RSS ವಿರುದ್ಧದ ಹೇಳಿಕೆ ಬಳಿಕ ಬಿಜೆಪಿ ವಿರುದ್ಧ ಕುಮಾರಸ್ವಾಮಿ ಕೆಂಡ..! ಒಂದೇ ಕಲ್ಲು ಎರಡು ಹಕ್ಕಿ..

ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ (RSS) ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಒಂದು ಮಾಹಿತಿ ನೀಡಿದ್ದರು. ಆರ್​ಎಸ್​ಎಸ್​​ ತನ್ನ ಕಪಿಮುಷ್ಠಿಯಲ್ಲಿ ಸರ್ಕಾರವನ್ನು ಹಿಡಿದುಕೊಳ್ಳುತ್ತಿದೆ. ದೇಶದಲ್ಲಿ ತನ್ನದೇ ಅಜೆಂಡಾ ಜಾರಿ ಮಾಡಲು ಐಎಎಸ್​​, ಐಪಿಎಸ್​ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದೆ. ದೇಶದಲ್ಲಿ ಆರ್​ಎಸ್​ಎಸ್​ನಿಂದ ತರಬೇತಿ ಪಡೆದ 4 ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಇದ್ದಾರೆ ಎಂದಿದ್ದರು. ಆದರೆ ತರಬೇತಿ ಕೊಡಿಸಿದ ಮಾತ್ರಕ್ಕೆ ಸಂಘ ಪರಿವಾರವನ್ನು ದೂರುವುದು ಎಷ್ಟು ಸರಿ..? ಎಂದು ಕೇಸರಿ ಪಾಳಯ ತಿರುಗಿಬಿದ್ದಿತ್ತು. ಆರ್​ಎಸ್​ಎಸ್​ ನಮಗೆ ಶಿಸ್ತು ಕಲಿಸಿದೆ, ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಸಿದೆ. ನಿಮಗೆ ಜೀವನದ ಶಿಸ್ತು ಬೇಕಿದ್ದರೆ ಬೈಠಕ್​ನಲ್ಲಿ ಭಾಗಿಯಾಗಿ ಎಂದು ಆಹ್ವಾನವನ್ನೂ ನೀಡಿದ್ದರು. ಬಿಜೆಪಿ ನಾಯಕರ ಹೇಳಿಕೆಗಳಿಗೆ ಕುಮಾರಸ್ವಾಮಿ ಕೆಂಡದಂತಹ ತಿರುಗೇಟು ನೀಡಿದ್ದಾರೆ.

ಸರಣಿ ಟ್ವೀಟ್​ ಮೂಲಕ ಬಿಜೆಪಿಗೆ ಟಾಂಗ್​..!

ಆರ್​​ಎಸ್ಎಸ್ ಕುರಿತು ನಾನು ಕೇಳಿದ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ನೀಡುವ ಬದಲಿಗೆ ಜನರನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ. ದಾಸರ ಪದಗಳನ್ನು ಸಮಾಜದ ಉದ್ಧಾರಕ್ಕಾಗಿ ಬಳಸುವ ಬದಲು, ರಾಜಕೀಯ ಕಾರಣಗಳಿಗಾಗಿ ಬಳಿಸಿಕೊಳ್ತಿದೆ ಎಂದು ಜೆಡಿಎಸ್ ಟ್ವೀಟ್ ಆರಂಭಿಸಿದೆ. “ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ” ಎನ್ನುವ ಪದವೇ ಬಿಜೆಪಿಯ ಎಲುಬಿಲ್ಲದ ನಾಲಿಗೆಯ ಸಂಸ್ಕಾರವನ್ನು ಸಾರುತ್ತಿದೆ. ಹೇಳುವುದು ಆಚಾರ, ಮಾಡುವುದು ಅನಾಚಾರ ಎನ್ನುವುದು ಜನರಿಗೆ ಗೊತ್ತಿದೆ. ನಿಮ್ಮ ಸದಾನಂದ ಪರಿವಾರ, ರಾಜ್ಯದಲ್ಲಿ ಭ್ರಷ್ಟಾಚಾರ ಎಸಗಿ ಜೈಲಿಗೆ ಹೋಗಿ ಇತಿಹಾಸ ಸೃಷ್ಠಿಸಿದ ಮುಖ್ಯಮಂತ್ರಿ ಯಾವ ಪಕ್ಷದವರು..? ಎಂದು ಪ್ರಶ್ನೆ ಮಾಡಿದ್ದಾರೆ. ಮುಖ್ಯಮಂತ್ರಿ ಹಿಂದೆ ಹಿಂಡು ಹಿಂಡಾಗಿ ಜೈಲು ಕಂಬಿ ಎಣಿಸಿದ ಸಚಿವ ಶಿಖಾಮಣಿಗಳು ಯಾವ ಪಕ್ಷದವರು…? ಎಂದು ಯಡಿಯೂರಪ್ಪ ಅಂಡ್​ ಟೀಂ ಹೆಸರು ಹೇಳದೆ ಚಾಟಿ ಬೀಸಲಾಗಿದೆ. ಈ ಮೂಲಕ ಬಿಜೆಪಿ ನಾಯಕರ ಭ್ರಷ್ಟಾಚಾರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

Read this;

ಸಂಘದಲ್ಲಿ ಸಂಸ್ಕಾರ ಕಲಿಸಲಾಗುತ್ತೆ ಎಂದಿದ್ದಕ್ಕೂ ಟೀಕೆ..!

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ನಲ್ಲಿ ನಮಗೆ ಸಂಸ್ಕಾರ ಕಲಿಸುತ್ತಾರೆ ಎಂದಿದ್ದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಸಂಘದಿಂದ ಸಂಸ್ಕಾರ ಪಡೆದು ಸದನದಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿದವರು ಯಾವ ಪಕ್ಷದವರು..? ಸಿ.ಡಿ ಸುಳಿಯಲ್ಲಿ ಸಿಲುಕಿ ರಾಜೀನಾಮೆ ಕೊಟ್ಟ ಶೀಲವಂತರು ಯಾವ ಪಕ್ಷದವರು..? ನಿಮ್ಮ ನಾಯಕರ ಲೀಲೆಗಳು ಜನರಿಗೆ ಗೊತ್ತಿಲ್ಲ ಎನ್ನುವ ದರ್ಪವೇ..? ಎಂದು ಪ್ರಶ್ನಿಸಿದ್ದಾರೆ. ಅನಾಚಾರವೆಂಬುದು ಬಿಜೆಪಿಯ ಕಾಯಕ, ಅಭ್ಯಾಸ, ನಿತ್ಯದ ದಿನಚರಿ ಮತ್ತು ಚಾಳಿ ಎಂದು ಬಿಜೆಪಿ ವಿರುದ್ಧ ತೀವ್ರವಾಗಿ ಟೀಕಿಸಿ ಟ್ವೀಟ್​ ಮಾಡಿದ್ದಾರೆ. ಈ ಮೂಲಕ ಒಂದೆ ಕಲ್ಲಿನಲ್ಲಿ ಕುಮಾರಸ್ವಾಮಿ ಎರಡು ಹಕ್ಕಿಗಳನ್ನು ಹೊಡೆಯುವ ಕೆಲಸ ಮಾಡಿದ್ದಾರೆ.

Read this;

ಬಿಜೆಪಿ ಬಿ ಟೀಂ ಎಂದಿದ್ದ ಸಿದ್ದರಾಮಯ್ಯಗೆ ಕೌಂಟರ್..!

ವಿಜಯಪುರದ ಸಿಂದಗಿ ಉಪಚುನಾವಣೆ ಮತಪ್ರಚಾರದಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್​ ಬಿಜೆಪಿ ಬಿ ಟೀಂ, ಯಾವುದೇ ಕಾರಣಕ್ಕೂ ಜೆಡಿಎಸ್​ಗೆ ಮತ ಹಾಕಬೇಡಿ, ಜೆಡಿಎಸ್​ಗೆ ಮತ ಹಾಕಿದ್ರೆ ಬಿಜೆಪಿಯನ್ನು ಬೆಂಬಲಿಸಿದಂತೆ ಎಂದು ಕರೆ ನೀಡಿದ್ದರು. ಆದರೆ ಇದೀಗ ಬಿಜೆಪಿ ವಿರುದ್ಧ ಕುಮಾರಸ್ವಾಮಿ ಪುಂಕಾನುಪುಂಕವಾಗಿ ವಾಗ್ದಾಳಿ ಮಾಡುವ ಮೂಲಕ ಕಾಂಗ್ರೆಸ್​ ಜೊತೆಗೆ ಬಿಜೆಪಿಯನ್ನೂ ನಾವು ವಿರೋಧಿಸುತ್ತೇವೆ ಎನ್ನುವ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಮಾತಿಗೆ ಮೌಲ್ಯವಿಲ್ಲದಂತೆ ಮಾಡಿದ್ದಾರೆ. ಮತ್ತೊಂದು ಮುಸ್ಲಿಂ ಸಮುದಾಯದಲ್ಲಿ ಜೆಡಿಎಸ್​ ಪಕ್ಷದ ಮೇಲೆ ನಂಬಿಕೆ ಬರುವಂತೆಯೂ ಮಾಡಿದ್ದಾರೆ. ಆದರೆ ಇದೀಗ ಬಿಜೆಪಿ ಕುಮಾರಸ್ವಾಮಿ ಅವರ ಟೀಕಾಸ್ತ್ರಕ್ಕೆ ಪ್ರತ್ಯಾಸ್ತ್ರ ಪ್ರಯೋಗ ಮಾಡುತ್ತಾ..? ಅಥವಾ ರಂಪಾಟ ಮಾಡುತ್ತಿದ್ದರೆ ಇನ್ನಷ್ಟು ಮಾನ ಹರಾಜು ಆಗುವ ಭೀತಿಯಲ್ಲಿ ಮೌನವಾಗುತ್ತಾ..? ಎನ್ನುವುದೇ ಕುತೂಹಲ.

Related Posts

Don't Miss it !