ಗೆದ್ದು ಬಿದ್ದ ಬಿಜೆಪಿ, ಜೆಡಿಎಸ್​​ಗೆ ಮುಖಭಂಗ, ಕಹಿ ನಡುವೆ ಕಾಂಗ್ರೆಸ್​​ಗೆ ಸಿಹಿ..!

ವಿಧಾನ ಪರಿಷತ್​ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಮೂರೂ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಸೋಲಿನ ಬಿಸಿ ತಟ್ಟಿದೆ. ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 02 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.  ಬಿಜೆಪಿ ಕಳೆದ ಬಾರಿಗಿಂತಲೂ 5 ಸ್ಥಾನಗಳನ್ನು ಹೆಚ್ಚಾಗಿ ಗೆದ್ದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಿದೆ. ಆಡಳಿತ ಪಕ್ಷವಾಗಿ ಬಿಜೆಪಿಯ ಸಾಧನೆ ಅಷ್ಟಕ್ಕಷ್ಟೇ ಎನ್ನಬಹುದು. ಈ ಫಲಿತಾಂಶ ಕಾಂಗ್ರೆಸ್ ಕೂಡ ಬಿಜೆಪಿ‌ ಪಕ್ಷದಷ್ಟೇ ಬಲಾಢ್ಯ ಎಂಬುದನ್ನು ಸಾಬೀತು ಮಾಡಿದೆ.

ಬಿಜೆಪಿ ಸೋತಿದ್ದು ಯಾವ ಕ್ಷೇತ್ರದಲ್ಲಿ ಗೊತ್ತಾ..? ಯಾಕೆ..?

ಬಿಜೆಪಿ ಕಳೆದ ಬಾರಿಗಿಂತಲೂ BJP 5 ಸ್ಥಾನವನ್ನು ಹೆಚ್ಚಾಗಿ ಗೆದ್ದಿರುವ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ಆದರೆ ಪರಿಷತ್‌ನಲ್ಲಿ‌ಈ ಬಾರೊ ಬಹುಮತ ಪಡೆಯುವ ವಿಶ್ವಾಸದಲ್ಲಿದ್ದ ನಾಯಕರಿಗೆ ನಿರಾಸೆಯಾಗಿದೆ. ಅದರಲ್ಲೂ ಬೆಳಗಾವಿಯಲ್ಲಿ ಮಹಾಂತೇಶ್ ಕವಟಗಿಮಠ ಸೋಲುಂಡು, ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಬಂಡಾಯವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ಕಮಲ ಪಾಳಯದಲ್ಲಿ‌ ತಳಮಳ ಸೃಷ್ಟಿಸಿದೆ. ಇನ್ನೂ ವಿಜಯಪುರದಲ್ಲಿ ಕಾಂಗ್ರೆಸ್‌ ನಾಯಕ ಎಂ.ಬಿ ಪಾಟೀಲ್ ಸಹೋದರ ಸುನಿಲ್‌ಗೌಡ ಪಾಟೀಲ್ ಮೊದಲ ಪ್ರಾಶಸ್ತ್ಯ ಪಡೆದು ಗೆಲುವು ಸಾಧಿಸಿದ್ದರು. ಆ ಬಳಿಕ ಬಿಜೆಪಿಯ ಪಿ.ಹೆಚ್ ಪೂಜಾರ್ ಪಕ್ಷೇತರ ಅಭ್ಯರ್ಥಿ ಜೊತೆಗೆ ಪೈಪೋಟಿ ನಡೆಸಿ ಅಂತಿಮವಾಗಿ ಕೇವಲ 17 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇನ್ನು ಚಿಕ್ಕಮಗಳೂರಲ್ಲಿ ಬಿಜೆಪಿ ಪ್ರಾಬಲ್ಯವಿದ್ದರೂ ಕೇವಲ 6 ಮತಗಳಿಂದ ಗೆಲುವು ಸಾಧಿಸಿದ್ದಾರೆ. 

ಕಾಂಗ್ರೆಸ್ ಕಡಿಮೆ ಸ್ಥಾನ ಆದರೂ ಪವರ್ ಪ್ರದರ್ಶನ..!

ಕಾಂಗ್ರೆಸ್ ಪಕ್ಷ ಕಳೆದುಕೊಂಡಿದ್ದು 14 ಸ್ಥಾನಗಳನ್ನು. ಆದರೆ ಗೆಲುವು ಸಾಧಿಸಿದ್ದು 11 ಸ್ಥಾನ ಮಾತ್ರ. ಆದರೂ ಕಾಂಗ್ರೆಸ್ ಸಾಧನೆ ಹೇಳಿಕೊಳ್ಳುವಂತಿದೆ.  ಅದಕ್ಕೆ ಕಾರಣ ಇಷ್ಟೆ. ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸೋಲಿನ ರುಚಿ ತೋರಿಸುವ ಶಪಥ ಮಾಡಿದ್ದರೂ ಗೆಲುವಿನ ಕೇಕೆ ಹಾಕಿದೆ. ಅದರಲ್ಲೂ ಮೈಸೂರಿನಲ್ಲಿ ಜೆಡಿಎಸ್ ಹಿಂದಿಕ್ಕಿ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವು ದಾಖಲಿಸಿದೆ. ಜೆಡಿಎಸ್ ಭದ್ರಕೋಟೆ ಎನಿಸಿಕೊಂಡಿದ್ದ ಮಂಡ್ಯದಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ಯಶಸ್ಸು ಕಂಡಿದೆ. ಇನ್ನೂ ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರದಲ್ಲೂ ಜೆಡಿಎಸ್ ಪಕ್ಷವನ್ನು ಮಕಾಡೆ ಮಲಗಿಸಿದೆ. ಧಾರವಾಡದಲ್ಲಿ‌ಮಾಜಿ ಸಿಎಂ ಸಹೋದರ ಪ್ರದೀಪ್ ಶೆಟ್ಟರ್ ಎರಡನೇ ಸ್ಥಾನ ಪಡೆಯುವಂತೆ ಮಾಡಿದೆ. ಆಡಳಿತ ಪಕ್ಷಕ್ಕೆ ಸರಿ ಸಮಾನವಾದ ಪೈಪೋಟಿ ನೀಡಿರುವುದು ಮುಂದಿನ ಚುನಾವಣೆಗೆ ಚೈತನ್ಯ ನೀಡಿದೆ ಎನ್ನಬಹುದು.

ಜೆಡಿಎಸ್ ಪಕ್ಷಕ್ಕೆ ತೀವ್ರ ಮುಖಭಂಗ, ಗೆಲ್ಲುವ ಹುಮ್ಮಸ್ಸಿಗೆ ಹಿನ್ನಡೆ..!

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 123 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರ ಹಿಡಿಯುವ. ಜೆಡಿಎಸ್ ಹುಮ್ಮಸ್ಸಿಗೆ ಪರಿಷತ್ ಚುನಾವಣೆ ತಣ್ಣೀರು ಎರೆಚಿದಂತಾಗಿದೆ. ನಾವು ಪ್ರಬಲವಾಗಿದ್ದು ಗೆಲ್ಲುವ ಕ್ಷೇತ್ರಗಳಲ್ಲಿ ಮಾತ್ರವೇ ಸ್ಪರ್ಧೆ ಮಾಡ್ತೇವೆ ಎಂದಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಆರು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿ ಕಣಕ್ಕಿಳಿಸುವ ನಿರ್ಧಾರ ಮಾಡಿದ್ರು. ಆದರೆ ಗೆದ್ದಿದ್ದು ಮಾತ್ರ ಕೇವಲ ಎರಡು ಸ್ಥಾನಗಳಲ್ಲಿ. ಅದರಲ್ಲಿ ಒಂದು ಜೆಡಿಎಸ್ ತವರು ಜಿಲ್ಲೆ ಹಾಸನದಲ್ಲಿ ರೇವಣ್ಣ ಪುತ್ರ ಸೂರಜ್ ರೇವಣ್ಣ ಹಾಗೂ ಇನ್ನೊಂದು ಮೈಸೂರಿನಲ್ಲಿ‌ ಬಿಜೆಪಿ ಜೊತೆಗೆ ಎರಡನೇ ಸ್ಥಾನಕ್ಕೆ ಗುದ್ದಾಡಿ ತಿಣುಕಾಡಿ ಗೆದ್ದಿದ್ದು‌ ಮಂಜೇಗೌಡ. ಇನ್ನುಳಿದಂತೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಮುಖಭಂಗ ಆಗಿದ್ದು ಸತ್ಯ.

Related Posts

Don't Miss it !