ಪೆಟ್ರೋಲ್​ ಜೊತೆಗೆ ವಿದ್ಯುತ್​ ಶಾಕ್​..! ನಿಮ್ಮ ಮನೆ ಕರೆಂಟ್ ಬಿಲ್​ ಹೆಚ್ಚಳ..!

ಬಡ ಜನರ ಬದುಕಿಗೆ ಬರೆ ಎಳೆದ ಸರ್ಕಾರ..!

ಕೊರೊನಾ ಇಡೀ ಮಾನವ ಸಂಕುಲವನ್ನು ಸಂಕಷ್ಟ ದೂಡಿದೆ. ಈ ಸಂಕಷ್ಟದ ಸ್ಥಿತಿಯಲ್ಲಿ ಜನರ ಹಾಗೆ ಸರ್ಕಾರವೂ ಸಂಕಷ್ಟಕ್ಕೆ ಒಳಗಾಗಿದೆ ಎನ್ನುವುದು ಸತ್ಯವಾದ ಸಂಗತಿ ಕೂಡ ಹೌದು. ಆದರೆ ಸರ್ಕಾರ ಖಜಾನೆ ಭರ್ತಿ ಮಾಡಿಕೊಳ್ಳುವ ಉದ್ದೇಶದಿಂದ ಬಡ ಬಗ್ಗರ ಮೇಲೆ ಗಧಾಪ್ರಹಾರ ನಡೆಸುವುದು ಎಷ್ಟು ಸರಿ..? ಎನ್ನುವ ಪ್ರಶ್ನೆ ಎದುರಾಗಿದೆ. ಕೊರೊನಾ ಲಾಕ್​ಡೌನ್​ ಸೇರಿದಂತೆ ಸಾಕಷ್ಟು ಜನರು ವೇತನವಿಲ್ಲದೆ ಮನೆ ಬಾಡಿಗೆ ಕೂಡ ಪಾವತಿ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಇನ್ನೂ ಲಾಕ್​ಡೌನ್​ ಮುಕ್ತಾಯಕ್ಕೆ ಜೂನ್​ 14ರ ತನಕ ಕಾಯಬೇಕಿದೆ. ಆದರೆ ಅಷ್ಟರೊಳಗಾಗಿ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಕೆಪಿಟಿಸಿಎಲ್​ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಪೆಟ್ರೋಲ್​ ಬೆಲೆ ಗಗನಕ್ಕೆ ಹಿಂಬಾಲಿಸಿದ ವಿದ್ಯುತ್​ ದರ..!

ರಾಜ್ಯ ಸೇರಿದಂತೆ ದೇಶದಲ್ಲಿ ಪೆಟ್ರೋಲ್​, ಡೀಸೆಲ್ ಬೆಲೆ ಈಗಾಗಲೇ ಗಗನಕ್ಕೆ ಏರಿದೆ. ಒಂದು ಲೀಟರ್​ ಪೆಟ್ರೋಲ್​ ದರ ಇತಿಹಾಸದಲ್ಲೇ ಮೊದಲು ಎನ್ನುವಂತೆ ಶತಕ ದಾಟಿ ಮುಂದೆ ಹೋಗುತ್ತಿದೆ. ಡೀಸೆಲ್ ದರ ಕೂಡ ಶತಕದ ಕಡೆಗೆ ದಾಪುಗಾಲು ಹಾಕಿದೆ. ಈ ನಡುವೆ ವಿದ್ಯುತ್ ದರವನ್ನು ಯೂನಿಟ್​ಗೆ 30 ಪೈಸೆ ಹೆಚ್ಚಳ‌ ಮಾಡಿ ಕೆಪಿಟಿಸಿಎಲ್ ಆದೇಶ ಹೊರಡಿಸಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಈ ಆದೇಶ ಹೊರಡಿಸಿದ್ದು, ನೂತನ ದರ ಎಪ್ರಿಲ್ 1, 2021 ರಿಂದಲೇ ಪೂರ್ವಾನ್ವಯ ಆಗುವಂತೆ ಆದೇಶ ಮಾಡಲಾಗಿದೆ. ಬೆಸ್ಕಾಂ ಸೇರಿದಂತೆ 5 ನಿಗಮಗಳಿಂದ ಪ್ರತಿ ಯೂನಿಟ್​ಗೆ 135 ಪೈಸೆ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೀಗ 30 ಪೈಸೆ ಹೆಚ್ಚಳ ಮಾಡಲಾಗಿದೆ.

ನಿಮ್ಮ ಮನೆ ಬಿಲ್​ ಎಷ್ಟು ಹೆಚ್ಚಾಗುತ್ತೆ ಗೊತ್ತಾ..?

ಗ್ರಾಮೀಣ ಭಾಗದಲ್ಲಿ ಒಂದು ಯೂನಿಟ್​ ವಿದ್ಯುತ್​ 3.90 ರಿಂದ 4 ರೂಪಾಯಿಗೆ ಹೆಚ್ಚಳ ಮಾಡಿದೆ. ಅಂದರೆ ಕೇವಲ 50 ಯೂನಿಟ್​ ತನಕ ಈ ದರ ಅನ್ವಯ ಆಗಲಿದೆ. 51 ರಿಂದ 100 ಯೂನಿಟ್​ ವಿದ್ಯುತ್​ ದರವನ್ನು Rs. 5.15 ರಿಂದ Rs. 5.25ಕ್ಕೆ ಏರಿಕೆಯಾಗಿದೆ. 101 ರಿಂದ 200 ಯೂನಿಟ್ ತನಕ Rs 6.70 ರಿಂದ Rs 6.80ಕ್ಕೆ ಏರಿಸಲಾಗಿದೆ. 200 ಯೂನಿಟ್ ಮೇಲ್ಪಟ್ಟ ದರವನ್ನು 7.55 ರಿಂದ 7.65ಗೆ ಏರಿಸಲಾಗಿದೆ. ಅಂದರೆ ಪ್ರತಿ ತಿಂಗಳು ನಿಮ್ಮ ಮನೆಯಲ್ಲಿ 201 ಯೂನಿಟ್​ ವಿದ್ಯುತ್​ ವೆಚ್ಚ ಆಗ್ತಿದೆ ಎಂದರೆ ಅಂದಾಜು 40 ಪೈಸೆ ದರ ಹೆಚ್ಚಾಗಿದ್ದು, ಮನೆಯ ಬಿಲ್​ ಹೆಚ್ಚುವರಿಯಾಗಿ 40 ಪೈಸೆ ಹೊರೆ ಬೀಳಲಿದೆ. ಈ ಲೆಕ್ಕಾಚಾರ ಬೆಸ್ಕಾಂ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗೆ ಸೇರುವ ಗ್ರಾಮಗಳಿಗೆ ಮಾತ್ರ ಅನ್ವಯವಾಗಲಿದೆ. ಇನ್ನು ಉಳಿದ ಎಲ್ಲಾ ಎಸ್ಕಾಂಗಳ ಗ್ರಾಮೀಣ ಭಾಗದಲ್ಲೂ ಹಾಲಿ ದರದ ಮೇಲೆ ಇದೇ ಪ್ರಮಾಣದ ಏರಿಕೆಯಾಗಿದೆ.

ವಿದ್ಯುತ್​ ದರ ಏರಿಕೆಯಲ್ಲಿ ಸಮಾಧಾನ ವಿಚಾರ..!

ಪೆಟ್ರೋಲ್​ ದರ ದುಬಾರಿ ಎನ್ನುವಾಗ ಜನರ ದೃಷ್ಟಿ ಎಲೆಕ್ಟ್ರಿಕ್ ಚಾಲಿತ ವಾಹನಗಳ ಕಡೆಗೆ ದೃಷ್ಟಿ ಹಾಯಿಸಿದ್ದಾರೆ. ಆದ್ರೆ ಎಲೆಕ್ಟ್ರಿಕ್ ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳಿಗೆ ರಿಯಾಯ್ತಿ ವಿದ್ಯುತ್ ಕೊಡಲಾಗಿದೆ. ಧರ್ಮಾರ್ಥವಾಗಿ ಖಾಸಗಿ ಸಂಸ್ಥೆಗಳು ನಡೆಸುವ ಆಸ್ಪತ್ರೆಗಳು, ಶಾಲೆಗಳ ವಿದ್ಯುತ್ ದರವನ್ನು ಯೂನಿಟ್​ಗೆ 10ಪೈಸೆ ಹೆಚ್ಚಳ ಮಾಡಲಾಗಿದೆ. ಬೆಂಗಳೂರು ಮೆಟ್ರೋ ಸಂಸ್ಥೆಗೆ ನೀಡುವ ವಿದ್ಯುತ್​ ದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಹೀಗಾಗಿ ಮೆಟ್ರೋ ದರದಲ್ಲಿ ಯಾವುದೇ ಬದಲಾವಣೆ ಆಗಲಾರದು. ಸಾರ್ವಜನಿಕ ಬೀದಿ ದೀಪಗಳಲ್ಲಿ ಎಲ್​ಇಡಿ ಬಲ್ಬ್ ಬಳಸಿದ್ದರೆ ರಿಯಾಯಿತಿ ಮುಂದುವರಿಯುತ್ತದೆ. ಮೊದಲ ಹಂತದ ಯೂನಿಟ್ ಟ್ಯಾರಿಫ್ ಅನ್ನು 30 ಯೂನಿಟ್​ನಿಂದ 50 ಯೂನಿಟ್​ಗೆ ಹೆಚ್ಚಳ ಮಾಡಿರುವುದು ನೆಮ್ಮದಿಯ ವಿಚಾರ.

Related Posts

Don't Miss it !