ದಾರಿ ತಪ್ಪಿದ ಇಂದಿನ ಸಮಾಜಕ್ಕೆ ಅತ್ಯಗತ್ಯ ನಾ ಕಂಡ ‘ತಪ್ತ’

ಸಮಾಜ ಹಾದಿ ತಪ್ಪಿದೆ ಎಂದು ಹೇಳುವುದಕ್ಕೆ ಸಾವಿರಾರು ಸಂಗತಿಗಳು ನಮ್ಮ ಮುಂದಿವೆ. ಅಭಿವೃದ್ಧಿಯ ಹೆಸರಲ್ಲಿ ಮಾನವ ನಡೆಸುತ್ತಿರುವ ದುಷ್ಕತ್ಯಗಳಿಗೆ ಲೆಕ್ಕವೇ ಸಿಗದಂತಾಗಿದೆ. ಅದರ ಜೊತೆಗೆ ಶಿಕ್ಷಣದ ಹೆಸರಲ್ಲಿ ವಿದ್ಯಾವಂತರಾದವರು ನಡೆದುಕೊಳ್ಳುತ್ತಿರುವ ರೀತಿ ನೀತಿಗಳನ್ನು ಕಂಡಾಗ ಸಮಾಜ ಎತ್ತ ಕಡೆಗೆ ಸಾಗುತ್ತಿದೆ ಎಂದೆನಿಸದೆ ಇರದು. ಉತ್ತಮ ಶಿಕ್ಷಣ ಪಡೆದ ಯುವಕ ಯುವತಿಯರು, ತಂದೆ ತಾಯಿಯನ್ನು ವೃದ್ಧಾಶ್ರಮಗಳಿಗೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ಹಣದ ವ್ಯಾಮೋಹಕ್ಕೆ ಸಿಲುಕಿರುವ ಯುವ ಸಮುದಾಯ ಸಂಬಂಧಗಳನ್ನು ಕಡಿದುಕೊಂಡು ಯಾಂತ್ರಿಕ ಬದುಕಿಗೆ ತೆರೆದುಕೊಳ್ತಿದ್ದಾರೆ. ಈ ರೀತಿಯ ಮನಸ್ಥಿತಿ ಹೊಂದಿದ ಜನರಿಗಾಗಿ ‘ತಪ್ತ’ ರೂಪಗೊಂಡಿದೆ.

ತಂದೆ ತಾಯಿ ಮಕ್ಕಳಿಗಾಗಿ ಏನೆಲ್ಲಾ ಮಾಡ್ತಾರೆ ಎಂಬ ಕಿಂಚಿತ್ತು ಅರಿವು ಇಲ್ಲದ ವಿದ್ಯಾವಂತ ಮೂಢರು ತಂದೆ ತಾಯಿಯನ್ನು ಹೀನಾಯವಾಗಿ ಕಾಣುತ್ತಾರೆ. ಇನ್ನೊಂದು ಕಡೆ ನಿಜವಾದ ಮೂಢರು, ತನ್ನನ್ನು ಓದಿಸಲಿಲ್ಲ, ಎಂಜಿನಿಯರ್, ಡಾಕ್ಟರ್ ಮಾಡಲಿಲ್ಲ, ನಿಮ್ಮಿಂದ ನಾನು ಕಷ್ಟ ಪಡುವಂತಾಯ್ತು ಎನ್ನುವ ಭ್ರಮೆಗೆ ಒಳಗಾಗಿ ತಂದೆ ತಾಯಿಯ ಅಂತಿಮ ಕಾಲದಲ್ಲಿ ಹಿಂಸೆ ಕೊಡುವುದನ್ನು ಕಾಣುತ್ತೇವೆ. ಆದರೆ ಆ ತಂದೆ ತಾಯಿಯನ್ನು ಕಳೆದುಕೊಂಡು ಅವರ ಪ್ರೀತಿ ಸಿಗದಿದ್ದಾಗ ಅಥವಾ ತಮ್ಮದೇ ಮಕ್ಕಳು ತಮ್ಮನ್ನು ನಿಷ್ಕೃಷ್ಟವಾಗಿ ಕಂಡಾಗ ತಮ್ಮ ತಪ್ಪಿನ ಅರಿವು ಆಗುವುದು ಸಾಮಾನ್ಯ. ಇದನ್ನ ತಿಳಿಸಿಕೊಡುವುದೇ ‘ತಪ್ತ’ ಉದ್ದೇಶ.

ಬೆಂಗಳೂರಿನ ಶೇಷಾದ್ರಿಪುರಂ ಕಾನೂನು ವಿದ್ಯಾಲಯದಲ್ಲಿ ‘ತಪ್ತ’ ಎನ್ನುವ ಏಕವ್ಯಕ್ತಿ ರಂಗ ಪ್ರಯೋಗ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾನೂನು ವ್ಯಾಸಂಗ ಮಾಡುವ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಮಧು ಎಂ ಬೆಂಗಳೂರು ನಿರ್ದೇಶನದ ಈ ನಾಟಕವನ್ನು ರಂಗದಲ್ಲಿ ಅಭಿನಯಿಸಿದ್ದು ರಾಯಚೂರು ಮೂಲದ ಕಲಾವಿದ ವಿಶ್ವನಾಥ್ ಸ್ವಾಮಿ ಹೆಚ್.ಎಂ ಮನಮುಟ್ಟುವಂತೆ ಅಭಿನಯಿಸಿದ್ದು, ಶಿವು ನಾಟಕ ರಚನೆ ಮಾಡಿದ್ದಾರೆ. ಭಿಕ್ಷಾಟನೆ ಮಾಡುವ ಸಿದ್ದಪ್ಪನ ಜೊತೆಗೆ ಮಗ ನಡೆಸುವ ಮಾತುಕತೆ ಈ ನಾಟಕ ಸಾರಾಂಶ. ಅಂತಿಮವಾಗಿ ನಾಟಕ ನೋಡಿದ ಪ್ರತಿಯೊಬ್ಬ ವಿದ್ಯಾರ್ಥಿಯ ಕಣ್ಣಂಚು ಒದ್ದೆಯಾಗುವಂತೆ ಮಾಡಿದ್ದು ತಪ್ತ.

ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡುವ ಸಿದ್ದಪ್ಪ, ತನಗಿದ್ದ ಒಬ್ಬನೇ ಮಗನನ್ನು ಉಳಿಸಿಕೊಳ್ಳಲು ಸಾಕಷ್ಟು ಕಷ್ಟಪಟ್ಟಿದ್ದ. ಮಗು ಉಳಿಯುವುದಿಲ್ಲ ಎಂದು ವೈದ್ಯರು ಹೇಳಿದಾಗ ಕಂದನನ್ನು ಉಳಿಸಿಕೊಳ್ಳಲು, ಸಾಕಷ್ಟು ಶ್ರಮ ಪಟ್ಟಿದ್ದರು. ಅಪ್ಪನ ಪ್ರೀತಿ ನಿಧಾನವಾಗಿ ಜವಾಬ್ಧಾರಿ ವರ್ಗಾವಣೆಗೆ ತಿರುಗಿತ್ತು. ಮಗನಿಗೆ ಬುದ್ಧಿ ಕಲಿಸುವ ಉದ್ದೇಶದಿಂದ ಮಗನಿಗೆ ಪೆಟ್ಟು ಕೊಡಲು ಮುಂದಾಗಿದ್ದ. ಕಲಾವಿದನಾಗುವ ಮಗನ ಆಸೆಗೆ ತಂದೆ ಅಡ್ಡಿ ಮಾಡಿದ್ದ. ಕಲಾವಿದ ಬಗ್ಗೆ ಯಾರೋ ಅಪಸ್ವರ ಎತ್ತಿದ್ದರು ಎನ್ನವ ಕಾರಣಕ್ಕೆ ಅಪ್ಪ‌ ಮಗನನ್ನು ಬೆಂಬಲಿಸಿರಲಿಲ್ಲ. ಆ ಬಳಿಕ ನಗರ ಪ್ರದೇಶಕ್ಕೆ ಕಳುಹಿಸಿ ಮಗನನ್ನು ಓದಿಸಿದ್ದ. ಅಷ್ಟರಲ್ಲಿ ಮಗನಿಗೆ ಮದುವೆ ಆಯ್ತು, ಅಪ್ಪ ಅಮ್ಮನ ಮೇಲೆ ಮಗನಿಗೆ ಮಮಕಾರ ಕಡಿಮೆ ಆಯ್ತು.

ಹಣದ ಮೇಲೆ ವ್ಯಾಮೋಹ ಹೆಚ್ಚಾಗಿತ್ತು. ವಯಸ್ಸಾದ ಅಪ್ಪ ಅಮ್ಮನನ್ನು ಸಾಕುವುದು ಮಗನಿಗೆ ಬೇಕಾಗಿರಲಿಲ್ಲ. ಇದೇ ಕಾರಣದಿಂದ ಅಪ್ಪ ಅಮ್ಮನನ್ನು ದಾರಿ ಕಾಣದ ಕಾಡಿನ ನಡುವೆ ಬಿಟ್ಟು ಹೋಗುವ ಕೆಲಸ ಮಾಡುತ್ತಾನೆ. ಆಗ ಆ ವೃದ್ಧ ದಂಪತಿಗಳು ಹೇಳುವ ಮಾತು ಎಂತಹ ಕಟುಕರ ಮನಸ್ಸನ್ನೂ ಕ್ಷಣಕಾಲ ಕಲಕಿಬಿಡುತ್ತದೆ. “ಮಗಾ, ನಮ್ಮನ್ನು ಬಿಟ್ಟು ಹೋಗಬೇಡಪ್ಪ, ನಿನ್ನ ಮಕ್ಕಳು ನಿನ್ನ ಬುದ್ಧಿಯನ್ನೇ ಕಲಿತಾರು, ನಿನಗೆ ಸಮಸ್ಯೆ ಆದಿತು ಅನ್ನೋ ಭಯ ನಮ್ಮದು” ಎಂದರಂತೆ. ಇದನ್ನು ನೆನಪು ಮಾಡಿಕೊಂಡು ಮಗ ಪಶ್ಚಾತ್ತಾಪ ಪಡುವುದೇ ತಪ್ತಾ ನಾಟಕದ ತಿರುಳು. ಆದರೆ ಸತ್ತ ಮೇಲೆ ಪಶ್ಚಾತ್ತಾಪ ಮಾಡಿಕೊಂಡರೆ ಸತ್ತ‌ ತಂದೆ ತಾಯಿ ವಾಪಸ್ ಬರುವವರೇ..? ಎನ್ನುವ ಪ್ರಶ್ನೆ ಎಲ್ಲರ ಮನಸಲ್ಲೂ ಮೂಡಿತ್ತು. ಅದರ ಜೊತೆಗೆ ನಾವೂ ಕೂಡ ಕೆಲವೊಮ್ಮೆ ತಂದೆ ತಾಯಿಯನ್ನು ಹಿಯ್ಯಾಳಿಸಿರುತ್ತೇವೆ, ಕ್ಷಮೆ ಕೇಳಬೇಕು ಎನ್ನುವ ಭಾವನೆ ಎಲ್ಲರಲ್ಲೂ ಮೂಡಿತ್ತು.‌ ಸಾಧ್ಯವಾದರೆ‌ ಕಲಾವಿದರನ್ನು ಸಂಪರ್ಕಿಸಿ, ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಿ.

Related Posts

Don't Miss it !