ಬಿಜೆಪಿ ಹೈಕಮಾಂಡ್​ ಮೇಲೆ ಶಮನ ಆಗಿಲ್ವಾ ಬಿ.ಎಸ್​ ಯಡಿಯೂರಪ್ಪ ಕೋಪ..?

ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿದ ಬಳಿಕ ಬಿಜೆಪಿ ಹೈಕಮಾಂಡ್​ ಮೇಲೆ ಗರಂ ಆಗಿಯೇ ಇದ್ದಾರಾ..? ಎನ್ನುವ ಪ್ರಶ್ನೆ ಬಿಜೆಪಿ ಕಾರ್ಯಕರ್ತರಲ್ಲಿಯೇ ಮೂಡಿದೆ. ಇದಕ್ಕೆ ಕಾರಣ ಬಿಜೆಪಿ ಹೈಕಮಾಂಡ್​ ಕೊಟ್ಟ ಆಯ್ಕೆಯನ್ನು ನಯವಾಗಿಯೇ ತಿರಸ್ಕಾರ ಮಾಡಿದ್ದ ಬಿ.ಎಸ್ ಯಡಿಯೂರಪ್ಪ, ಇದೀಗ ರಾಜ್ಯ ಬಿಜೆಪಿ ಸರ್ಕಾರ ಕೊಟ್ಟ ಗೌರವವನ್ನು ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡದೆ ತಿರಸ್ಕರಿಸಿದ್ದಾರೆ. ಈ ಮೂಲಕ ನಾನು ನಿಮ್ಮ ಆಮೀಷಕ್ಕೆ ಮಣಿಯುವ ವ್ಯಕ್ತಿ ಅಲ್ಲ ಎನ್ನುವ ಸಂದೇಶವನ್ನು ಬಿಜೆಪಿ ಹೈಕಮಾಂಡ್​ಗೆ ರವಾನಿಸಿದ್ದಾರೆ.

ರಾಜ್ಯಪಾಲ ಹುದ್ದೆಯನ್ನು ತಿರಸ್ಕರಿಸಿದ್ದ ಯಡಿಯೂರಪ್ಪ..!

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಿ.ಎಸ್​ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್​ ರಾಜ್ಯಪಾಲರನ್ನಾಗಿ ಮಾಡುವ ಆಯ್ಕೆ ನೀಡಿತ್ತು. ಆದರೆ ಮುಖ್ಯಮಂತ್ರಿ ಸ್ಥಾನದಿಂದ ಒತ್ತಾಯ ಪೂರ್ವಕವಾಗಿ ಇಳಿಸಿದ ಕೋಪದಲ್ಲಿದ್ದ ಬಿ.ಎಸ್​ ಯಡಿಯೂರಪ್ಪ, ಹೈಕಮಾಂಡ್​ ಸಲಹೆಯನ್ನು ನಿರಾಕರಿಸಿದರು. ನಾನು ಯಾವುದೇ ಕಾರಣಕ್ಕೂ ರಾಜ್ಯವನ್ನು ತೊರೆದು ಬೇರೊಂದು ರಾಜ್ಯಕ್ಕೆ ಹೋಗಲಾರೆ ಎಂದಿದ್ದ ಯಡಿಯೂರಪ್ಪ, ಸಕ್ರಿಯ ರಾಜಕಾರಣದಲ್ಲೇ ಉಳಿಯುತ್ತೇನೆ. ಮುಂದಿನ ಬಾರಿಗೂ ನಾನು ರಾಜ್ಯ ಸುತ್ತಿ ಪಕ್ಷ ಬಲವರ್ಧನೆ ಮಾಡ್ತೇನೆ ಎಂದಿದ್ದರು. ಇದೀಗ ರಾಜ್ಯ ಸರ್ಕಾರದ ಆಗೌರವನ್ನೂ ಮಾಜಿ ಸಿಎಂ ಯಡಿಯೂರಪ್ಪ ತಿರಸ್ಕರಿಸಿದ್ದಾರೆ.

ಸಂಪುಟ ಸ್ಥಾನಮಾನಕ್ಕೆ ಯಡಿಯೂರಪ್ಪ ನೋ..!

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುತ್ತಿದ್ದ ಹಾಗೆ ಸಿಎಂ ಪತ್ನಿ ನಾವು ಆರ್​.ಟಿ ನಗರದ ಸ್ವಂತ ನಿವಾಸದಲ್ಲೇ ಉಳಿದುಕೊಳ್ತೀವಿ. ಈ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಮಾತನಾಡ್ತೇನೆ ಎಂದಿದ್ದರು. ಆ ಬಳಿಕ ಕಾವೇರಿ ನಿವಾಸದಲ್ಲಿ ವಾಸವಿದ್ದ ಯಡಿಯೂರಪ್ಪ ಅವರಿಗಾಗಿ ಈ ನಿರ್ಧಾರ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇನ್ನೂ ಬಿ.ಎಸ್​ ಯಡಿಯೂರಪ್ಪ ತ್ಯಾಗದಿಂದ ಮುಖ್ಯಮಂತ್ರಿ ಆಗಿದ್ದೇನೆ ಎನ್ನುವ ಭಾವನೆಯಲ್ಲಿರುವ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ಸ್ಥಾನಮಾನ ನೀಡಿ ಆದೇಶ ಮಾಡಿದ್ದರು. ಆದರೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ನನಗೆ ಯಾವುದೇ ಸ್ಥಾನಮಾನ ಬೇಡ ಎಂದು ಸರ್ಕಾರಕ್ಕೆ ಪ್ರತಿ ಸಂದೇಶ ಕಳುಹಿಸಿದ್ದಾರೆ.

ಅರ್ಥವಾಗದ ಬಿ.ಎಸ್​ ಯಡಿಯೂರಪ್ಪ ನಿಲುವು..!

ಹೈಕಮಾಂಡ್​ ರಾಜ್ಯಪಾಲರನ್ನಾಗಿ ಮಾಡುತ್ತೇವೆ ಎಂದಾಗ ನಾನು ಕರ್ನಾಟಕ ಬಿಟ್ಟು ಬೇರೆ ಕಡೆಗೆ ಹೋಗಲಾರೆ ಎಂದು ಕರುನಾಡ ಬಗೆಗಿನ ಅಭಿಮಾನ ಮೆರೆದಿದ್ದರು. ಆ ಬಳಿಕ ಸಕ್ರಿಯ ರಾಜಕಾರಣದಲ್ಲೇ ಉಳಿದುಕೊಂಡು ರಾಜ್ಯ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತರುವ ಬಗ್ಗೆಯೂ ಹೇಳಿಕೊಂಡಿದ್ದರು. ಬಿ.ಎಸ್​ ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ಸ್ಥಾನಮಾನ ಕೊಟ್ಟರೆ ರಾಜ್ಯ ಸಂಚಾರ ಮಾಡಲು ಅನುಕೂಲ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಆದೇಶ ಮಾಡಿದ ಬಳಿಕ ಇದೀಗ ಸರ್ಕಾರದ ಆದೇಶವನ್ನೂ ಬಿ.ಎಸ್​ ಯಡಿಯೂರಪ್ಪ ನಿರಾಕರಿಸಿದ್ದಾರೆ. ಈ ಮೂಲಕ ಬಿ.ಎಸ್​ ಯಡಿಯೂರಪ್ಪ ಯಾವ ದಾಳ ಉರುಳಿಸುತ್ತಿದ್ದಾರೆ ಎನ್ನುವ ಬಗ್ಗೆ ಸ್ವತಃ ಬಿಜೆಪಿ ಕಾರ್ಯಕರ್ತರು ಕಾತುರರಾಗಿದ್ದಾರೆ.

ಅಧಿಕಾರ ಪೂರ್ಣ ಮಾಡದೆ ಇರುವ ದುಗುಡ..!

ನಾಲ್ಕು ಬಾರಿ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದರೂ ಒಮ್ಮೆಯೂ ಪೂರ್ಣ ಅವಧಿ ಮುಗಿಸಲು ಸಾಧ್ಯವಾಗಲಿಲ್ಲ ಎನ್ನುವ ಕೊರಗು ಯಡಿಯೂರಪ್ಪ ಅವರಲ್ಲಿದೆ. ಈ ಬಾರಿಯಾದರೂ ಉಳಿದ ಎರಡು ವರ್ಷ ಅಂದರೆ ಒಟ್ಟು ನಾಲ್ಕು ವರ್ಷ ಅಧಿಕಾರ ಅನುಭವಿಸುವ ಕನಸು ಕಂಡಿದ್ದರು. ಆದರೆ ಅಡ್ಡಗಾಲು ಹಾಕಿದ ಬಿಜೆಪಿ ಹೈಕಮಾಂಡ್​ ನಾಯಕರು ಒತ್ತಾಯ ಪೂರ್ವಕವಾಗಿ ಬಿ.ಎಸ್​ ಯಡಿಯೂರಪ್ಪ ಅವನ್ನು ಕೆಳಕ್ಕೆ ಇಳಿಸಿತ್ತು. ಇದರಿಂದ ಮನನೊಂದ ಯಡಿಯೂರಪ್ಪ ಕಾಲವೇ ಸೂಕ್ತ ಉತ್ತರ ಕೊಡಲಿದೆ ಎನ್ನುವ ಆಶಾಭಾವನೆಯಲ್ಲಿ ಮೌನಕ್ಕೆ ಶರಣಾಗಿದ್ದಾರೆ. ತಾನೂ ಹೇಳಿದ ಬಸವರಾಜ ಬೊಮ್ಮಾಯಿ ಅವರನ್ನೇ ಮುಖ್ಯಮಂತ್ರಿ ಮಾಡಿದ ಬಳಿಕವೂ ಕೋಪವನ್ನು ಕುಗ್ಗಲು ಬಿಡದೆ ಹಾಗೇ ಉಳಿಸಿಕೊಂಡಿದ್ದಾರೆ.

Related Posts

Don't Miss it !