ಕುಮಾರಸ್ವಾಮಿ ವಿರುದ್ಧ ತೊಡೆತಟ್ಟಿ ಚಲುವರಾಯಸ್ವಾಮಿ ಸವಾಲು..!

ಮಂಡ್ಯ: ಮಂಡ್ಯ ಜಿಲ್ಲೆ ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಹಗರಣ ವಿಚಾರ ಕಾಂಗ್ರೆಸ್​ ಹಾಗೂ ಜೆಡಿಎಸ್​ ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೀಗ ನೇರಾನೇರಾ ವಾಕ್ಸಮರಕ್ಕೆ ಕಾರಣವಾಗಿದ್ದು ಚಲುವರಾಯಸ್ವಾಮಿ ಮಾತನಾಡಿದ್ದ ಆಡಿಯೋ ಕ್ಲಿಪ್ಪಿಂಗ್​. ಆಡಿಯೋ ಕ್ಲಿಪ್ಪಿಂಗ್​ ಬಗ್ಗೆ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಚಲುವರಾಯಸ್ವಾಮಿ ಹೆಸರು ಉಲ್ಲೇಖ ಮಾಡದೆ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಆ ಎಲ್ಲಾ ಟೀಕೆಗಳಿಗಳಿಗೂ ಮಾಜಿ ಸಚಿವ ಹಾಗೂ ಮಾಜಿ ಆತ್ಮೀಯ ಗೆಳಯ ಚಲುವರಾಯಸ್ವಾಮಿ ಸವಾಲು ಎಸೆದಿದ್ದಾರೆ.

ನನ್ನ ಆಡಿಯೋ ತಿರುಚಿ ಹೆಚ್​ಡಿಕೆ ಅನುಕಂಪ ಗಿಟ್ಟಿಸಿಕೊಳ್ಳಬಾರದು ಎಂದಿರುವ ಚಲುವರಾಯಸ್ವಾಮಿ, ಎರಡು ಬಾರಿ ಸಿಎಂ ಆದವರು ನನ್ನ ಆಡಿಯೋ ವಿಚಾರದಲ್ಲಿ ಅನುಕಂಪ ಗಿಟ್ಟಿಸಿಕೊಳ್ಳಬಾರದು ಎಂದಿದ್ದಾರೆ. ದೇವೆಗೌಡರಿಗೆ ನಾನು ಕುಮಾರಸ್ವಾಮಿಗಿಂತ ಹೆಚ್ಚಿನ ಗೌರವ ಕೊಡ್ತೀನಿ. ನನ್ನ ಜೊತೆ ಚರ್ಚೆ ಮಾಡುವುದಾದರೆ ಬರಲಿ. ಯಾವ ಯಾವ ಸಮಯದಲ್ಲಿ ದೇವೇಗೌಡರ ಬಗ್ಗೆ ಏನೇನ್ ಮಾತನಾಡಿದ್ದಾರೆ ಎಂದು ಹೇಳ್ತೀನಿ. ನನ್ನ ಮನೆ ಗೃಹ ಪ್ರವೇಶ ಪೂಜೆಯನ್ನ ದೇವೆಗೌಡ, ಚೆನ್ನಮ್ಮ ಕೈಯಲ್ಲಿ ಮಾಡಿಸಿದ್ದೇನೆ. ಇವರ ಮನೆ ಗೃಹಪ್ರವೇಶವನ್ನ ಮಾಡಿಸಿದ್ರೋ ಏನೋ ಗೊತ್ತಿಲ್ಲ ಎನ್ನುವ ಮೂಲಕ ಕುಮಾರಸ್ವಾಮಿಗೆ ಪಂಥಾಹ್ವಾನ ನೀಡಿದ್ದಾರೆ.

ನಾವು ಮಂಡ್ಯಕ್ಕೆ ಬರಬೇಡಿ ಅಂತ ಎಲ್ಲೂ ಹೇಳಿಲ್ಲ. ನಾನು ವಿಧಾನಸೌಧ ನೋಡಿದ್ದೇನೆ. ನಾವೇ ಸಿಎಂ ಭೇಟಿಯಾಗ್ತೀವಿ. ಮಗ ನಿಖಿಲ್ ಸೋಲಿಸುತ್ತಿದ್ದಂತೆ KRS ಜಲಾಶಯದ ಕೀ ನನ್ನ ಬಳಿ ಇಲ್ಲ ಡೆಲ್ಲಿಗೆ ಹೋಗಿ ಎಂದಿದ್ರು. ನಾನು ಕುಮಾರಸ್ವಾಮಿ ಯಾವುದೇ ವ್ಯವಹಾರ ಮಾಡಿಲ್ಲ. ರಾಜಕೀಯವಾಗಿ ಆಗಿದ್ರೆ ಬಹಿರಂಗ ಚರ್ಚೆಗೆ ಸಿದ್ಧವಿದ್ದೇನೆ. ಅವರ ಆತ್ಮೀಯರಾದ ಸಾ.ರಾ.ಮಹೇಶ್ , ಪುಟ್ಟರಾಜು ಅವರನ್ನೂ ಜೊತೆಯಲ್ಲಿ ಕರೆದುಕೊಂಡು ಬರಲಿ. ನಾನು ಹಾಗೂ ಮಾಗಡಿ ಬಾಲಕೃಷ್ಣ ಇಬ್ಬರೇ‌ ಹೋಗ್ತೀವಿ. ರಾಜಕೀಯವಾಗಿ ನನಗೆ ಕಣ್ಣಲ್ಲಿ ನೀರು ಬಂದಿಲ್ಲ, ರಕ್ತ ಬಂದಿದೆ.2006ರಲ್ಲಿ ಸಿಎಂ ಆದಾಗ ಇದೇ ದೇವೆಗೌಡ, ಚೆನ್ನಮ್ಮ ನನ್ನ ಮಗನನ್ನ ಹಾದಿ ತಪ್ಪಿಸುತ್ತಿದ್ದಾರೆಂದು ಆರೋಪಿಸಿದ್ರು. ಮಂಡ್ಯ ಜಿಲ್ಲೆಯನ್ನ ಕೆಣಕಬೇಡಿ. ಮಂಡ್ಯ ಜಿಲ್ಲೆಯಿಂದ ಸಾಕಷ್ಟು ಅಧಿಕಾರ‌ ಅನುಭವಿಸಿದ್ದೀರಿ. ಮಂಡ್ಯಕ್ಕೆ ಎಂಟು ಸಾವಿರ ಕೋಟಿ ಹಣ ರಿಲೀಸ್ ಎಲ್ಲಿ ಮಾಡಿದ್ದೀರಿ..? ರಾಮನಗರ ಚನ್ನಪಟ್ಟಣಕ್ಕೆ ಹಣ ರಿಲೀಸ್ ಮಾಡಿಸ್ತಾರೆ. ಮಂಡ್ಯಕ್ಕೆ ಯಾಕೆ ಹಣ ರಿಲೀಸ್ ಮಾಡಿಸಲಿಲ್ಲ ಎಂದು ಕುಮಾರಸ್ವಾಮಿಯನ್ನು ಕೆಣಕಿದ್ದಾರೆ.

ಮಂಡ್ಯ ಜಿಲ್ಲೆಯನ್ನ ಲಘುವಾಗಿ ನೋಡಬೇಡಿ. ನೀವು ಸಿಎಂ ಆಗಲು ಮಂಡ್ಯ ಜಿಲ್ಲೆ ಕಾರಣ. ದೇವೆಗೌಡರು ಹಾಸನ ವಿಮಾನ‌ ನಿಲ್ದಾಣದ ವಿಚಾರವಾಗಿ ಧರಣಿ ಮಾಡ್ತಾರೆ. ಹಾಸನಕ್ಕೆ ಹೋಗಿ ಏರ್‌ಫೋರ್ಟ್‌ಗೆ ಹಣ ರಿಲೀಸ್ ಮಾಡ್ತೀನಿ ಅಂತಾರೆ. ಕುಮಾರಸ್ವಾಮಿ ಯಾಕೆ ಮಂಡ್ಯ ಜಿಲ್ಲೆಗೂ ಬನ್ನಿ ಅಂತ ಗುಡುಗು ಹಾಕಬಾರದು. ಇದು ನಿಮ್ಮ ಜನ್ಮ ಭೂಮಿಯಲ್ಲ, ನಿಮಗೆ ರಾಜಕೀಯವಾಗಿ ಅಷ್ಟೇ ಬೇಕಾ..? ಇಲ್ಲಿ ಯಾರಾದ್ರೂ ಬೆಳೆದರೆ ಮಂಡ್ಯ ಕೈತಪ್ಪಿ ಹೋಗುತ್ತೆ ಅಂತ ಭಯ ಇದೆಯಾ ನಿಮಗೆ ಎಂದು ರಾಜಕೀಯವಾಗಿ ಜೆಡಿಎಸ್​ ವಿರುದ್ಧ ತೊಡೆತಟ್ಟಿದ್ದಾರೆ ಚಲುವರಾಯಸ್ವಾಮಿ.

ಸಿಎಂ ಭೇಟಿ ಮಾಡಿದ ಕಾಂಗ್ರೆಸ್​ ಟೀಂ..!

ಮನ್ಮುಲ್​ ವಿಚಾರವಾಗಿ ಮಾಜಿ ಸಚಿವ ಚೆಲುವರಾಯ ಸ್ವಾಮಿ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಮಂಡ್ಯದ ಕಾಂಗ್ರೆಸ್ ನಾಯಕರು ಚರ್ಚಿಸಿದ್ದಾರೆ. ಭೇಟಿ ಬಳಿಕ ಮಾತನಾಡಿದ ಚಲುವರಾಯಸ್ವಾಮಿ, ಯಡಿಯೂರಪ್ಪ ಜೊತೆ ನನಗೆ ಉತ್ತಮ ಸಂಬಂಧ ಇದೆ. ಈ ಹಿಂದೆ ಅವರು ಡಿಸಿಎಂ ಆಗಿದ್ದಾಗ ನಾನು ಮಂತ್ರಿ ಯಾಗಿ ಕೆಲಸ ಮಾಡಿದ್ದವನು. ಆಗಿನಿಂದಲೂ ಅವರ ಜೊತೆ ನನಗೆ ಸಂಪರ್ಕ ಇದೆ. ಹೀಗಾಗಿ ಸೌಜನ್ಯಯುತವಾಗಿ ಸಿಎಂ ಭೇಟಿ ಮಾಡಿದ್ದೇನೆ. ಮಂಡ್ಯ ಹಾಲು ಕಲಬೆರಕೆ ಪ್ರಕರಣ ಸಂಬಂಧ ಸರ್ಕಾರ ಈಗಾಗಲೇ ಸಿಐಡಿಗೆ ಆದೇಶ ಮಾಡಿದೆ. ಹೀಗಾಗಿ ಆದಷ್ಟು ಬೇಗ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದೇವೆ ಎಂದಿದ್ದಾರೆ.

ಹಾಲು – ನೀರು ರಾಜಕೀಯಕ್ಕೆ ಸುಮಲತಾ ಎಂಟ್ರಿ..!

ಕಾಲಿಗೆ ನೀರು ಬೆರಸುವ ಪ್ರಕರಣಕ್ಕೆ ಸಂಸದೆ ಸುಮಲತಾ ಎಂಟ್ರಿಯಾಗಿದ್ದಾರೆ. ಮನ್ಮುಲ್​ಗೆ ಭೇಟಿ ನೀಡಿದ್ದ ಸಂಸದೆ ಸುಮಲತಾ ನೀರು ಬೆರೆಸಿ ಹಾಲು ಪೂರೈಕೆ ಹಗರಣ ಬಹಳ ಹಿಂದಿನಿಂದಲೂ ಈ ಹಗರಣ ನಡೆದಿದೆ. ಯಾಕೆ ಕಂಡು ಹಿಡಿಯಲು ಆಗಲಿಲ್ಲ ಎಂಬುದೇ ಪ್ರಶ್ನೆ. ಈಗ ಹೇಗೋ ಈ ವಿಷಯ ಹೊರಗೆ ಬಂದಿದೆ. ತನಿಖೆ ಸರಿಯಾದ ರೀತಿಯಲ್ಲಿ ನಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು ಎಂದಿದ್ದಾರೆ. ಇನ್ನೂ ಸಿಬಿಐಗೆ ಸ್ಥಳೀಯವಾದ ಒತ್ತಡ ಇರಲ್ಲ, ಅವರು ಸ್ವತಂತ್ರವಾಗಿ ತನಿಖೆ ಮಾಡಬಹುದು. ಸಿಐಡಿ ತನಿಖೆ ನಡೆದರೂ ಪರವಾಗಿಲ್ಲ ಸತ್ಯ ಹೊರಬರಬೇಕು ಅಷ್ಟೇ. ಜುಲೈ 5ರಂದು ಸಿಎಂ ಸಭೆಯಲ್ಲಿ ಈ ವಿಚಾರ ಚರ್ಚೆ ಮಾಡ್ತೀನಿ ಎಂದಿದ್ದಾರೆ.

ಉತ್ತರ ಕೊಡ್ತಾರಾ ಕುಮಾರಸ್ವಾಮಿ..?

ನನ್ನನ್ನು ಬಡ್ಡಿ ಮಗ ಎಂದಿದ್ದಾರೆ, ನಾನೇನು ಇವರಿಂದ ಬಡ್ಡಿ ಪಡೆದಿದ್ದೇನಾ..? ಬಡ್ಡಿ ಇರಲಿ ತೆಗೆದುಕೊಂಡ ಅಸಲನ್ನೇ ಕೊಟ್ಟಿಲ್ಲ ಎಂದಿದ್ದರು. ಆದರೆ ಚಲುವರಾಯಸ್ವಾಮಿ ನಾನು ಹಣಕಾಸು ವ್ಯವಹಾರ ಮಾಡಿಲ್ಲ ಎಂದಿದ್ದಾರೆ. ಆದ್ರೆ ಕುಮಾರಸ್ವಾಮಿ ಕೇಳಿದ್ದ ಮೂಡ ಹಗರಣದ ಬಗ್ಗೆ ಚಲುವರಾಯಸ್ವಾಮಿ ಮಾತನಾಡಿಲ್ಲ. ಸೋತು ಮನೆಯಲ್ಲಿ ಕುಳಿತಿದ್ದವನ ಲೋಕಸಭೆಗೆ ಕಳುಹಿಸಿದ್ದೆ ಎಂದಿದ್ದ ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಉತ್ತರ ಕೊಟ್ಟಿಲ್ಲ. ಇದೀಗ ಹೊಸದಾಗಿ ಕೆಲವೊಂದು ಆರೋಪ ಮಾಡಿದ್ದಾರೆ. ಆ ಆರೋಪಗಳಿಗೆ ಕುಮಾರಸ್ವಾಮಿ ಉತ್ತರ ಕೊಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Related Posts

Don't Miss it !