ಮಾಜಿ ಸಿಎಂ ಕುಮಾರಸ್ವಾಮಿಗೆ ಅವಮಾನ ಮಾಡಿದ್ದು ಸರಿಯಲ್ಲ – ಶ್ರೀ

ಮಾಜಿ ಸಿಎಂ ಕುಮಾರಸ್ವಾಮಿ ಗದಗದಲ್ಲಿ ಭಾರೀ ಅವಮಾನಕ್ಕೆ ಒಳಗಾಗಿದ್ದಾರೆ. ಮನೆಗೆ ಬಂದ ಅತಿಥಿಯನ್ನು ಮುಖಮುರಿದು ವಾಪಸ್​ ಕಳುಹಿಸುವಂತೆ ಕುಮಾರಸ್ವಾಮಿ ಅವರನ್ನು ಕಳುಹಿಸಿದ್ದಾರೆ. ಆದರೆ ಅತಿಥಿಯಾಗಿ ಹೋಗಿದ್ದ ಕುಮಾರಸ್ವಾಮಿ ಯಾವುದೇ ಬೇಸರ ಮಾಡಿಕೊಳ್ಳದೆ, ಸ್ಥಳೀಯ ನಾಯಕರಿಗೆ ಕೆಲವೊಂದು ಸಲಹೆಗಳನ್ನು ನೀಡಿ ಬಂದ ದಾರಿಗೆ ಸುಂಕ ಇಲ್ಲದ ಹಾಗೆ ವಾಪಸ್​ ಆಗಿದ್ದಾರೆ. 2006-07 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಎನ್ನುವ ವಿನೂತ ಕಾರ್ಯಕ್ರಮ ಹುಟ್ಟು ಹಾಕಿದ್ದರು. ಆ ಕಾರ್ಯಕ್ರಮ ನಿಮಿತ್ತ ​ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಸುಗ್ಗನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದರು. ಅಂದಿನ ಪ್ರೀತಿ ಇಂದಿನ ಅವಮಾನಕ್ಕೆ ಕಾರಣವಾಗಿದೆ.

ಗ್ರಾಮಸ್ಥರ ಪ್ರೀತಿಗೆ ಮನಸೋತು ಅವಮಾನ..!

ಸುಗ್ಗನಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಸಾಕಷ್ಟು ಗ್ರಾಮಸ್ಥರು ಪರಿಚಯ ಆಗಿದ್ರಿಂದ 2ನೇ ಬಾರಿ 2019ರಲ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ಗ್ರಾಮಸ್ಥರು ಭೇಟಿ ಮಾಡಿದ್ದರು. ಆಲದಮ್ಮನ ಕೆರೆಗೆ ನೀರು ತುಂಬಿಸುವ ಯೋಜನೆಗೆ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಗ್ರಾಮಸ್ಥರ ಕೋರಿಕೆಯಂತೆ 10 ಕೋಟಿ ಅನುದಾನ ನೀಡಿದ್ದರು. ಜೊತೆಗೆ ತುಂಗಾಭದ್ರಾ ನದಿಯಿಂದ 14 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ 14 ಕೋಟಿ ಸೇರಿ ಒಟ್ಟು 24 ಕೋಟಿ ಅನುದಾನ ನೀಡಿದ್ದರು. ಇದರಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ರಾಮಪ್ಪ ಲಮಾಣಿ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಆಹ್ವಾನ ನೀಡಿದ್ದರು. ದಿಂಗಾಲೇಶ್ವರ ಶ್ರೀಗಳು ಆಹ್ವಾನಿಸುವಂತೆ ತಿಳಿಸಿದ್ದಾರೆ ಎಂದೂ ಮನವರಿಕೆ ಮಾಡಿದ್ದರು. ಆದರೆ ಬಂದಾಗ ಹೀನಾಯವಾಗಿ ನಡೆಸಿಕೊಂಡಿದ್ದಾರೆ.

ಇದನ್ನೂ ಓದಿ;

ಕಾರ್ಯಕ್ರಮ ರದ್ದು ಮಾಡಿ ಹೆಚ್​ಡಿಕೆಗೆ ಮಕ್ಕರ್​..!

ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಆಹ್ವಾನ ಬಂದ ಬಳಿಕ ಗದಗ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್​ ಅವರಿಗೆ ಕರೆ ಮಾಡಿದ್ದ ಕುಮಾರಸ್ವಾಮಿ, ಸುಗ್ಗನಹಳ್ಳಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ, ನೀವು ಒಪ್ಪಿದರೆ ನಾನು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಕೇಳಿದ್ದೆ. ಅಯ್ಯೋ ಅಣ್ಣ ನೀವು ನಮ್ಮ ಜಿಲ್ಲೆಗೆ ಬರುವುದು ನಮ್ಮ ಅದೃಷ್ಟ. ದಯಮಾಡಿ ಎಂದಿದ್ದರು. ಆದರೆ ಕಾರ್ಯಕ್ರಮ ರದ್ದು ಮಾಡಿದ್ದಾರೆ ಎನ್ನುವುದು ಹುಬ್ಬಳ್ಳಿಗೆ ಬಂದ ಬಳಿಕ ಗೊತ್ತಾಯ್ತು. ಕಾರ್ಯಕ್ರಮ ರದ್ದು ಮಾಡಿರುವುದಕ್ಕೆ ನಾನು ಯಾರನ್ನೂ ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ. ಆದರೆ ನಾನು ಬಂದಿದ್ದೇನೆ ಎನ್ನುವ ಕಾರಣಕ್ಕೆ ಕಾಮಗಾರಿಯನ್ನು ಕೈಬಿಡಬೇಡಿ. ಇದರಲ್ಲಿ ನಾನು ಕ್ರೆಡಿಟ್​ ತೆಗೆದುಕೊಳ್ತೇನೆ ಎನ್ನುವ ಭಯಬೇಡ. ಕಾಮಗಾರಿ ಆರಂಭಿಸಿ, ಜನರಿಗೆ ಒಳ್ಳೆಯದಾಗಲಿ ಎಂದಿದ್ದಾರೆ. ಅಧಿಕೃತ ಶಾಸಕರಿಲ್ಲದೆ ಇರುವ ಕಾರಣಕ್ಕೆ ನಾನು ಪೂಜೆ ಮಾಡುವುದಕ್ಕೆ ಹೋಗುವುದಿಲ್ಲ. ಆದರೆ ಸುಗ್ಗನಹಳ್ಳಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿ ಜನರನ್ನು ಮಾತನಾಡಿಸಿಕೊಂಡು ಹೋಗ್ತೇನೆ ಎಂದಿದ್ದಾರೆ.

ಇದನ್ನೂ ಓದಿ;

ಬಾಳೆಹೊಸೂರಿನ ದಿಂಗಾಲೇಶ್ವರ ಶ್ರೀಗಳನ್ನ ಭೇಟಿ ಮಾಡಿದ ಕುಮಾರಸ್ವಾಮಿ ಆಶೀರ್ವಾದ ಪಡೆದರು. ಕುಮಾರಸ್ವಾಮಿ ಅವರಿಗೆ ಗದಗದಲ್ಲಿ ಅವಮಾನ ಮಾಡಿದ್ದರ ಬಗ್ಗೆ ಮಾತನಾಡಿರುವ ಶ್ರೀಗಳು, ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಪಕ್ಷಭೇದ ಮರೆತು ಕೆಲಸಕ್ಕೆ ಒತ್ತುಕೊಡಬೇಕು. ಯೋಜನೆಯ ಭೂಮಿಪೂಜೆಗೆ ಅಂತಾ ಕರೆಸಿ ಅವಮಾನ ಮಾಡಬಾರದಿತ್ತು ಎಂದು ಶ್ರೀಗಳು ತಿಳಿಸಿದ್ರು. ಈ ಕ್ಷೇತ್ರದ ಬಿಜೆಪಿ ಶಾಸಕರು ಮುಖ್ಯಮಂತ್ರಿ ಆಗಿದ್ದ ನನ್ನ ಬಳಿ ಅ‌ನುದಾನ ಕೇಳಿದ್ದರು. ಬಿಜೆಪಿ ಶಾಸಕರು ಎನ್ನುವ ಕಾರಣಕ್ಕೆ ನಾನು ಅನುದಾನ ಬಿಡುಗಡೆ ಮಾಡದೆ ಸಣ್ಣತನ ತೋರಿಸಿರಲಿಲ್ಲ. ಅವರು ಕೇಳಿದಂತೆ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೆ ಎಂದು ಕುಮಾರಸ್ವಾಮಿ ನೆನಪಿಸಿಕೊಂಡಿದ್ದಾರೆ. ಬಿಜೆಪಿ ಸಚಿವ ಹಾಗೂ ಶಾಸಕರು ನಡೆದುಕೊಂಡ ರೀತಿ ಜನರಲ್ಲಿ ಆಕ್ರೋಶ ಉಂಟು ಮಾಡಿದ್ದು ಮಾತ್ರ ಸುಳ್ಳಲ್ಲ. ಇಷ್ಟೆಲ್ಲಾ ಅವಮಾನ ಆದರೂ ಕುಮಾರಸ್ವಾಮಿ ನಡೆದುಕೊಂಡ ರೀತಿ ಗದಗ ಜನರ ಮನಸ್ಸು ಗೆದ್ದಿದೆ.

Related Posts

Don't Miss it !