ಮಾಗಡಿ ಬಾಲಕೃಷ್ಣ ಪಯಣ ಎತ್ತ ಕಡೆ..? ಸ್ಪರ್ಧೆ ಮಾಡಲ್ಲ ಎಂದಿದ್ಯಾಕೆ..?

ರಾಮನಗರ ಜಿಲ್ಲೆ ಮಾಗಡಿ ಕಾಂಗ್ರೆಸ್​ನಲ್ಲಿ ಅಲ್ಲೋಲ ಕಲ್ಲೋಲ ಶುರು ಆಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಕಾಂಗ್ರೆಸ್​ ಪಕ್ಷದಿಂದ ಟಿಕೆಟ್​ ಬೇಡ ಎಂದು ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್​​ ಪಕ್ಷವನ್ನು ಕಟ್ಟುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಆದರೆ ಪಕ್ಷದಲ್ಲಿ ಮುಜುಗರ ಆಗುವಂತೆ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಹೆಚ್​.ಸಿ ಬಾಲಕೃಷ್ಣ ಕಿಡಿಕಾರಿದ್ದಾರೆ. ಹೆಚ್​.ಎಂ ರೇವಣ್ಣ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿರುವ ಬಾಲಕೃಷ್ಣ, ನಾನು ಕಾಂಗ್ರೆಸ್​ ಪಕ್ಷವನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದರೆ, ಹೆಚ್​.ಎಂ ರೇವಣ್ಣ ಜೆಡಿಎಸ್​ ಶಾಸಕ ಎ.ಮಂಜು ಪರವಾಗಿ ಮಾತನಾಡುತ್ತಾರೆ. ಇದರಿಂದ ನನಗೆ ಮುಜುಗರ ಆಗ್ತಿದೆ. ಇದಕ್ಕಾಗಿಯೇ ನನಗೆ ಟಿಕೆಟ್​ ಬೇಡ ಎಂದಿದ್ದಾರೆ.

ರೇವಣ್ಣ ಅವರಿಗೆ ಮಾಗಡಿ ಮೇಲೆ ಆಸೆ ಇರುವಂತಿದೆ..!

ಪದೇ ಪದೇ ಮಾಗಡಿ ಕ್ಷೇತ್ರಕ್ಕೆ ಆಗಮಿಸುವ ಹೆಚ್​.ಎಂ ರೇವಣ್ಣ, ಜೆಡಿಎಸ್​ ಶಾಸಕ ಎ. ಮಂಜು ಪರವಾಗಿದ್ದಾರೆ. ಹೆಚ್​.ಎಂ ರೇವಣ್ಣ ಶಾಸಕ ಎ. ಮಂಜು ಅವರನ್ನ ಹೊಗಳುತ್ತಾರೆ, ಅದೇ ರೀತಿ ಶಾಸಕ ಎ. ಮಂಜು ಕೂಡ ಹೆಚ್​.ಎಂ ರೇವಣ್ಣ ನನ್ನ ಗುರುಗಳು ಎನ್ನುತ್ತಾರೆ. ಹಾಗಾಗಿ ನನಗೆ ಮಾಗಡಿ ಕ್ಷೇತ್ರದಲ್ಲಿ ಇರುಸು ಮುರುಸು ಉಂಟಾಗುತ್ತಿದೆ. ಹೆಚ್​.ಎಂ ರೇವಣ್ಣ ಅವರಿಗೆ ಕಾಂಗ್ರೆಸ್​ ಪಕ್ಷದ ಟಿಕೆಟ್ ಕೊಡಿ, ನನಗೆ ಬೇಡ ಎಂದು ಹೆಚ್​.ಸಿ ಬಾಲಕೃಷ್ಣ ಖಾರವಾಗಿ ಪತ್ರ ಬರೆದಿದ್ದಾರೆ. ಬಾಲಕೃಷ್ಣ ಡಿಕೆ ಶಿವಕುಮಾರ್​ಗೆ ಬರೆದಿರುವ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲೂ ವೈರಲ್​ ಆಗಿರುವುದು ಸಾಕಷ್ಟು ಗುಮಾನಿಗಳಿಗೆ ಕಾರಣವಾಗಿದೆ. ಪಕ್ಷದ ಅಧ್ಯಕ್ಷರ ಗಮನಕ್ಕೆ ತರುವ ಕೆಲಸ ಮಾಡಬೇಕಿತ್ತು, ಅದನ್ನೇ ಮಾಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಯಾಕೆ ಎನ್ನುವ ಪ್ರಶ್ನೆ ಕಾಂಗ್ರೆಸ್​ ಕಾರ್ಯಕರ್ತರಲ್ಲೇ ಸೃಷ್ಟಿಯಾಗಿದೆ.

ಕೇಸರಿ ಪಾಳಯದ ಕಡೆಗೆ ಬಾಲಕೃಷ್ಣ ಹೆಜ್ಜೆ ಸಪ್ಪಳ..!

ಜೆಡಿಎಸ್​​ನಿಂದ ಹೆಚ್​.ಸಿ ಬಾಲಕೃಷ್ಣ ಸೇರಿ ಒಟ್ಟು 8 ಮಂದಿ ಶಾಸಕರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಕಡೆಗೆ ಹೆಜ್ಜೆ ಇಟ್ಟಿದ್ದರು. ಅದರಲ್ಲಿ ಯಶಸ್ಸು ಸಾಧಿಸಿದ್ದು ಅಖಂಡ ಶ್ರೀನಿವಾಸ ಮೂರ್ತಿ, ಜಮೀರ್​ ಅಹ್ಮದ್​ ಹಾಗೂ ಭೀಮಾನಾಯ್ಕ್​ ಮಾತ್ರ. ಇನ್ನುಳಿದ ಚಲುವರಾಯಸ್ವಾಮಿ, ಹೆಚ್​.ಸಿ ಬಾಲಕೃಷ್ಣ ಸೇರಿದಂತೆ ಉಳಿದವರು ಸೋತು ಸುಣ್ಣವಾಗಿದ್ದರು. ಇದೀಗ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಬಣಕ್ಕೆ ಹಿನ್ನಡೆಯಾಗುವ ಭೀತಿ ಎದುರಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್​ ತೊರೆದು ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಬೇಕಾದ ಸಕಲ ತಯಾರಿಗಳು ಕೇಸರಿ ಪಾಳಯದಲ್ಲಿ ನಡೆಯುತ್ತಿವೆ ಎನ್ನುವ ಮಾಹಿತಿ The Public Spot ಗೆ ಲಭ್ಯವಾಗಿದೆ. ಇದರ ಅಂಗವಾಗಿಯೇ ಜಮೀರ್​ ಅಹ್ಮದ್​ ಖಾನ್​ ಹಾಗೂ ಅಖಂಡ ಶ್ರೀನಿವಾಸ ಮೂರ್ತಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು ಎನ್ನುವ ಅಂಶ ಅಚ್ಚರಿ ಮೂಡಿಸಿದೆ.

ನಾನು ಮಾಗಡಿ ಬಿಟ್ಟು ಹೋಗಲ್ಲ ಎಂದಿರುವ ಗುಟ್ಟೇನು..?

ಕಾಂಗ್ರೆಸ್​ ಅಧ್ಯಕ್ಷರಿಗೆ ಪತ್ರ ಬರೆದಿರುವ ಮಾಜಿ ಶಾಸಕ ಹೆಚ್​.ಸಿ ಬಾಲಕೃಷ್ಣ, ನನಗೆ ಟಿಕೆಟ್​ ಬೇಡ, ಹೆಚ್​.ಎಂ ರೇವಣ್ಣ ಅವರಿಗೆ ಕೊಡಿ ಎಂದು ಹೇಳಿದ್ದಾರೆ. ಆದರೆ ಮಾಧ್ಯಮಗಳ ಎದುರು ಪ್ರತಿಕ್ರಿಯಿಸಿ, ನಾನು ಮಾಗಡಿ ಬಿಟ್ಟು ಹೊರಗೆ ಹೋಗಲ್ಲ ಎಂದಿದ್ದಾರೆ. ಅಂದರೆ ಹೆಚ್​.ಎಂ ರೇವಣ್ಣ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಲಿ, ನಾನು ಬಿಜೆಪಿಯಿಂದ ಸ್ಪರ್ಧೆ ಮಾಡ್ತೇನೆ ಎನ್ನುವ ಸಣ್ಣ ಸುಳಿವು ಕೊಟ್ಟಂತಿದೆ. ಇನ್ನೂ ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದರೂ ಬಾಲಕೃಷ್ಣಗೆ ಸಚಿವ ಸ್ಥಾನ ಸಿಗುವುದು ಅನುಮಾನ. ಡಿಕೆ ಶಿವಕುಮಾರ್​ ಜಿಲ್ಲೆಯ ಹಿಡಿತವನ್ನು ಬಾಲಕೃಷ್ಣ ಅವರಿಗೆ ಬಿಟ್ಟುಕೊಡಲಾರರು. ಇದೇ ಕಾರಣದಿಂದ ಮಂತ್ರಿಗಿರಿಯೂ ಮಿಸ್​ ಆಗುವ ಸಂಭವ ಇರುತ್ತದೆ. ಇನ್ನೂ ಕಾಂಗ್ರೆಸ್​, ಬಿಜೆಪಿ ಎಷ್ಟೆ ಹೊಡೆದಾಡಿದರೂ ಅಂತಿಮವಾಗಿ ಕಾಂಗ್ರೆಸ್​, ಜೆಡಿಎಸ್​ ಎದುರು ಮಂಡಿಯೂರುತ್ತದೆ. ಸಮ್ಮಿಶ್ರ ಸರ್ಕಾರ ಬಂದರೂ ಅಧಿಕಾರ ಸಿಗಲಾರದು ಎನ್ನುವ ಕಾರಣದಿಂದ ಬಿಜೆಪಿ ಪಕ್ಷ ಸೇರ್ತಾರೆ ಎಂಬ ಸುದ್ದಿಗೆ ಪತ್ರ ಸುಳಿವು ಕೊಟ್ಟಂತೆ ಕಾಣ್ತಿದೆ.

Related Posts

Don't Miss it !