24 ಗಂಟೆಯೊಳಗೆ ರಾಜಾಹುಲಿ ಯಡಿಯೂರಪ್ಪ ಬಾಯಿ ಮುಚ್ಚಿಸಿದ ಹೈಕಮಾಂಡ್​..!?

ರಾಜ್ಯ ರಾಜಕಾರಣದಲ್ಲಿ ರಾಜಾಹುಲಿ ಅಂತಾನೇ ಖ್ಯಾತಿ ಗಳಿಸಿರುವ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ರು. ಇದೇ ವೇಳೆ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ, ನೀವೆಲ್ಲಾ ಅವರ ಬೆಂಬಲಕ್ಕೆ ಇರಬೇಕು ಅನ್ನೋ ಸಂದೇಶ ಕೂಡ ನೀಡಿದ್ರು. ಆದ್ರೆ ಕೇವಲ 24 ಗಂಟೆಯಲ್ಲಿ ತಮ್ಮ ಹೇಳಿಕೆಯನ್ನು ವಾಪಸ್​ ಪಡೆದ ಮಾಜಿ ರಾಜಾಹುಲಿ, ಹೈಕಮಾಂಡ್​ ಹೇಳಿದ್ದಕ್ಕೆ ಬದ್ಧ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಎಲ್ಲಿ ಸೂಚಿಸ್ತಾರೆ ಅಲ್ಲಿಂದ ಸ್ಪರ್ಧೆ ಮಾಡ್ತಾರೆ ಎನ್ನುವ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ರು. ಶುಕ್ರವಾರ ಸ್ವಯಂ ಘೋಷಿತ ಹೇಳಿಕೆ ನೀಡಿದ್ದ ಯಡಿಯೂರಪ್ಪ ಶನಿವಾರ ಮಧ್ಯಾಹ್ನದ ವೇಳೆಗೆ ನಾನು ಹೇಳಿದ್ದಲ್ಲ, ಅಲ್ಲಿನ ಕಾರ್ಯಕರ್ತರು ಒತ್ತಾಯ ಮಾಡಿದ್ದಕ್ಕೆ ನಾನು ಹೇಳಿದ್ದೇನೆ ಎನ್ನುವ ಸುಳ್ಳು ಸಬೂಬು ನೀಡಿದ್ದಾರೆ. ಆದರೆ ಕೇವಲ 24 ಗಂಟೆಯಲ್ಲಿ ಯಡಿಯೂರಪ್ಪ ಅವರ ನಾಲಿಗೆ ಕಟ್ಟಿ ಹಾಕಿದ್ದು ಯಾರು ಅನ್ನೋದು ಈಗ ಸೃಷ್ಟಿಯಾಗಿರುವ ಪ್ರಶ್ನೆ..!

ಮಗನಿಗೆ ಕ್ಷೇತ್ರ ಘೋಷಣೆ ಮಾಡಿದ್ದಕ್ಕೆ ಬಂತಾ ವಾರ್ನಿಂಗ್​..!?

ಶಿಕಾರಿಪುರ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡಲ್ಲ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಎಂದಿದ್ದ ಬಿಎಸ್​ ಯಡಿಯೂರಪ್ಪ ಮಾತಿನಲ್ಲಿ ಯಾವುದೇ ತಪ್ಪು ಇರಲಿಲ್ಲ. ಆದರೆ ಹೈಕಮಾಂಡ್​ ನಾಯಕರು ಟಿಕೆಟ್​ ಕೊಡದೆ ಹೋದರೆ ಎನ್ನುವ ಭೀತಿಯಲ್ಲಿ ಯಡಿಯೂರಪ್ಪ ಮೊದಲೇ ನನ್ನ ಟಿಕೆಟ್​ ನನ್ನ ಮಗನಿಗೆ ಎನ್ನುವ ಮಾತನ್ನಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಕೆಲವು ಬಿಜೆಪಿ ನಾಯಕರೇ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್​ ನೀಡಬೇಕು ಎನ್ನುವ ಬಹಿರಂಗ ಹೇಳಿಕೆಯನ್ನೂ ನೀಡಿದ್ದರು. ಇನ್ನುಳಿದಂತೆ ವಿರೋಧ ಪಕ್ಷಗಳು ಯಡಿಯೂರಪ್ಪ ನಡೆಯನ್ನು ಕಟುವಾಗಿ ಟೀಕಿಸಿಯೂ ಇರಲಿಲ್ಲ. ಆದರೆ ಯಡಿಯೂರಪ್ಪ ಸಡನ್​ ಯೂ ಟರ್ನ್​ ತೆಗೆದುಕೊಂಡಿದ್ದಕ್ಕೆ ಕಾರಣ ಹೈಕಮಾಂಡ್​ ಅಂಗಳ ಎನ್ನಲಾಗ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಶನಿವಾರ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಕುತೂಹಲಕ್ಕೂ ಕಾರಣವಾಗಿದೆ.

ಇದನ್ನು ಓದಿ: BSY ರಾಜಕೀಯ ನಿವೃತ್ತಿ ಘೋಷಣೆ ಹಿಂದೆ ರಾಜಕೀಯ ಚತುರ ನಡೆ..! ಕೇಸರಿ‌ ಕಕ್ಕಾಬಿಕ್ಕಿ..

ವಿಜಯೇಂದ್ರಗೆ ಬಿಜೆಪಿಯಲ್ಲಿ ಈ ಬಾರಿಯೂ ಮಿಸ್​ ಆಗುತ್ತಾ..?

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಯೂ ಟರ್ನ್ ತೆಗೆದುಕೊಂಡಿರುವ ರೀತಿಯನ್ನು ಗಮನಿಸಿದಾಗ, ಶಿಕಾರಿಪುರ ಕ್ಷೇತ್ರದಿಂದ ವಿಜಯೇಂದ್ರಗೆ ಟಿಕೆಟ್​​ ಕೊಡುವುದು ಡೌಟ್​ ಎನ್ನುವ ಶಂಕೆ ಮೂಡುವಂತೆ ಮಾಡ್ತಿದೆ. ಒಂದು ವೇಳೆ BS ಯಡಿಯೂರಪ್ಪ ಹೇಳಿಕೆಗೆ ಯಾವುದೇ ತಕರಾರು ಇಲ್ಲದಿದ್ದರೆ ಹಿರಿಯ ನಾಯಕ ಏನೋ ಹೇಳಿದ್ದಾರೆ ಎನ್ನುತ್ತ ಮುಂದೆ ಸಾಗಬಹುದಿತ್ತು. ಆದರೆ ಹೈಕಮಾಂಡ್ ಮಾತಿಗೆ ಬದ್ಧ. ಅವರು ಎಲ್ಲಿ ಸ್ಪರ್ಧಿಸಲು ಹೇಳುತ್ತಾರೋ ಅಲ್ಲೇ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಅಂದ್ರೆ ಶಿಕಾರಿಪುರದಿಂದ ಸ್ಪರ್ಧೆ ಮಾಡುವ ನಾಯಕ ಬೇರೆ ಇದ್ದಾರೆ ಎನ್ನುವುದಂತು ಖಚಿತವಾಯ್ತು. ನನಗೆ ಶಿಕಾರಿಪುರದ ಜನ ಚುನಾವಣೆ ನಿಲ್ಲಲು ಒತ್ತಾಯ ಮಾಡಿದ್ರು. ಅಲ್ಲಿಯ ಜನರು ಒತ್ತಾಯ ಮಾಡಿದ ಕಾರಣ ನಾನು ಹಾಗೆ ಹೇಳಿದ್ದೇನೆ ಅಂತಾನೂ ಸುಳ್ಳು ಹೇಳಿದ್ದಾರೆ. ಸುಳ್ಳು ಹೇಳಿದ್ದಾರೆ ಎನ್ನುವುದಕ್ಕೆ ಸಾಕ್ಷಿ, ಶುಕ್ರವಾರ ಮಾತನಾಡಿದ್ದ ವಿಜಯೇಂದ್ರ ಕಳೆದ 3 ತಿಂಗಳಿಂದ ಕ್ಷೇತ್ರದ ಪ್ರಮುಖರ ಜೊತೆಗೆ ಚರ್ಚಿಸಿ, ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅದನ್ನು ನಾವು ಪಾಲಿಸಬೇಕು ಎಂದಿದ್ದರು. ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಯಡಿಯೂರಪ್ಪ ಅವರ ಮಗಳು ಅರುಣಾದೇವಿ, ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆ ನಡೆದಿತ್ತು ಎಂದಿದ್ದರು.

ಬಿಜೆಪಿ ಬಿಡುವಂತಿಲ್ಲ, ಅಲ್ಲಿಯೇ ಅಧಿಕಾರ ಸಿಗುವಂತಿಲ್ಲ..!

ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಹೆಗಲು ಕೊಟ್ಟಿದ್ದು, ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇದೀಗ ಬೆಣ್ಣೆ ಜಾರಿ ಬೇರೆಯವರ ರೊಟ್ಟಿ ಮೇಲೆ ಬಿದ್ದಿರುವ ಹಾಗೆ ಕಾಣಿಸುತ್ತಿದೆ. ಖಾಲಿ ರೊಟ್ಟಿ ಹಿಡಿದಿರುವ ಯಡಿಯೂರಪ್ಪ ಅಂಡ್​ ಸನ್ಸ್​ ಬಿಜೆಪಿಯಲ್ಲಿ ಅಧಿಕಾರ ಚಲಾಯಿಸುವ ಯಾವುದೇ ಶಕ್ತಿಯನ್ನು ಉಳಿಸಿಕೊಂಡಿಲ್ಲ. ಮಕ್ಕಳು ಹಾಗು ಹಿತೈಷಿಗಳ ಕೆಲವೊಂದು ತಪ್ಪು ನಿರ್ಣಯಗಳಿಂದ ಯಡಿಯೂರಪ್ಪ ಅಡಕತ್ತರಿಯಲ್ಲಿ ಸಿಲುಕಿರುವ ಹಾಗಿದೆ ಎನ್ನಲಾಗ್ತಿದೆ. ಒಂದು ವೇಳೆ ಸಣ್ಣ ಸಣ್ಣ ವಿಚಾರಕ್ಕೂ ಕೋಪಾಗ್ನಿಯನ್ನೇ ಕಾಡುತ್ತಿದ್ದ ಯಡಿಯೂರಪ್ಪ, ಹೈಕಮಾಂಡ್​ ಹೇಳಿದ್ದಕ್ಕೆ ತಲ ಅಲ್ಲಾಡಿಸುತ್ತಿದ್ದಾರೆ. ಒಮ್ಮೆ ಬಿಜೆಪಿ ಪಕ್ಷವನ್ನೇ ಬಿಟ್ಟು ಕೆಜೆಪಿ ಪಕ್ಷ ಸ್ಥಾಪಿಸಿದ್ದ ರಾಜಾಹುಲಿ, ಈಗ ಘರ್ಜಿಸುವ ಶಕ್ತಿ ಉಳಿಸಿಕೊಂಡಿಲ್ಲ. ಒಂದು ವೇಳೆ ಘರ್ಜನೆ ಮಾಡಿದರೆ, ಮುಚ್ಚಿ ಹೋಗುತ್ತಿರುವ ಅಸಲಿ ಕಹಾನಿಗಳು ಹೊರ ಬೀಳಲಿವೆ ಎನ್ನುವುದು ವಿಧಾನಸಭೆ ಕಾರಿಡಾರ್​ನಲ್ಲಿ ಕೇಳಿಬರುತ್ತಿರುವ ಗುಸುಗುಸು. ಆದರೆ ರಾಜಾಹುಲಿಯನ್ನು ಅಷ್ಟು ಸುಲಭವಾಗಿ ಅಲ್ಲಗಳೆಯುವಂತೆಯೂ ಇಲ್ಲ, ಸಮಯ ನೋಡಿ ಘರ್ಜಿಸಿದರೆ ಬಿಜೆಪಿಗೆ ಏರುಪೇರು ಕಟ್ಟಿಟ್ಟ ಬುತ್ತಿ.

Related Posts

Don't Miss it !