‘ಚುನಾವಣೆ ಗೆಲ್ಲುವ ಮುಂಚೆ ಹೇಳಿದ ಮಾತಿಗೆ ಗೆದ್ದ ಮೇಲೆ ಬೆಲೆಯಿಲ್ಲ’ – ಶಾಸಕ ಎನ್​ ಮಹೇಶ್​

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಕ್ಷೇತ್ರದ ಬಿಎಸ್​ಪಿ ಶಾಸಕ ಎನ್​ ಮಹೇಶ್​ ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಚುನಾವಣೆ ಗೆಲ್ಲುವ ಮುಂಚೆ ಹೇಳಿದ ಮಾತು ಚುನಾವಣೆಯಲ್ಲಿ ಗೆದ್ದ ಬಳಿಕ ನಡೆಯೋದಿಲ್ಲ ಎಂದು ಮೈಸೂರಿನಲ್ಲಿ ಹೇಳಿದ್ದಾರೆ. ರೋಷಾವೇಶದಲ್ಲಿ ಮಾತನಾಡುವುದು, ಭರವಸೆಗಳನ್ನು ಕೊಡುವುದು, ದೇವಸ್ಥಾನಗಳಿಗೆ ಹೋಗಿ ಭಕ್ತಿಭಾವ ತೋರಿಸುವುದು ಕೇವಲ ತೋರಿಕೆಗೆ ಮಾತ್ರ ಎನ್ನುವುದು ಅರ್ಥವಾಗಿದೆ. ಅದೇ ಕಾರಣಕ್ಕೆ ಬಿಎಸ್​ಪಿ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದೇನೆ ಎಂದಿದ್ದಾರೆ. ತಾಯಿ ಮೋಸ ಮಾಡಿದ್ರೆ ಮಗ ಮೋಸ ಮಾಡಬಹುದು..!

ಬಿಎಸ್‌ಪಿ ಪಕ್ಷ ನನ್ನ ತಾಯಿ ಎಂದು ಹೇಳಿದ್ದ ಮಾತು ಬಿಜೆಪಿ ಸೇರಿದ ಬಳಿಕ ಸಾಕಷ್ಟು ವೈರಲ್​ ಆಗಿದೆ. ಈ ಬಗ್ಗೆ ಮಾತನಮಾಡಿರುವ ಎನ್​ ಮಹೇಶ್​, ತಾಯಿಯಿಂದಲೇ ನನಗೆ ಮೋಸ ಆಗಿದೆ. ತಾಯಿಯೇ ಮಗನಿಗೆ ಮೋಸ ಮಾಡಿದಾಗ ಮಗ ಏನು ಮಾಡಬೇಕು. ಮಗ ಅನಾಥನಾಗಿದ್ದ, ಹೀಗಾಗಿ ರಾಜಕೀಯವಾಗಿ ದಾರಿ ಕಂಡುಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ತಾಯಿಯಿಂದ ಮೋಸ ಏನಾಯ್ತು ಎನ್ನುವುದನ್ನು ಎನ್​ ಮಹೇಶ್​ ಅವರು ಸ್ಪಷ್ಟಪಡಿಸಿಲ್ಲ.

ಸಮಯ ವ್ಯರ್ಥ ಮಾಡಬೇಡಿ, ಪಕ್ಷ ಕಟ್ಟಿ..!

ಪಕ್ಷ ನನ್ನ ತಾಯಿ ಎಂದು ಹೇಳಿದ್ದ ವಿಡಿಯೋ ವೈರಲ್​ ಮಾಡುತ್ತಿರುವ ಬಿಎಸ್​ಪಿ ಕಾರ್ಯಕರ್ತರಿಗೆ ಟಾಂಗ್​ ಕೊಟ್ಟಿರುವ ಶಾಸಕ ಎನ್​ ಮಹೇಶ್​, ನನ್ನನ್ನು ಟ್ರೋಲ್ ಮಾಡುತ್ತಿರುವವರು ಯಾರು ಎಂಬುದು ನನಗೆ ಗೊತ್ತಿದೆ. ಬಿಎಸ್‌ಪಿ ಗೆಳೆಯರಿಗೆ ನಾನು ಹೇಳುವುದಿಷ್ಟೆ. ನನ್ನನ್ನು ಟ್ರೋಲ್ ಮಾಡಿಕೊಂಡು ಸಮಯ ವ್ಯರ್ಥ ಮಾಡಬೇಡಿ. ಆ ಸಮಯವನ್ನು ಬಿಎಸ್‌ಪಿ ಪಕ್ಷ ಕಟ್ಟಲು ಬಳಸಿ. ನನ್ನನ್ನು ಟ್ರೋಲ್ ಮಾಡುತ್ತಿರುವವರಿಗೆ ಮಲೆ ಮಹದೇಶ್ವರ ಸ್ವಾಮಿ ಒಳೆಯದು ಮಾಡಲಿ ಎನ್ನುವ ಮೂಲಕ ಟ್ರೋಲ್​ ಮಾಡಿದ್ರೂ ನಾನು ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆಲ್ತೇನೆ. ನೀವು ಬಿಎಸ್​ಪಿ ಕಟ್ಟಿ ಸವಾಲು ಕೊಡಿ ಎನ್ನುವ ಭಾವನೆ ವ್ಯಕ್ತಪಡಿಸಿದ್ದಾರೆ.

ಹೋರಾಟದ ವೇಳೆ ಮಾತನಾಡಿದ್ದಕ್ಕೆ ಅರ್ಥ ಬೇರೆ..!!

ಪಕ್ಷ ನನ್ನ ತಾಯಿ ಎಂದಿದ್ದು ಅವತ್ತಿನ ರಾಜಕೀಯ ಸಂದರ್ಭಕ್ಕೆ ಹೇಳಿದ್ದ ಮಾತದು. ಇವತ್ತಿನ ನೆಲೆಯಲ್ಲಿ ನಿಂತು ನೋಡಬಾರದು. ಹೋರಾಟಗಳ ವೇಳೆ ಹೇಳಿದ ಮಾತೇ ಬೇರೆ. ಆ ಮಾತುಗಳು ಅಧಿಕಾರ ಸ್ಥಾನಕ್ಕೆ ಬಂದಾಗ ನಡೆಯಲ್ಲ ಎಂದು ಅರ್ಥವಾಗಿದೆ. ಕಾಂಗ್ರೆಸ್​ನಲ್ಲಿ ಸ್ಥಾನಗಳು ಇಲ್ಲ. ನನಗೆ ಬಿಜೆಪಿ ಸೇರುವುದು ಬಿಟ್ಟು ಬೇರೆ ಯಾವುದೇ ದಾರಿ ಇರಲಿಲ್ಲ. ಮುಂದೆ ಚುನಾವಣಾ ರಾಜಕಾರಣವನ್ನೇ ಬಿಡಬೇಕಿತ್ತು. ಹೀಗಾಗಿ ಬಿಜೆಪಿ ಸೇರಿದ್ದೇನೆ. ಎಲ್ಲ ಸಮುದಾಯದವರೂ ವೋಟ್ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಚಿಂತನೆ, ಆಲೋಚನೆ, ಬದ್ಧತೆ ಯಾವುದೇ ಪಕ್ಷಕ್ಕೆ ಹೋದರೂ ಅದನ್ನು ನಾನು ಉಳಿಸಿಕೊಳ್ಳುತ್ತೇನೆ ಎನ್ನುವ ಮೂಲಕ ಸೈದ್ಧಾಂತಿಕ ನಿಲುವು ಬದಲಾಗಲ್ಲ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಎನ್​ ಮಹೇಶ್​..!

ಗುರುವಾರ ಅಷ್ಟೇ ಬಿಜೆಪಿಗೆ ಸೇರ್ಪಡೆ ಆಗಿರುವ ಎನ್​ ಮಹೇಶ್​ಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಹೇಳಲಾಗ್ತಿದೆ. ಬಿಜೆಪಿ ಪಕ್ಷವನ್ನು ಸೇರದೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ಬಿಜೆಪಿ ಸೇರ್ಪಡೆ ಆಗಿದ್ದಾರೆ ಎನ್ನಲಾಗ್ತಿದೆ. ಎನ್.ಮಹೇಶ್ ಬಲಗೈ ಸಮುದಾಯಕ್ಕೆ ಸೇರಿದ್ದು, ಹಳೇ ಮೈಸೂರು ಭಾಗದಲ್ಲಿ ಹೆಚ್ಚಾಗಿರುವ ಈ ಸಮುದಾಯದ ಜನರನ್ನು ಬಿಜೆಪಿ ವೋಟ್​ ಬ್ಯಾಂಕ್​ ಮಾಡಿಕೊಳ್ಳುವ ಉದ್ದೇಶ ಬಿಜೆಪಿಯದ್ದು ಎನ್ನುವ ಮಾಹಿತಿ ಹರಿದಾಡ್ತಿದೆ. ಇನ್ನೂ ಹಾಲಿ ಚಾಮರಾಜನಗರ ಸಂಸದ ಶ್ರೀನಿವಾಸ್​ ಪ್ರಸಾದ್​ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಸ್ಥಾನಕ್ಕೆ ಎನ್​ ಮಹೇಶ್​ ಅವರನ್ನು ಬಿಜೆಪಿ ಹುಡುಕಿದೆ ಎನ್ನಲಾಗ್ತಿದೆ.

Related Posts

Don't Miss it !