ಕಾಂಗ್ರೆಸ್​ನವರ ಬಗ್ಗೆ ಈಶ್ವರಪ್ಪ ಹೇಳಿದ್ದೇನು..? ಕಾಂಗ್ರೆಸ್ ಕೆಂಡವಾಗಿದ್ದು ಯಾಕೆ..?

ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಕೆ.ಎಸ್​ ಈಶ್ವರಪ್ಪ ಇತ್ತೀಚಿಗೆ ಸಾಕಷ್ಟು ಸುದ್ದಿಯಾಗಿದ್ದಾರೆ. ಪ್ರಚೋದನೆ ಹೇಳಿಕೆ ನೀಡಿದ್ದ ಬೆನ್ನಲ್ಲೇ ಮತ್ತೊಮ್ಮೆ ನಾಲಿಗೆ ಹರಿಯಬಿಟ್ಟಿದ್ದಾರೆ. ಪ್ರಚೋದನೆ ಮಾಡಿದ್ದಕ್ಕೆ ಕಾಂಗ್ರೆಸ್​​ ನಾಯಕರು ಈಶ್ವರಪ್ಪ ಜೋಕರ್​ ಎಂದಿದ್ದರು. ಕಾಂಗ್ರೆಸ್​ ನಾಯಕರ ಮಾತಿಗೆ ತೀವ್ರ ಉದ್ವೇಗದಿಂದ ಮಾತನಾಡಿದ ಸಚಿವರು, ಕಾಂಗ್ರೆಸ್​ ಕುಡುಕ ಡ್ಯಾಶ್​ ಮಕ್ಕಳು ಎಂದು ಬಿಟ್ಟರು. ಮಾತಿನ ಬರದಲ್ಲಿ ಆಡಿದ ಕೆಟ್ಟ ಮಾತಿನ ಬಗ್ಗೆ ಕೆಲ ಸಮಯದಲ್ಲೇ ಅರಿವಿಗೆ ಬಂದಿತ್ತು. ಕೂಡಲೇ ಕೋಪದಲ್ಲಿ ಹೇಳಿಬಿಟ್ಟೆ, ಆ ಮಾತನ್ನು ಮಾಧ್ಯಮದಲ್ಲಿ ಹಾಕಬೇಡಿ. ಆ ಹೇಳಿಕೆಯನ್ನು ವಾಪಸ್​ ಪಡೆಯುತ್ತೇನೆ ಎಂದಿದ್ದರು. ಆದರೂ ಮಾಧ್ಯಮಗಳಲ್ಲಿ ಈಶ್ವರಪ್ಪ ಹೇಳಿಕೆ ಪ್ರಸಾರವಾದ ಕಾರಣ ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯಕರ್ತರ ಕೋಪದ ಕಟ್ಟೆ ಹೊಡೆಯುವಂತೆ ಮಾಡಿತ್ತು.

ಕಾಂಗ್ರೆಸ್​ ನಾಯಕರ ಕೆಂಡದಂಥಹ ಮಾತು..!

ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮಾತನಾಡಿ, ಈಶ್ವರಪ್ಪಗೆ ಸಂಸ್ಕಾರ, ಸಂಸ್ಕೃತಿ ಗೊತ್ತಿಲ್ಲ. ಈಶ್ವರಪ್ಪ ಬೆಳೆದು ಬಂದ ಹಾದಿಯೇ ಆಗಿದೆ ಎಂದು ವ್ಯಂಗ್ಯವಾಡಿದ್ದರು. ಬಿ.ಕೆ ಹರಿಪ್ರಸಾದ್​ ಮಾತನಾಡಿ, ಸಿಎಂ ಆಗಲು ಈಶ್ವರಪ್ಪ ಸಾಕಷ್ಟು ತಂತ್ರಗಾರಿಕೆ ಮಾಡಿದ್ರು. ಆದರೆ ಡಿಸಿಎಂ ಆಗೋಕೂ ಸಾಧ್ಯ ಆಗಲಿಲ್ಲ. ಹೀಗಾಗಿ ಈಶ್ವರಪ್ಪಗೆ ಹುಚ್ಚು ಹಿಡಿದಿದೆ ಎಂದಿದ್ದಾರೆ. ಇನ್ನೂ ಈಶ್ವರಪ್ಪ ಒಬ್ಬ ಅನಾಗರಿಕ ವ್ಯಕ್ತಿ, ಮೆದುಳಿನ ಸಮತೋಲನ ತಪ್ಪಿದ್ದು, ಕೂಡಲೇ ಪರೀಕ್ಷೆ ಮಾಡಿಸಬೇಕು. ಪರೀಕ್ಷೆ ಮಾಡಿಸುವ ಮೂಲಕ ರಾಜ್ಯಕ್ಕೆ ಆಗಬಹುದಾದ ಅನಾಹುತ ತಪ್ಪಿಸಬಹುದು ಎಂದು ಮಾಜಿ ಸಚಿವ ವಿನಯ್​ ಸೊರಕೆ ಹೇಳಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಮಾತನಾಡಿ, ಅವರ ನಾಲಿಗೆ ಅವರ ಆಚಾರ ತೋರಿಸುತ್ತದೆ. ಬಿಜೆಪಿ ನಾಯಕರ ತಂದೆ ತಾಯಂದಿರು ಇಂಥ ಸಂಸ್ಕೃತಿ ಕಲಿಸಿದ್ದಾರೆ. ಇಂಥವರನ್ನು ಪಕ್ಷದಿಂದ ಕಿತ್ತುಹಾಕಬೇಕು ಎಂದು ಆಗ್ರಹಿಸಿದ್ರು.

ಕಾಂಗ್ರೆಸ್​ ಪ್ರತಿಭಟನೆ, ಹೈಗ್ರೌಂಡ್ಸ್​ ಠಾಣೆಗೆ ದೂರು..!

ಕಾಂಗ್ರೆಸ್​ ನಾಯಕರ ವಿರುದ್ಧ ಅವಹೇಳನಕಾರಿ ಪದ ಬಳಸಿದ ಸಚಿವ ಕೆ.ಎಸ್​ ಈಶ್ವರಪ್ಪ ವಿರುದ್ಧ NSUI ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಚಿವರ ಸರ್ಕಾರಿ ನಿವಾಸ ಎದುರು ಪ್ರತಿಭಟನೆ ನಡೆಸುತ್ತಿದ್ದ NSUI ಕಾರ್ಯಕರ್ತರನ್ನ ಹೈ ಗ್ರೌಂಡ್ ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ರು. ಇದಾದ ಬಳಿಕ ಈಶ್ವರಪ್ಪ ವಿರುದ್ಧ ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯರು ದೂರು ನೀಡಿದರು. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ ಕಾಂಗ್ರೆಸ್ ಮುಖಂಡರು ಕೂಡಲೇ FIR ದಾಖಲಿಸಿ ಕ್ರಮ ಕೈಗೊಳ್ಳಬೇಕು. ಈಶ್ವರಪ್ಪ ಬಾಯಿಂದ ಬಂದಿರೊ ಮಾತುಗಳನ್ನ ಹೇಳೋಕು ಕೂಡ ಕಷ್ಟವಿದೆ. ಇದು ಬಿಜೆಪಿ ಸಂಸ್ಕೃತಿಯನ್ನ ತಿಳಿಸುತ್ತದೆ. ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದು ಇದೇ ಮೊದಲೇನಲ್ಲ. ಕ್ರಮ ಕೈಗೊಳ್ಳದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮನೋಹರ್ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್​ ನಾಯಕರ ಬಗ್ಗೆ ಈಶ್ವರಪ್ಪ ಮಾತನಾಡಿರುವ ಮಾತು ಯಾರೊಬ್ಬರೂ ಒಪ್ಪಲು ಸಾಧ್ಯವಿಲ್ಲ. ಆದರೆ ತಮ್ಮ ತಪ್ಪನ್ನು ಈಶ್ವರಪ್ಪ ಕೆಲವೇ ನಿಮಿಷಗಳಲ್ಲಿ ತಿದ್ದಿಕೊಂಡಿದ್ದೂ ಆಗಿದೆ. ಮೊನ್ನೆಯಷ್ಟೇ ಪ್ರಚೋದನಕಾರಿ ಹೇಳಿಕೆಯನ್ನು ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಈಶ್ವರಪ್ಪ ಮಾತನಾಡಿದ್ದರು. ಪ್ರಚೋದನೆ ಮಾಡಿದ್ದ ಮಾತನ್ನು ಪ್ರಚೋದನೆ ಎಂದಿದ್ದಕ್ಕೆ ಈಶ್ವರಪ್ಪ ಗರಂ ಆಗಿದ್ದರು. ಅದೊಂದೇ ಕಾರಣದಿಂದ ಮಾತನ್ನು ವಾಪಸ್​ ಪಡೆದ ಬಳಿಕವೂ ಮಾಧ್ಯಮಗಳು ಪ್ರಸಾರ ಮಾಡಿದವು. ಅದು ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿತು. ಈಶ್ವರಪ್ಪ ಹೇಳಿದ್ದೇನು ಒಪ್ಪಿಕೊಳ್ಳುವಂತಹ ಮಾತಲ್ಲ. ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಪ್ರಚೋದನೆ, ಮನಸ್ಸಿಗೆ ಬಂದಂತಹ ಹೇಳಿಕೆ ಕೊಡುವುದನ್ನು ಇನ್ನಾದರೂ ನಿಲ್ಲಿಸಬೇಕು. ಇಲ್ಲದಿದ್ದರೆ ಶಿವಮೊಗ್ಗ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದರೆ ಖಂಡಿತ ಉತ್ತವನ್ನು ಬೇರೆ ರೂಪದಲ್ಲಿ ಕೊಡುತ್ತಾರೆ.

Related Posts

Don't Miss it !