ಇಳಿ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ..!

BSY Movie The Public Spot

ರಾಜಕೀಯದಲ್ಲಿ ತನ್ನದೇ ವ್ಯಕ್ತಿತ್ವ ರೂಪಿಸಿಕೊಂಡಿರುವ ಬಿ.ಎಸ್​ ಯಡಿಯೂರಪ್ಪ, ಇತ್ತೀಚಿಗೆ ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದಾರೆ. ಅಥವಾ ರಾಜಕೀಯದಿಂದ ದೂರ ಸರಿಯುವಂತೆ ಬಿಜೆಪಿ ಹೈಕಮಾಂಡ್​ ಮಾಡಿದೆ. 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಇಲ್ಲ ಎನ್ನುವ ಸೂತ್ರದ ಅನ್ವಯ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ರಾಜಕಾರಣದಿಂದ ತುಸು ದೂರವೇ ಉಳಿದಿರುವ ಯಡಿಯೂರಪ್ಪ, ಇದೀಗ ಕನ್ನಡ ಚಿತ್ರರಂಗದ ಕಡೆಗೆ ಮುಖ ಮಾಡಿದ್ದಾರೆ. ನಿಜ ಜೀವನದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದ ಬಿಎಸ್​ ಯಡಿಯೂರಪ್ಪ, ಸಿನಿಮಾದಲ್ಲೂ ಮುಖ್ಯಮಂತ್ರಿ ಆಗಿ ಅಭಿನಯ ಮಾಡುತ್ತಿದ್ದಾರೆ ಎನ್ನುವುದು ವಿಶೇಷ.

ತನ್ನದೇ ಪಾತ್ರಕ್ಕೆ ಜೀವ ತುಂಬಲಿರುವ ಯಡಿಯೂರಪ್ಪ..!

‘ತನುಜಾ’ ಸತ್ಯಕಥೆ ಆಧರಿಸಿ ನಿರ್ಮಾಣ ಮಾಡುತ್ತಿರುವ ಚಿತ್ರ. ಈ ಚಿತ್ರದಲ್ಲಿ ಬಿ.ಎಸ್​ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ ಡಿ ಸುಧಾಕರ್​​ ಬಣ್ಣ ಹಚ್ಚುತ್ತಿದ್ದಾರೆ. ಆದರೆ ಬೇರೆ ಯಾವುದೋ ಪಾತ್ರಕ್ಕೆ ಅಭಿನಯ ಮಾಡದೆ ತನ್ನದೇ ಸತ್ಯಕಥೆಗೆ ಈ ಇಬ್ಬರು ನಾಯಕರು ಜೀವ ತುಂಬಲಿದ್ದಾರೆ. ರಾಜ್ಯಪ್ರಶಸ್ತಿ ಪುರಸ್ಕೃತ ಹರೀಶ್ ಎಂ.ಡಿ ಹಳ್ಳಿಯವರ ನಿರ್ದೇಶನದಲ್ಲಿ ‘ತನುಜಾ’ ಚಿತ್ರ ನಿರ್ಮಾಣ ಆಗುತ್ತಿದ್ದು, ಈಗಾಗಲೇ ಮೊದಲ ದಿನದ ಚಿತ್ರೀಕರಣ ನಡೆದಿದ್ದು, ಯಡಿಯೂರಪ್ಪ ಅವರ ಭಾಗದ ಸಂಪೂರ್ಣ ಚಿತ್ರೀಕರಣ ಮಾಡಲಾಗಿದೆ. ಅಂದು ಸಿಎಂ ಆಗಿ ಮಾಡಿದ ಕೆಲಸವೇ ಇದೀಗ ಸಿನಿಮಾ ಆಗಿ ತೆರೆ ಮೇಲೆ ಬರುತ್ತಿರುವುದು ವಿಶೇಷ.

ಇದನ್ನೂ ಓದಿ: ಇಹಲೋಕ ತ್ಯಜಿಸಿದ ಹಿರಿಯ ನಟ ರಾಜೇಶ್, ಚಿತ್ರರಂಗ ಕಂಬನಿ..

ಕೋವಿಡ್​ ಸಂಕಷ್ಟದಲ್ಲೂ ವಿದ್ಯಾರ್ಥಿನಿಗೆ ಸಹಕಾರ..!

ಕಳೆದ ಎರಡ್ಮೂರು ವರ್ಷಗಳಿಂದ ಕೋವಿಡ್​ ಸೋಂಕು ರಾಜ್ಯ, ದೇಶ ಎನ್ನದೆ ಇಡೀ ಪ್ರಪಂಚದ ಜನರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಈ ನಡುವೆ 2020ರಲ್ಲಿ ಕೋವಿಡ್​ ಕಾರಣದಿಂದ ಶಿವಮೊಗ್ಗದ ನವೋದಯ ಶಾಲೆ ವಿದ್ಯಾರ್ಥಿನಿ ತನುಜಾ ನೀಟ್​ (ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ ) ಹಾಜರಾಗಲು ಸಾಧ್ಯವಾಗಿರಲಿಲ್ಲ. ಲಾಕ್​ಡೌನ್​ ಆಗಿದ್ದ ಕಾರಣ ಕೆಲವು ಮಕ್ಕಳು ಪರೀಕ್ಷೆಗೆ ಹಾಜರಾಗುವುದಕ್ಕೂ ಸಾಧ್ಯವಾಗಿರಲಿಲ್ಲ. ಆದರೆ ಆ ಬಳಿಕ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿತ್ತಾದರೂ ತನುಜಾಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಸಾಮಾಜಿಕಿ ಜಾಲತಾಣದಲ್ಲಿ ಹಾಕಿದ್ದನ್ನು ಪತ್ರಕರ್ತರು ಸರ್ಕಾರದ ಗಮನಕ್ಕೆ ತಂದಿದ್ದರು. ಆ ಬಳಿಕ ಅರ್ಜಿ ಹಾಕಲು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಸಹಾಯ ಮಾಡಿದ್ದರು. ವಿದ್ಯಾರ್ಥಿನಿ ತನುಜಾ ಒಟ್ಟು 720 ಅಂಕಗಳಿಗೆ 586 ಅಂಕಗಳನ್ನು ಗಳಿಸಿ ಸರ್ಕಾರಿ ಕೋಡದಲ್ಲಿ ವೈದ್ಯಕೀಯ ಪ್ರವೇಶ ಪಡೆದಿದ್ದಾರೆ.

ಇದನ್ನೂ ಓದಿ: ಕೇಂದ್ರದಿಂದ ಬೈಕ್​ ಸವಾರರಿಗೆ ಸಿಹಿ ಸುದ್ದಿ, ಜೊತೆಗೆ ಕಹಿ ಸುದ್ದಿ..! ಸವಾರರಿಗೆ ಸಂಕಷ್ಟ..!

‘ಹಿರಿಯ ಪ್ರಾಥಮಿಕ ಶಾಲೆ’ಯಿಂದ ಕಾಲೇಜು ಕಡೆಗೆ..!

ನೈಜ ಘಟನೆಯನ್ನಾಧರಿಸಿ ಚಿತ್ರ ನಿರ್ಮಾಣ ಆಗುತ್ತಿದ್ದು ಶಿವಮೊಗ್ಗ ಹಾಗೂ ಬೆಂಗಳೂರಿನ ಹಲವೆಡೆ ಚಿತ್ರೀಕರಣ ನಡೆದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ಅಭಿನಯಿಸಿದ್ದ ಸಪ್ತಾ ಪಾವೂರು ಈ ಚಿತ್ರದ ನಾಯಕ ನಟಿ ಆಗಿ ಅಭಿನಯಿಸುತ್ತಿದ್ದಾರೆ. ತಾರಾಗಣದಲ್ಲಿ ಬಿ.ಎಸ್ ಯಡಿಯೂರಪ್ಪ, ಸಚಿವ ಡಾ.ಕೆ ಸುಧಾಕರ್, ಪತ್ರಕರ್ತ ವಿಶ್ವೇಶ್ವರ ಭಟ್, ರಾಜೇಶ್ ನಟರಂಗ, ಕೈಲಾಶ್, ಸಂಧ್ಯಾ ಅರಕೆರೆ, ಬೇಬಿ ಶ್ರೀ ನಟಿಸುತ್ತಿದ್ದಾರೆ. ಪ್ರದ್ಯೋತನ ಸಂಗೀತ ನಿರ್ದೇಶನ ಮಾಡುತ್ತಿದ್ದು, ರವೀಂದ್ರನಾಥ್ ಛಾಯಾಗ್ರಹಕರಾಗಿ ಕೆಲಸ ಮಾಡುತ್ತಿದ್ದಾರೆ. Beyond visions cinemas ಲಾಂಛನದಲ್ಲಿ “ತನುಜಾ” ನಿರ್ಮಾಣ ಆಗುತ್ತಿದೆ. ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಈ ಚಿತ್ರಕ್ಕೆ ಬಣ್ಣ ಹಚ್ಚಿರುವುದು ಯಡಿಯೂರಪ್ಪ ಅಭಿಮಾನಿಗಳಿಗೆ ಸಂಭ್ರಮ ತರಿಸಿದೆ.

Related Posts

Don't Miss it !