ಮಾಜಿ ಸಿಎಂ ಕುಮಾರಸ್ವಾಮಿ RSS ಕೆಲಸವನ್ನು ತೆಗಳುತ್ತಾ.. ಹೊಗಳಿದ್ರು.. ಹೇಗೆ ಗೊತ್ತಾ..!?

Kumaraswamy The Public spot

ಜಾತ್ಯಾತಿತ ಜನತಾದಳ ಸಂಘಟನೆ ದೃಷ್ಟಿಯಿಂದ ಜನತಾ ಪರ್ವ – ಮಿಷನ್​ 1.O ನಡೆಸಲಾಗ್ತಿದೆ. 7ನೇ ದಿನವಾದ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡುತ್ತ, ಮಾಜಿ ಸಿಎಂ ಕುಮಾರಸ್ವಾಮಿ ಕೇಂದ್ರ ಸರ್ಕಾರದ ಕಾರ್ಯ ವೈಖರಿಯನ್ನು ಟೀಕಿಸಿದ್ರು. ಬಿಜೆಪಿಯನ್ನು ಟೀಕಿಸುವ ನೆಪದಲ್ಲಿ ತನಗೆ ಅರಿವಿಲ್ಲದಂತೆ ಆರ್​ಎಸ್​ಎಸ್​ ಸಂಘ ಸಂಸ್ಥೆಯನ್ನು ಹಾಡಿ ಹೊಗಳಿದ್ದಾರೆ. ದೇಶದಲ್ಲಿ ಬಹುತೇಕ RSS ಸಂಘಟನೆಯವರೇ ಐಎಎಸ್ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೆಚ್​.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ದೇಶದಲ್ಲಿ ಆರ್​ಎಸ್ಎಸ್ ಸರ್ಕಾರ ಇದೆ. ಬಿಜೆಪಿ ಬದಲು ಆರ್​ಎಸ್ಎಸ್ ಅಧಿಕಾರ ನಡೆಸುತ್ತಿದೆ. ದೇಶದ ಸಿವಿಲ್ ಸರ್ವೆಂಟ್​ಗಳು ಆರ್​ಎಸ್ಎಸ್ ಮೂಲದವರು. ದೇಶದಲ್ಲಿ 4 ಸಾವಿರ ಅಧಿಕಾರಿಗಳಾಗಿ ಆರ್​ಎಸ್ಎಸ್ ಕಾರ್ಯಕರ್ತರು ಸೇರಿದ್ದಾರೆ. ಕಾರ್ಯಕರ್ತರಿಗೆ ಪರೀಕ್ಷೆ ಬರೆಯಲು ಆರ್​ಎಸ್​ಎಸ್​ ಅವರು ಟ್ರೈನಿಂಗ್ ಕೊಡ್ತಾರೆ. 2016 ರಲ್ಲಿ ಒಂದೇ ವರ್ಷ 676 ಜನರು ಆಯ್ಕೆಯಾಗಿದ್ದಾರೆ ಎಂದಿದ್ದಾರೆ.

ಆರ್​ಎಸ್​ಎಸ್​ ತನ್ನ ಅಜೆಂಡಾ ಜಾರಿಗೆ ಯತ್ನ..!

ದೇಶದಲ್ಲಿ ಸರ್ಕಾರವನ್ನು ತನ್ನ ಕಪಿ ಮುಷ್ಠಿಯಲ್ಲಿ ಇಟ್ಟುಕೊಳ್ಳುವ ಕೆಲಸ ಮಾಡುತ್ತದೆ ಎನ್ನುವ ಬಗ್ಗೆ ತಿಳಿದುಕೊಂಡು ನನಗೆ ಆಘಾತವಾಯ್ತು. ಸಂಘದ ಐಡಿಯಾಲಜಿ ಹೊಂದಿರುವ ಅಧಿಕಾರಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ. ಈ ಮೂಲಕ ತನ್ನ ಸಂಘಟನೆಯ ಅಜೆಂಡಾಗಳನ್ನು ಜಾರಿ ಮಾಡಲು ಮುಂದಾಗಿದೆ. ಮನುವಾದವನ್ನು ಜಾರಿ ಮಾಡುವ ಚಿಂತನೆ ನಡೆಯುತ್ತಿದೆ ಎಂದು ದೂರಿದ್ದರು. ಆ ಬಳಿಕ ಬಿಜೆಪಿ ನಾಯಕರು ಕುಮಾರಸ್ವಾಮಿ ವಿರುದ್ಧ ಹೇಳಿಕೆ ಕೊಡಲು ಮುಂದಾಗಿದ್ದರು. ಕೂಡಲೇ ಟ್ವಿಟರ್​ ಮೂಲಕ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ನಾನು ಕೊರೊನಾ ಸಮಯದಲ್ಲಿ ಸಾಕಷ್ಟು ಲೇಖಕರು ಬರೆದಿರುವ ಹಲವಾರು ಪುಸ್ತಗಳನ್ನು ಓದಿದ್ದು, ಅರದಲ್ಲಿರುವ ಮಾಹಿತಿಯನ್ನು ಅಷ್ಟೇ ನಾನು ಹೇಳಿದ್ದೇನೆ. ಇದು ನನ್ನ ಸ್ವಂತ ಹೇಳಿಕೆಯಲ್ಲ ಎಂದು ಸ್ಪಷ್ಟಪಡಿಸಿದರು. ಅದೂ ಅಲ್ಲದೆ ಸದ್ಯ ದೇಶದ ಹಾದು ಹೋಗುತ್ತಿರುವ ದಾರಿಯನ್ನು ನೋಡಿದಾಗ ಸತ್ಯ ಹೇಳುವ ಮನಸ್ಸಾಯ್ತು. ಸತ್ಯ ಹೇಳಲು ಯಾವ ಹಿಂಜರಿಕೆಯೂ ಇಲ್ಲ, ಭಯವೂ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

Read this also;

ಬಿಜೆಪಿ ನಾಯಕರ ತಿರುಗೇಟು ಹೇಗಿತ್ತು..!

ಕುಮಾರಸ್ವಾಮಿ ಹೇಳಿಕೆ ಮಾಧ್ಯಮಗಳಲ್ಲಿ ಬರುತ್ತಿದ್ದ ಹಾಗೆ ಎಲ್ಲಾ ನಾಯಕರು ಏಕಕಾಲದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಮಾತನಾಡಿ, ಮಾಜಿ ಸಿಎಂ ಹೆಚ್​ಡಿಕೆ ಅವರಿಗೆ ಒಂದು ಮಾತು ಹೇಳ್ತೆನೆ, ಆರ್​ಎ​ಸ್ಎಸ್ ಆಡಳಿತ ನಡೆಸುವ ಸಂಸ್ಥೆಯಲ್ಲ, ಸೇವೆ ಮಾಡುವ ಸಂಸ್ಥೆ ಎಂದಿದ್ದಾರೆ. ಕುಮಾರಸ್ವಾಮಿ ಬಾಯಿ ಹರಕೆಯಿಂದ ಅಷ್ಟೂ ಮಂದಿ RSS ನವರು ಐಎಎಸ್ ಅಧಿಕಾರಿಗಳಾಗಲಿ ಎಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, UPSC ಘನತೆ ಇರುವ ಸಾಂವಿಧಾನಿಕ ಸಂಸ್ಥೆ. ರಾಜ್ಯದಲ್ಲಿ ಇದ್ದಂತೆ ತಾಳಿಭಾಗ್ಯ ಅಲ್ಲಿಲ್ಲ. ಯಾವುದೇ ಪರೀಕ್ಷಾ ಅಕ್ರಮ ಅಲ್ಲಿಲ್ಲ. ಕಷ್ಟಪಟ್ಟು ಮೆರಿಟ್ ಮೇಲೆ ಯಾರು ಬೇಕಾದರೂ ಆಯ್ಕೆಯಾಗಬಹುದು ಎಂದಿದ್ದಾರೆ. ಚಿತ್ರದುರ್ಗದ ಹೊಸದುರ್ಗದಲ್ಲಿ ರಾಜ್ಯ ಬಿಜೆಪಿ ಪ್ರದಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಮಾತನಾಡಿ, HDK ಸ್ಥಿತಿ ಎಳಿಯಲಾರದ ಎತ್ತು ಬೆಳೆ ಮೇಲೆ ಬಿತ್ತು ಎಂಬಂತಾಗಿದೆ. 4 ಸಾವಿರ ಜನ IAS, IPS ಆಗಿದ್ದಾರೆಂಬುದು ಬೇಜವಾಬ್ದಾರಿ ಹೇಳಿಕೆ ಎಂದಿದ್ದಾರೆ.

Read this also;

ಕುಮಾರಸ್ವಾಮಿ ಆರ್​ಎಸ್​ಎಸ್​ ಸಂಸ್ಥೆಯನ್ನು ಹೊಗಳಿದ್ದಾರೆ..!

ಅಧಿಕಾರಿಗಳನ್ನಾಗಿ ಮಾಡುವ ಮೂಲಕ ತಮ್ಮ ಸಂಘದ ಹಿಡನ್​ ಅಜೆಂಡಾಗಳನ್ನು ಜಾರಿ ಮಾಡುವ ಕೆಲಸವನ್ನು ಆರ್​ಎಸ್​ಎಸ್​ ಮಾಡುತ್ತಿದೆ. ಅದಕ್ಕಾಗಿ ಐಎಎಸ್​, ಐಪಿಎಸ್​ ಓದುವ ಯುವಕನ್ನು ಆಯ್ಕೆ ಮಾಡಿ ಟ್ರೈನಿಂಗ್​ ಕೊಡಿಸುವ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಇದೊಂದು ಮಹತ್ಕಾರ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳದ ಬಿಜೆಪಿ ನಾಯಕರು ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರೆ. ಒಂದು ಸಂಘ ಸಂಸ್ಥೆ ಓದುವ ಆಸಕ್ತಿವುಳ್ಳ ಯುವಕ / ಯುವತಿಯರಿಗೆ ತರಬೇತಿ ಕೊಡಿಸುತ್ತದೆ ಎಂದರೆ ಅದಕ್ಕಿಂತ ಒಳ್ಳೆಯ ಕೆಲಸ ಮಾಡಲು ಮತ್ತೊಂದು ಎಲ್ಲಿದೆ..? ಮಠದಲ್ಲಿ ಓದಿರುವ ಸಿ.ಎಂ ಇಬ್ರಾಹಿಂ ವಚನಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ಮುಸ್ಲಿಂ ಧರ್ಮವನ್ನು ಬಿಟ್ಟಿಲ್ಲ. ಹಾಗೆಯೇ ತರಬೇತಿ ಕೊಡಿಸಿದ ಮಾತ್ರಕ್ಕೆ ಮನುವಾದವನ್ನು ಜಾರಿ ಮಾಡುವುದಕ್ಕೆ ಅಧಿಕಾರಿಗಳು ಮುಂದಾಗ್ತಾರೆ ಎನ್ನುವುದೂ ಸರಿಯಲ್ಲ. ಒಂದು ವೇಳೆ ಅದು ತಪ್ಪು ಎನಿಸಿದರೆ ತಾವು ಕೂಡ ನಿಮ್ಮದೇ ಸಮುದಾಯ ಮಕ್ಕಳನ್ನು ಕಳುಹಿಸಿ ತರಬೇತಿ ಕೊಟ್ಟು ಐಎಎಸ್​, ಐಪಿಎಸ್​ ಅಧಿಕಾರಿಗಳನ್ನಾಗಿ ಮಾಡಲು ಯಾವುದೇ ಅಡ್ಡಿ ಆತಂಕ ಇಲ್ಲ ಅಲ್ಲವೇ..?

ಕುಮಾರಸ್ವಾಮಿ ಅವರ ಮಾತುಗಳನ್ನೇ ಬಿಜೆಪಿ ತನ್ನ ಸಂಘವನ್ನು ಹಿರಿಹಿರಿ ಹಿಗ್ಗುವಂತೆ ಮಾಡುವ ಕೆಲಸ ಮಾಡಬೇಕಿತ್ತು. ಆದರೆ ಬಿಜೆಪಿ ನಾಯಕರು ಮಾಧ್ಯಮಗಳು ಹೇಳಿದ ಮಾತನ್ನೇ ನಂಬಿ ಕುಮಾರಸ್ವಾಮಿ ವಿರುದ್ಧ ಕೆಂಡಕಾರಿದ್ದಾರೆ. ಅದರ ಬದಲು ಹೌದ ನಮ್ಮ ಸಂಘದಿಂದ ಮಕ್ಕಳನ್ನು ಓದಿಸುವ ಕೆಲಸ ಮಾಡುತ್ತಿದ್ದೇವೆ. ನೀವೂ ಕೂಡ ಅದನ್ನೇ ಮಾಡಿ ಎಂದಿದ್ದರೆ ವಿವಾದವೇ ಇರುತ್ತಿರಲಿಲ್ಲ. ಬೆಳೆದು ಬಂದ ಹಾದಿ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರುತ್ತದೆ ಎನ್ನುವುದರಲ್ಲಿಯೂ ಯಾವುದೇ ಸಂದೇಹವಿಲ್ಲ. ಕುಮಾರಸ್ವಾಮಿ ಅವರು ಹೇಳಿದ ಮಾತು ಸತ್ಯವೂ ಆಗಿರಬಹುದು. ಆದರೆ ಅದನ್ನು ತಡೆಯುವ ಮಾರ್ಗ ಕೂಡ ಅವರಲ್ಲೇ ಇದೆ ಎನ್ನುವುದು ಅಷ್ಟೇ ಸತ್ಯ ಅಲ್ಲವೇ..?

Related Posts

Don't Miss it !