ಹೂಮಾಲೆ ಹಾಕಿ B.S​​ ಯಡಿಯೂರಪ್ಪ ಅವರನ್ನು ಬಂಧಿಸಿತೇ ಬಿಜೆಪಿ ಹೈಕಮಾಂಡ್​..?

ಕರ್ನಾಟಕ ರಾಜಕೀಯದಲ್ಲಿ ತನ್ನದೇ ಆದ ಛಾಪು ಹೊಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್​​ ಪ್ರಮುಖ ಸ್ಥಾನಮಾನ ನೀಡಿದೆ. ರಾಷ್ಟ್ರೀಯ ಚುನಾವಣಾ ಸಮಿತಿ ಹಾಗು ಪಕ್ಷದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ 11 ಜನರ ಸಂಸದೀಯ ವ್ಯವಹಾರಗಳ ಸಮಿತಿಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಹೈಕಮಾಂಡ್​ ಮಹತ್ವದ ಹೆಜ್ಜೆ ಇರಿಸಿದೆ. ಮುಖ್ಯಮಂತ್ರಿ ಹುದ್ದೆಯಿಂದ ಇಳಿದ ಬಳಿಕ ಯಾವುದೇ ಹುದ್ದೆ ಇಲ್ಲದೆ ರಾಜ್ಯದಲ್ಲಿ ಅತಂತ್ರವಾಗಿದ್ದ ಯಡಿಯೂರಪ್ಪ ಅವರನ್ನು ದೆಹಲಿಗೆ ಸೆಳೆಯುವ ಮೂಲಕ ಬಿಜೆಪಿ ರಾಜ್ಯ ರಾಜಕಾರಣದ ಬಗ್ಗೆ ಬಿಜೆಪಿ ಹೈಕಮಾಂಡ್​ ಮಾಸ್ಟರ್​ ಪ್ಲ್ಯಾನ್​ ಮಾಡಿದೆ. ಈ ಹಿಂದೆ ಸಂಸದ ಸ್ಥಾನ ಹಾಗು ರಾಜ್ಯಪಾಲ ಹುದ್ದೆಗಳನ್ನು ತಿರಸ್ಕಾರ ಮಾಡಿದ್ದ, ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಇದೀಗ ಸಂಸದೀಯ ಮಂಡಳಿ ಸ್ಥಾನವನ್ನು ಒಪ್ಪಿಕೊಂಡಿದ್ದರ ಹಿಂದಿನ ಲೆಕ್ಕಾಚಾರ ಸಾಕಷ್ಟು ಕುತೂಹಲಗಳನ್ನು ಸೃಷ್ಟಿಸುತ್ತಿದೆ.

ಬೆಣ್ಣೆ ಮೇಲಿನ ಕೂದಲು ತೆಗೆದಂತೆ ಹೈಕಮಾಂಡ್​ ತಂತ್ರಗಾರಿಕೆ..!

ಕರ್ನಾಟಕದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಎಸ್​ ಯಡಿಯೂರಪ್ಪ ಹಿಡಿತದಿಂದ ಬಿಜೆಪಿಯನ್ನು ನಯವಾಗಿ ಸೆಳೆಯುವ ಕೆಲಸ ಮಾಡಿರುವ ಬಿಜೆಪಿ ಹೈಕಮಾಂಡ್​ ನಾಯಕರು, ರಾಜಕೀಯ ಚದುರಂಗ ಆಟದ ಮೊರೆ ಹೋಗಿದ್ದಾರೆ. ಮೊದಲಿಗೆ ಹೈಕಮಾಂಡ್​ ನಾಯಕರಿಗೆ ಸಡ್ಡು ಹೊಡೆದು ಶಿಕಾರಿಪುರ ಕ್ಷೇತ್ರದಿಂದ ಬಿ.ವೈ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂದು ಘೋಷಣೆ ಮಾಡಿದ್ದರು. ಆ ಮೂಲಕ ವಿಜಯೇಂದ್ರಗೆ ಟಿಕೆಟ್​ ಖಚಿತ ಮಾಡಿದ್ದರು. ಆದರೆ ಚೆಕ್​ ಮೇಟ್​ ಮಾಡಿದ್ದ ಹೈಕಮಾಂಡ್​ ನಾಯಕರು, ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೈಕಮಾಂಡ್​ ಸೂಚಿಸಿದರು ಅಲ್ಲಿಂದ ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ತಮ್ಮ ಹೇಳಿಕೆಯಿಂದ ರಿವರ್ಸ್ ಹೊಡೆದಿದ್ದರು. ಅದು ಹೈಕಮಾಮಡ್​ ನಿರ್ದೇಶನ ಎನ್ನುವುದು ಸ್ಪಷ್ಟವಾಗಿತ್ತು. ಇನ್ನು ಇತ್ತೀಚಿಗೆ ಮಂತ್ರಾಲಯದಲ್ಲಿ ಮಾತನಾಡಿದ್ದ ಯಡಿಯೂರಪ್ಪ, ನಾನು ಮುಖ್ಯಮಂತ್ರಿ ಸ್ಥಾನದಿಂದ ಇಳಿದಿದ್ದರೂ ಜನರು ನನ್ನನ್ನು ಪ್ರೀತಿಸುತ್ತಾರೆ ಎಂದು ನೀಡಿದ್ದ ಹೇಳಿಕೆ ಸಾಕಷ್ಟು ಅರ್ಥಗರ್ಭಿತ ಆಗಿತ್ತು. ಅಷ್ಟೆ ಅಲ್ಲದೆ ನನ್ನನ್ನು ಕಡೆಗಣಿಸಿದರೆ ಆಪತ್ತು ಎನ್ನುವ ಸಂದೇಶ ರವಾನೆ ಮಾಡಿದ್ದರು. ಇದೀಗ ಹೈಕಮಾಂಡ್​ ದಾಳ ಉರುಳಿಸಿದ್ದು ಯಡಿಯೂರಪ್ಪ ಅವರನ್ನು ಕಟ್ಟಿಹಾಕುವ ಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

ಬಿ.ಎಸ್​​ ಯಡಿಯೂರಪ್ಪ ಹೆಗಲಿಗೆ ದಕ್ಷಿಣದ ಹೊಣೆಗಾರಿಕೆ..!

ಹೈಕಮಾಂಡ್​ ನಾಯಕರಿಗೆ ಧನ್ಯವಾದ ತಿಳಿಸಿದ ಬಿ.ಎಸ್​ ಯಡಿಯೂರಪ್ಪ, ದಕ್ಷಿಣ ಭಾರತದ ಹೊಣೆಗಾರಿಕೆ ನೀಡಲಾಗಿದೆ. ನಾನು ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡಿ ಬಿಜೆಪಿ ಪಕ್ಷವನ್ನು ಸದೃಢವಾಗಿ ಕಟ್ಟುವುದಕ್ಕೆ ನಾನು ಶ್ರಮಿಸ್ತೇನೆ ಎಂದಿದ್ದಾರೆ. ದಕ್ಷಿಣ ಭಾರತದಲ್ಲೂ ಬಿಜೆಪಿ ಅಧಿಕಾರಕ್ಕೆ ತರುವ ಕೆಲಸ ಮಾಡ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ಕೊಡುವ ಮೂಲಕ ಹೊಸ ಜವಾಬ್ದಾರಿ ನೀಡಲಾಗಿದೆ. ಇದು ರಾಜ್ಯದ ನಾಯಕರಿಗೆ ಸಂತಸ ತಂದಿರುವ ವಿಚಾರ ಕೂಡ ಹೌದು. ಆದರೆ ಯಡಿಯೂರಪ್ಪ ಅವರು ರಾಜ್ಯ ರಾಜಕಾರಣದಲ್ಲಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲ. ಬಹಿರಂಗವಾಗಿ ಯಡಿಯೂರಪ್ಪ ಅಸಮಾಧಾನ ಹೊರ ಹಾಕುವಂತಿಲ್ಲ. ಒಂದು ವೇಳೆ ವಿಜಯೇಂದ್ರ ಅವರಿಗೆ ಟಿಕೆಟ್​​ ಕೈತಪ್ಪಿದರೂ ಯಾವುದೆ ಮುಜುಗರ ಮಾಡದೆ ಪಕ್ಷದ ಒಳಿತಿಗಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ಮಾತನಾಡಿದ್ದು, ಚುನಾವಣಾ ಸಮಿತಿಯಲ್ಲಿ ಇರುವ ಕುಟುಂಬಸ್ಥರಿಗೆ ಯಾವುದೇ ಕಾರಣಕ್ಕೂ ಚುನಾವಣಾ ಟಿಕೆಟ್​ ಕೊಡುವುದಿಲ್ಲ ಎನ್ನುವ ಮೂಲಕ ವಿಜಯೇಂದ್ರಗೆ ಟಿಕೆಟ್​ ಸಿಗಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಬಿ.ಎಲ್​ ಸಂತೋಷ್​ ಇದ್ದರೂ ಯಡಿಯೂರಪ್ಪ ನೇಮಕದ ಉದ್ದೇಶ..?

ರಾಜ್ಯದಲ್ಲಿ ಇತ್ತೀಚಿಗೆ ಬಿಜೆಯ ಎಲ್ಲಾ ಬೆಳವಣಿಗೆ ಹಿಂದೆಯೂ ಬಿಎಲ್​ ಸಂತೋಷ್​ ನೆರಳು ಇಲ್ಲದೆ ಯಾವುದೇ ಕೆಲಸವು ನಡೆಯುತ್ತಿಲ್ಲ ಎನ್ನುವುದು ರಾಜಕೀಯವನ್ನು ಹತ್ತಿರದಿಂದ ಬಲ್ಲವರಿಗೆ ಚೆನ್ನಾಗಿರುವ ವಿಚಾರ. ಸಂಘ ಪರಿವಾರ ಮೂಲದ ಬಿ.ಎಲ್​ ಸಂತೋಷ್​ ರಾಜ್ಯ ಬಿಜೆಪಿ ಮೇಲೆ ಹಿಡಿತ ಸಾಧಿಸುವ ಕೆಲಸವನ್ನು ತುಂಬಾ ತಾಳ್ಮೆವಹಿಸಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ತುಂಬಿದ ಮಡಿಕೆ ರೀತಿ ಇದ್ದು, ಸ್ವಲ್ಪ ಹೆಚ್ಚು ಕಡಿಮೆ ಆದರೂ ಮಡಿಕೆಗೆ ಕಲ್ಲು ಬೀಳಬಹುದು. ತುಂಬಿದ ಮಡಿಕೆ ಬರಿದಾಗಬಹುದು. ಅದೇ ಕಾರಣದಿಂದ ತುಂಬಾ ಜಾಗರೂಕತೆಯಿಂದ ಕೆಲಸ ಮಾಡುತ್ತಿರುವ ಬಿ.ಎಲ್​ ಸಂತೋಷ್​, ಯಡಿಯೂರಪ್ಪ ಅವರನ್ನು ರಾಜ್ಯದಿಂದ ಕೇಂದ್ರದ ಕಡೆಗೆ ಸೆಳೆದು ಇಲ್ಲಿನ ನಿರ್ಧಾರಗಳಿಂದ ದೂರ ಇಡುವ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸದೀಯ ಮಂಡಳಿಯಲ್ಲಿ ಸಂತೋಷ್​ ಕೂಡ ಸದಸ್ಯರಾಗಿದ್ದು, ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರ ಮಾತಿಗೆ ಎಷ್ಟು ಮನ್ನಣೆ ಸಿಗಲಿದೆ ಎನ್ನುವುದನ್ನು ನೋಡಬೇಕಿದೆ. ಆದರೆ ಆಗಸ್ಟ್​ 16ರ ರಾತ್ರಿ ಆರ್​ಎಸ್​ಎಸ್​ನ ಬೆಂಗಳೂರು ಕಚೇರಿ ಕೇಶವಾ ಕೃಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿಕೊಂಡು, ಆ ಬಳಿಕ ಯಡಿಯೂರಪ್ಪ ಅವರನ್ನು ಕೇಂದ್ರಕ್ಕೆ ಕಳುಹಿಸುವ ನಿರ್ಧಾರ ತಿಳಿಸಲಾಯ್ತು ಎನ್ನುತ್ತಿವೆ ಪೊಲಿಟಿಕಲ್​ ಸೀಕ್ರೆಟ್​​ ಏಜೆಂಟ್ಸ್​.

Related Posts

Don't Miss it !