ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಮೊದಲ ಅಸಮಾಧಾನ..! ಸ್ಫೋಟ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಮೊದಲ ಅಸಮಾಧಾನ ಸ್ಫೋಟವಾಗಿದೆ. ಈ ಹಿಂದೆ ಬಿ.ಎಸ್​ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದ ಜಗದೀಶ್​ ಶೆಟ್ಟರ್​, ‘ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಾನು ಸಚಿವನಾಗಿ ಕೆಲಸ ಮಾಡುವುದಿಲ್ಲ’ ಎಂದು ಘೋಷಣೆ ಮಾಡಿದ್ದಾರೆ. ಇದಕ್ಕೆ ಕೊಟ್ಟಿರುವ ಕಾರಣ ನಾನು ಈಗಾಗಲೇ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದವನು, ಹಾಗಾಗಿ ಸಚಿವನಾಗಿ ಕೆಲಸ ಮಾಡಬಾರದು ಎಂದು ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ. ಆದರೆ ಈ ಹಿಂದೆ ಬಿಎಸ್​ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವನಾಗಿ ಕೆಲಸ ಮಾಡಿದ್ದೀರಿ ಎನ್ನುವ ಪ್ರಶ್ನೆಗೆ ಜಗದೀಶ್​ ಶೆಟ್ಟರ್​ ಅವರಿಂದ ಬಂದಿರುವ ಉತ್ತರ, ಬಿ.ಎಸ್​ ಯಡಿಯೂರಪ್ಪ ನನಗಿಂತ ಹಿರಿಯ ನಾಯಕರು, ಇದೇ ಕಾರಣದಿಂದ ಸಚಿನಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದೆ ಎಂದಿದ್ದಾರೆ.

30 ಶಾಸಕರಿಂದ ರಾಜೀನಾಮೆ ಬೆದರಿಕೆ ಆಗಿತ್ತಾ..!?

ಸಚಿವನಾಗದೆ ಶಾಸಕನಾಗಿ ಪಕ್ಷ ಸಂಘಟನೆ ಕೆಲಸದಲ್ಲಿ ಭಾಗಿಯಾಗ್ತೇನೆ ಎಂದಿದ್ದಾರೆ ಜಗದೀಶ್​ ಶೆಟ್ಟರ್​. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿರುವುದು ನಿಮಗೆ ತೃಪ್ತಿ ಇದೆಯಾ..? ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಮಾಜಿ ಸಿಎಂ ಜಗದೀಶ್​ ಶೆಟ್ಟರ್​, ನನಗೆ ತೃಪ್ತಿ, ಅತೃಪ್ತಿ ಎನ್ನುವ ವಿಚಾರ ಬರೋದಿಲ್ಲ. ಪಕ್ಷ ಒಂದು ಬಾರಿ ಹೇಳಿದ ಮೇಲೆ ಅದು ಫೈನಲ್​ ಎಂದಿದ್ದಾರೆ. ಇನ್ನೂ 30 ಮಂದಿ ಶಾಸಕರು ರಾಜೀನಾಮೆ ನೀಡುವ ಬೆದರಿಕೆ ಹಾಕಿದ ಕಾರಣಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಯ್ತು ಎನ್ನುವ ಮಾಹಿತಿ ಇದೆಯಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿ, ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಏನೇನು ಆಗಿದೆ ಎನ್ನುವುದನ್ನು ನಾನೀಗ ಚರ್ಚೆ ಮಾಡಲು ಇಷ್ಟಪಡಲ್ಲ ಎನ್ನುವ ಮೂಲಕ ಬಿಎಸ್​ ಯಡಿಯೂರಪ್ಪ ಬಣವೇ ಬಿಜೆಪಿ ಹೈಕಮಾಂಡ್​ಗೆ ಬ್ಲಾಕ್​ ಮಾಡಿತು ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ನನಗೆ ಯಾವುದೇ ಮಾಹಿತಿ ಇಲ್ಲ ಎಂದ ಸಿಎಂ..!

ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ನಾನು ಸಚಿವನಾಗಿ ಕೆಲಸ ಮಾಡಲ್ಲ ಎಂದಿರುವ ಜಗದೀಶ್​ ಶೆಟ್ಟರ್​ ಮಾತಿಗೆ ಆರ್ ಟಿ ನಗರ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹಿರಿಯ ನಾಯಕ ಜಗದೀಶ್ ಶೆಟ್ಟರ್ ಸಚಿವ ಸಂಪುಟದಿಂದ ಹೊರಗುಳಿಯುವ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅವರೊಂದಿಗೆ ನಾನು ಮಾತನಾಡುತ್ತೇನೆ. ಶುಕ್ರವಾರ ದೆಹಲಿಯಲ್ಲಿ ವರಿಷ್ಟರನ್ನು ಭೇಟಿ ಮಾಡಲಿದ್ದೇನೆ. ಆ ಬಳಿಕ ಸಚಿವ ಸಂಪುಟ ವಿಸ್ತರಣೆ ಎಂದಿದ್ದಾರೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್​ ಶೆಟ್ಟರ್​ ನಡುವಿನ ಮುಸುಕಿನ ಗುದ್ದಾಟವೇ ಜಗದೀಶ್​ ಶೆಟ್ಟರ್​ ಅವರ ಈ ನಿರ್ಧಾರಕ್ಕೆ ಕಾರಣ ಎನ್ನುತ್ತಿವೆ ಮೂಲಗಳು.

‘ಹುಬ್ಬಳ್ಳಿ ಹುಲಿ’ ಹಿಡಿತಕ್ಕಾಗಿ ಪೈಪೋಟಿ..!

ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್​ ಶೆಟ್ಟರ್​ ಅಸಲಿಗೆ ಒಂದೇ ಜಿಲ್ಲೆಯ ನಾಯಕರು. ಅವಿಭಜಿತ ಧಾರವಾಡ ಜಿಲ್ಲೆಯನ್ನು ವಿಭಜಿಸಿ ಗದಗ ಹಾಗೂ ಹಾವೇರಿ ಜಿಲ್ಲೆಗಳನ್ನು ಮಾಡಲಾಯ್ತು. ಇದೀಗ ಹಾವೇರಿ ಜಿಲ್ಲೆಗೆ ಬಸವರಾಜ ಬೊಮ್ಮಾಯಿ ಸೇರಿದರೂ ಹುಬ್ಬಳ್ಳಿ – ಧಾರವಾಡ ಅವಳಿ ನಗರದ ಮೇಲೆ ಹಿಡಿತ ಸಾಧಿಸುವ ಹಂಬಲ ಬಸವರಾಜ ಬೊಮ್ಮಾಯಿ ಅವರಲ್ಲಿದೆ. ಇದೇ ಕಾರಣಕ್ಕೆ ಜಗದೀಶ್​ ಶೆಟ್ಟರ್​ ಅವರಿಗೆ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಕೊಡುವುದಿಲ್ಲ ಎನ್ನುವ ಚರ್ಚೆ ಶುರುವಾಗಿತ್ತು. ಸಚಿವ ಸ್ಥಾನ ಸಿಗದೆ ಪೆಚ್ಚು ಮೋರೆ ಹಾಕುವ ಬದಲು, ಮೊದಲಿಗೇ ನಾನು ಸಚಿವನಾಗಿ ಕೆಲಸ ಮಾಡಲ್ಲ ಎಂದು ಘೋಷಣೆ ಮಾಡಿದರೆ ಘನತೆಯಾದರೂ ಉಳಿಯಲಿದೆ ಎನ್ನುವ ಕಾರಣಕ್ಕೆ ಶೆಟ್ಟರ್​ ಈ ಘೋಷಣೆ ಮಾಡಿದ್ದಾರೆ ಎನ್ನಲಾಗ್ತಿದೆ.

Related Posts

Don't Miss it !