ಯುದ್ಧ ಕಾಲೆ ಶಸ್ತ್ರಭ್ಯಾಸ ಗಾಧೆ ಮಾತು, ಈಗ ಶಸ್ತ್ರ ತ್ಯಾಗ..!

ಮಂಡ್ಯ ರಾಜಕಾರಣದಲ್ಲಿ ಪಕ್ಷೇತರ ಸಂಸದೆ ಸುಮಲತಾ ಗಣಿ ಅಕ್ರಮದ ಬಗ್ಗೆ ದನಿ ಎತ್ತಿದಾಗ ಜೆಡಿಎಸ್​ ನಾಯಕ ಕುಮಾರಸ್ವಾಮಿ ಸೇರಿದಂತೆ ಪಕ್ಷದ ನಾಯಕರು ಸುಮಲತಾ ವಿರುದ್ಧ ತಿರುಗಿಬಿದ್ದಿದ್ದರು. ಕೆಆರ್​ಎಸ್​ ಡ್ಯಾಂ ಸೋರಿಕೆ ಆಗುತ್ತಿದೆ ಇದಕ್ಕೆ ಗಣಿಗಾರಿಕೆಯೇ ಕಾರಣ ಎನ್ನುವುದು ಸುಮಲತಾ ವಾದವಾಗಿತ್ತು. ಆದರೆ ಕನ್ನಂಬಾಡಿ ಕಟ್ಟೆಗೆ ಯಾವುದೇ ಸಮಸ್ಯೆ ಇಲ್ಲ, ಸಂಸದರು ಹೇಳಿರುವ ಮಾತು ಸುಳ್ಳು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಆದರೂ ಜೆಡಿಎಸ್​ ನಾಯಕರು ಹಾಗೂ ಸುಮಲತಾ ಹಿಂಬಾಲಕರ ನಡುವೆ ಭಾರೀ ವಾಗ್ದಾಳಿ ನಡೆದಿತ್ತು. ಇದೀಗ ಎಲ್ಲವೂ ಸಮಾಪ್ತಿ ಆಗುವ ಕಡೆಗೆ ಸಾಗಿದೆ.

ಕುಮಾರಸ್ವಾಮಿ ಕದನ ವಿರಾಮ ಘೋಷಣೆ..!

ಜೆಡಿಎಸ್​ ಕಾರ್ಯಕರ್ತರಿಗೆ ಟ್ವಿಟರ್ ಮೂಲಕ ಸಂದೇಶ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ . ಅಭಿಮಾನಿ ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೇ ನಾವು ಹೋರಾಟ ಮಾಡಬೇಕಾದ ವಿಚಾರ ಬಹಳಷ್ಟಿವೆ. ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಮಗೆ ಬಹುದೊಡ್ಡ ನ್ಯಾಯ ಸಿಗಬೇಕಿದೆ. ನನ್ನ ಹೋರಾಟವನ್ನು ಈಗಾಗಲೇ ಅತ್ತ ಕೇಂದ್ರೀಕರಿಸಿದ್ದೇನೆ. ನಾಡು ನುಡಿಗಾಗಿ ಹೋರಾಡೋಣ. ಬೇರೆಲ್ಲಾ ವಿಷಯಗಳನ್ನು ನಾವು ಉಪೇಕ್ಷಿಸೋಣ ಎಂದಿದ್ದಾರೆ. ಪ್ರಾದೇಶಿಕ ಪಕ್ಷವಾಗಿ ನಾವು ಮಾತಾಡುವುದಿದೆ, ಮಾತಾಡೋಣ. ಪ್ರಾದೇಶಿಕ ವಿಚಾರಗಳು ಇತ್ತೀಚೆಗೆ ಗೌಣವಾಗುತ್ತಿವೆ, ಅದರ ಬಗ್ಗೆ ಮಾತಾಡೋಣ. ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ನಾವು ದೊಡ್ಡದಾಗಿ ಕೂಗಿ ಹೇಳೋಣ. ಪ್ರಾದೇಶಿಕ ಅಸ್ಮಿತೆಯ ವಿಚಾರವನ್ನು ಜನರೊಂದಿಗೆ ಪ್ರಸ್ತಾಪಿಸೋಣ. ಆದರೆ, ಅನಗತ್ಯ ಮಾತು ಅನಗತ್ಯವಷ್ಟೆ ಎಂದಿದ್ದಾರೆ.

ಕಾವೇರಿ ವಿಚಾರವಾಗಿ ಸಿಡಿಯೋಣ..!

ನಾವು ಸಿಡಿಯಬೇಕಾದ ಪರಿಸ್ಥಿತಿ ಇದೆ, ಸಿಡಿಯೋಣ. ಕಾವೇರಿ ಜಲ ಯೋಜನೆಗಳಿಗೆ ತಡೆಯೊಡ್ಡುತ್ತಿರುವವರ ವಿರುದ್ಧ ಸಿಡಿಯೋಣ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಧ್ವಜವನ್ನು ಹಾರಿಸಲು ಬಿಡಲೊಲ್ಲದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸಿಡಿಯೋಣ. ನಮಗೆ ನೀಡಬೇಕಾದ ಪರಿಹಾರ, ಅನುದಾನ ನೀಡದ ವ್ಯವಸ್ಥೆಯ ವಿರುದ್ಧ ಸಿಡಿಯ ಬೇಕಾಗಿದೆ ಸಿಡಿಯೋಣ. ಇದು ನಮ್ಮ ಆಯ್ಕೆಯಾಗಲಿ. ಕೋವಿಡ್‌ ಕಾಲದಲ್ಲಿ ಜೆಡಿಎಸ್‌ ರಾಜಕೀಯ ಮಾಡಲಿಲ್ಲ. ಆದರೆ, ಜನರ ಪರ ನಿಲ್ಲುವುದನ್ನು ಮರೆಯಲಿಲ್ಲ, ಸರ್ಕಾರವನ್ನು ಎಚ್ಚರಿಸದೇ ಇರಲಿಲ್ಲ. ಕರ್ನಾಟಕ, ಕನ್ನಡಿಗರಿಗೆ ಅಪಮಾನವಾದಾಗ ಸಿಡಿಯಲು ಒಂದು ಕ್ಷಣವೂ ತಡ ಮಾಡಿಲ್ಲ. ನಾವು ರಾಜಕೀಯ ಮಾಡೋಣ, ಕರ್ನಾಟಕ ಕೇಂದ್ರಿತ ರಾಜಕಾರಣ ಮಾಡೋಣ. ನಮ್ಮ ಮೇಲಿನ ಆರೋಪಗಳನ್ನು ಜನರ ತೀರ್ಮಾನಕ್ಕೆ ಬಿಡೋಣ ಎನ್ನುವ ಮೂಲಕ ಸುಮಲತಾ ಆರೋಪಗಳ ಬಗ್ಗೆ ಜನರ ತೀರ್ಮಾನಕ್ಕೆ ಬಿಟ್ಟುಬಿಡೋಣ ಎಂದಿದ್ದಾರೆ.

ಯುದ್ಧ ಶುರು ಮಾಡಿದರು, ಈಗ ನಿಲ್ಲಿಸಿದ್ದಾರೆ..!

ಕುಮಾರಸ್ವಾಮಿ ಕದನ ವಿರಾಮ ಟ್ವೀಟ್​ಗೆ ಸಂಸದೆ ಸುಮಲತಾ ಕೂಡ ಟ್ವಿಟರ್​ನಲ್ಲೇ ಸ್ಪಷ್ಟನೆ ನೀಡಿದ್ದು, ಈ ವಿಷಯ ಶುರು ಮಾಡಿದ್ದೇ ಅವರು. ಈಗ ಅಂತ್ಯ ಮಾಡ್ತೀನಿ ಅಂದ್ರೆ ಸಂತೋಷ. ನಾನು ಯಾವತ್ತೂ ವಿಷಯ ಡೈವರ್ಟ್ ಮಾಡಲು ಪ್ರಯತ್ನಿಸಿಲ್ಲ. ನಾನು ವೈಯಕ್ತಿಕ ಟೀಕೆ ಮಾಡ್ಲಿಲ್ಲ. KRSನಲ್ಲಿ ಯಾವುದೇ ಅನಾಹುತ ಆಗಲು ನಾನು ಬಿಡಲ್ಲ. ನನ್ನ ಹೋರಾಟ ನಿಲ್ಲೋದಿಲ್ಲ ಎಂದಿದ್ದಾರೆ. ಅಕ್ರಮ ಗಣಿಗಾರಿಕೆ ವಿಷಯ ಪ್ರಸ್ತಾಪಿಸಿದ್ದಾಗ ಯಾರ ಹೆಸರನ್ನೂ ನಾನು ಹೇಳಿರಲಿಲ್ಲ. ನನ್ನ ಹೋರಾಟ ಮುಂದುವರಿಸ್ತೇನೆ. ಗಣಿ ಸಚಿವರ ಸಮಯ ಕೇಳಿದ್ದೇನೆ ವಿವರಣೆ ಕೊಡ್ತೇನೆ. ಸಿಎಂ ಯಡಿಯೂರಪ್ಪರನ್ನು ಭೇಟಿಯೂ ಮಾಡ್ತೇನೆ. ಮೊನ್ನೆಯೂ ಇದರ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ.

ಕ್ಷಮೆ ವಿಚಾರದಲ್ಲಿ ಶಾಸಕ ರವೀಂದ್ರಗೆ ಟಾಂಗ್​..!

ಸಂಸದೆ ಸುಮಲತಾ ಕ್ಷಮೆ ಕೇಳಬೇಕು ಎಂದಿದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಮಲತಾ, ರವೀಂದ್ರ ಶ್ರೀಕಂಠಯ್ಯ ತಾವೇ ಡಿಕ್ಟೇಟರ್ ಅನ್ನೋ ಭಾವನೆಯಲ್ಲಿದ್ದಾರೆ. ಅವರು ಹೇಳಿದಂತೆ ನಾನು ನಡೆಯೋದಿಕ್ಕಾಗಲ್ಲ. ನಾನು ಜಿಲ್ಲಾ ಸಂಸದೆ ಎಂದಿದ್ದಾರೆ. ನಾನು ಏನು ಮಾಡಬೇಕೋ ಮಾಡ್ಕೊಂಡು ಹೋಗ್ತೇನೆ. ದಿಶಾ ಸಭೆಯಲ್ಲಿ ಮಾತಾಡಿದ್ದೇ ಇಲ್ಲಿವರೆಗೂ ಎಳೆದು ತಂದಿದ್ದಾರೆ. ಅವರು ಯಾವುದ್ಯಾವುದೋ ಪ್ರಸ್ತಾಪ ತಂದ್ರು. ಸಾಕಷ್ಟು ಆರೋಪ ಮಾಡಿದ್ರು. ಅದಕ್ಕೂ ನನಗೂ ಸಂಬಂಧ ಇಲ್ಲ ಎಂದಿದ್ದಾರೆ. ಮಂಡ್ಯ ಯುದ್ಧಕಣ ತಾತ್ಕಾಲಿಕವಾಗಿ ಶಾಂತವಾಗಿದೆ.

Related Posts

Don't Miss it !