಮ್ಸ್ ಚಿತ್ರಕ್ಕೆ ಸಂಪೂರ್ಣ ಪುನೀತ್ ರಾಜ್‍ಕುಮಾರ್ ವಾಯ್ಸ್ ಮಿಕ್ಸಿಂಗ್ ಮಾಡುವಲ್ಲಿ ಯಶಸ್ಸು ಸಾಧಿಸಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಸಿನಿಮಾ ಮರು ಬಿಡುಗಡೆ ಬಗ್ಗೆ ಚಿತ್ರ ತಂಡ ಹೇಳಿಕೊಂಡಿದೆ. ಟಿವಿ ಮಾಧ್ಯಮಗಳು ನಡೆಸಿದ್ದ ಸಂದರ್ಶನದ ವೀಡಿಯೋದಲ್ಲೂ ಆಡಿಯೋ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ‌ ಚಿತ್ರದ ನಿರ್ಮಾಪಕರು ಮಾಧ್ಯಮಗಳಿಗೂ ಥ್ಯಾಂಕ್ಸ್ ಹೇಳಿದ್ದಾರೆ.‌

ವಿಶ್ವಾದ್ಯಂತ ಜೇಮ್ಸ್ ಸಿನಿಮಾ ರಿಲೀಸ್‌ಗೆ ನಡೆದಿದೆ ಕಸರತ್ತು..!!

ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್ ಹಾಗು ನಿರ್ಮಾಪಕ ಕಿಶೋರ್ ಕೊಂಡಾಲ ನೀಡಿರುವ ಮಾಹಿತಿ ಪ್ರಕಾರ, ಈಗಾಗಲೇ ಸಿನಿಮಾದ ತುಣುಕುಗಳನ್ನು ನಟ ಡಾ ಶಿವರಾಜ್‌ಕುಮಾರ್ ಸೇರಿದಂತೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಕೂಡ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವೇ ದಿನಗಳಲ್ಲಿ ಜೇಮ್ಸ್ ಮರು ಬಿಡುಗಡೆ ಆಗಲಿದ್ದು, ಅದಕ್ಕೂ ಮೊದಲು ಕಂಪ್ಲೀಟ್ ಸಿನಿಮಾವನ್ನು ಶಿವರಾಜ್‌ಕುಮಾರ್ ಸೇರಿದಂತೆ ಪ್ರಮುಖರಿಗೆ ತೋರಿಸುವ ವ್ಯವಸ್ಥೆ ಮಾಡಲಾಗ್ತಿದೆ. ಆ ಬಳಿಕ ಶಿವರಾಜ್‌ಕುಮಾರ್ ಅವರೇ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಈಗಾಗಲೇ ಪುನೀತ್ ವಾಯ್ಸ್ ಮಿಕ್ಸ್ ಆಗಿರುವ ಒಂದು ತುಣುಕನ್ನು ಬಿಡುಗಡೆ ಮಾಡಿದ್ದು, ಸಾಧುಕೋಕಿಲ ನಡುವಿನ ಸಂಭಾಷಣೆ ಜನರ ಮನಸ್ಸಿಗೆ ಅಪ್ಪು ಆತ್ಮಿಯತೆ ಮೂಡಿಸುವಂತಿದೆ ಎನ್ನಬಹುದು. ಕನ್ನಡದಲ್ಲಿ ಮೊದಲಿಗೆ ರಿಲೀಸ್ ಆಗ್ತಿತ್ತು, ಆಯ್ದ ಬೇರೆ ಬೇರೆ ದೇಶಗಳಲ್ಲಿ ಅಪ್ಪು ವಾಯ್ಸ್ ಜೊತೆಗೆ ಫ್ಯಾನ್ಸ್ ಶೋ ಆಯೋಜನೆ ಮಾಡುವ ಬಗ್ಗೆಯೂ ಚರ್ಚೆ ಶುರುವಾಗಿದೆ.

Related Posts

Don't Miss it !