ಶಿವರಾಮೇಗೌಡ ಉಚ್ಛಾಟನೆ..!! ಜನತೆ ಜೆಡಿಎಸ್​ ತಿರಸ್ಕರಿಸಲು ಇದೇ ಕಾರಣ ಆಗುತ್ತಾ..!?

ಜೆಡಿಎಸ್​​ ರಾಜ್ಯದಲ್ಲಿ ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಪರಿಸ್ಥಿತಿಗೆ ಬಂದು ತಲುಪಿದೆ. ಕಿಂಗ್​ ಮೇಕರ್​ ಎನ್ನುವ ಆಸೆಯೊಂದಿಗೆ ಚುನಾವಣೆ ಎದುರಿಸುತ್ತಿದ್ದ ಪಕ್ಷ ಅವನತಿಯ ಹಾದಿ ಹಿಡಿದಿದೆ. ಪಕ್ಷದಿಂದ ದೂರ ಆಗುವ ನಾಯಕರು ಹೇಳುವ ಮಾತು ಎಂದರೆ, ಕುಮಾರಸ್ವಾಮಿ ಹೇಳಿಕೆ ಮಾತನ್ನು ಕೇಳುತ್ತಾರೆ. ಇಂದ್ರ ಚಂದ್ರ ಎಂದವರನ್ನು ತಲೆಯ ಮೇಲೆ ಕೂರಿಸಿಕೊಳ್ಳುವ ಕೆಲಸ ಮಾಡುತ್ತಾರೆ. ನೇರವಾಗಿ ಮಾತನಾಡುವ ಜನರನ್ನು ಕಂಡರೆ ಸಹಿಸುವುದಿಲ್ಲ ಎನ್ನುವುದು. ಈ ಮಾತು ಅಕ್ಷರಶಃ ಸತ್ಯವಾಗಿದೆ. ಕುಮಾರಸ್ವಾಮಿ ಹಿಟ್ಲರ್​ ಆಡಳಿತಕ್ಕೆ ಕೈಗನ್ನಡಿ ಹಿಡಿದಂತಾ ಪ್ರಕರಣ ಮಾಜಿ ಸಂಸದ ಎಲ್​.ಆರ್​ ಶಿವರಾಮೇಗೌಡರ ಉಚ್ಛಾಟನೆ ಹಾಗೂ ನಡೆದುಕೊಂಡ ರೀತಿ ನೀತಿ. ಈ ನಡಾವಳಿಕೆ ಜೆಡಿಎಸ್​ ಪಕ್ಷವನ್ನು ಮತ್ತಷ್ಟು ಅದೋಗತಿಗೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ. ಕೊಲೆ ಮಾಡಿದ ಅಪರಾಧಿಗೂ ಕಾನೂನು ರಕ್ಷಣೆ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಆದರೆ ಶಿವರಾಮೇಗೌಡರ ಪ್ರಕರಣದಲ್ಲಿ ಸಾಮಾಜಿಕ ನ್ಯಾಯವನ್ನೂ ಜೆಡಿಎಸ್​ ಪಾಲಿಸಿಲ್ಲ ಎನ್ನುವುದು ಸತ್ಯ.

ಶಿವರಾಮೇಗೌಡ ಮಾಡಿದ್ದು ತಪ್ಪು, ಶಿಕ್ಷೆಯಾಗಿದೆ..!!

ಮಂಡ್ಯದ ಮಾಜಿ ಸಂಸದ ಎಲ್​.ಆರ್​ ಶಿವರಾಮೇಗೌಡರು ಜೆಡಿಎಸ್​ ಮಹಿಳಾ ಕಾರ್ಯಕರ್ತೆ ಜೊತೆಗೆ ಮಾತನಾಡುವ ಸಮಯದಲ್ಲಿ ಮಾತನಾಡಿರುವ ಮಾತುಗಳು ಅಗತ್ಯವಿರಲಿಲ್ಲ ಎನ್ನುವುದು ಸತ್ಯ. ಆದರೆ ಪಕ್ಷದಿಂದಲೇ ಉಚ್ಛಾಟನೆ ಮಾಡಿದ್ದು ಸರಿಯಾದ ಕ್ರಮವಲ್ಲ ಎನ್ನುವುದನ್ನು ಯಾರು ಬೇಕಿದ್ದರೂ ಒಪ್ಪಿಕೊಳ್ಳುತ್ತಾರೆ. ಸೋಮವಾರ ಮಧ್ಯಾಹ್ನ ನೋಟಿಸ್​ ನೀಡಿ ಉಚ್ಛಾಟನೆಗೆ ಸೂಚಿಸ್ತೇನೆ. ಜಿ ಮಾದೇಗೌಡರ ಬಗ್ಗೆ ಆ ರೀತಿಯ ಹೇಳಿಕೆ ಸಹಿಸಲು ಸಾಧ್ಯವಿಲ್ಲ ಎಂದಿದ್ದರು. ಸಂಜೆ ವೇಳೆಗೆ ನಾಮಕಾವಸ್ತೆ ರಾಜ್ಯಾಧ್ಯಕ್ಷ ಹೆಚ್​.ಕೆ ಕುಮಾರಸ್ವಾಮಿ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದರು. ನೋಟಿಸ್​ ಕೊಟ್ಟಿದ್ದು ಯಾವಾಗ..? ನೋಟಿಸ್​ಗೆ ಉತ್ತರ ಪಡೆದಿದ್ದು ಯಾವಾಗ..? ಉಚ್ಛಾಟನೆ ನಿರ್ಧಾರ ಕೈಗೊಂಡಿದ್ದು ಯಾವಾಗ..? ಎನ್ನುವ ಪ್ರಶ್ನೆ ಸಾಮಾನ್ಯ ಕಾರ್ಯಕರ್ತರನ್ನು ಕಾಡುವಂತೆ ಮಾಡಿದೆ.

ಇದನ್ನೂ ಓದಿ: ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ, ಪೊಲೀಸಪ್ಪನಿಗೆ 20 ವರ್ಷ ಜೈಲು ಶಿಕ್ಷೆ..!

ಶಿವರಾಮೇಗೌಡರಿಗೆ ಮಾತ್ರ ಈ ಶಿಕ್ಷೆ.. ಬೇರೆಯವರಿಗೆ ಯಾಕಿಲ್ಲ..?

ರಾಜಕಾರಣಿಗಳು ಹದ್ದು ಮೀರಿ ವರ್ತಿಸ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲಿ ಜೆಡಿಎಸ್ನಾಯಕರು ಹೊರತೇನಲ್ಲ. ಒಂದು ವೇಳೆ ಈ ರೀತಿಯ ಮಾತನ್ನು ಸಹಿಸುವುದಿಲ್ಲ ಎನ್ನುವುದಾದರೆ ನೋಟಿಸ್ ನೀಡಿ, ಉತ್ತರ ಪಡೆದು, ಸಮಂಜಸ ಎನಿಸಲಿಲ್ಲ ಎನ್ನುವ ಕಾರಣ ಕೊಟ್ಟು ಉಚ್ಛಾಟನೆ ಮಾಡಬೇಕಿತ್ತು. ಆದರೆ ಎತ್ತು ಈಯ್ತು ಕೊಟ್ಟಿಗೆ ಕಟ್ಟು ಎನ್ನುವಂತೆ ನಿರ್ಧಾರ ತೆಗೆದುಕೊಂಡಿದ್ದು, ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಸೂಕ್ತವಾದ ನಿರ್ಧಾರವಲ್ಲ ಎನ್ನುತ್ತಾರೆ, ಹಿರಿಯ ಮುಖಂಡರು. ಇದೇ ರೀತಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಇದೇ ಎಲ್​.ಆರ್​ ಶಿವರಾಮೇಗೌಡ ನಾಲಿಗೆ ಹರಿಬಿಟ್ಟಿದ್ದರು. ಸಿ.ಎಸ್​ ಪುಟ್ಟರಾಜು ಜಿ ಮಾದೇಗೌಡರ ಚುನಾವಣೆಗೆ ಹಣ ಕೇಳುವ ಆಡಿಯೋ ವೈರಲ್​ ಆಗಿತ್ತು. ಕಾಸು ಕೊಟ್ಟರೆ ಜೈ ಎನ್ನುತ್ತಾರೆ, ಇಲ್ಲದಿದ್ದರೆ ಇಲ್ಲ ಎಂದು ಸ್ವತಃ ದಿವಂಗತ ನಾಯಕ ಜಿ ಮಾದೇಗೌಡರೇ ಹೇಳಿದ್ದರು. ಈ ಆಡಿಯೋ ಬಿಡುಗಡೆ ಮಾಡಿದ್ದು ಯಾರು..? ಮಾದೇಗೌಡರಿಗೆ ಅವಮಾನ ಮಾಡಿದ್ದು ಯಾರು..? ಶಿಕ್ಷೆ ಆಗಿದ್ದು ಯಾರಿಗೆ..? ಅಥವಾ ಈಗ ಮಾತ್ರ ಏಕಾಏಕಿ ಶಿಸ್ತುಕ್ರಮ ಯಾಕೆ..? ಕುಮಾರಸ್ವಾಮಿ ಇಷ್ಟು ದಿನಗಳಲ್ಲಿ ಒಮ್ಮೆಯೂ ವಿವಾದಿತ ಮಾತುಗಳನ್ನು ಆಡಿಲ್ಲವೇ..? ಎನ್ನುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರದೇ ಇರಲು ನಾಲ್ಕು ಕಾರಣಗಳು.. ಇಲ್ಲಿವೆ ನೋಡಿ..!!

ನಾಗಮಂಗಲದಲ್ಲಿ ಇಬ್ಬರ ಜಂಜಾಟ ತಪ್ಪಿಸಲು ಕ್ರಮ..?

ಶಿವರಾಮೇಗೌಡ ಉಚ್ಛಾಟನೆ ವಿಷಯದಲ್ಲಿ ಆಡಿಯೋ ಪ್ರಕರಣ ಒಂದು ನೆಪಮಾತ್ರದ ಕಾರಣವಷ್ಟೆ. ಈಗಾಗಲೇ ಹಾಲಿ ಶಾಸಕರಾಗಿರುವ ಸುರೇಶ್​ಗೌಡ ಅವರಿಗೆ ಟಿಕೆಟ್​ ನೀಡಬೇಕಿದೆ. ಈ ನಡುವೆ ಶಿವರಾಮೇಗೌಡ ನಾನೂ ಕೂಡ ಜೆಡಿಎಸ್​ ಅಭ್ಯರ್ಥಿ ಎಂದು ಹೇಳಿಕೊಂಡು ಸುತ್ತಾಡುತ್ತಿದ್ದಾರೆ. ಅವರನ್ನು ಪಕ್ಷದಿಂದ ದೂರ ಸರಿಸುವ ಉದ್ದೇಶದಿಂದ ಏಕಾಏಕಿ ಉಚ್ಛಾಟನೆ ಮಾಡಲಾಗಿದೆ ಎನ್ನುವುದು ತಾಲೂಕಿನಲ್ಲಿ ಕೇಳಿ ಬರುತ್ತಿರುವ ಮಾತು. ಇನ್ನೂ ನಿಖಿಲ್​ ಕುಮಾರಸ್ವಾಮಿ ಅವರನ್ನು ಸಂಸದ ಸ್ಥಾನಕ್ಕೆ ನಿಲ್ಲಿಸಲು ಸುರೇಶ್​ಗೌಡ ಕೂಡ ಕಾರಣ, ಕುಮಾರಸ್ವಾಮಿ ಅವರನ್ನು ನಂಬಿಸಿ ನಿಖಿಲ್​ ಅವರನ್ನು ಕಣಕ್ಕಿಳಿಸಿ ಸೋಲಿಸಿದರು ಎಂದು ಶಿವರಾಮೇಗೌಡರೇ ಮಾತನಾಡಿದ್ದಾರೆ. ಅಂದರೆ ಸುರೇಶ್​ ಗೌಡರ ಮಾತು ಕುಮಾರಸ್ವಾಮಿ ಅವರಿಗೆ ಹಿಡಿಸುತ್ತದೆ ಎಂದಂತಾಯ್ತು. ಇದೀಗ ತನಗೆ ಎದುರಾಳಿ ಆಗುತ್ತಿರುವ ಶಿವರಾಮೇಗೌಡರನ್ನು ಉಚ್ಛಾಟನೆ ಮಾಡಿಸುವ ಮೂಲಕ ಸುರೇಶ್​ಗೌಡ ಮೇಲುಗೈ ಸಾಧಿಸಿದ್ದಾರೆ ಎನ್ನಬಹುದು. ಆದರೆ ಶಿವರಾಮೇಗೌಡ ಪಕ್ಷೇತರನಾಗಿ ಸ್ಪರ್ಧಿಸಿದರೂ ಚಲುವರಾಯಸ್ವಾಮಿ ಗೆಲುವು ತಡೆಯುವುದು ಸುರೇಶ್​ಗೌಡರಿಗೆ ಸಾಧ್ಯವಾಗದ ಮಾತು ಎನ್ನುತ್ತಾರೆ ಜೆಡಿಎಸ್​ ಮುಖಂಡರು.

ನಾಗಮಂಗಲದಲ್ಲಿ ಸುರೇಶ್​ಗೌಡರಿಗೆ ಭಾರೀ ಬೆಂಬಲ ಇದೆಯಾ..?

ಜೆಡಿಎಸ್​ ಪಕ್ಷದ ವತಿಯಿಂದ ಚುನಾವಣೆಗೆ ಸ್ಪರ್ಧಿಸಿ, ಚಲುವರಾಯಸ್ವಾಮಿ ವಿರುದ್ಧ ಜಯಗಳಿಸಿದ್ದ ಸುರೇಶ್​ ಗೌಡ ದಿನಗಳು ಕಳೆದಂತೆ ಜನಬೆಂಬಲ ಕಳೆದುಕೊಳ್ಳುತ್ತಾ ಸಾಗಿದ್ದಾರೆ. ಕಳೆದ ಬಾರಿ ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರಿದರು ಎನ್ನುವ ಏಕೈಕ ಕಾರಣದಿಂದ ಚಲುವರಾಯಸ್ವಾಮಿ ಸೋಲಿಸಿದ ನಾಗಮಂಗಲದ ಜನತೆ ಇಂದು ಕೈ ಹಿಸುಕಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಹೇಳಿದ ಕೆಲಸ ಮಾಡಿಸಿಕೊಡಲ್ಲ, ಹಿಡಿದ ಕಾರ್ಯವನ್ನು ಮುಗಿಸುವುದಿಲ್ಲ. ಎಲ್ಲದ್ದಕ್ಕೂ ತಲೆಯಾಡಿಸುವ ಶಾಸಕ ಸುರೇಶ್​ಗೌಡ ಅವರಿಗೆ ಕೆಲಸ ಮಾಡಿಸುವ ಶಕ್ತಿಯಿಲ್ಲ ಎನ್ನುವ ತೀರ್ಮಾನಕ್ಕೆ ಜನರು ಬಂದಂತಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಹೆಚ್​.ಡಿ ದೇವೇಗೌಡರ ಬಗ್ಗೆ ನಾಗಮಂಗಲ ಜನತೆಗೆ ಅತೀವ ಪ್ರೀತಿ ಹೊಂದಿದ್ದಾರೆ. ಆಡಿಯೋದಲ್ಲಿ ಆ ಮಹಿಳೆ ಹೇಳುವಂತೆ ಜೆಡಿಎಸ್​ನಿಂದ ನಾಯಿ ನಿಲ್ಲಿಸಿದರೂ ನಾವು ಕೆಲಸ ಮಾಡುತ್ತೇವೆ ಎನ್ನುವ ಸಾಕಷ್ಟು ನಾಯಕರಿದ್ದಾರೆ. ಆದರೆ ಶಿವರಾಮೇಗೌಡರ ವಿಚಾರದಲ್ಲಿ ನಡೆದುಕೊಂಡ ರೀತಿಯಿಂದ ತಾಲೂಕಿನ ಜನರಲ್ಲೂ ಭಿನ್ನತೆ ಸೃಷ್ಟಿಯಾಗಿದೆ. ನಾಯಕನ ಸ್ಥಾನದಲ್ಲಿದ್ದಾರೆ ಯಾವುದೇ ನಿರ್ಧಾರ ಮಾಡುವಾಗ ಅಳೆದು ತೂಗಿ ಮಾಡಬೇಕಿತ್ತು. ಆದರೆ ಈ ಆತುರದ ನಿರ್ಧಾರಕ್ಕೆ ಬೆಲೆ ತೆರುವ ದಿನಗಳು ಬಂದರೆ ಅಚ್ಚರಿಯೇನಲ್ಲ.

Related Posts

Don't Miss it !