ಮಾಜಿ ಮಿನಿಸ್ಟರ್​ ಕಿರಿಕ್ಕು​, ಸಿಕ್ಕಿಬಿದ್ದ ಶಾಸಕರಿಗೆ ರೈತರ ಘೇರಾವ್.!


ಯಾದಗಿರಿ ಜಿಲ್ಲೆ ಶಹಾಪುರದ ಕೊಳ್ಳುರು ಗ್ರಾಮದ ರೈತರು ಶಾಸಕ ವೆಂಕಟರೆಡ್ಡಿ ಮುದ್ನಾಳಗೆ ಘೇರಾವ್ ಹಾಕಿದ್ದಾರೆ. ಕೃಷ್ಣಾ ನದಿಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಶಾಸಕರಿಗೆ ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರವಾಹದಿಂದ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ರೈತರು ಘೇರಾವ್ ಹಾಕಿದ್ದಾರೆ. ರೈತನ ಮೇಲೆ ಎಫ್​ಐಆರ್ ದಾಖಲಿಸಿದ್ದು ಯಾಕೆ ಎಂದು ರೈತರು ಪ್ರಶ್ನೆ ಮಾಡಿದ್ದಾರೆ. ರೈತನ ಮೇಲೆ ಎಫ್​ಐಆರ್ ಮಾಡಿಸಿದ್ದೀರಿ ಎಂದು ರೈತರು ಕೆಂಡಾಮಂಡಲರಾಗಿದ್ದಾರೆ.

ರೈತನ ಮೇಲೆ ಕೇಸ್​ ಹಾಕಿಸಿದ್ದು ಯಾರು..? ಯಾಕೆ..?

ಜುಲೈ 24 ರಂದು ಸಚಿವರಾಗಿದ್ದ ಆರ್.ಶಂಕರ್ ಕೊಳ್ಳುರು ಸೇತುವೆಗೆ ಭೇಟಿ ನೀಡಿದ್ದರು. ಈ ವೇಳೆ ರೈತ ಬಸಪ್ಪ ಸಚಿವರಿಗೆ ತರಾಟೆ ತೆಗೆದುಕೊಂಡಿದ್ರು. ಬೆಳೆ ಹಾನಿಯ ವಿಮೆ ಹಣ ಇನ್ನೂ ಬಂದಿಲ್ಲ ಎಂದು ರೈತ ಬಸಪ್ಪ ಸಚಿವ ಆರ್.ಶಂಕಶ್​ಗೆ ಪ್ರಶ್ನೆ ಮಾಡಿದ್ದರು. ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದ ರೈತ ಬಸಪ್ಪನ ಮೇಲೆ ಶಹಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಿಂದ ಅಕ್ರೋಶಗೊಂಡ ಕೊಳ್ಳುರು ಗ್ರಾಮದ ರೈತರು, ರೈತ ಬಸಪ್ಪನ ಮೇಲೆ ಕೇಸ್ ಯಾಕೆ ಹಾಕಿಸಿದ್ರಿ ಎಂದು ಶಾಸಕರ ಬಳಿ ಘೇರಾವ್​ ಹಾಕಿ ಪ್ರಶ್ನಿಸಿದ್ದಾರೆ.

R. ಶಂಕರ್​, ಮಾಜಿ ಸಚಿವ

ರೈತರನ್ನು ಸಮಾಧಾನ ಮಾಡಿದ ಶಾಸಕ..!

ಕೇಸ್ ಮಾಡಿದ್ದು ನನಗೆ ಗೊತ್ತಿಲ್ಲ, ನಾನು ಕೇಸ್ ಮಾಡಿಸಿಲ್ಲ ನೀವು ತಪ್ಪುಗ್ರಹಿಕೆ ಮಾಡಿಕೊಳ್ಳಬೇಡಿ. ನಾನೂ ಒಬ್ಬ ರೈತನಾಗಿದ್ದು ರೈತರ ಸಂಕಷ್ಟ ನನಗೆ ಗೊತ್ತು. ಪರಿಹಾರ ನೀಡದ ರೈತರಿಗೆ ಪರಿಹಾರ ಕಲ್ಪಿಸಲು ಸೂಚಿಸಿದ್ದೇನೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಸಮಾಧಾನ ಮಾಡಿದ್ರು. ಶಾಸಕ ವೆಂಕಟರೆಡ್ಡಿ ಮುದ್ನಾಳ ರೈತರಿಗೆ ಬುದ್ಧಿ ಮಾತು ಹೇಳಿ ಮನವೊಲಿಕೆ ಮಾಡಿದ ಬಳಿಕ ಅನ್ನದಾತರ ಆಕ್ರೋಶ ಕಡಿಯಾಯ್ತು.

ಹಾಲಿ ಸಚಿವರ ಕಿರಿಕ್​, ಮಾಜಿ ಸಚಿವರ ಸ್ಪಷ್ಟನೆ..!

ಮಾಜಿ ಸಚಿವ ಆರ್​ ಶಂಕರ್​ ಹಾಲಿ ಸಚಿವರಾಗಿದ್ದಾಗ ಮಾಡಿದ ಕಿರಿಕ್​ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ ನಾನು ಕಳೆದ ತಿಂಗಳು 24ನೇ ತಾರೀಕು ಯಾದಗಿರಿಗೆ ಜಿಲ್ಲೆಗೆ ತೆರಳಿದ್ದೆ, ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಕೊರೊನಾ ವಾರಿಯರ್ಸ್​ಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಈ ವೇಳೆ ಕೊಳ್ಳುರು ಬ್ರಿಡ್ಜ್​ಗೆ ಭೇಟಿ ನೀಡಿ ವೀಕ್ಷಣೆ ಮಾಡಿದೆ. ಈ ವೇಳೆ ಬಸಪ್ಪ ಎನ್ನುವ ರೈತ ಏರುಧ್ವನಿಯಲ್ಲಿ ಮಾತನಾಡಿದ. ಬಾ ಬಂದು ಸಮಸ್ಯೆ ಹೇಳಿಕೊ ಎಂದು ಹೇಳಿದೆ. ಸ್ಥಳೀಯ ಶಾಸಕರು ಸಹ ಅಲ್ಲಿ ಇದ್ರು. ರೈತರಿಗೆ ವಿಮೆ ಸಿಗದಿದ್ರೆ ಮುಂದೆ ಸಭೆ ಮಾಡೋಣ ಎಂದು ಹೇಳಿ ಬಂದಿದ್ದೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಪರಿಹಾರ ಸಹ ಕೊಡಿಸಿದೆ ಎಂದಿದ್ದಾರೆ.

ಎಫ್​ಐಆರ್​ ದಾಖಲು ಮಾಡಿಸಿದ್ದು ಯಾರು..?

ಮಾಜಿ ಸಚಿವ ಆರ್​ ಶಂಕರ್​ ಕೊಟ್ಟಿರುವ ಸ್ಪಷ್ಟನೆ ಪ್ರಕಾರ, ಜುಲೈ 24ರಂದು ನಡೆದ ಘಟನೆ ಬಗ್ಗೆ ಜುಲೈ 31ರಂದು ಎಫ್ಐಆರ್ ದಾಖಲು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ದೂರು ದಾಖಲು ಮಾಡಿದ್ದೇವೆ ಎಂದು ಯಾದಗಿರಿ ಎಸ್​ಪಿ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ರಾಜೀನಾಮೆ ಕೊಟ್ಟ ಬಳಿಕ ನಾವು ಮಾಜಿಗಳು ಆಗಿದ್ದೇವೆ. ಎಸ್​ಪಿ ಬಳಿ ದೂರಿನ ಬಗ್ಗೆ ಕೇಳಿದೆ, ಕಾನೂನು ಸುವ್ಯವಸ್ಥೆ ಕಾಪಾಡಲು ದೂರು ದಾಖಲಿಸಿದ್ದೇವೆ ಎಂದು ಹೇಳಿದ್ರು. ಆದೆಷ್ಟು ಬೇಗ ಸಮಸ್ಯೆ ಬಗೆಹರಿಸಿ ಎಂದು ಎಸ್​ಪಿಗೆ ಹೇಳಿದ್ದೇನೆ. ಅವರಿಗೆ ಸಮಸ್ಯೆ ಆಗಿದ್ರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ. ಆದರೆ ಒಬ್ಬ ಜನಪ್ರತಿನಿಧಿ ಬಳಿ ಮತದಾರ ಆಗ್ರಪೂರ್ವಕವಾಗಿ ಮಾತನಾಡಿದರೆ ಪೊಲೀಸರು ದೂರು ದಾಖಲಿಸುತ್ತಾರಾ..? ಹಾಗಿದ್ದರೆ ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳ ಬಳಿ ಏನನ್ನೂ ಕೇಳಬಾರದ..? ಪೊಲೀಸರ ಮನಸೋಇಚ್ಛೆ ದೂರು ದಾಖಲು ಮಾಡಲು ಇದೇನು ಮಿಲಿಟರಿ ಆಡಳಿತ ನಡೆಯುತ್ತಿದೆಯಾ ಎನ್ನುವ ಅನುಮಾನ ಮೂಡಿಸುತ್ತಿದೆ.

Related Posts

Don't Miss it !